Facewash Mistake: ಮುಖ ತೊಳೆಯುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ, ಇದರಿಂದ ಬೇಗ ವಯಸ್ಸಾದಂತೆ ಕಾಣ್ತೀರಿ
ಚರ್ಮದ ಆರೈಕೆಗೆ ಮುಖ ತೊಳೆಯುವುದು ಬಹಳ ಮುಖ್ಯ. ಆದರೆ ಮುಖ ತೊಳೆಯುವಾಗ ನಾವು ಮಾಡುವ ಈ ಕೆಲವು ತಪ್ಪುಗಳು ಬೇಗನೇ ವಯಸ್ಸಾದಂತೆ ಕಾಣುವಂತೆ ಮಾಡಬಹುದು.

ನಮ್ಮ ಮುಖ ಆರೋಗ್ಯದಿಂದ ಕಳಕಳಿಯಾಗಿ, ಸುಂದರವಾಗಿ ಕಾಣಿಸಬೇಕು ಎಂದರೆ ಚರ್ಮದ ಆರೈಕೆ ಬಹಳ ಮುಖ್ಯ. ಸರಿಯಾದ ವಿಧಾನವನ್ನು ಅನುಸರಿಸುವ ಮೂಲಕ, ದೀರ್ಘಕಾಲದವರೆಗೆ ತ್ವಚೆಯ ಅಂದ, ಆರೋಗ್ಯ ಕೆಡದಂತೆ ಇರಿಸಿಕೊಳ್ಳಬಹುದು. ಚರ್ಮದ ಅಂದ ಕಾಪಾಡಿಕೊಳ್ಳಲು ಸರ್ಕಸ್ ಮಾಡಬೇಕು ಅಂತಿಲ್ಲ, ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕು ಅಂತಲೂ ಇಲ್ಲ.
ಪ್ರತಿದಿನ ಸ್ವಚ್ಛವಾಗಿ ತೊಳೆದುಕೊಳ್ಳುವುದು, ಮಾಯಿಶ್ಚರೈಸರ್ ಬಳಸುವುದು ಮತ್ತು ಟೋನಿಂಗ್ ಮಾಡುವ ಸಿಎಂಟಿ ವಿಧಾನವನ್ನು ಅನುಸರಿಸಬೇಕು. ಮೊದಲ ಹಂತವೆಂದರೆ ಶುದ್ಧೀಕರಣ, ಅಂದರೆ ಮುಖವನ್ನು ಚೆನ್ನಾಗಿ ತೊಳೆಯುವುದು. ಇದು ಬಹಳ ಮುಖ್ಯವಾದ ಹೆಜ್ಜೆ. ಮುಖದಿಂದ ಕೊಳಕು, ಧೂಳು ಮತ್ತು ಹೆಚ್ಚುವರಿ ಎಣ್ಣೆಯಾಂಶವನ್ನು ತೆಗೆದುಹಾಕಲು ಮುಖ ತೊಳೆಯುವುದು ಅತ್ಯಗತ್ಯ.
ಆದರೆ ಹಲವರು ಮುಖ ತೊಳೆಯುವಾಗ ಕೆಲವು ತಪ್ಪು ವಿಧಾನಗಳನ್ನು ಅನುಸರಿಸುತ್ತಾರೆ. ಅದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ಬೇಗನೆ ವಯಸ್ಸಾದ ಲಕ್ಷಣಗಳು ಮುಖದಲ್ಲಿ ಕಾಣಿಸುತ್ತವೆ. ಇದರಿಂದ ಮುಖದ ಚರ್ಮ ದಪ್ಪವಾಗಿ, ಕಪ್ಪಾಗಿ ಕಾಣಿಸುತ್ತದೆ. ಹಾಗಾದರೆ ಮುಖ ತೊಳೆಯುವಾಗ ಮಾಡುವ ಯಾವ ತಪ್ಪುಗಳು ನಮ್ಮ ಚರ್ಮಕ್ಕೆ ಹಾನಿ ಮಾಡುತ್ತವೆ ನೋಡಿ.
