ಸದಾ ಕಾಂತಿಯಿಂದ ಹೊಳೆಯುವ ಸ್ವಚ್ಛ, ಸುಂದರ ತ್ವಚೆ ನಿಮ್ಮದಾಗಬೇಕಾ, ಹಾಗಿದ್ರೆ ಸಾಸಿವೆ ಎಣ್ಣೆಯನ್ನು ಹೀಗೆ ಬಳಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸದಾ ಕಾಂತಿಯಿಂದ ಹೊಳೆಯುವ ಸ್ವಚ್ಛ, ಸುಂದರ ತ್ವಚೆ ನಿಮ್ಮದಾಗಬೇಕಾ, ಹಾಗಿದ್ರೆ ಸಾಸಿವೆ ಎಣ್ಣೆಯನ್ನು ಹೀಗೆ ಬಳಸಿ ನೋಡಿ

ಸದಾ ಕಾಂತಿಯಿಂದ ಹೊಳೆಯುವ ಸ್ವಚ್ಛ, ಸುಂದರ ತ್ವಚೆ ನಿಮ್ಮದಾಗಬೇಕಾ, ಹಾಗಿದ್ರೆ ಸಾಸಿವೆ ಎಣ್ಣೆಯನ್ನು ಹೀಗೆ ಬಳಸಿ ನೋಡಿ

ತ್ವಚೆಯ ಕಾಳಜಿಯ ವಿಚಾರಕ್ಕೆ ಬಂದಾಗ ಮನೆಮದ್ದುಗಳ ಮೇಲೆ ಒಲವು ಜಾಸ್ತಿ ಇರುತ್ತದೆ. ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ. ತ್ವಚೆಗೆ ಮಸಾಜ್ ಮಾಡುವುದಿರಲಿ, ಫೇಸ್‌ಮಾಸ್ಕ್ ಇರಲಿ ಸ್ವಚ್ಛ ಸುಂದರ ತ್ವಚೆ ನಿಮ್ಮದಾಗಲು ಸಾಸಿವೆ ಎಣ್ಣೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ.

ಚರ್ಮದ ಆರೈಕೆಗೆ ಸಾಸಿವೆ ಎಣ್ಣೆ ಬಳಕೆ ಹೇಗೆ
ಚರ್ಮದ ಆರೈಕೆಗೆ ಸಾಸಿವೆ ಎಣ್ಣೆ ಬಳಕೆ ಹೇಗೆ

ಸಾಸಿವೆ ಎಣ್ಣೆಯನ್ನು ಅಡುಗೆ ಹಾಗೂ ದೇವರ ಪೂಜೆಗೆ ಬಳಸಲಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿರಬಹುದು. ಆದರೆ ಇದರ ಪರಿಮಳ ಕೆಲವರಿಗೆ ಸಹ್ಯವಾಗುವುದಿಲ್ಲ. ಆದರೆ ಇದರ ಪ್ರಯೋಜನ ತಿಳಿದರೆ ಖಂಡಿತ ನೀವು ಬಳಸದೇ ಇರುವುದಿಲ್ಲ. ಸಾಸಿವೆ ಎಣ್ಣೆ ದೇಹದ ಅಂತರಿಕ ಅಂಗಗಳಿಗೆ ಮಾತ್ರವಲ್ಲ, ಬಾಹ್ಯ ಅಂಗಕ್ಕೂ ಪ್ರಯೋಜನಕಾರಿ. ಚರ್ಮದ ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ.

ಸಾಸಿವೆ ಎಣ್ಣೆ ತಯಾರಿಸುವುದು ಹೇಗೆ?

ಸಾಸಿವೆ ಎಣ್ಣೆಯನ್ನು ಸಾಸಿವೆ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಭಾರತೀಯ ಮತ್ತು ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಈ ಎಣ್ಣೆಯು ಬಲವಾದ ಸುವಾಸನೆ ಮತ್ತು ಹೆಚ್ಚಿನ ಹೊಗೆ ಬಿಂದುವನ್ನು ಹೊಂದಿರುತ್ತದೆ. ಅಡುಗೆಯಲ್ಲಿ ಮಾತ್ರವಲ್ಲದೆ, ಚರ್ಮದ ಆರೈಕೆಗೂ ಸಾಸಿವೆ ಎಣ್ಣೆ ಅತ್ಯುತ್ತಮ ಔಷಧವಾಗಿದೆ. ಇದು ಆಯುರ್ವೇದದಲ್ಲೂ ಸಾಬೀತಾಗಿದೆ. ಸಾಸಿವೆ ಎಣ್ಣೆಯು ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಸಾಸಿವೆ ಎಣ್ಣೆ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?

ಚರ್ಮ ಸ್ನೇಹಿ

ಸಾಸಿವೆ ಎಣ್ಣೆಯು ಚರ್ಮಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇವು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಇದು ಚರ್ಮವನ್ನು ಮೃದುವಾಗಿಸಿ, ಸೂಕ್ಷ್ಮವಾಗಿಸುತ್ತದೆ.

