ಈ 8 ಟಿಪ್ಸ್ ಅನುಸರಿಸಿದ್ರೆ ನೀವೇ ಹ್ಯಾಂಡ್‌ಸಮ್ ಅಂತಾರೆ; ಸ್ಮಾರ್ಟ್ ಆಗಿ ಕಾಣಿಸೋಕೆ ಪುರುಷರು ಮಾಡಬೇಕಾದ್ದಿಷ್ಟು
ಪುರುಷರು ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ, ಸ್ಮಾರ್ಟ್ ಆಗಿ ಕಾಣುತ್ತಾರೆ. ಅಚ್ಚುಕಟ್ಟಾದ ಬಟ್ಟೆ, ತ್ವಚೆಯ ಕಾಳಜಿ, ಟ್ರಿಮ್ಮಿಂಗ್ ವಿಚಾರದಲ್ಲಿ ಕೆಲವೊಂದು ಶಿಸ್ತು ಅನುಸರಿಸಿದರೆ ಇದು ಸಾಧ್ಯ. ಪುರುಷರಿಗಾಗಿ ಅಮೂಲ್ಯ ಸಲಹೆ ಇಲ್ಲಿದೆ.
ಎಲ್ಲರಿಗೂ ಅಂದವಾಗಿ, ಆಕರ್ಷಕವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಸಮಾಜದಲ್ಲಿ ಬೆರೆಯುವಾಗ ಜನರು ಗುರುತಿಸಬೇಕು ಎಂಬ ನಿರೀಕ್ಷೆ ಇರುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಇಂಥಾ ಕಾಳಜಿ ತುಸು ಕಡಿಮೆ. ಆಧುನಿಕ ಬದುಕಿನಲ್ಲಿ ಫ್ಯಾಷನ್, ಸೌಂದರ್ಯ, ಸ್ಕಿನ್ ಕೇರ್, ಇವೆಲ್ಲಾ ಎಲ್ಲರಿಗೂ ಅನ್ವಯಿಸುತ್ತವೆ. ಸೌಂದರ್ಯ ಪ್ರಜ್ಞೆ ಎನ್ನುವುದಕ್ಕಿಂದ ಸಮಾಜದಲ್ಲಿ ಚೆನ್ನಾಗಿ ಕಾಣಿಸುವಂತೆ ಇರಬೇಕು. ಅಚ್ಚುಕಟ್ಟಾದ ಬಟ್ಟೆ ಧರಿಸುವುದು, ಕೂದಲು ಮತ್ತು ಬಿಯರ್ಡ್ ಸರಿಯಾಗಿ ಟ್ರಿಮ್ ಮಾಡುವುದು, ಸಾರ್ಜನಿಕವಾಗಿ ಶಿಸ್ತಿನಿಂದ ಇರುವುದು ಪುರುಷರಿಗೂ ಮುಖ್ಯ. ಅಂದ ಮತ್ತು ಸೌಂದರ್ಯ ಮಹಿಳೆಯರಿಗಷ್ಟೇ ಸೀಮಿತ ಎಂಬ ಕಾಲ ಇದಲ್ಲ. ಸೌಂದರ್ಯ ಕ್ಷೇತ್ರದ ಲೆಕ್ಕಾಚಾರ ಹಾಗೂ ಯೋಚನೆಯೇ ಬದಲಾಗಿದೆ. ಪುರುಷರಿಗಾಗಿಯೇ ಮಾರುಕಟ್ಟೆಯಲ್ಲಿ ಹಲವು ಸೌಂದರ್ಯವರ್ಧಕ ಉತ್ಪನ್ನಗಳು ಕೂಡಾ ಲಭ್ಯವಿವೆ.
ಸಾರ್ವಜನಿಕವಾಗಿ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಬೇಕೆಂದು ಪುರುಷರು ಕೂಡಾ ಬಯಸುತ್ತಾರೆ. ಇದು ಸಾಧ್ಯವಾಗಬೇಕೆಂದರೆ, ಜೀವನಶೈಲಿಯಲ್ಲ ಕೆಲವೊಂದು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ಸಣ್ಣ ಸಣ್ಣ ವಿಷಯಗಳಿಂದ ಹಿಡಿದು ಕೆಲವು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ದೇಹ ಹಾಗೂ ಸೌಂದರ್ಯದ ಕಾಳಜಿ ವಹಿಸಬೇಕು.
