ತ್ವಚೆಗೆ ತೇವಾಂಶ ಮತ್ತು ಪೋಷಣೆಯನ್ನು ಸುಲಭವಾಗಿ ನೀಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ; ಅಕ್ಕಿಯ ಫೇಸ್ ಮಾಸ್ಕ್ ಶೀಟ್ ಬಳಸಿ ನೋಡಿ
Skin Care Tips: ಬೇಸಿಗೆಯ ದಿನಗಳಲ್ಲಿ ಚರ್ಮವನ್ನು ಹೈಡ್ರೇಟ್ ಆಗಿರಿಸುವುದು ಸುಲಭದ ಕೆಲಸವಲ್ಲ. ಬಿಸಿಲಿಗೆ ತ್ವಚೆಯು ಮೃದುತ್ವವನ್ನು ಕಳೆದುಕೊಂಡು ಒರಟಾಗುತ್ತದೆ. ಅದಕ್ಕೆ ಅಕ್ಕಿ ಫೇಸ್ ಮಾಸ್ಕ್ ಶೀಟ್ ಅನ್ನು ಬಳಸುವುದರಿಂದ ಪ್ರಯೋಜನ ಪಡೆಯಬಹುದು.

ಬೇಸಿಗೆಯಲ್ಲಿ ತ್ವಚೆಯನ್ನು ಹೈಡ್ರೇಟ್ ಆಗಿರಿಸುವುದು ಹರಸಾಹಸದ ಕೆಲಸ. ಬಿಸಿಲಿನ ತಾಪಕ್ಕೆ ಸನ್ ಬರ್ನ್, ಒಣ ತ್ವಚೆಯಂತಹ ಹಲವಾರು ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಅನೇಕ ಫೇಸ್ ಮಾಸ್ಕ್‌ಗಳು ಲಭ್ಯವಿದೆ. ಇದು ತ್ವಚೆಯನ್ನು ಹೈಡ್ರೇಟ್ ಆಗಿರಿಸುವುದರ ಜೊತೆಗೆ ಉತ್ತಮ ರಕ್ಷಣೆಯನ್ನು ನೀಡುತ್ತದೆ. ಸೌಂದರ್ಯದ ಕಾಳಜಿವಹಿಸುವವರಿಗೆ ಅಕ್ಕಿ ಉತ್ತಮ ಪದಾರ್ಥವಾಗಿದೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಹೆಚ್ಚಾಗಿ ಬಳಸುವ ಪದಾರ್ಥ ಇದಾಗಿದೆ. ಅಕ್ಕಿಯ ಫೇಸ್ ಮಾಸ್ಕ್ ಶೀಟ್‌ಗಳು ಹೆಚ್ಚಿನ ಜನರ ನೆಚ್ಚಿನ ಫೇಸ್ ಮಾಸ್ಕ್ ಆಗಿದೆ. ಇದು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮಕ್ಕೆ ಪೋಷಣೆ ನೀಡಲು ಸಹಾಯ ಮಾಡುತ್ತದೆ. ಇದು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಫೇಸ್ ಮಾಸ್ಕ್ ಶೀಟ್ ಆಗಿದೆ. ತ್ವಚೆಗೆ ಇಷ್ಟೆಲ್ಲಾ ಪ್ರಯೋಜನ ನೀಡುವ ಅಕ್ಕಿಯ ಫೇಸ್ ಮಾಸ್ಕ್ ಶೀಟ್ ಅನ್ನು ಮನೆಯಲ್ಲಿಯೇ ಯಾವ ರೀತಿ ಬಳಸಬಹುದು ಹಾಗೂ ಅದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.
ಅಕ್ಕಿಯ ಫೇಸ್ ಮಾಸ್ಕ್ ಶೀಟ್ ಎಂದರೇನು?
ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ, ಅಕ್ಕಿಯನ್ನು ಬಳಸಿ ತಯಾರಿಸಿದ ತೆಳುವಾದ ಫೇಸ್ ಮಾಸ್ಕ್ ಶೀಟ್ ಆಗಿದೆ. ಇದು ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ತ್ವಚೆಯ ಆರೈಕೆಗೆ ಅಗತ್ಯವಾದ ತೇವಾಂಶ, ವಿಟಮಿನ್, ಖನಿಜಾಂಶ ಹಾಗೂ ಆಂಟಿಒಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಇದು ಸಸ್ಯಜನ್ಯದ ಉತ್ಪನ್ನವಾದ್ದರಿಂದ ಮೃದುವಾಗಿದ್ದು, ತ್ವಚೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದರಲ್ಲಿರುವ ಪದಾರ್ಥಗಳು ತ್ವಚೆಗೆ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತವೆ.
