ಕುಂಭಮೇಳಕ್ಕೆ ಬರುವವರು ಹಸಿವಿನಿಂದ ಕಂಗೆಟ್ಟು ದೌಡಾಯಿಸಿ ಬಂದವರಲ್ಲ, ಮನೆ ಇಲ್ಲದವರೂ ಅಲ್ಲ; ಬೇಳೂರು ಸುದರ್ಶನ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಕುಂಭಮೇಳಕ್ಕೆ ಬರುವವರು ಹಸಿವಿನಿಂದ ಕಂಗೆಟ್ಟು ದೌಡಾಯಿಸಿ ಬಂದವರಲ್ಲ, ಮನೆ ಇಲ್ಲದವರೂ ಅಲ್ಲ; ಬೇಳೂರು ಸುದರ್ಶನ ಬರಹ

ಕುಂಭಮೇಳಕ್ಕೆ ಬರುವವರು ಹಸಿವಿನಿಂದ ಕಂಗೆಟ್ಟು ದೌಡಾಯಿಸಿ ಬಂದವರಲ್ಲ, ಮನೆ ಇಲ್ಲದವರೂ ಅಲ್ಲ; ಬೇಳೂರು ಸುದರ್ಶನ ಬರಹ

ಮಹಾಕುಂಭಮೇಳಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ಹೇಳಿದರೆ, ಇದರಿಂದ ಭಾರತದ ಆರ್ಥಿಕತೆ ವೃದ್ಧಿಯಾಗುವುದಿಲ್ಲ ಎನ್ನುತ್ತಿದ್ದಾರೆ. ಕುಂಭಮೇಳಕ್ಕೆ ಬರುವವರು ಅನ್ನ ಕಾಣದೆ ಬಂದವರಲ್ಲ ಎಂದು ಬೇಳೂರು ಸುದರ್ಶನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾಕುಂಭ ಮೇಳ 2025ರ ಬಗ್ಗೆ ಬೇಳೂರು ಸುದರ್ಶನ ಬರಹ
ಮಹಾಕುಂಭ ಮೇಳ 2025ರ ಬಗ್ಗೆ ಬೇಳೂರು ಸುದರ್ಶನ ಬರಹ (PC: @MahaKumbh_2025)

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಮಹಾಕುಂಭ ಮೇಳವು 144 ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಇದೇ ಕಾರಣಕ್ಕೆ ಈ ಬಾರಿ 40 ಕೋಟಿಗೂ ಹೆಚ್ಚು ಭಕ್ತರು ಕುಂಭಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿದೇಶಗಳಿಂದ ಕೂಡಾ ಅನೇಕ ಮಂದಿ ಕುಂಭಮೇಳಕ್ಕೆ ಬರುತ್ತಾರೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಮಿಂದು ಪುನೀತರಾಗುತ್ತಾರೆ.

ಮಹಾಕುಂಭ ಮೇಳದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಇದರಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ವಾದ ಮಾಡಿದರೆ, ಕೆಲವರು ಇದರಿಂದ ಖಂಡಿತ ದೇಶದ ಆರ್ಥಿಕ ವೃದ್ಧಿಗೆ ಲಾಭವಿಲ್ಲ ಎನ್ನುತ್ತಿದ್ದಾರೆ. ಲೇಖಕ ಬೇಳೂರು ಸುದರ್ಶನ ಕೂಡ ಮಹಾಕುಂಭಮೇಳದ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ, ಇಲ್ಲಿಂದ ಆಚೆಗೆ ಇರುವುದು ಬೇಳೂರು ಸುದರ್ಶನ ಅವರ ಬರಹ

ಕುಂಭಮೇಳ: ನಂದೂ ಒಂದಿರ್ಲಿ ಕಿರಿಕ್ !

ಅರ್ಧ ಕುಂಭಮೇಳ, ಪೂರ್ಣ ಕುಂಭ ಮೇಳ ಅಥವಾ ಮಹಾ ಕುಂಭಮೇಳ, ಯಾವುದೇ ಆಗಿರಲಿ , ಭಕ್ತಿ ಮತ್ತು ನಂಬಿಕೆಗಳಿಂದಲೇ ಜನ ಸೇರುತ್ತಾರೆ, ಅದರಿಂದಾಗಿ ಆರ್ಥಿಕತೆಯ ಲೆಕ್ಕಾಚಾರವೂ ಮಹತ್ವ ಪಡೆಯುತ್ತದೆಯೇ ವಿನಃ ದೇಶದ ಆರ್ಥಿಕತೆ ಸುಧಾರಿಸಲಿ ಅಂತ ಜನರು ಅಲ್ಲಿ ಸೇರ್‍ತಾ ಇಲ್ಲ ಮಾರ್‍ರೆ!! ಜಿಡಿಪಿ/ಜಿಎಸ್‌ಟಿ ಏನೇ ಹೆಚ್ಚಿದರೂ ಅದು ಮುಖ್ಯ ಘಟನೆಯಿಂದ ಹುಟ್ಟಿದ ಸೆಕೆಂಡರಿ ಪರಿಣಾಮಗಳಷ್ಟೆ. ಇದು ಗೊತ್ತಿಲ್ಲದೆ ಜಿಡಿಪಿಯನ್ನು ಹಂಗಿಸುವವರ ಕಾಮೆಂಟುಗಳು ತಮಾಷೆ ಅನ್ಸುತ್ತೆ.