ಡ್ರೆಸಿಂಗ್ ಸೆನ್ಸ್
ಅವರವರ ಇಚ್ಛೆಯಂತೆ ಯಾವುದೇ ರೀತಿಯ ಬಟ್ಟೆಗಳನ್ನು ಕೂಡಾ ಧರಿಸಬಹುದು. ನಾವು ತೊಡುವ ಉಡುಗೆಗಳು ನಮ್ಮ ಮನಸ್ಸು ಹಿತ ಅನಿಸಬೇಕು. ಜೊತೆಗೆ ದೇಹಕ್ಕೂ ಒಪ್ಪಿಗೆಯಾಗಬೇಕು. ಧರಿಸುವ ಬಟ್ಟೆ ಕೂಡಾ ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪ್ರತಿಬಾರಿ ಹೊಸ ಅಥವಾ ದುಬಾರಿ ಬಟ್ಟೆಯೇ ಧರಿಸಬೇಕಿಲ್ಲ. ಅದು ಅಚ್ಚುಕಟ್ಟಾಗಿದ್ದರೆ ಸಾಕು.
ಮುಖದ ಕಾಳಜಿಗೆ ಸೂಕ್ತ ಉತ್ಪನ್ನಗಳನ್ನು ಬಳಸಿ
ಪುರುಷರು ಕೂಡಾ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್, ಕ್ಲೆನ್ಸರ್ ಅಥವಾ ಫೇಸ್‌ವಾಶ್ ಬಳಸಿದರೆ ಉತ್ತಮ. ಕಾಲಕ್ಕೆ ತಕ್ಕಂತೆ ಈ ಉತ್ಪನ್ನಗಳನ್ನು ಬಳಸದಿದ್ದರೆ ಒಣ ಚರ್ಮ, ಮೊಡವೆ ಅಥವಾ ತ್ವಚೆಯ ಸಮಸ್ಯೆಗಳಿಗೆ ಒಳಗಾಗಬಹುದು. ಚರ್ಮದ ಮೇಲೆ ಎಣ್ಣೆಯ ಜಿಡ್ಡು ಅಥವಾ ಕೊಳೆ ಸಂಗ್ರಹವಾಗದಂತೆ ತಡೆಯಲು ಉತ್ತಮ ಕ್ಲೆನ್ಸರ್ ಅಥವಾ ಫೇಸ್ ವಾಶ್ ಬಳಸಿ. ದಿನವೂ ಆಗಾಗ ಫೇಸ್‌ವಾಶ್ ಬಳಸಿದರೆ ತ್ವಚೆಯ ನೈಜ ಕಾಂತಿಗೆ ಹಾನಿಯಾದೀತು. ಹೀಗಾಗಿ ದಿನಕ್ಕೆ ಒಂದು ಬಾರಿಗೆ ಸೀಮಿತಗೊಳಿಸಿ.
ಸನ್‌ಸ್ಕ್ರೀನ್ ಬಳಸಿ
ಪುರುಷರಲ್ಲಿ ಈ ಅಭ್ಯಾಸ ಸಾಮಾನ್ಯವಾಗಿ ಕಡಿಮೆ. ಸೂರ್ಯನ ಕಿರಣಗಳಿಂದ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಪ್ರಖರ ಬಿಸಿಲಿಗೆ ಮನೆಯಿಂದ ಹೊರಹೋಗುವಾಗ ಸನ್‌ಸ್ಕ್ರೀನ್ ಬಳಸಿದರೆ ಚರ್ಮಕ್ಕೆ ರಕ್ಷಣೆ ಸಿಗುತ್ತದೆ. ಇಲ್ಲವಾದಲ್ಲಿ ಚರ್ಮದ ಕಾಂತಿ ಹಾಗೂ ಸಹಜ ಬಣ್ಣ ಕುಂದಬಹುದು.
ದೇಹದ ಕೂದಲನ್ನು ನಿರ್ವಹಿಸುವುದು
ಮಹಿಳೆಯರಂತೆ ಪುರುಷರು ಕೂಡಾ ದೇಹದಲ್ಲಿ ಬೆಳೆಯುವ ಹೆಚ್ಚುವರಿ ಅಥವಾ ಅನಗತ್ಯ ಕೂದಲನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ. ಹಾಗಂತಾ ಕಾಲು ಮತ್ತು ಕೈಗಳನ್ನು ಸಂಪೂರ್ಣವಾಗಿ ವ್ಯಾಕ್ಸ್ ಮಾಡುವುದು ಎಂದಲ್ಲ. ಕಿವಿ ಅಥವಾ ಮೂಗಿನ ಭಾಗದಲ್ಲಿ ಉದ್ದನೆಯ ಕೂದಲು ಬೆಳೆದರೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಚೆನ್ನಾಗಿ ಕಾಣಿಸುವುದಿಲ್ಲ. ಇದನ್ನು ವಾರಕ್ಕೊಮ್ಮೆಯಾದರೂ ಟ್ರಿಮ್ ಮಾಡಿ. ಆಗ ಅಚ್ಚುಕಟ್ಟಾದ ನೋಟ ನಿಮ್ಮದಾಗುತ್ತದೆ. ಉಳಿದಂತೆ ಅಂಡರ್‌ಆರ್ಮ್ಸ್ ಅಥವಾ ಕಂಕುಳ ಕೂದಲನ್ನು ಕೂಡಾ ಟ್ರಿಮ್ ಮಾಡಿಸಿದರೆ ಉತ್ತಮ.
