ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ 5 ಅದ್ಭುತ ಪಾನೀಯಗಳಿವು: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ, ಪರಿಣಾಮ ನೀವೇ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ 5 ಅದ್ಭುತ ಪಾನೀಯಗಳಿವು: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ, ಪರಿಣಾಮ ನೀವೇ ನೋಡಿ

ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ 5 ಅದ್ಭುತ ಪಾನೀಯಗಳಿವು: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ, ಪರಿಣಾಮ ನೀವೇ ನೋಡಿ

ಅಧಿಕ ಪೋಷಕಾಂಶ ಮತ್ತು ಆಂಟಿಆಕ್ಸಿಡೆಂಟ್‌ನಿಂದ ಕೂಡಿರುವ ಪಾನೀಯಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ನೆತ್ತಿಗೆ ರಕ್ತಪರಿಚಲನೆಯನ್ನು ಹೆಚ್ಚಿಸುತ್ತವೆ. ದಿನದ ಆರಂಭವನ್ನು ಒಂದು ನಿರ್ದಿಷ್ಟ ಆರೋಗ್ಯಕರ ಪಾನೀಯದಿಂದ ಪ್ರಾರಂಭಿಸಿ. ಕೂದಲಿನ ಬೆಳವಣಿಗೆ ಹೆಚ್ಚಿಸಿ, ನೈಸರ್ಗಿಕ ಹೊಳಪು ನೀಡುವ ಐದು ಬೆಳಗ್ಗಿನ ಪಾನೀಯಗಳ ಬಗ್ಗೆ ಇಲ್ಲಿದೆ ಓದಿ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುವ 5 ಅದ್ಭುತ ಪಾನೀಯಗಳು: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ, ಪರಿಣಾಮ ನೀವೇ ನೋಡಿ
ಕೂದಲ ಬೆಳವಣಿಗೆಯನ್ನು ಹೆಚ್ಚಿಸುವ 5 ಅದ್ಭುತ ಪಾನೀಯಗಳು: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ, ಪರಿಣಾಮ ನೀವೇ ನೋಡಿ (PC: Freepik)

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಕೂದಲು ಉದುರುವುದು, ಶುಷ್ಕವಾಗುವುದು, ಹೊಳಪನ್ನು ಕಳೆದುಕೊಳ್ಳುವುದು ಮತ್ತು ಕೂದಲು ಬೆಳ್ಳಗಾಗುವುದು ಮುಂತಾದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಅದಕ್ಕೆ ಪೋಷಕಾಂಶಗಳ ಕೊರತೆಯೇ ಕಾರಣವಾಗಿದೆ. ಸರಿಯಾದ ಆಹಾರ ಕ್ರಮದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಪ್ರತಿದಿನ ಬೆಳಿಗ್ಗೆ ಒಂದು ನಿರ್ದಿಷ್ಟ ಆರೋಗ್ಯಕರ ಪಾನೀಯದಿಂದ ದಿನವನ್ನು ಪ್ರಾರಂಭಿಸಿದರೆ, ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳು ದೊರಕುತ್ತವೆ. ಅವು ಕೂದಲಿನ ಕಿರುಚೀಲಗಳನ್ನು ಬಲಪಡಿಸಿ, ಉದುರುವಿಕೆಯನ್ನು ಕಡಿಮೆ ಮಾಡುತ್ತವೆ. ಹಾಗೂ ಕೂದಲಿಗೆ ಹೊಳಪು ಮತ್ತು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತವೆ. ನಿಮ್ಮ ಪ್ರತಿದಿನದ ಬೆಳಗ್ಗಿನ ದಿನಚರಿಯಲ್ಲಿ ಸರಳ ನೈಸರ್ಗಿಕ ಪಾನೀಯಗಳನ್ನು ಸೇರಿಸಿಕೊಳ್ಳಿ. ಆರೋಗ್ಯಕರ ಕೂದಲಿನ ಬೆಳವಣಿಗೆ ಹೆಚ್ಚಿಸಲು ಈ ಐದು ಅದ್ಭುತ ಪಾನೀಯಗಳು ನಿಮಗೆ ಸಹಾಯ ಮಾಡುತ್ತವೆ.

