ಕನ್ನಡ ಸುದ್ದಿ  /  ಜೀವನಶೈಲಿ  /  Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

ಅಗಸೆ ಬೀಜದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ಸೌಂದರ್ಯವರ್ಧಕವೂ ಹೌದು. ಅಗಸೆ ಬೀಜದಿಂದ ಫೇಸ್‌ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳುವುದರಿಂದ ತ್ವಚೆಯ ಅಂದ ಅರಳುತ್ತದೆ. ಇದು ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಕೂದಲಿನ ಕಾಂತಿ ಹೆಚ್ಚಲು ಇದು ಸಹಕಾರಿ. ಅಂದ ಹೆಚ್ಚಿಸಿಕೊಳ್ಳಲು ಅಗಸೆಬೀಜವನ್ನು ಹೇಗೆ ಬಳಸುವುದು ನೋಡಿ.

ಆರೋಗ್ಯಕಷ್ಟೇ ಅಲ್ಲ, ಸೌಂದರ್ಯಕ್ಕೂ ಬೇಕು ಅಗಸೆ ಬೀಜ
ಆರೋಗ್ಯಕಷ್ಟೇ ಅಲ್ಲ, ಸೌಂದರ್ಯಕ್ಕೂ ಬೇಕು ಅಗಸೆ ಬೀಜ

ನಮ್ಮ ತ್ವಚೆಯ ಸದಾ ಕಾಂತಿಯುತವಾಗಿ ಹೊಳೆಯುತ್ತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ತ್ವಚೆಯ ಅಂದ ಹೆಚ್ಚಿಸಿಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಅದಕ್ಕಾಗಿ ಯಾವುದೇ ಹೊಸ ವಿಧಾನ ಕಂಡ್ರು ಅನುಸರಿಸಿ ನೋಡುತ್ತೇವೆ, ನಮ್ಮ ಚರ್ಮಕ್ಕೆ ಅದು ಹೊಂದಿಕೆಯಾದ್ರೆ ಅದನ್ನು ಪಾಲಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಅಗಸೆ ಬೀಜದ ಫೇಸ್‌ಪ್ಯಾಕ್‌ ಟ್ರೆಂಡ್‌ ಆಗುತ್ತಿದೆ. ಇದನ್ನು ಹಚ್ಚಿಕೊಳ್ಳುವುದರಿಂದ ತ್ವಚೆಗೆ ಸಾಕಷ್ಟು ಪ್ರಯೋಜನಗಳಿವೆ. ಜೊತೆಗೆ ಅಗಸೆ ಬೀಜ ಕೂದಲಿಗೂ ಉತ್ತಮ. 

ಟ್ರೆಂಡಿಂಗ್​ ಸುದ್ದಿ

ಅತಿಯಾದ ಬಿಸಿಲು, ಬೆವರು, ಧೂಳು ಹೀಗೆ ಹಲವು ಕಾರಣಗಳಿಂದ ಚರ್ಮದ ಆರೋಗ್ಯ ಕೆಡುವುದು ಸಹಜ. ಇದರಿಂದ ಮೊಡವೆ, ಕಲೆಗಳು, ಸುಕ್ಕು ಮುಂತಾದ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಚರ್ಮದ ಕಾಂತಿ ಕುಗ್ಗತ್ತದೆ. ಇದರ ನಿವಾರಣೆಗೆ ನೀವು ಬ್ಯೂಟಿ ಪಾರ್ಲರ್‌ಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಅಗಸೆ ಬೀಜಗಳಿಂದ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. ಅಗಸೆ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲವನ್ನು ಹೊಂದಿರುತ್ತವೆ. ಅವು ಚರ್ಮ ಮತ್ತು ಕೂದಲಿಗೆ ಚೈತನ್ಯ ನೀಡುತ್ತವೆ. 

ಅಗಸೆ ಬೀಜದ ಫೇಸ್‌ಪ್ಯಾಕ್ 

ಒಂದು ಬೌಲ್ ನೀರಿಗೆ ಒಂದು ಚಮಚ ಅಗಸೆ ಬೀಜವನ್ನು ಸೇರಿಸಿ. ಅವುಗಳನ್ನು ಅರ್ಧ ಗಂಟೆಯವರೆಗೆ ನೆನೆಸಿ. ನಂತರ ಒಲೆಯ ಮೇಲೆ ಕಡಿಮೆ ಉರಿಯಲ್ಲಿ ಕುದಿಸಿ, ಆಗ ನೀರು ದಪ್ಪ ಜೆಲ್ ರೀತಿ ಆಗುತ್ತದೆ. ಚೆನ್ನಾಗಿ ಮುಖ ತೊಳೆದು ಈ ಜೆಲ್‌ ಅನ್ನು ಮುಖಕ್ಕೆ ಜೆಲ್ ಅನ್ನು ಹಚ್ಚಿಸಿ. ಇದನ್ನು ಅರ್ಧ ಗಂಟೆಗಳ ಕಾಲ ಇರಿಸಿ. ನಂತರ ಮುಖ ತೊಳೆಯಿರಿ. ದಿನಕ್ಕೊಮ್ಮೆ ಹೀಗೆ ಮಾಡಿದರೆ ತುಂಬಾ ಒಳ್ಳೆಯದು. ಈ ಫೇಸ್‌ಪ್ಯಾಕ್ ಚರ್ಮದ ಉರಿಯೂತ, ಕಲೆಗಳು ಮತ್ತು ಮೊಡವೆಗಳನ್ನು ನಿವಾರಿಸುತ್ತದೆ. ಇದರಿಂದ ದದ್ದುಗಳು ಸಹ ಕಣ್ಮರೆಯಾಗುತ್ತವೆ. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ವಯಸ್ಸಾದಂತೆ ಕಾಣುವ ಲಕ್ಷಣಗಳು ನಿವಾರಣೆಯಾಗುತ್ತವೆ.

ಅಗಸೆ ಬೀಜಗಳನ್ನು ಒಣಗಿಸಿ  ಪುಡಿ ಮಾಡಿ, ಅದನ್ನು ಪಾತ್ರೆಯಲ್ಲಿ ಹಾಕಿಡಿ. ಫೇಸ್‌ಪ್ಯಾಕ್‌ ತಯಾರಿಸುವಾಗ ಅಗಸೆಬೀಜದ ಪುಡಿಯನ್ನು ಪಾತ್ರೆಗೆ ಹಾಕಿ, ಅದರಲ್ಲಿ ಒಂದು ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮುಖ ಮತ್ತು ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ಕಾಂತಿ ಪಡೆಯುತ್ತದೆ. ಚರ್ಮವೂ ತೇವಾಂಶದಿಂದ ಕೂಡಿರುತ್ತದೆ.

ಅಗಸೆ ಬೀಜಗಳನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಅಗಸೆ ಬೀಜಗಳಿಂದ ಪೇಸ್ಟ್‌ ತಯಾರಿಸಿ. ಆ ಪೇಸ್ಟ್‌ನಲ್ಲಿ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ತ್ವಚೆಯು ಹೊಳೆಯುತ್ತದೆ. ಅಗಸೆಬೀಜದಲ್ಲಿರುವ ಎಲ್ಲಾ ಪೋಷಕಾಂಶಗಳು ಚರ್ಮದ ಆಳವನ್ನು ತಲುಪಿ ಕಾಂತಿಯುತವಾಗಿಸುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಫ್ಲಾಕ್ಸ್ ಸೀಡ್ ಫೇಸ್‌ಮಾಸ್ಕ್ ಅನ್ನು ಪ್ರಯತ್ನಿಸುವುದು ತುಂಬಾ ಒಳ್ಳೆಯದು.

ಅಗಸೆ ಬೀಜದಲ್ಲಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳಿವೆ. ಅವುಗಳನ್ನು ತಿನ್ನುವುದು ಸಹ ಬಹಳ ಮುಖ್ಯ. ಕೊಲೆಸ್ಟ್ರಾಲ್, ಮಧುಮೇಹ ಮತ್ತು ಸಂಧಿವಾತದಂತಹ ಸಮಸ್ಯೆಗಳಿರುವವರು ಪ್ರತಿದಿನ ಅಗಸೆ ಬೀಜಗಳಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ನಮ್ಮ ದೇಹಕ್ಕೆ ಅತ್ಯಗತ್ಯವಾದ ಒಮೆಗಾ 3 ಕೊಬ್ಬಿನಾಮ್ಲಗಳು ಅಗಸೆ ಬೀಜದಲ್ಲಿದೆ. ಮಕ್ಕಳು, ವಯಸ್ಕರು ಮತ್ತು ಗರ್ಭಿಣಿಯರಿಗೆ ಇವು ಅತ್ಯಗತ್ಯ.