ಸಾಸಿವೆ ಎಣ್ಣೆ ಬಳಸುವುದರಿಂದ ಅಲರ್ಜಿ ಕಡಿಮೆಯಾಗುತ್ತದೆಯೇ?

ಸಾಸಿವೆ ಎಣ್ಣೆಯು ತನ್ನ ಉರಿಯೂತ ನಿವಾರಕ ಗುಣಲಕ್ಷಣಗಳೊಂದಿಗೆ ಎಕ್ಸಿಮಾದಂತಹ ಚರ್ಮದ ಸಮಸ್ಯೆಗಳ ವಿರುದ್ಧವೂ ಹೋರಾಡುತ್ತದೆ. ಇದನ್ನು ಆಗಾಗ್ಗೆ ಬಳಸುವುದರಿಂದ ಎಕ್ಸಿಮಾದಂತಹ ಸಮಸ್ಯೆಗಳು ಗುಣವಾಗಬಹುದು.

ಸೂಕ್ಷ್ಮಜೀವಿಗಳನ್ನು ಕೊಲ್ಲುವ ಗುಣಗಳು

ಸಾಸಿವೆ ಎಣ್ಣೆಯು ಕೆಲವು ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಇವು ಮೊಡವೆ, ಕಲೆ ಮತ್ತು ಅಥ್ಲೆಟ್ಸ್‌ ಪೂಟ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.

ತೇವಾಂಶವನ್ನು ಹೆಚ್ಚಿಸುತ್ತದೆ

ಸಾಸಿವೆ ಎಣ್ಣೆಯು ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ಸಹ ನೀಡುತ್ತದೆ. ಇದು ಮಂದ ಚರ್ಮ ಮತ್ತು ಕಲೆಗಳನ್ನು ಸಹ ಕಡಿಮೆ ಮಾಡುತ್ತದೆ.

ಸಾಸಿವೆ ಎಣ್ಣೆಯನ್ನು ಬಳಸುವ ವಿಧಾನ

ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ: ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಚರ್ಮದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಮಾಡಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಈ ರೀತಿ ಮಾಡುವುದು ಬಹಳ ಪ್ರಯೋಜನಕಾರಿ.

ಸಾಸಿವೆ ಎಣ್ಣೆ - ಜೇನು ಫೇಸ್‌ಮಾಸ್ಕ್‌: 1 ಚಮಚ ಜೇನುತುಪ್ಪವನ್ನು 1 ಚಮಚ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ. ಮುಖಕ್ಕೆ ಹಚ್ಚಿ, 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ತೊಳೆಯಿರಿ. ಇದು ಚರ್ಮದ ಮೇಲಿನ ಸುಕ್ಕುಗಳನ್ನು ಮತ್ತು ಮಾಲಿನ್ಯದಿಂದ ಹಾನಿಗೊಳಗಾದ ಚರ್ಮವನ್ನು ನಿವಾರಿಸುತ್ತದೆ.

ಸಾಸಿವೆ ಎಣ್ಣೆ - ಅರಿಶಿನದ ಮಾಸ್ಕ್: 1 ಚಮಚ ಸಾಸಿವೆ ಎಣ್ಣೆ, 1 ಚಮಚ ಕಡಲೆ ಹಿಟ್ಟು, ½ ಚಮಚ ಅರಿಶಿನ ಪುಡಿ ಮತ್ತು 2 ಚಮಚ ಮೊಸರು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ತೊಳೆಯಿರಿ. ಇದು ಚರ್ಮವನ್ನು ಹೊಳಪುಗೊಳಿಸಲು ಮತ್ತು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಸಾಸಿವೆ ಎಣ್ಣೆಯ ಅಡ್ಡಪರಿಣಾಮಗಳು

  • ಸಾಸಿವೆ ಎಣ್ಣೆ ಕೆಲವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಆದ್ದರಿಂದ, ಯಾವುದೇ ಸಮಯದಲ್ಲಿ ಬಳಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡುವುದು ಅವಶ್ಯ.
  • ಕೆಲವು ಸಂದರ್ಭಗಳಲ್ಲಿ ಇದು ಸೂಕ್ಷ್ಮ ಚರ್ಮದ ಮೇಲೆ ಕಿರಿಕಿರಿಯನ್ನು ಉಂಟುಮಾಡಬಹುದು. ಇದು ಒಣಚರ್ಮದ ಮೇಲೆ ತುರಿಕೆ ಮತ್ತು ದದ್ದನ್ನು ಕೂಡ ಉಂಟುಮಾಡಬಹುದು.
  • ಸಾಸಿವೆ ಎಣ್ಣೆಯನ್ನು ನೇರವಾಗಿ ಸೂರ್ಯನ ಬೆಳಕಿನಲ್ಲಿ ಬಳಸಿದರೆ ಅದು ಸುಡುವ ಅನುಭವವನ್ನು ಉಂಟು ಮಾಡಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner