ಬ್ಲೂ ಟೀ ತಯಾರಿಸುವುದು ಹೇಗೆ? ಚರ್ಮದ ಸುಕ್ಕು, ಕಲೆ ನಿವಾರಣೆ ಸೇರಿದಂತೆ ಈ ಅದ್ಭುತ ಪಾನೀಯದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
Blue Tea: ಬ್ಲೂ ಟೀ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಗ್ರೀನ್ ಟೀ ಕೇಳಿದ್ದೇವೆ, ಕುಡಿದಿದ್ದೇವೆ. ಆದರೆ ಈ ಬ್ಲೂ ಟೀ ಎಂದರೇನು? ಇದರಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.

ಸೌಂದರ್ಯವನ್ನು ವೃದ್ಧಿಸುವ ಎಷ್ಟೋ ಪ್ರಾಡೆಕ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ನಾವು ನೈಸರ್ಗಿಕ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಮನೆಯಲ್ಲೆ ದೊರೆಯುವ ನೈಸರ್ಗಿಕ ವಸ್ತುಗಳಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ, ಅದರಲ್ಲಿ ಬ್ಲೂ ಟೀ ಕೂಡಾ ಒಂದು. ಇದನ್ನು ಸೇವಿಸುವುದರಿಂದ ತ್ವಚೆಗೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಅಂಶಗಳು, ಉರಿಯೂತ ನಿವಾರಕ ಗುಣಗಳು ಇವೆ ಮತ್ತು ಚರ್ಮಕ್ಕೆ ಕಾಂತಿ ನೀಡುತ್ತದೆ.
ಬ್ಲೂ ಟೀ ಎಂದರೇನು?
ಶಂಖು ಹೂವುಗಳನ್ನು ಬಟರ್‌ಫ್ಲೈ ಪೀ ಅಥವಾ ಕ್ಲಿಟೋರಿಯಾ ಟೀ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳಿಂದ ಬ್ಲೂ ಟೀ ತಯಾರಿಸಲಾಗುತ್ತದೆ. ಇದರಲ್ಲಿರುವ ಆಂಥೋಸಯಾನಿನ್‌ಗಳು ಹೂವಿಗೆ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬಹಳ ಪ್ರಯೋಜನಗಳಿವೆ.
ಬ್ಲೂ ಟೀ ಕುಡಿಯುವುದರಿಂದ ಚರ್ಮಕ್ಕೆ ಇಷ್ಟೆಲ್ಲಾ ಉಪಯೋಗವಿದೆ
ಸೂರ್ಯನ ಕಿರಣಗಳಿಂದ ರಕ್ಷಣೆ
ಶಂಖು ಹೂವಿನಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಸೂರ್ಯನ ಬೆಳಕಿನಿಂದ ತ್ವಚೆಗೆ ರಕ್ಷಣೆ ನೀಡುತ್ತದೆ. ಯುವಿ ಕಿರಣಗಳಿಂದ ಹೊರಸೂಸುವ ಹಾನಿಕಾರಕ ಅಂಶದಿಂದ ರಕ್ಷಿಸುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆ ಮತ್ತು ಚರ್ಮದ ಹಾನಿಯನ್ನು ತಡೆಗಟ್ಟುತ್ತದೆ.
ಚರ್ಮವನ್ನು ದೃಢಗೊಳಿಸಿ ಸುಕ್ಕನ್ನು ತಡೆಯುತ್ತದೆ
ಬ್ಲೂ ಟೀ, ಗ್ಲೈಕೇಶನ್ ವಿರೋಧಿ ಗುಣಲಕ್ಷಣಗಳಿಗೆ ಹೆಸರಾಗಿದೆ. ಗ್ಲೈಕೇಶನ್ ಒಂದು ರಾಸಾಯನಿಕ ಕ್ರಿಯೆಯಾಗಿದ್ದು ಅದು ವಯಸ್ಸಾದ, ಸುಕ್ಕುಗಟ್ಟುವಿಕೆ ಮತ್ತು ನಿರ್ಜೀವ ಚರ್ಮವನ್ನು ಉಂಟುಮಾಡುತ್ತದೆ. ಬ್ಲೂ ಟೀ ಕುಡಿಯುವುದರಿಂದ ಅದರಲ್ಲಿರುವ ಕಾಲಜನ್, ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ. ಇದರಿಂದ ನೀವು ಸುಕ್ಕುಗಳಿಲ್ಲದ, ನಯವಾದ ಚರ್ಮವನ್ನು ಹೊಂದಬಹುದು.