ಕೂದಲ ಬೆಳವಣಿಗೆ ಮತ್ತು ಪೋಷಣೆಗೆ ಐದು ಅದ್ಭುತ ಪಾನೀಯಗಳು

ಅಲೋವೆರಾ ಜ್ಯೂಸ್‌: ಅಲೋವೆರಾ ಕೂದಲಿಗೆ ಉತ್ತಮವಾಗಿದೆ. ಅದರಿಂದ ತಯಾರಿಸಿದ ಜ್ಯೂಸ್‌ ಕೂದಲ ಬೆಳವಣಿಗೆಯನ್ನು ದ್ವಿಗುಣಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ, ಸಿ ಮತ್ತು ಇ ಗಳು ನೆತ್ತಿಗೆ ಪೋಷಣೆ ನೀಡುತ್ತವೆ. ಕೂದಲಿನ ಕಿರುಕೋಶಗಳನ್ನು ಬಲಪಡಿಸಿ, ಹೊಸ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅಲೋವೆರಾದಲ್ಲಿರುವ ಆಂಟಿಇನ್ಫ್ಲಾಮೇಟರಿ ಗುಣಲಕ್ಷಣಗಳು ತಲೆಹೊಟ್ಟು, ತುರಿಕೆ ಮತ್ತು ಕೂದಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ದಿನದ ಆರಂಭದಲ್ಲಿ ಅರ್ಧ ಕಪ್‌ ಅಲೋವೆರಾ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ರಚನೆ, ಹೊಳಪು ಮತ್ತು ದಟ್ಟವಾಗಿ ಬೆಳೆಯುವುದನ್ನು ಹೆಚ್ಚಿಸಬಹುದಾಗಿದೆ.

ಕ್ಯಾರೆಟ್‌ ಜ್ಯೂಸ್‌: ವಿಟಮಿನ್ ಎ ಮತ್ತು ಬೀಟಾ–ಕ್ಯಾರೋಟಿನ್‌ ಅಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್‌ ಜ್ಯೂಸ್‌ ನೆತ್ತಿಯ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಅಧಿಕವಾಗುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲಿನ ಹಾನಿಯನ್ನು ತಪ್ಪಿಸುತ್ತವೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸುವುದರ ಜೊತೆಗೆ ಹೊಳಪನ್ನು ನೀಡುತ್ತದೆ.

ನೆಲ್ಲಿಕಾಯಿ ಜ್ಯೂಸ್‌: ವಿಟಮಿನ್‌ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ನೆಲ್ಲಿಕಾಯಿಯು ಕೂದಲ ಬೆಳವಣಿಗೆಗೆ ಬಹಳ ಉತ್ತಮವಾಗಿದೆ. ಇದರಿಂದ ತಯಾರಿಸಿದ ಜ್ಯೂಸ್‌ಅನ್ನು ಬೆಳಿಗ್ಗೆ ಕುಡಿಯುವುದರಿಂದ ಕ್ಯಾಲೊಜಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿ ಜ್ಯೂಸ್‌ನಲ್ಲಿರುವ ಡಿಟಾಕ್ಸ್‌ ಅಂಶವು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ತಲೆಹೊಟ್ಟು, ತುರಿಕೆ ಮುಂತಾದ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ.

ಶುಂಠಿ ನೀರು: ಕೂದಲು ತ್ವರಿತವಾಗಿ ಬೆಳೆಯಲು ಶುಂಠಿ ನೀರು ಸಹಕಾರಿಯಾಗಿದೆ. ಶುಂಠಿಯಲ್ಲಿರುವ ಪ್ರಬಲ ಆಂಟಿಆಕ್ಸಿಡೆಂಟ್‌ಗಳು ಮತ್ತು ರಕ್ತಪರಿಚಲನಾ ವರ್ಧಕಗಳು ನೆತ್ತಿಯ ಕಾರ್ಯವನ್ನು ಉತ್ತೇಜಿಸುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸಿ, ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬೆಳಗ್ಗೆ ಶುಂಠಿ ನೀರನ್ನು ಕುಡಿಯುವುದರಿಂದ ಕೂದಲ ರಚನೆ, ಹೊಳಪು ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದು ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ. ಒಂದು ಕಪ್‌ ನೀರಿಗೆ ಸ್ವಲ್ಪ ಶುಂಠಿ ಹಾಕಿ 4 ರಿಂದ 5 ನಿಮಿಷಗಳವರೆಗೆ ಕುದಿಸಿ. ತಣ್ಣಗಾದ ನಂತರ ಶೋಧಿಸಿ ಕುಡಿಯಿರಿ.

ಸೋಂಪು ನೀರು: ಸೋಂಪು ನೀರು ಕೂದಲಿನ ಬೆಳವಣಿಗೆಗೆ ಬಹಳ ಉತ್ತಮವಾದ ಪಾನೀಯಗಳಲ್ಲಿ ಒಂದು. ಇದರಲ್ಲಿರುವ ಆಂಟಿಆಕ್ಸಿಡೆಂಟ್‌, ಜೀವಸತ್ವಗಳು ಮತ್ತು ಖನಿಜಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದು ಕೂದಲಿನ ಕಿರು ಚೀಲಗಳನ್ನು ಬಲಪಡಿಸುತ್ತದೆ. ಇದರಿಂದ ಕೂದಲಿನ ಉದುರುವಿಕೆ ಕಡಿಮೆಯಾಗುತ್ತದೆ ಮತ್ತು ಹೊಸ ಕೂದಲು ಬರಲು ಸಹಾಯ ಮಾಡುತ್ತದೆ. ಇದು ನೆತ್ತಿಯ ಆರೋಗ್ಯವನ್ನು ಕಾಪಾಡುವುದರ ಮೂಲಕ ಕೂದಲಿಗೆ ಹೊಳಪು ನೀಡುತ್ತದೆ. ಸೋಂಪನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಅದನ್ನು ಕುಡಿಯಿರಿ.

Whats_app_banner