Hair Care: ಬಾಲನೆರೆ, ತಲೆಹೊಟ್ಟು ನಿವಾರಣೆ ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಮದ್ದು ಈರುಳ್ಳಿ ರಸ; ಇದನ್ನು ಹೀಗೆ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಬಾಲನೆರೆ, ತಲೆಹೊಟ್ಟು ನಿವಾರಣೆ ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಮದ್ದು ಈರುಳ್ಳಿ ರಸ; ಇದನ್ನು ಹೀಗೆ ಬಳಸಿ

Hair Care: ಬಾಲನೆರೆ, ತಲೆಹೊಟ್ಟು ನಿವಾರಣೆ ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಮದ್ದು ಈರುಳ್ಳಿ ರಸ; ಇದನ್ನು ಹೀಗೆ ಬಳಸಿ

ಕೂದಲು ಉದುರುವುದು, ತಲೆಹೊಟ್ಟು ನಿವಾರಣೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಈರುಳ್ಳಿ ರಸ. ಆದರೆ ಇದನ್ನ ಬಳಸಲು ಕ್ರಮವಿದೆ. ಆ ಕ್ರಮದಂತೆ ಬಳಸಿದರೆ ಕೂದಲಿನ ಉತ್ತಮ ಫಲಿತಾಂಶ ಖಚಿತ. ಹಾಗಾದರೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈರುಳ್ಳಿ ರಸವನ್ನು ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ.

ಕೂದಲಿನ ಆರೋಗ್ಯಕ್ಕೆ ಈರುಳ್ಳಿ ರಸ
ಕೂದಲಿನ ಆರೋಗ್ಯಕ್ಕೆ ಈರುಳ್ಳಿ ರಸ

ಈರುಳ್ಳಿಯ ಘಾಟು ಹಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಇದನ್ನು ಕತ್ತರಿಸುವ ಪರಿಯಂತೂ ಕೇಳುವುದೇ ಬೇಡ. ತನ್ನನ್ನು ಕತ್ತರಿಸಿದವರಿಗೆ ಕಣ್ಣೀರು ಹಾಕಿಸದೇ ಬಿಡುವುದಿಲ್ಲ ಈರುಳ್ಳಿ. ಅದೇನೇ ಇದ್ದರೂ ಈ ಈರುಳ್ಳಿ ಕೂದಲಿನ ಅಂದ, ಆರೋಗ್ಯಕ್ಕೆ ದಿ ಬೆಸ್ಟ್‌ ಎನ್ನಬಹುದು.

ಇದರಲ್ಲಿ ಸೋಂಕು ಹಾಗೂ ಉತ್ಕರ್ಷಣ ವಿರೋಧಿ ಅಂಶಗಳು ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ತಲೆಹೊಟ್ಟು ನಿವಾರಣೆಗೂ ಇದು ಸಹಕಾರಿ.

ಕೂದಲಿನ ಬೆಳವಣಿಗೆಗೆ ಸಹಕಾರಿ

ಕೂದಲಿನ ಬೆಳವಣಿಗೆಯಲ್ಲಿ ಈರುಳ್ಳಿ ರಸವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ.

ಈರುಳ್ಳಿ ಶ್ಯಾಂಪೂ ತಯಾರಿಸುವುದು: 100 ಗ್ರಾಂ ತಾಜಾ ಈರುಳ್ಳಿಯನ್ನು ತೆಗೆದುಕೊಂಡು, ಸಿಪ್ಪೆ ಸುಲಿಯಿರಿ. ನಂತರ ಇದನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಅಥವಾ ತರಿ ತರಿಯಾಗಿ ಜಜ್ಜಿ. ನಂತರ ಜಜ್ಜಿದ ಈರುಳ್ಳಿಯನ್ನು ಮಸ್ಲಿನ್‌ ಬಟ್ಟೆಗೆ ಹಾಕಿ ರಸವನ್ನು ಹಿಂಡಿ ತೆಗೆಯಿರಿ. ಈರುಳ್ಳಿ ರಸಕ್ಕೆ ತೆಂಗಿನಎಣ್ಣೆ, ಹರಳೆಣ್ಣೆ ಹಾಗೂ ನೀಲಗಿರಿ ಎಣ್ಣೆಯನ್ನು ಸೇರಿಸಿ ನೈಸರ್ಗಿಕ ಶ್ಯಾಂಪೂ ಜೊತೆ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ 5 ನಿಮಿಷ ಬಿಟ್ಟು ನಂತರ ಸ್ನಾನ ಮಾಡಬೇಕು.

