ತ್ವಚೆ ಕಾಂತಿಯುತವಾಗಿ ಹೊಳೆಯಲು ಕೊರಿಯನ್ನರ ಈ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ತ್ವಚೆ ಕಾಂತಿಯುತವಾಗಿ ಹೊಳೆಯಲು ಕೊರಿಯನ್ನರ ಈ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ

ತ್ವಚೆ ಕಾಂತಿಯುತವಾಗಿ ಹೊಳೆಯಲು ಕೊರಿಯನ್ನರ ಈ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ

ನೀವು ಕೊರಿಯನ್ ಸಿನಿಮಾ‌, ವೆಬ್‌ ಸೀರೀಸ್‌ಗಳನ್ನು ನೋಡಿರಬಹುದು. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಬಹಳ ಸುಂದರವಾಗಿರುವುದಲ್ಲದೆ, ದೇಹವನ್ನು ಫಿಟ್ ಆಗಿ ಇರಿಸಿಕೊಂಡಿರುತ್ತಾರೆ. ಕೊರಿಯನ್ನರು ಯಾಕೆ ಕಾಂತಿಯುತವಾಗಿ, ಯುವಕರಂತೆ ಕಾಣುತ್ತಾರೆ? ನೀವು ಹಾಗೆ ಕಾಣಬೇಕೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ತ್ವಚೆ ಕಾಂತಿಯುತವಾಗಿ ಹೊಳೆಯಲು ಕೊರಿಯನ್ನರ ಈ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ
ತ್ವಚೆ ಕಾಂತಿಯುತವಾಗಿ ಹೊಳೆಯಲು ಕೊರಿಯನ್ನರ ಈ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ (Pixabay, Pexel)

ಬಹುತೇಕರಿಗೆ ತಾವು ಬೆಳ್ಳಗಾಗಬೇಕು, ವಯಸ್ಸು 40 ಆದ್ರೂ 25ರ ಯುವಕ/ಯುವತಿಯಂತೆ ಕಾಣಬೇಕು ಎಂಬ ಹಂಬಲ ಇರುತ್ತದೆ. ಅದರಲ್ಲೂ ಕೊರಿಯನ್ನರಂತೆ ತಾವು ಕಾಂತಿಯುತವಾಗಿ ಹೊಳೆಯಲು ಏನು ಮಾಡಬೇಕು ಅಂತಾ ಯೋಚಿಸುತ್ತಿರುತ್ತಾರೆ. ಕೊರಿಯನ್ನರು ಬಿಳಿ ಬಣ್ಣದಿಂದ ಕಂಗೊಳಿಸುತ್ತಾರೆ. ಅಲ್ಲದೆ, ಎಷ್ಟೇ ವಯಸ್ಸಾದರೂ ಅವರ ತಾರುಣ್ಯ, ಚಿರಯವ್ವನ, ಮುಖದಲ್ಲಿ ಹೊಳಪು ಎದ್ದು ಕಾಣುತ್ತದೆ. ಕೊರಿಯನ್‌ ಸೌಂದರ್ಯ ನೋಡಿ ನಿಮಗೆ ಅಚ್ಚರಿಯಾಗಿರಬಹುದು.

ಕೊರಿಯನ್ ಸಂಸ್ಕೃತಿಯು ಚರ್ಮದ ರಕ್ಷಣೆ, ಆರೋಗ್ಯಕರ ಆಹಾರ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಜೀವನಶೈಲಿಯ ಅಭ್ಯಾಸಗಳಿಗೆ ಒತ್ತು ನೀಡುವುದಕ್ಕೆ ಹೆಸರುವಾಸಿಯಾಗಿದೆ. ಆಹಾರ ಪದ್ಧತಿ ಮತ್ತು ನಿತ್ಯ ದಿನಚರಿಯಿಂದಾಗಿ ಕೊರಿಯನ್ನರು ತಮ್ಮ ಯೌವನದ ನೋಟಕ್ಕೆ ಬಹಳ ಹಿಂದಿನಿಂದಲೂ ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ. ಹಾಗಿದ್ದರೆ, ನೀವು ಕೊರಿಯನ್ನರಂತೆ ತಾರುಣ್ಯವಾಗಿ ಕಾಣಬೇಕು ಅಂದರೆ ಏನು ಮಾಡಬೇಕು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಬೆಳಗ್ಗಿನ ತ್ವಚೆಯ ದಿನಚರಿ