ಕುಂಭ ಮೇಳಗಳಲ್ಲಿ ನಡೆಯುವ ಅನ್ನದಾನವೇನೂ ಅಲ್ಲಿ ಸರ್ಕಾರದಿಂದ ನಡೆಯುವುದಿಲ್ಲ. ದೇಶದಾದ್ಯಂತ, ಶತಮಾನಗಳ ಕಾಲ ಅನ್ನದಾನ ಮಾಡುತ್ತಲೇ ಬಂದಿರುವ ದೇಗುಲ ಆಡಳಿತ ಮಂಡಳಿಗಳು, ಮಠ ಮಂದಿರಗಳು ಈ ದಾಸೋಹವನ್ನು ಕುಂಭಮೇಳದಲ್ಲೂ ಮುಂದುವರಿಸಿವೆಯೇ ಹೊರತು, ಅಲ್ಲಿಗೆ ಜನ ಹಸಿವಿನಿಂದ ಕಂಗೆಟ್ಟು ದೌಡಾಯಿಸಿ ಬಂದು ಅನ್ನ ಕೇಳಿದವರಲ್ಲ! ಭಕ್ತರೂ, ಜನರೂ, ಜಂಗಮರೂ, ಅಘೋರರೂ ಎಲ್ಲರೂ ಅನ್ನದಾನಕ್ಕೆ ಹೊಂದಿಕೊಂಡೇ ಶತಮಾನಗಳಾಗಿವೆ. ಕುಂಭಮೇಳದಲ್ಲಿ ಅನ್ನದಾನಿಗಳ ಮತ್ತು ಭಕ್ತರ ಇನ್ನೊಂದು ಸಮಾಗಮ ಆಗಿದೆ ಅಷ್ಟೆ.

ಅನ್ನದಾನ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ

ಅಂದಹಾಗೆ ಈ ಅನ್ನದಾನವು ಹಿಂದುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೈಸ್ತರು, ಮುಸ್ಲಿಮರಲ್ಲೂ ವ್ಯಾಪಕವಾಗಿದೆ. ಅಯಾಹುವಾಸ್ಕಾ, ಮಾರುಆನಾ ಇತ್ಯಾದಿ ಮಾದಕದ್ರವ್ಯಗಳಿಗೆ ಇದೆ ಎನ್ನಲಾದ ವೈದ್ಯಕೀಯ ಗುಣಗಳ ಹಿನ್ನೆಲೆಯಲ್ಲಿ, ಒಂದು ಸೀಮಿತ ಪ್ರಮಾಣದ ಸೇವನೆ ಅಪರಾಧವಲ್ಲ ಎಂದು ವಾದಿಸುವ ವ್ಯಕ್ತಪಡಿಸುವ ಲಿಬರಲ್‌ಗಳು ಇಲ್ಲಿ ಸಾಧು ಸಂತರು ಡ್ರಗ್ ವ್ಯಸನಿಗಳು ಎಂದು ಗೋಳಾಡುವುದನ್ನು ನೋಡಿದರೆ ನಗು ಬರುತ್ತೆ. ಸಂಸಾರಿಗಳೇ ಡ್ರಗ್ ಬಳಸಬಹುದು ಅಂತ ಹೋರಾಡೋದಾದ್ರೆ, ಸನ್ಯಾಸಿಗಳ ವ್ಯಸನಕ್ಕೆ ರೋದಿಸೋದು ಯಾಕೋ? ಸಾಧು ಸನ್ಯಾಸಿಗಳ ಜಗತ್ತಿನಲ್ಲಿ ಕೂಡಾ ಸಮಾಜದಲ್ಲಿ ಇರುವ ಪ್ರಮಾಣದಲ್ಲಿಯೇ ಅಪಸವ್ಯಗಳಿರುತ್ತವೆ, ಅಷ್ಟೆ.