ಶೇವಿಂಗ್, ಟ್ರಿಮಿಂಗ್ ಉತ್ಪನ್ನಗಳನ್ನು ಬಳಸಿ
ವೈಯಕ್ತಿಕ ಟ್ರಿಮ್ಮರ್ ನಿಮ್ಮೊಂದಿಗೆ ಇರಲಿ. ಶೇವಿಂಗ್ ಮಾಡಬೇಕಿದ್ದರೆ ಗುಣಮಟ್ಟದ ರೇಜರ್ ಖರೀದಿಸಿ. ಹೆಚ್ಚೆಂದರೆ ಮೂರು ಬಾರಿ ಬಳಸಿದ ನಂತರ ರೇಜರ್ ಅನ್ನು ಬದಲಾಯಿಸಿ. ಷೇವಿಂಗ್ ನಂತರ ನಿಮ್ಮ ಚರ್ಮವನ್ನು ಮೃದುಗೊಳಿಸಲು ಉತ್ತಮ ಶೇವಿಂಗ್ ಫೋಮ್ ಬಳಸಿ.
ಗಡ್ಡ, ಮೀಸೆ ಹಾಗೂ ಕೂದಲು ಆಗಾಗ ಟ್ರಿಮ್ ಮಾಡಿಸಿ
ಉದ್ದನೆಯ ಗಡ್ಡ ಶಿಸ್ತಿನ ಲುಕ್ ಕೊಡುವುದಿಲ್ಲ. ನಿಮ್ಮ ಮುಖಕ್ಕೆ ಒಪ್ಪುವ ಹಾಗೆ ಗಡ್ಡವನ್ನು ಟ್ರಿಮ್ ಮಾಡಿಸಿ. ಇಷ್ಟು ಸಮಯಕ್ಕೊಮ್ಮೆ ಎಂಬಂತೆ ಹೇರ್ ಕಟ್ ಮಾಡಿಸಿ.
ಬಾಯಿ ಹಾಗೂ ಹಲ್ಲಿನ ಕಾಳಜಿ
ಸಾರ್ವಜನಿಕವಾಗಿ ಅಥವಾ ಸ್ಮೇಹಿತರೊಂದಿಗೆ ಮಾತನಾಡುವಾಗ ಬಾಯಿ ದುರ್ಗಂಧ ಬೀರಬಾರದು. ಹೀಗಾಗಿ ನಿತ್ಯ ಎರಡು ಬಾರಿ ಹಲ್ಲುಗಳನ್ನು ಬ್ರಷ್ ಮಾಡಿ. ಮಾಂಸಾಹಾರ ಸೇವನೆ ಬಳಿಕ ಖಚಿತವಾಗಿ ಈ ಅಭ್ಯಾಸ ರೂಢಿಸಿಕೊಳ್ಳಿ. ಮೌತ್ ವಾಶ್, ನೈಸರ್ಗಿಕವಾಗಿ ಬಾಯಿಯ ಸುಗಂಧ ಹೆಚ್ಚಿಸುವ ಆಹಾರ ಸೇವಿಸಿ. ವಾರಕ್ಕೊಮ್ಮೆ ಡೆಂಟಲ್ ಫ್ಲಾಸ್ ಮೂಲಕ ಹಲ್ಲನ್ನು ಸ್ವಚ್ಛಗೊಳಿಸಿ.
ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಿ
ಇವು ಸಾಮಾನ್ಯ ಅಂಶ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ನಿಮ್ಮ ಕೈ ಕಾಲುಳನ್ನು ಜನರು ಗಮನಿಸುತ್ತಾರೆ. ಹುಡುಗಿಯರು ಹುಡುಗರ ಅಪಿಯರೆನ್ಸ್ ಹೇಗಿದೆ ಎಂದು ನೋಡುತ್ತಾರೆ. ಹೀಗಾಗಿ ಕೈಕಾಲನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಉಗುರುಗಳನ್ನು ಟ್ರಿಮ್ ಮಾಡಿ ಸ್ವಚ್ಛವಾಗಿಡಿ.