ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ
ಮುಖದ ಮೇಲೆ ಮೊಡವೆ ಕಲೆಗಳು ಉಳಿದುಕೊಂಡರೆ ಹೊರಗಡೆ ಓಡಾಡಲು ಹೆಚ್ಚಿನ ಮಹಿಳೆಯರು ಹಿಂದೆ ಮುಂದೆ ನೋಡುತ್ತಾರೆ. ಹಾಗಾದರೆ ಮುಖದ ಮೇಲೆ ಮೊಡವೆ ಕಲೆಗಳು ಉಳಿಯದಂತೆ ಮಾಡಲು ಏನು 1 ಮಾಡಬೇಕು? ಮೊಡವೆ ಕಲೆಗಳನ್ನು ನಿವಾರಿಸಲು ಪುದೀನಾ ಎಲೆ ನೆರವಾಗುತ್ತವೆ. ಈ ಕುರಿತ ವಿವರ ಇಲ್ಲಿದೆ ನೋಡಿ.
ಪುದೀನಾ ಎಲೆ ವಿವಿಧ ಪಾನೀಯಗಳ ರುಚಿ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಅಲ್ಲದೆ ವಿವಿಧ ಖಾದ್ಯಗಳ ತಯಾರಿಕೆಯಲ್ಲಿಯೂ ಪುದೀನಾವನ್ನು ಬಳಕೆ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಪುದೀನಾ ಎಲೆಗಳು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ನೈಸರ್ಗಿಕ ಮನೆ ಮದ್ದಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಮೊಡವೆ ಕಲೆಗಳನ್ನು ತೊಡೆದು ಹಾಕುವಂಥ ಶಕ್ತಿ ಪುದೀನಾದಲ್ಲಿದೆ ಎಂದರೆ ನೀವು ನಂಬಲೇಬೇಕು. ಪುದೀನಾವನ್ನು ಯಾವ ರೀತಿಯಲ್ಲಿ ಬಳಸುವುದರಿಂದ ಮೊಡವೆ ಕಲೆಗಳಿಂದ ಮುಕ್ತಿ ಪಡೆಯಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಮೊಡವೆ ಕಲೆಗಳು ಮೂಡಲು ಕಾರಣವೇನು?
ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಸ್ಥೆಟಿಕ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೊಡವೆ ಕಲೆಗಳು ಮುಖದ ಮೇಲೆ ಮೂಡಲು ಕೆಲವು ಸಂಭವನೀಯ ಕಾರಣಗಳು ಹೀಗಿವೆ.
ಮೊಡವೆಯನ್ನು ಬಲಾತ್ಕಾರದಿಂದ ಒಡೆಯುವುದು
ಮುಖದಲ್ಲಿ ಮೊಡವೆ ಕಲೆಗಳು ಮೂಡಲು ಕಾರಣವಾಗುವ ಅತ್ಯಂತ ಸಾಮಾನ್ಯ ಕಾರಣ ಇದಾಗಿದೆ. ಮುಖದಲ್ಲಿ ಮೂಡಿದ ಹಸಿ ಮೊಡವೆಗಳನ್ನು ಒಡೆದುಕೊಳ್ಳುವುದರಿಂದ ಗಾಯದ ಕಲೆಗಳು ಮುಖದ ಮೇಲೆ ಶಾಶ್ವತವಾಗಿ ಉಳಿದು ಬಿಡುತ್ತದೆ.
ಮೊಡವೆ ನಿವಾರಣೆಗೆ ಕ್ರಮ ವಹಿಸುವುದರಲ್ಲಿ ವಿಳಂಬ
ತುಂಬಾ ಸಮಯದಿಂದ ಮುಖದ ಮೇಲೆ ಮೊಡವೆ ಮೂಡುತ್ತಿದ್ದರೂ ಸಹ ಅನೇಕರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿರ್ಲಕ್ಷ್ಯಿಸುತ್ತಲೇ ಹೋಗುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಆರೈಕೆ ಸಿಗದ ಕಾರಣದಿಂದಲೂ ಮುಖದ ಮೇಲೆ ಮೊಡವೆ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ.