ಕೋಟ್ಯಂತರ ಜನ ಅಲ್ಲಿಗೆ ದೀನರಾಗಿ ದರಿದ್ರರಾಗಿ ಬಂದಿಲ್ಲ. ಅವರಿಗೂ ಐಷಾರಾಮಿ ಮನೆಗಳಿವೆ. ಹಿಂದಿನ ಮೇಳವೊಂದಕ್ಕೆ ಹೋದ ನಾನೇ ಸ್ವತಃ ಹಲವು ಸಿರಿವಂತ ಕುಟುಂಬಗಳು ಅಲ್ಲೇ ಬಯಲಿನಲ್ಲಿ ಕುಳಿತು ಬಟ್ಟೆ ಒಣಗಿಸುತ್ತಲೋ, ಪೂರಿ ತಿನ್ನುತ್ತಲೋ ಇರುವುದನ್ನು ನೋಡಿದ್ದೇನೆ. ಅವರಿಗೆಲ್ಲ ವಸತಿ ಬೇಕೇ ಆಗಿಲ್ಲ. ಕುಂಭಮೇಳದ ರಾತ್ರಿಗಳಲ್ಲಿ ನೀವು ಆಚೀಚೆ ಓಡಾಡುವಾಗ ದೇಹಗಳ ಮೇಲೆ ಹೆಜ್ಜೆ ಇಡದೆ ನಡೆಯುವುದು ಅಸಾಧ್ಯ. ಹಾಗಂತ ಅವರ್‍ಯಾರೂ ಭಿಕಾರಿಗಳಲ್ಲ, ಒಂದು ನಂಬಿಕೆಯ ಆಧಾರದಲ್ಲಿ ಬಂದವರು. ಬೆಳಗಾದ್ರೆ ಹೇಗೋ ಸಿದ್ಧರಾಗಿ ನದಿ ತೀರದತ್ತ ಹೊರಡುವುದೇ ಅವರಿಗೆ ಇರುವ ಏಕೈಕ ಗುರಿ. ಅವರ ಭಾವನೆಗಳನ್ನು ಗೌರವಿಸುವುದು ಜಾತ್ಯತೀತ ಎಂದುಕೊಳ್ಳುವ ಭಾರತದ ಎಲ್ಲರ ಕರ್ತವ್ಯವೇ ಆಗಿದೆ.

ಭಕ್ತರ ಉದ್ದೇಶ ವ್ಯಾಪಾರೀಕರಣವಲ್ಲ

ದೇಶದ ಹಲವು ದೇಗುಲಗಳಲ್ಲಿ ಭಕ್ತರ ಭೇಟಿ ಹೆಚ್ಚಾಗಿ ವ್ಯಾಪಾರೀಕರಣ ಆಗಿರುವುದನ್ನು ಅಲ್ಲಗಳೆಯಲಾರೆ. ಆದ್ರೆ ವ್ಯಾಪಾರೀಕರಣವೇ ಭಕ್ತರ ಉದ್ದೇಶವಾಗಿಲ್ಲ. ಹಳೆಯ ದೇಗುಲಗಳು ಹಠಾತ್ತಾಗಿ ಜನನಿಬಿಡ ಕೇಂದ್ರಗಳಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ. ನಾನು ಐದನೇ ಕ್ಲಾಸು ಓದಿದ ಶಾಂತ, ನಿರ್ಮಲ, ಶುಭ್ರ ಸುಬ್ರಹ್ಮಣ್ಯ ಈಗ ಭಕ್ತರಿಂದ ತತ್ತರಿಸಿದೆ. ಇಲ್ಲಿ ವ್ಯಾಪಾರೀಕರಣ ಮತ್ತು ನಕಲಿಗಳನ್ನು ತಡೆಯುವುದು ಹೇಗೆ ಎಂಬ ಚಿಂತನೆ ಮುಖ್ಯವೇ ಹೊರತು, ಇಡೀ ವ್ಯವಸ್ಥೆಯೇ ನಕಲಿ ಎನ್ನುವುದು ಮೂರ್ಖತನ. ನಕಲಿ ಲಿಬರಲ್‌ಗಳನ್ನು ನೋಡಿ ಪ್ರಾಮಾಣಿಕ ಲಿಬರಲ್‌ಗಳನ್ನು ಸಾರಾಸಗಟಾಗಿ ಬೈಯ್ಯಲಾಗದು!ಅಷ್ಟೆ, ಬರ್ಲಾ?

ಎಂದು ಲೇಖಕ ಬೇಳೂರು ಸುದರ್ಶನ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕ ಜನರು ಲೈಕ್‌ ಕೊಟ್ಟು ಪ್ರತಿಕ್ರಿಯಿಸಿದ್ದಾರೆ. ಭಿಕಾರಿಗಳು ಕ್ಷುದ್ರ ವೈಚಾರಿಕ ಮೆಂಟಲೀ ಡಿಸ್ಟರ್ಬ್ಡ್ ಅಷ್ಟೆ. ದಾನ-ದಾಸೋಹ ಪರಂಪರೆಯ ನಮ್ಮ ಭಾರತೀಯ ನೆಲದಲ್ಲಿ ದೂರುಬಾಯಿ ವೈಚಾರಿಕರು ಪರದೇಶಿಗಳಾಗಿ ಇದ್ದಾರೆ, ಅಷ್ಟೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ಟ್ರಂಪ್ ಹೇಳಿದ ಹಾಗೆ Liberal Lunatics and Marxist Maniacs ಎನ್ನುವುದು ಬಹಳಷ್ಟು ಮಟ್ಟಿಗೆ ನಿಜ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Whats_app_banner