ಅಕ್ಕಿಯ ಫೇಸ್ ಮಾಸ್ಕ್ ಶೀಟ್‌ನ ಪ್ರಯೋಜನಗಳು
ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ: ಸಾಮಾನ್ಯವಾಗಿ ಅಕ್ಕಿ ಫೇಸ್ ಮಾಸ್ಕ್ ಶೀಟ್‌ನಲ್ಲಿ ವಿಟಮಿನ್ ಸಿ, ಅಕ್ಕಿಯ ಸ್ಟಾರ್ಚ್‌ನಂತಹ ಪದಾರ್ಥಗಳಿರುತ್ತವೆ. ಇವೆಲ್ಲವೂ ಚರ್ಮವನ್ನು ಹೊಳಪುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಪ್ಪು ಕಲೆಗಳು ಮತ್ತು ಹೈಪರ್ ಪಿಗ್ಮೆಂಟೇಷನ್ ಅನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿಯು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
ಚರ್ಮವನ್ನು ಹೈಡ್ರೇಟ್ ಮಾಡುತ್ತದೆ: ಈ ಫೇಸ್ ಮಾಸ್ಕ್ ಚರ್ಮಕ್ಕೆ ತೇವಾಂಶವನ್ನು ನೀಡುವ ಗುಣವನ್ನು ಹೊಂದಿದೆ. ಇದರಲ್ಲಿರುವ ಹೈಡ್ರೇಟಿಂಗ್ ಸಿರಮ್‌ಗಳು ತ್ವಚೆಯನ್ನು ಶುಷ್ಕತೆಯಿಂದ ಕಾಪಾಡಿ, ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಒಣ ಚರ್ಮದವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.
ಬಿಸಿಲಿಗೆ ರಕ್ಷಣೆ ಒದಗಿಸುತ್ತದೆ: ಸನ್‌ಸ್ಕ್ರೀನ್ ಬಳಸದೆ ಬಿಸಿಲಿನಲ್ಲಿ ಓಡಾಡುವವರಿಗೆ ಅಕ್ಕಿ ಫೇಸ್ ಮಾಸ್ಕ್ ಶೀಟ್ ಬಹಳ ಉಪಯುಕ್ತವಾಗಿದೆ. ಸಂಶೋಧನೆಗಳ ಪ್ರಕಾರ ಅಕ್ಕಿ ಉತ್ಪನ್ನಗಳನ್ನ ಬಳಸುವುದರಿಂದ ಸೂರ್ಯನ ಬಿಸಿಲಿನಿಂದ ಉಂಟಾಗುವ ಚರ್ಮದ ಹಾನಿಯನ್ನು ಸುಧಾರಿಸಬಹುದಾಗಿದೆ. ಇದು ಕೂಲಿಂಗ್ ಪರಿಣಾಮವನ್ನು ನೀಡುವುದರಿಂದ ಬಿಸಿಲಿನ ಬೇಗೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ವಯಸ್ಸಾಗುವಿಕೆಯನ್ನು ತಡೆಯುತ್ತದೆ: ಇದರಲ್ಲಿ ಕಾಲೊಜನ್ ಮತ್ತು ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇರಿಸಲಾಗುತ್ತದೆ. ಇದು ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಮೂಲಕ ತೇವಾಂಶವನ್ನು ಒದಗಿಸುತ್ತದೆ. ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ರಚನೆ ಸುಧಾರಿಸುತ್ತದೆ: ಈ ರೀತಿಯ ಫೇಸ್ ಮಾಸ್ಕ್ ಶೀಟ್‌ಗಳು ಚರ್ಮದ ರಚನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಚರ್ಮದ ಮೇಲಿನ ಒರಟಾದ ಹೊರ ಪದರನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಹೊಸ ಚರ್ಮದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಚರ್ಮದ ಮೇಲ್ಪದರವನ್ನು ಮೃದುವಾಗಿಸುತ್ತದೆ.
ಅಕ್ಕಿಯ ಫೇಸ್ ಮಾಸ್ಕ್ ಶೀಟ್ ಬಳಸುವುದು ಹೇಗೆ?
* ಮೊದಲಿಗೆ ಅಕ್ಕಿ ಫೇಸ್ ಮಾಸ್ಕ್ ಶೀಟ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಮೃದುವಾಗುವವರೆಗೆ ನೆನೆಸಿ.
* ಅಕ್ಕಿ ಫೇಸ್ ಮಾಸ್ಕ್ ಶೀಟ್ ಮೃದುವಾದ ಮೇಲೆ ಅದಕ್ಕೆ ಸ್ವಲ್ಪ ರೋಸ್‌ವಾಟರ್ ಅಥವಾ ಅಲೋವೆರಾ ಜೆಲ್ ಅನ್ನು ಸೇರಿಸಿ. ಅದು ನಿಮಗೆ ತಂಪಾದ ಅನುಭವವನ್ನು ನೀಡುತ್ತದೆ.
* ಈಗ ನಿಮ್ಮ ಸ್ವಚ್ಛವಾದ ಮುಖದ ಮೇಲೆ ಆ ಮಾಸ್ಕ್ ಅನ್ನು ಹಾಕಿಕೊಳ್ಳಿ.
* ಇದನ್ನು ಸುಮಾರು 15–20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದರಿಂದ ಮಾಸ್ಕ್‌ನಲ್ಲಿರುವ ಪೋಷಕಾಂಶಗಳು ನಿಮ್ಮ ಚರ್ಮವನ್ನು ಸೇರಲು ಸಹಾಯವಾಗುತ್ತದೆ.
* ನಂತರ ಫೇಸ್ ಮಾಸ್ಕ್ ಅನ್ನು ನಿಧಾನವಾಗಿ ತೆಗೆಯಿರಿ. ಅಕ್ಕಿ ಫೇಸ್ ಮಾಸ್ಕ್ ಶೀಟ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಉಪಯೋಗಿಸುವುದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಜ್ಞರು ಸೂಚಿಸುತ್ತಾರೆ.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