ಕೊರಿಯನ್ನರು ತ್ವಚೆ ಕಾಂತಿಯುತವಾಗಿ ಕಾಣಬೇಕೆಂದು ಬಯಸುತ್ತಾರೆ. ಅವರು ತಮ್ಮ ಮೈ ಬಣ್ಣ ಬಿಳಿಯೇ ಆಗಿರಬೇಕು ಎಂದು ಪ್ರಯತ್ನಪಡುತ್ತಾರೆ. ಹೀಗಾಗಿ ಬೆಳಗ್ಗೆ ಎದ್ದಾಗಿನಿಂದ ಅವರು ತಮ್ಮ ತ್ವಚೆಯ ಕಡೆಗೆ ವಿಶೇಷ ಗಮನ ಕೊಡುತ್ತಾರೆ. ಮುಖವನ್ನು ಸ್ವಚ್ಛಗೊಳಿಸಲು ಟೋನರ್‌ಗಳು ಸೇರಿದಂತೆ ಸೌಂದರ್ಯವರ್ಧಕಗಳನ್ನು ಬಳಸಲು ಅವರು ವಿಶೇಷ ಆಸಕ್ತಿ ಹೊಂದಿರುತ್ತಾರೆ. ಚರ್ಮವನ್ನು ಯಾವಾಗಲೂ ಹೈಡ್ರೀಕರಿಸುವತ್ತ ಅವರು ಗಮನ ಕೊಡುತ್ತಾರೆ. ಇದರಿಂದ ತ್ವಚೆಯು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಸೂರ್ಯನಿಂದ ರಕ್ಷಣೆ ಪಡೆಯಲು ಸನ್‍ಸ್ಕ್ರೀನ್ ಬಳಕೆ

ಕೊರಿಯನ್ನರು ಸೂರ್ಯನ ಬಿಸಿಲಿನಿಂದ ತಮ್ಮ ಮುಖವನ್ನು ರಕ್ಷಿಸಿಕೊಳ್ಳುತ್ತಾರೆ. ಸುಕ್ಕುಗಳು ಉಂಟಾಗುವುದು ಮತ್ತು ಸೂರ್ಯನ ಬಿಸಿಲಿನ ಹಾನಿಯನ್ನು ತಡೆಗಟ್ಟಲು ಅವರು ಪ್ರತಿದಿನ ಸನ್‍ಸ್ಕ್ರೀನ್ ಬಳಸುತ್ತಾರೆ. ಮೋಡ ಕವಿದ ದಿನಗಳಲ್ಲಿಯೂ ಸಹ ಅವರು ಸನ್‌ಸ್ಕ್ರೀನ್ ಅನ್ನು ಬಳಸುತ್ತಾರೆ.

ಸಮೃದ್ಧ ಆಹಾರ ಸೇವನೆ

ಕೊರಿಯನ್ ಪಾಕಪದ್ಧತಿಯಲ್ಲಿ ಕಿಮ್ಚಿ ಮತ್ತು ಗೊಚುಜಾಂಗ್‌ನಂತಹ ಅನೇಕ ಹುದುಗಿಸಿದ ಆಹಾರಗಳ ಬಳಕೆ ಹೆಚ್ಚು. ಕೊರಿಯನ್ನರು ಇಂತಹ ಆಹಾರಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಇದು ಪ್ರೋಬಯಾಟಿಕ್‌ಗಳಿಂದ ತುಂಬಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಅವರನ್ನು ಮತ್ತಷ್ಟು ಯೌವನದಂತೆ ಕಾಣುವಂತೆ ಮಾಡಲು ಸಹಾಯಕವಾಗಿದೆ.

ದೇಹವನ್ನು ಹೈಡ್ರೀಕರಿಸುವಲ್ಲಿ ಒತ್ತು

ದೇಹಕ್ಕೆ ಸಾಕಷ್ಟು ನೀರು ಸೇವನೆ ಮುಖ್ಯ. ನೀರು ದೇಹವನ್ನು ಹೈಡ್ರೀಕರಿಸುತ್ತದೆ. ಮಾತ್ರವಲ್ಲಿ ಟಾಕ್ಸಿನ್ ಅಂಶವನ್ನು ತೊಡೆದು ಹಾಕಲು ಮತ್ತು ಚರ್ಮವನ್ನು ಕಾಂತಿಯುತವಾಗಿರುವಂತೆ ಮಾಡಲು ನೀರು ಅತ್ಯಗತ್ಯ. ಹೀಗಾಗಿ ಕೊರಿಯನ್ನರು ನೀರನ್ನು ಹೆಚ್ಚು-ಹೆಚ್ಚು ಸೇವಿಸುತ್ತಾರೆ.