ನಯವಾದ ಚರ್ಮಕ್ಕಾಗಿ
ಚರ್ಮದ ಮೇಲೆ ತುರಿಕೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಕೂಡಾ ಬ್ಲೂ ಟೀ ಪ್ರಯೋಜನಕಾರಿಯಾಗಿದೆ. ಇದರ ವಿಶಿಷ್ಟ ಗುಣಗಳು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಮೊಡವೆ ಕಲೆಗಳು, ಕೆಂಪು ಕಲೆಗಳು, ಒಣ ಚರ್ಮ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ನೀಲಿ ಚಹಾದ ನಿಯಮಿತ ಸೇವನೆಯು ಕಾಂತಿಯುತ ಚರ್ಮವನ್ನು ಹೊಂದಲು ಸಹಾಯ ಮಾಡುತ್ತದೆ, ಯಾವಾಗಲೂ ಫ್ರೆಶ್ ಇರುವಂತೆ ಮಾಡುತ್ತದೆ.
ಅಕಾಲಿಕ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ
ಬ್ಲೂ ಟೀಯಲ್ಲಿರುವ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಗುಣಗಳು ತ್ವಚೆಯನ್ನು ಸದಾ ಯಂಗ್ ಆಗಿರಿಸುತ್ತದೆ. ಇದು, ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ಸಹ ತಡೆಯುತ್ತದೆ. ಚರ್ಮದ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಈ ಚಹಾದಲ್ಲಿರುವ ಪೋಷಕಾಂಶಗಳು ಚರ್ಮ ಸದಾ ಗ್ಲೋ ಇರಲು ಸಹಾಯ ಮಾಡುತ್ತದೆ.
ಬ್ಲೂ ಟೀಯನ್ನು ತಯಾರಿಸುವುದು, ಬಳಸುವುದು ಹೇಗೆ ?
- ಒಂದು ಕಪ್ ಬಿಸಿ ನೀರಿನಲ್ಲಿ 2 ರಿಂದ 4 ಶಂಖು ಹೂಗಳನ್ನು ಹಾಕಿ. 2 ನಿಮಿಷಗಳ ಕಾಲ ಅದನ್ನು ಬಿಡಿ, ಅವುಗಳನ್ನು ತೆಗೆದುಹಾಕಿ. ಒಮ್ಮೆ ಶೋಧಿಸಿ ಪ್ರತಿದಿನ ಸೇವಿಸಬಹುದು.
- ಒಂದು ಕಪ್ ನೀರಿಗೆ 2-3 ಶಂಖು ಹೂಗಳನ್ನು ಸೇರಿಸಿ ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಒಂದು ನಿಮಿಷದ ನಂತರ ಹೂವುಗಳನ್ನು ತೆಗೆದು ಶೋಧಿಸಿದರೆ ಬ್ಲೂ ಟೀ ಕುಡಿಯಲು ರೆಡಿ.
- ಶಂಖು ಹೂಗಳನ್ನು ನೀರಿಗೆ ಹಾಕಿ ಫ್ರಿಡ್ಜ್‌ನಲ್ಲಿಡಿ, ನಂತರ ಐಸ್‌ಕ್ಯೂಬ್‌ಗಳನ್ನು ತೆಗೆದುಕೊಂಡು ನೈಸರ್ಗಿಕ ಹೊಳಪನ್ನು ಪಡೆಯಲು ಚರ್ಮದ ಮೇಲೆ ಮಸಾಜ್ ಮಾಡಿ.
- ಒಂದು ಬಟ್ಟಲಿನಲ್ಲಿ, ಒಂದು ಚಮಚ ಜೇನುತುಪ್ಪ, ಒಂದು ಚಮಚ ಮೊಸರು, ಒಂದು ಚಮಚ ಶಂಖು ಹೂಗಳ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ದಪ್ಪನೆಯ ಪದರವಾಗಿ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹಗುರಗೊಳಿಸುತ್ತದೆ.
- ಬ್ಲೂ ಟೀ ಪುಡಿ, ಅಲೋವೆರಾ ತಿರುಳು ಮತ್ತು ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಇಲ್ಲಿ ತಿಳಿಸಿರುವ ಯಾವುದೇ ವಿಧಾನದಲ್ಲಿ ನೀವು ಬ್ಲೂ ಟೀ ಬಳಸಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ತಿಳಿಯುತ್ತದೆ.