ಮೊಡವೆ ಕಲೆಗಳನ್ನು ನಿವಾರಿಸುವಲ್ಲಿ ಪುದೀನಾ ಎಲೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಪುದೀನಾ ಎಲೆಗಳಲ್ಲಿ ಇರುವ ಸಾಲಿಸಿಲಿಕ್ ಆ್ಯಸಿಡ್ ಅಂಶ
ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವತಃ ವೈದ್ಯರು ಕೂಡ ಸಾಲಿಸಿಲಿಕ್ ಅಂಶವಿರುವ ಆಯಿಂಟ್ಮೆಂಟ್‌ಗಳನ್ನೇ ನೀಡುತ್ತಾರೆ. ಇದು ಉರಿಯೂತದ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇವುಗಳು ಮೊಡವೆಯಿಂದ ಮುಖದ ಮೇಲೆ ಮೂಡುವ ಕಲೆಗಳನ್ನು ನಿವಾರಿಸುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕಾಸ್ಮೆಟಿಕ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೊಡವೆ ವಿರುದ್ಧದ ಚಿಕಿತ್ಸೆಗೆ ಪುದೀನಾ ಎಲೆಗಳನ್ನು ಬಳಕೆ ಮಾಡುವುದು ಆರ್ಯುವೇದ ವಿಜ್ಞಾನದಲ್ಲಿಯೂ ತಿಳಿಸಲಾಗಿದೆ ಎನ್ನಲಾಗಿದೆ.
ಇನ್ನಷ್ಟು ಸೌಂದರ್ಯ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪುದೀನಾ ಎಲೆಗಳಲ್ಲಿ ಇರುವ ಆ್ಯಂಟಿಆಕ್ಸಿಡಂಟ್ ಗುಣಗಳು
ಮಿಂಟ್ ಫಾಸ್ಟೇಟ್, ಕ್ಯಾಲ್ಸಿಯಂ, ವಿಟಮಿನ್ ಸಿ, ಫ್ವೇವನಾಯ್ಡ್ಗಳು ಹಾಗೂ ಫೀನಾಲಿಕ್ಸ್ ಅಂಶಗಳು ಪುದೀನಾದಲ್ಲಿದೆ. ಇವುಗಳೆಲ್ಲವೂ ಅತ್ಯುತ್ತಮ ಆಂಟಿಆಕ್ಸಿಡಂಟ್‌ಗಳಾಗಿವೆ. ಜರ್ನಲ್ ಆಫ್ ಅನಾಲಿಟಿಕಲ್ ಮೆಥಡ್ಸ್ ಇನ್ ಕೆಮೆಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪುದೀನಾ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಇರುತ್ತದೆ. ಇವುಗಳು ಮೊಡವೆ ಮತ್ತು ಮುಖದ ಮೇಲೆ ಮೂಡುವ ಸುಕ್ಕುಗಳ ವಿರುದ್ಧದ ಚಿಕಿತ್ಸೆಗೆ ಬಳಕೆ ಮಾಡುವ ಉತ್ತಮ ಔಷಧವಾಗಿದೆ.
ಮೊಡವೆ ಕಲೆಗಳನ್ನು ನಿವಾರಿಸಲು ಪುದೀನಾ ಎಲೆಗಳನ್ನು ಯಾವ ರೀತಿಯಲ್ಲಿ ಬಳಸಬೇಕು?
ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಪುದೀನಾ ಎಲೆಗಳನ್ನು ಈ ರೀತಿಯಲ್ಲಿ ಬಳಕೆ ಮಾಡಿದರೆ ನೀವು ಮೊಡವೆ ಕಲೆ ಸಮಸ್ಯೆಗಳಿಂದ ಖಂಡಿತವಾಗಿ ಪಾರಾಗಬಹುದಾಗಿದೆ .