ಉತ್ತಮ ನಿದ್ದೆ

ನಿದ್ದೆ ಕೂಡ ನಿಮ್ಮ ಮುಖ ಚಿರಯುವಕರಂತೆ ಹೊಳೆಯುವಂತೆ ಕಾಣಲು ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಕೊರಿಯನ್ನರು ಒಟ್ಟಾರೆ ಆರೋಗ್ಯ ಮತ್ತು ಕಾಂತಿಯುತ ಮೈಬಣ್ಣಕ್ಕಾಗಿ ರಾತ್ರಿ ವೇಳೆ ಉತ್ತಮ ನಿದ್ದೆ ಮಾಡುತ್ತಾರೆ.

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮವು ಕೊರಿಯನ್ನರ ತಾರುಣ್ಯದ ಸೀಕ್ರೆಟ್ ಆಗಿದೆ. ವಾಕಿಂಗ್ ಮಾಡುವುದರಿಂದ ಹಿಡಿದು ಪಾಪ್ ನೃತ್ಯ ಇತ್ಯಾದಿಗಳನ್ನು ಮಾಡುತ್ತಾ ದೇಹದಿಂದ ಬೆವರಿನ ಹನಿಗಳನ್ನು ಇಳಿಸುತ್ತಾರೆ. ಇದರಿಂದ ಕೂಡ ಚರ್ಮ ಕಾಂತಿಯುತವಾಗುತ್ತದೆ.

ವಿಶ್ರಾಂತಿ

ಕೆಲಸದ ಜಂಜಾಟದ ನಡುವೆ ದೇಹಕ್ಕೆ ವಿಶ್ರಾಂತಿ ಕೂಡ ಅಗತ್ಯವಾಗಿ ಬೇಕು. ಕೊರಿಯನ್ನರು ಧ್ಯಾನ ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯುವಂತಹ ಅಭ್ಯಾಸಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಸಾಮಾಜಿಕ ಸಂಪರ್ಕ

ಕೊರಿಯನ್ನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಎಲ್ಲರ ಜೊತೆ ಖುಷಿ-ಖುಷಿಯಾಗಿ ಕಾಲ ಕಳೆಯುವುದು ಕೂಡ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಗಮನವಿಟ್ಟು ಆಹಾರ ಸೇವನೆ

ಇಂದಿನ ದಿನಗಳಲ್ಲಿ ಬಹುತೇಕರು ಮೊಬೈಲ್ ನೋಡುತ್ತಾ ಆಹಾರ ಸೇವಿಸುತ್ತಾರೆ. ಆದರೆ, ಇದು ಸರಿಯಲ್ಲ. ನಾವು ತಿನ್ನುವ ಪ್ರತಿ ಅನ್ನದ ಅಗುಳನ್ನು ತೃಪ್ತಿಯಿಂದ ತಿನ್ನಬೇಕು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಕೊರಿಯನ್ನರು ತಮ್ಮ ಆಹಾರವನ್ನು ತೃಪ್ತಿಯಿಂದ ಮತ್ತು ಎಚ್ಚರಿಕೆಯಿಂದ ತಿನ್ನುತ್ತಾರೆ. ಇದು ಉತ್ತಮ ಜೀರ್ಣಕ್ರಿಯೆ ಮತ್ತು ಆರೋಗ್ಯಕರ ತೂಕಕ್ಕೆ ಕಾರಣವಾಗಬಹುದು.

ಸಾಂಪ್ರದಾಯಿಕ ಔಷಧ

ಅನೇಕ ಕೊರಿಯನ್ನರು ತಮ್ಮ ಏನಾದರೂ ಅನಾರೋಗ್ಯಕ್ಕೆ ಒಳಗಾದಾಗ ಗಿಡಮೂಲಿಕೆಗಳ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅಥವಾ ಆಕ್ಯುಪ್ರೆಶರ್‌ನಂತಹ ಸಾಂಪ್ರದಾಯಿಕ ಕೊರಿಯನ್ ಔಷಧ ಪದ್ಧತಿಗಳತ್ತ ಮೊರೆ ಹೋಗುತ್ತಾರೆ.

ಒಟ್ಟಿನಲ್ಲಿ ಈ ರೀತಿಯ ಕೊರಿಯನ್ ಅಭ್ಯಾಸಗಳನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವುದು ನಿಮಗೆ ತಾರುಣ್ಯ ಮತ್ತು ಶಕ್ತಿಯುತ ನೋಟವನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನವಾಗಬಹುದು.

ವರದಿ: ಪ್ರಿಯಾಂಕಾ ಗೌಡ