ಬ್ಯೂಟಿಪಾರ್ಲರ್‌ಗೂ ಹೋಗದೇ, ದುಬಾರಿ ಕ್ರೀಮ್ ಬಳಸದೇ ಕಡಿಮೆ ಖರ್ಚಿನಲ್ಲಿ ಅಂದ ಹೆಚ್ಚಿಸುವ ಫೇಸ್‌ಪ್ಯಾಕ್ ಇಲ್ಲಿದೆ, ಬಳಸಿ ನೋಡಿ
ಮುಖದ ಮೇಲೆ ಕೊಂಚ ಕಲೆ, ಮೊಡವೆ ಇದ್ರೂ ಹಿಂಸೆ ಅನ್ನಿಸುತ್ತೆ. ಆದರೆ ಕೆಲವರಿಗೆ ಮುಖದಲ್ಲಿ ಅಲ್ಲಲ್ಲಿ ಕಪ್ಪು ಕಲೆ ಉಂಟಾಗುತ್ತದೆ. ಇದರಿಂದ ಅಂದ ಕೆಡುತ್ತದೆ. ಈ ಸಮಸ್ಯೆ ಹೋಗಲಾಡಿಸುವ ಜೊತೆಗೆ ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಬಯಸಿದರೆ ಬ್ಯೂಟಿಪಾರ್ಲರ್‌ಗೆ ಹೋಗಬೇಕು ಅಂತಿಲ್ಲ. ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಈ ಫೇಸ್‌ಪ್ಯಾಕ್ ತಯಾರಿಸಿ ಬಳಸಬಹುದು.

ಸುಂದರವಾಗಿ ಕಾಣಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ನಾನಾ ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ ಮಾಲಿನ್ಯ ಮತ್ತು ಅಪೌಷ್ಟಿಕತೆಯ ಕಾರಣದಿಂದಾಗಿ ಮುಖದ ಕಾಂತಿ ಕಳೆದು ಹೋಗಬಹುದು. ಮುಖದ ಕೆಲವು ಭಾಗದಲ್ಲಿ ಮಸುಕಾಗಿ ಮತ್ತು ಕೆಲವು ಭಾಗದಲ್ಲಿ ಕಪ್ಪು ಕಲೆಗಳು ಉಂಟಾಗಬಹುದು. ಚರ್ಮದ ಬಣ್ಣ ಅಲ್ಲಲ್ಲಿ ಒಂದೊಂದು ರೀತಿ ಇರುವುದರಿಂದ ಮುಖದ ಅಂದ ಕೆಡುತ್ತದೆ. ಮುಖದ ಚರ್ಮ ಸಂಪೂರ್ಣ ಒಂದೇ ರೀತಿ ಇದ್ದರೆ ಮಾತ್ರ ಅಂದವಾಗಿ ಕಾಣಲು ಸಾಧ್ಯವಿದೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ಚರ್ಮದ ಮೇಲೆ ಕಲೆಗಳನ್ನು ನಿವಾರಿಸಿ, ತ್ವಚೆಯ ಬಣ್ಣ ಒಂದೇ ರೀತಿ ಕಾಣುವಂತೆ ಮಾಡಲು ಬ್ಯೂಟಿಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಅಂತಿಲ್ಲ, ಅದಕ್ಕಾಗಿ ದುಬಾರಿ ಕ್ರೀಮ್‌ಗಳ ಬಳಕೆಯೂ ಬೇಕಿಲ್ಲ. ಬದಲಾಗಿ ಮನೆಯಲ್ಲೇ ಈ ಕೆಲವು ವಸ್ತುಗಳನ್ನು ಬಳಸಿ ಫೇಸ್‌ಪ್ಯಾಕ್ ತಯಾರಿಸಿ ಬಳಸಿ ನೋಡಿ. ಇದರಿಂದ ತ್ವಚೆಯ ಕಾಂತಿ ದುಪ್ಪಟ್ಟಾಗುವುದು ಸುಳ್ಳಲ್ಲ.
ಫೇಸ್‌ಪ್ಯಾಕ್ ತಯಾರಿಸುವುದು ಹೇಗೆ
ಈ ಫೇಸ್ ಪ್ಯಾಕ್ ತಯಾರಿಸಲು ಮೊದಲು ಅಕ್ಕಿಯನ್ನು ನೀರಿನಲ್ಲಿ ಕುದಿಸಿ ಚೆನ್ನಾಗಿ ಬೇಯಲು ಬಿಡಿ. ಅಕ್ಕಿ ಬೆಂದ ನಂತರ, ಅದನ್ನು ತಣ್ಣಗಾಗಲು ಬಿಡಿ. ಇದನ್ನು ಮಿಕ್ಸರ್‌ಗೆ ಹಾಕಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ. ಈಗ ಒಂದು ಟೊಮೆಟೊ ತೆಗೆದುಕೊಂಡು, ಅದರಿಂದ ನಯವಾದ ಪ್ಯೂರಿ ಮಾಡಿ ಅನ್ನಕ್ಕೆ ಸೇರಿಸಿ. ಇದಕ್ಕೆ ಅರ್ಧ ನಿಂಬೆಹಣ್ಣಿನ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಷ್ಟೇ, ಫೇಸ್ ಪ್ಯಾಕ್ ಸಿದ್ಧ.
ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳುವ ಮೊದಲು ಮುಖವನ್ನು ಚೆನ್ನಾಗಿ ತೊಳೆಯಬೇಕು . ಮುಖದ ತೊಳೆಯಲು ಫೇಸ್ ವಾಶ್ ಬಳಸಬಹುದು ಅಥವಾ ನೀವು ಬಳಸುವ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸಬಹುದು. ರಾಸಾಯನಿಕ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಲು, ಮುಖವನ್ನು ನೀರಿನಿಂದ ತೊಳೆದು ಒಣಗಲು ಬಿಡಿ. ನಂತರ, ಒಂದು ಹತ್ತಿ ಉಂಡೆಯನ್ನು ಸ್ವಲ್ಪ ಹಾಲಿನಲ್ಲಿ ಅದ್ದಿ, ಆ ಹತ್ತಿ ಉಂಡೆಯನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಹಚ್ಚಿ ಸ್ವಚ್ಛಗೊಳಿಸಿ. ಈ ಫೇಸ್ ಪ್ಯಾಕ್ ಅನ್ನು ಸ್ವಚ್ಛವಾದ ಮುಖಕ್ಕೆ ಹಚ್ಚಿ ನಂತರ ಕನಿಷ್ಠ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಫೇಸ್ ಪ್ಯಾಕ್ ತೆಗೆಯುವ ಮೊದಲು, ಪ್ಯಾಕ್ ಚೆನ್ನಾಗಿ ಒಣಗಿದೆಯೇ ಎಂದು ಪರಿಶೀಲಿಸಿ. ಒಣಗಿದ ನಂತರ, ನಿಮ್ಮ ಕೈಗಳನ್ನು ಒದ್ದೆ ಮಾಡಿ ಮತ್ತು ಪ್ಯಾಕ್ ಅನ್ನು ತೆಗೆದುಹಾಕಲು ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖವನ್ನು ಮಸಾಜ್ ಮಾಡಿ. ಕೊನೆಗೆ, ಮುಖವನ್ನು ಶುದ್ಧ ನೀರಿನಿಂದ ತೊಳೆದು, ನಂತರ ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಒಂದು ತಿಂಗಳೊಳಗೆ ನಿಮ್ಮ ಮುಖದಲ್ಲಿ ಹೊಳಪು ಕಾಣುವಿರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