1.ಪುದೀನಾ ಹಾಗೂ ಅರಿಶಿಣದ ಫೇಸ್‌ಪ್ಯಾಕ್
ಬೇಕಾಗುವ ಸಾಮಗ್ರಿಗಳು: ಪುದೀನಾ ಎಲೆ 10-15, ಅರಿಶಿಣ ಸ್ವಲ್ಪ
ತಯಾರಿಸುವ ವಿಧಾನ : ಪುದೀನಾ ಎಲೆಗಳನ್ನು ಸಣ್ಣ ಮಿಕ್ಸಿ ಜಾರಿಗೆ ಹಾಕಿಕೊಂಡು ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಅರಿಶಿಣ ಸೇರಿಸಿ ಮಿಶ್ರಣ ಮಾಡಿ . ಇದನ್ನು ಮುಖಕ್ಕೆ ಹಚ್ಚಿಕ್ಕೊಂಡು ಕೆಲವು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
2. ಪುದೀನಾ ಸೌತೆಕಾಯಿ ಫೇಸ್ ಪ್ಯಾಕ್
- ಬೇಕಾಗುವ ಸಾಮಗ್ರಿಗಳು : ಪುದೀನಾ ಎಲೆಗಳು 10-15, ಸೌತೆಕಾಯಿ 1
- ಮಾಡುವ ವಿಧಾನ : ಪುದೀನಾ ಎಲೆಗಳು ಹಾಗೂ ಸೌತೆಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.
3. ಪುದೀನಾ ರೋಸ್ ವಾಟರ್ ಪ್ಯಾಕ್
- ಬೇಕಾಗುವ ಸಾಮಗ್ರಿಗಳು : ಪುದೀನಾ ಎಲೆಗಳು 1-10, ರೋಸ್ ವಾಟರ್ 2 ಟೇಬಲ್ ಚಮಚ
- ತಯಾರಿಸುವ ವಿಧಾನ : ಪುದೀನಾ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಇದಕ್ಕೆ ರೋಸ್ ವಾಟರ್ ಮಿಶ್ರಣ ಮಾಡಿ. ಇದಕ್ಕೆ ಬೇಕಿದ್ದರೆ ನೀವು ಸ್ವಲ್ಪ ಪ್ರಮಾಣದಲ್ಲಿ ಕಡಲೆ ಹಿಟ್ಟನ್ನು ಬೇಕಿದ್ದರೂ ಸೇರಿಸಿಕೊಳ್ಳಬಹುದು. ಅರ್ಧ ಗಂಟೆ ಬಳಿಕ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
4. ಪುದೀನಾ ಓಟ್ಸ್ ಪ್ಯಾಕ್
- ಬೇಕಾಗುವ ಸಾಮಗ್ರಿಗಳು : ಸೌತೆಕಾಯಿ ತಿರುಳು 1 ಚಮಚ, ಓಟ್ಸ್ 1 ಚಮಚ, ಜೇನುತುಪ್ಪ 1ಚಮಚ, ರೋಸ್ ವಾಟರ್ 1 ಚಮಚ, ಪುದೀನಾ ಎಲೆಗಳು 10-15
- ತಯಾರಿಸುವ ವಿಧಾನ : ಪುದೀನಾ ಎಲೆಗಳು ಹಾಗೂ ಓಟ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ. ಈಗ ಮೇಲೆ ತಿಳಿಸಲಾದ ಮಿಕ್ಕೆಲ್ಲ ಪದಾರ್ಥಗಳನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ.
5. ಪುದೀನಾ - ಲಿಂಬೆ ರಸ ಫೇಸ್‌ಪ್ಯಾಕ್
- ಬೇಕಾಗುವ ಸಾಮಗ್ರಿಗಳು : ಪುದೀನಾ ಎಲೆ 10-15, ನಿಂಬೆ ರಸ ಸ್ವಲ್ಪ
- ತಯಾರಿಸುವ ವಿಧಾನ : ಪುದೀನಾ ಎಲೆಗಳನ್ನು ರುಬ್ಬಿಕೊಂಡು ಬಳಿಕ ಇದಕ್ಕೆ ನಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. 15 ನಿಮಿಷಗಳ ಕಾಲ ಮುಖದ ಮೇಲೆ ಫೇಸ್‌ಪ್ಯಾಕ್ ಇಟ್ಟುಕೊಂಡು ಬಳಿಕ ಚೆನ್ನಾಗಿ ತೊಳೆದುಕೊಳ್ಳಿ.