ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಮುಖಕ್ಕೆ ಐಸ್ ಮಸಾಜ್ ಮಾಡುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈ ವಿಚಾರ ಗೊತ್ತಿರಲೇಬೇಕು
ಇತ್ತೀಚಿನ ದಿನಗಳಲ್ಲಿ ಚರ್ಮದ ಆರೈಕೆ ವಿಚಾರಕ್ಕೆ ಬಂದಾಗ ಸ್ಕಿನ್ ಐಸಿಂಗ್ ಅಥವಾ ಮುಖದ ಮೇಲೆ ಮಂಜುಗಡ್ಡೆಯಿಂದ ಮಸಾಜ್ ಮಾಡುವುದು ಸಾಮಾನ್ಯವಾಗಿದೆ. ಹಾಗಾದ್ರೆ ಈ ಕ್ರಮ ನಿಜಕ್ಕೂ ಪರಿಣಾಮಕಾರಿಯೇ, ಇದರಿಂದ ಚರ್ಮಕ್ಕೆ ಅನಾನುಕೂಲ ಇದೆಯೇ? ಇದರಿಂದಾಗುವ ಅಡ್ಡಪರಿಣಾಮಗಳೇನು? ನಿಮ್ಮ ಗೊಂದಲಕ್ಕೆ ಇಲ್ಲಿದೆ ತಜ್ಞರ ಉತ್ತರ.

ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳುವ ವಿಚಾರಕ್ಕೆ ಬಂದಾಗ ಹೆಣ್ಣುಮಕ್ಕಳು ಅಲರ್ಟ್ ಆಗುವುದು ಸಹಜ. ಚರ್ಮದ ಕಾಂತಿ ಹೆಚ್ಚಿಸಲು ವಿವಿಧ ರೀತಿಯ ಸ್ಕಿನ್ ಕೇರ್‌ಗಳು ಟ್ರೆಂಡ್ ಬರುತ್ತಲೇ ಇರುತ್ತವೆ. ಕೆಲವು ಟ್ರೆಂಡ್‌ಗಳು ಬಂದಷ್ಟೇ ಬೇಗ ಮರೆಯಾಗುತ್ತವೆ. ಆದರೆ ಇದರಲ್ಲಿ ಬಹಳ ಹಿಂದಿನಿಂದಲೂ ಇರುವ ಟ್ರೆಂಡ್ ಎಂದರೆ ಸ್ಕಿನ್ ಐಸಿಂಗ್. ಅಂದರೆ ಚರ್ಮಕ್ಕೆ ಐಸ್ ಅಥವಾ ಮಂಜುಗಡ್ಡೆ ಅನ್ವಯಿಸುವುದು. ಹಲವು ದಿನಗಳಿಂದ ಐಸ್ ರೋಲರ್ ಮತ್ತು ಐಸ್ ಕ್ಯೂಬ್‌ಗಳ ಬಳಕೆಯನ್ನು ನೋಡುತ್ತಿದ್ದೇವೆ. ಇದರಿಂದ ಹೊಳಪಿನ ತ್ವಚೆ ನಮ್ಮದಾಗುತ್ತದೆ ಎಂದುಕೊಂಡು ಹಲವರು ಐಸ್‌ನೀರಿನಲ್ಲಿ ಮುಖ ಅದ್ದುವುದು, ಮಂಜುಗಡ್ಡೆಯಿಂದ ಮುಖಕ್ಕೆ ಮಸಾಜ್ ಮಾಡುವುದು ಮಾಡುತ್ತಾರೆ. ಆದರೆ ಇದು ನಿಜಕ್ಕೂ ಪರಿಣಾಮಕಾರಿಯೇ, ಇದರಿಂದ ಚರ್ಮದ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ನಾವು ಗಮನಿಸಬೇಕಿದೆ.
ಪ್ರಸಿದ್ಧ ಸೌಂದರ್ಯಶಾಸ್ತ್ರಜ್ಞ ದಿನ್ಯಾರ್ ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಚರ್ಮಕ್ಕೆ ಐಸ್ ಅನ್ನು ಅನ್ವಯಿಸುವುದರಿಂದ ಉಂಟಾಗುವ ಅಪಾಯಗಳನ್ನು ವಿವರಿಸಿದ್ದಾರೆ. ಮೊಡವೆ, ಮುಖದಲ್ಲಿ ಊತ, ಕಣ್ಣು ಊತ ಕಡಿಮೆಯಾಗಲು ಐಸ್ ಬಳಸುವುದು ಒಳ್ಳೆಯದೋ ಇಲ್ಲವೋ ಎಂಬುದನ್ನು ತಿಳಿದಿದ್ದಾರೆ.
ಸ್ಕಿನ್ ಐಸಿಂಗ್‌ನಿಂದಾಗುವ ಅಡ್ಡಪರಿಣಾಮಗಳು
1. ಚರ್ಮದ ತಾಪಮಾನದ ಮೇಲೆ ಪರಿಣಾಮ: ಚರ್ಮವು ಯಾವಾಗಲೂ ಸಾಮಾನ್ಯ ತಾಪಮಾನದಲ್ಲಿರುತ್ತದೆ. ಅದರ ಮೇಲೆ ಕೋಲ್ಡ್ ಐಸ್ ಅನ್ನು ಹಚ್ಚುವುದು ಅಥವಾ ಐಸ್‌ನಿಂದ ಮಸಾಜ್ ಮಾಡುವುದರಿಂದ, ಚರ್ಮದ ಉಷ್ಣತೆ ಕಡಿಮೆಯಾಗುತ್ತದೆ. ಇದು ಚರ್ಮದ ಶುಷ್ಕತೆ, ಚರ್ಮ ಕೆಂಪಾಗುವುದು ಮತ್ತು ದದ್ದು ಉಂಟಾಗಲು ಕಾರಣವಾಗಬಹುದು. ಚರ್ಮ ಅತಿಯಾಗಿ ತಂಪಾಗಿರುವುದೇ ಈ ಎಲ್ಲದಕ್ಕೂ ಕಾರಣ.