ಇದು ಕೂದಲಿನ ಕಿರುಚೀಲಗಳಿಗೆ ಹೆಚ್ಚು ಪೋಷಕಾಂಶ ಒದಗಿಸುತ್ತದೆ, ಅಲ್ಲದೇ ಉತ್ತಮ ಪೋಷಣೆಯನ್ನು ನೀಡುತ್ತದೆ. ಒಣ ಕೂದಲಿನ್ನು ಮಾಯಿಶ್ಚರೈಸ್‌ ಮಾಡುವ ಜೊತೆಗೆ ನೆತ್ತಿ ಕೂದಲಿನ ಬೆಳವಣಿಗೆಗೆ ಉತ್ತೇಜಿಸುತ್ತದೆ. ನೀವು ಮನೆಯಲ್ಲಿ ಈ ಶಾಂಪೂ ತಯಾರಿಸಲು ಸಾಧ್ಯವಾಗದೇ ಇದ್ದರೆ, ನೀವು ಬಳಸುವ ಶಾಂಪೂ ಜೊತೆ ಈರುಳ್ಳಿ ರಸ ಸೇರಿಸಬಹುದು.

ಕೂದಲು ಈರುಳ್ಳಿ ವಾಸನೆ ಬಂದರೆ ಚಿಂತೆ ಬೇಡ

ಕೂದಲಿಗೆ ಈರುಳ್ಳಿ ರಸ ಬಳಸುವುದರಿಂದ ಇದರ ಘಾಟು ಹಿಂಸೆಯಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಇದರ ವಾಸನೆಯನ್ನು ಹೋಗಲಾಡಿಸಲು ನಿಂಬೆರಸವನ್ನು ಬಳಸಬಹುದು ಎನ್ನುತ್ತಾರೆ ತಜ್ಞರು.

ಬಾಲನೆರೆ ತಡೆಯುವುದು (ಕೂದಲು ಬೆಳ್ಳಗಾಗುವುದು)

ಕೂದಲು ಬೆಳ್ಳಗಾಗುವುದನ್ನು ತಡೆಯಲು ಈರುಳ್ಳಿ ರಸವನ್ನು ಬಳಸಬಹುದು ಎನ್ನುವುದಕ್ಕೆ ಯಾವುದೇ ಸಂಶೋಧನೆ ಆಧಾರಿತ ಅಂಶಗಳಿಲ್ಲ. ಆದರೆ ಹಲವು ಮನೆಮದ್ದುಗಳು ಈರುಳ್ಳಿ ರಸವು ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದೆ.

ಈರುಳ್ಳಿಯಲ್ಲಿ ಕ್ಯಾಟಲೇಸ್‌ ಎಂಬ ಉತ್ಕರ್ಷಣ ನಿರೋಧಕ ಸಂಯುಕ್ತವಿದೆ. ಇದು ಕೂದಲಿನ ಬುಡದಲ್ಲಿ ಹೈಡ್ರೋಜನ್‌ ಪೆರಾಕ್ಸೈಡ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕೂದಲು ಬಿಳಿಯಾಗುವುದನ್ನು ತಡೆಯಲು ಈರುಳ್ಳಿಯನ್ನು ಹೀಗೆ ಬಳಸಬೇಕು.