ಮುಖ ತೊಳೆಯಲು ಸರಿಯಾದ ಫೇಸ್‌ವಾಶ್ ಜೆಲ್ ಬಳಸದಿರುವುದು
ಅನೇಕ ಜನರು ಈ ತಪ್ಪನ್ನು ಮಾಡುತ್ತಾರೆ. ಮುಖ ತೊಳೆಯಲು ಕೈಗೆ ಸಿಕ್ಕ ಫೇಸ್‌ವಾಶ್ ಅನ್ನು ಬಳಸುತ್ತಾರೆ. ತಮ್ಮ ಚರ್ಮಕ್ಕೆ ಯಾವುದು ಹೊಂದಿಕೆಯಾಗುತ್ತದೆ ಎಂಬುದನ್ನು ಪರಿಗಣಿಸುವುದಿಲ್ಲ. ದೀರ್ಘಾವಧಿಯವರೆಗೆ ಈ ಅಭ್ಯಾಸವನ್ನು ಮುಂದುವರಿಸುವುದರಿಂದ ಮುಖ ಹಾನಿಯಾಗುತ್ತದೆ. ಆ ಕಾರಣಕ್ಕೆ ನಿಮ್ಮ ಚರ್ಮದ ಪ್ರಕಾರ ಮತ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ಸರಿಯಾದ ಫೇಸ್‌ವಾಶ್ ಜೆಲ್ ಅನ್ನು ಆರಿಸಿಕೊಳ್ಳಬೇಕು. ನಿಮಗೆ ಮೊಡವೆ ಅಥವಾ ಪಿಗ್ಮೆಂಟೇಶನ್‌ನಂತಹ ಸಮಸ್ಯೆಗಳಿದ್ದರೆ, ಚರ್ಮರೋಗ ತಜ್ಞರ ಸಲಹೆಯ ಆಧಾರದ ಮೇಲೆ ಸೂಕ್ತವಾದ ಕ್ಲೆನ್ಸರ್ ಅನ್ನು ಆಯ್ಕೆ ಮಾಡಿ.
ಮುಖ ತೊಳೆಯುವ ವಿಧಾನ
ಮುಖ ತೊಳೆಯಲು ಬಳಸುವ ಸೋಪ್, ಫೇಶ್‌ವಾಶ್ ಮಾತ್ರವಲ್ಲ, ಅದನ್ನು ಸ್ವಚ್ಛಗೊಳಿಸುವ ವಿಧಾನವೂ ಸರಿಯಾಗಿರಬೇಕು. ದೀರ್ಘಕಾಲದವರೆಗೆ ಅಸಮರ್ಪಕ ವಿಧಾನದ ಮೂಲಕ ಮುಖ ತೊಳೆಯುತ್ತಿದ್ದರೆ, ಅದು ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ಮುಖ ತೊಳೆಯುವ ಮೊದಲು ಮೇಕಪ್ ಅನ್ನು ಚೆನ್ನಾಗಿ ತೆಗೆದುಹಾಕಿ. ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಈಗ ಸ್ವಲ್ಪ ಫೇಸ್ ವಾಶ್ ಜೆಲ್ ತೆಗೆದುಕೊಂಡು, ಅದನ್ನು ಮುಖದ ಮೇಲೆ ತುಂಬಾ ಹಗುರವಾಗಿ ಮಸಾಜ್ ಮಾಡಿ ಮತ್ತು ಒಂದು ಅಥವಾ ಎರಡು ನಿಮಿಷಗಳ ನಂತರ ತೊಳೆಯಿರಿ. ಮುಖವನ್ನು ಹೆಚ್ಚು ಹೊತ್ತು ಉಜ್ಜುವುದರಿಂದ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯಂಶ ಹೋಗಿಬಿಡಬಹುದು. ಪರಿಣಾಮವಾಗಿ, ಚರ್ಮವು ತುಂಬಾ ದಪ್ಪವಾಗಿ, ಒಣಗಿದಂತಾಗಬಹುದು.
ನೀರು ಕೂಡ ಮುಖ್ಯ
ಫೇಸ್‌ವಾಶ್ ಬಳಸಿದ ನಂತರ ಮುಖ ತೊಳೆಯಲು ಯಾವ ರೀತಿಯ ನೀರನ್ನು ಬಳಸುತ್ತೀರಿ ಎಂಬುದು ಬಹಳ ಮುಖ್ಯ. ನೀರಿನ ತಾಪಮಾನ ಎಷ್ಟಿರಬೇಕು ಎಂಬುದು ಕೂಡ ವಿಶೇಷವಾಗಿ ಮುಖ್ಯವಾಗುತ್ತದೆ. ಮುಖ ತೊಳೆಯಲು ಎಂದಿಗೂ ಬಿಸಿನೀರನ್ನು ಬಳಸಬೇಡಿ. ಇದು ಚರ್ಮವನ್ನು ಒಣಗಿಸುತ್ತದೆ. ಇದರಿಂದಾಗಿ ವಯಸ್ಸಾದ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ನಿಮ್ಮಲ್ಲಿ ಗಡಸು ನೀರಿದ್ದರೆ ಮುಖ ತೊಳೆಯಲು ಖನಿಜಯುಕ್ತ ನೀರನ್ನು ಬಳಸಿ. ಇದು ನಿಮ್ಮ ಚರ್ಮದ ಮೇಲಿನ ಮೊಡವೆ ನಿವಾರಣೆಗೆ ನೆರವಾಗುತ್ತದೆ.
ಅತಿಯಾದ ಎಕ್ಸ್‌ಫೋಲಿಯೇಟ್ ಮಾಡುವುದು ಅಪಾಯ
ಮುಖದ ಮೇಲೆ ಡೆಡ್‌ಸ್ಕಿನ್ ಇದ್ದರೆ ಅದನ್ನು ತೆಗೆದುಹಾಕಲು ನಿರ್ಜಿವ ಕೋಶಗಳನ್ನು ತೆಗೆದು ಹಾಕುವುದು ಮುಖ್ಯ. ಹಾಗಂತ ಇದಕ್ಕೆ ಪ್ರತಿದಿನ ಎಕ್ಸ್‌ಫೋಲಿಯೇಟ್ ಮಾಡಬೇಕು ಎಂದರ್ಥವಲ್ಲ. ಇದು ನಿಮ್ಮ ಮುಖಕ್ಕೆ ತುಂಬಾ ಹಾನಿಕಾರಕವಾಗಬಹುದು. ವಾರಕ್ಕೆ ಎರಡರಿಂದ ಮೂರು ಬಾರಿ ಎಕ್ಸ್‌ಫೋಲಿಯೇಟ್ ಮಾಡಿದರೆ ಸಾಕು. ಇದು ನಿಮ್ಮ ಚರ್ಮದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ, ಫೇಸ್ ವಾಶ್ ಜೆಲ್ ಅನ್ನು ಆಯ್ಕೆಮಾಡುವಾಗ, ಅದು ತುಂಬಾ ಸೌಮ್ಯವಾಗಿರಬೇಕು. ಅಲ್ಲದೆ, ಇದು ಹೆಚ್ಚು ಎಫ್ಫೋಲಿಯೇಟಿಂಗ್ ಏಜೆಂಟ್‌ಗಳನ್ನು ಹೊಂದಿರಬಾರದು ಎಂಬುದನ್ನು ನೆನಪಿಡಿ.
ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚಿಕೊಳ್ಳದಿರುವುದು
ಮುಖ ತೊಳೆದ ತಕ್ಷಣ ಮಾಯಿಶ್ಚರೈಸರ್ ಹಚ್ಚಬೇಕು. ಇಲ್ಲದಿದ್ದರೆ ನಿಮ್ಮ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಲು ಕಾರಣವಾಗಬಹುದು. ಚರ್ಮವು ಎಣ್ಣೆಯುಕ್ತವಾಗಿದ್ದರೂ ಸಹ, ಚರ್ಮದ ಪ್ರಕಾರಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಅನ್ನು ಹಚ್ಚಬೇಕು. ಮುಖ ತೊಳೆದ ಎರಡು ನಿಮಿಷದೊಳಗೆ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯಬಹುದು. ಈ ಸಣ್ಣ ಅಭ್ಯಾಸವು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