2. ಸೋಂಕುಗಳು: ಚರ್ಮವನ್ನು ಸೂಕ್ಷ್ಮವಾದ ಬಲೂನ್ ಎಂದು ಯೋಚಿಸಿ. ಇದು ಬಾಹ್ಯ ಪರಿಸರ ಮತ್ತು ಆಂತರಿಕ ದೇಹಕ್ಕೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ತ್ವಚೆಯ ಮೇಲೆ ನೇರವಾಗಿ ಐಸ್ ಕ್ಯೂಬ್ ಹಾಕುವುದರಿಂದ ಸೂಕ್ಷ್ಮ ತ್ವಚೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಚರ್ಮವು ಸೋಂಕಿಗೆ ಗುರಿಯಾಗುತ್ತದೆ.
3 ಕೆಂಪು ಕಲೆಗಳು ಉಂಟಾಗಬಹುದು: ನಮ್ಮ ಚರ್ಮದ ಅಡಿಯಲ್ಲಿ ಅನೇಕ ರಕ್ತದ ಕ್ಯಾಪಿಲ್ಲರಿಗಳಿವೆ. ಅವು ಚರ್ಮಕ್ಕೆ ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತವೆ. ಚರ್ಮದ ಮೇಲೆ ಐಸ್ ಅನ್ನು ಇರಿಸಿದಾಗ, ಅದು ಅದರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡಬಹುದು. ಅದರೊಂದಿಗೆ, ಅವು ಒಡೆಯಬಹುದು ಮತ್ತು ಚರ್ಮದ ಮೇಲೆ ಕೆಂಪು ಕಲೆಗಳು ಸಹ ಕಾಣಿಸಿಕೊಳ್ಳಬಹುದು. ಇವು ದದ್ದುಗಳಂತೆ ಕಾಣುತ್ತವೆ. ಇದು ದೀರ್ಘಕಾಲದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
4. ಚರ್ಮಕ್ಕೆ ಸಂಬಂಧಿಸಿದ ರೋಗಗಳ ಉಲ್ಬಣ: ಎಕ್ಸಿಮಾ, ಮೊಡವೆ ಅಥವಾ ಯಾವುದೇ ಇತರ ದೀರ್ಘಕಾಲದ ಚರ್ಮದ ಸಮಸ್ಯೆ ಇರುವ ಜನರು ಐಸ್ ಅನ್ನು ಅನ್ವಯಿಸುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಗೊಳ್ಳಬಹುದು. ಶೀತದ ಉಷ್ಣತೆಯು ಚರ್ಮದಲ್ಲಿನ ನೈಸರ್ಗಿಕ ತೈಲಗಳನ್ನು ಕಡಿಮೆ ಮಾಡುತ್ತದೆ. ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದು ಸುಲಭವಾಗಿ ಒಣಗುತ್ತದೆ.
5. ದೀರ್ಘಾವಧಿಯ ಸಮಸ್ಯೆಗಳು ಇರಬಹುದೇ?: ಮುಖದಲ್ಲಿ ಊತದ ಭಾವನೆ, ಮುಖ ಊದಿಕೊಂಡಾಗ, ಚರ್ಮದ ಮೇಲೆ ಐಸ್ ಅನ್ನು ಅನ್ವಯಿಸುವುದರಿಂದ ಅದು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ನಂತರ ಅಡ್ಡಪರಿಣಾಮ ಬೀರಬಹುದು. ದೀರ್ಘಾವಧಿಯಲ್ಲಿ ಇದರ ಪರಿಣಾಮ ತೀವ್ರವಾಗಿರುತ್ತದೆ. ಇದು ಸೂಕ್ಷ್ಮ ರೇಖೆಗಳು, ಸುಕ್ಕುಗಳು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವದ ನಷ್ಟದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
6. ಬೇರೆ ಯಾವ ಪರ್ಯಾಯಗಳಿವೆ?: ತ್ವಚೆಗೆ ಮಂಜುಗಡ್ಡೆಯನ್ನು ಹಚ್ಚುವುದು ತ್ವಚೆಯನ್ನು ಸುಂದರಗೊಳಿಸುವ ಏಕೈಕ ಮಾರ್ಗವಲ್ಲ. ಸರಿಯಾದ ಜೀವನಶೈಲಿ, ಆಹಾರ ಪದ್ಧತಿ, ವೈದ್ಯರನ್ನು ಸಂಪರ್ಕಿಸುವುದು ಮತ್ತು ಉತ್ತಮ ತ್ವಚೆಯ ಆರೈಕೆಯನ್ನು ಅನುಸರಿಸುವುದು ನಿಮಗೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ವಿಭಾಗ