3 ಚಮಚ ಈರುಳ್ಳಿ ರಸ ಹಾಗೂ 2 ಚಮಚ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ಕೂದಲು ಹಾಗೂ ನೆತ್ತಿಯ ಬುಡಕ್ಕೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ರಾಸಾಯನಿಕ ಮುಕ್ತ ಶಾಂಪೂವಿನಿಂದ ತಲೆಸ್ನಾನ ಮಾಡಿ. ಹತ್ತಿಯ ತುಂಡನ್ನು ಈರುಳ್ಳಿ ರಸದ ಮಿಶ್ರಣದಲ್ಲಿ ಅದ್ದಿ ನೆತ್ತಿಯ ಭಾಗಕ್ಕೆ ಸವರಿ 15 ನಿಮಿಷ ಬಿಟ್ಟು ಸ್ನಾನ ಮಾಡಬಹುದು.

ಕೂದಲಿಗೆ ಮರುಜೀವ ನೀಡುತ್ತದೆ

ಒಣ ಹಾಗೂ ಹಾನಿಗೊಳಗಾದ ಕೂದಲಿನ ರಿಪೇರಿಗೂ ಈರುಳ್ಳಿ ರಸ ಬೆಸ್ಟ್‌ ಎನ್ನಬಹುದು. ಇದರಲ್ಲಿ ಕ್ಯಾಂಪೆಫೆರಾಲ್‌ ಮತ್ತು ಕ್ವೆರ್ಸೆಟಿನ್‌ನಂತಹ ಫ್ಲೇವನಾಯ್ಡ್‌ಗಳಿವೆ. ಇವು ಉರಿಯೂತ ನಿವಾರತ, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಇದು ನೆತ್ತಿಗೆ ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ನೆತ್ತಿಯ ತುರಿಕೆಯನ್ನು ನಿವಾರಿಸುತ್ತದೆ

ಈರುಳ್ಳಿ ರಸದಲ್ಲಿರ ಉತ್ಕರ್ಷಣ ವಿರೋಧಿ ಅಂಶಗಳು ನೆತ್ತಿಯ ತುರಿಕೆಯನ್ನು ನಿವಾರಿಸುತ್ತದೆ. ನೈಸರ್ಗಿಕ ಉತ್ಪನ್ನಗಳನ್ನು ಈರುಳ್ಳಿ ರಸದೊಂದಿಗೆ ಸೇರಿಸಿ ಬಳಸಬಹುದು.

  • 2 ಚಮಚ ಈರುಳ್ಳಿ ರಸ ಹಾಗೂ ಅರ್ಧ ಚಮಚ ಜೇನುತುಪ್ಪ,
  • 1 ಚಮಚ ಆಲಿವ್‌ ಎಣ್ಣೆ 3 ಚಮಚ ಈರುಳ್ಳಿ ರಸ
  • 3 ಚಮಚ ಈರುಳ್ಳಿ ರಸ, 5 ಚಮಚ ತೆಂಗಿನೆಣ್ಣೆ ಹಾಗೂ 1 ಚಮಚ ನಿಂಬೆರಸ ಹೀಗೆ ಈ ಮಿಶ್ರಣವನ್ನು ಬಳಸಬಹುದು.

ನಿಮಗೆ ಯಾವುದು ಸೂಕ್ತವೋ ಅದನ್ನು ಇವನ್ನು ಬೇರೆ ಬೇರೆಯಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 20 ರಿಂದ 30 ನಿಮಿಷಗಳ ನಂತರ ರಾಸಾಯನಿಕ ಯುಕ್ತ ಶಾಂಪೂ ಬಳಸಿ ತಲೆಸ್ನಾನ ಮಾಡಿ.

ತಲೆಹೊಟ್ಟಿನ ನಿವಾರಣೆ

ಈರುಳ್ಳಿ ರಸವು ಆಂಟಿಮೈಕ್ರೊಬಿಯಲ್‌ ಮತ್ತು ಆಂಟಿಫಂಗಲ್‌ ಗುಣಲಕ್ಷಣಗಳನ್ನು ಹೊಂದಿದೆ. ಈ ಅಂಶಗಳು ತಲೆಹೊಟ್ಟು ನಿವಾರಣೆಗೂ ಸಹಕಾರಿ.

Whats_app_banner