ಕನ್ನಡ ಸುದ್ದಿ  /  Lifestyle  /  Bengaluru City News Namma Metro Expansion Plan Bengaluru Metro To Expand 118 Kms Feasibility Report Tender Dmg

Bengaluru Metro: ನಮ್ಮ ಮೆಟ್ರೋ 118 ಕಿಮೀ ವಿಸ್ತರಣೆ ಚಿಂತನೆ; ಉಪ ನಗರಗಳಿಗೂ ಶೀಘ್ರ ಮೆಟ್ರೋ ಜಾಲ ಸಾಧ್ಯತೆ

ಪ್ಯಾಕೇಜ್‌ 1 ರ 50 ಕಿಮೀ ಅಂತರದಲ್ಲಿ ಮೂರು ಕಾರಿಡಾರ್‌ಗಳ ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ ಮಾರ್ಗ ಸೇರಿದೆ (ವರದಿ ಮಾರುತಿ ಎಚ್.)

ಬೆಂಗಳೂರು ಉಪನಗರಗಳಿಗೂ 'ನಮ್ಮ ಮೆಟ್ರೋ' ಜಾಲ ವಿಸ್ತರಣೆಯಾಗುವ ಸಾಧ್ಯತೆಯಿದೆ
ಬೆಂಗಳೂರು ಉಪನಗರಗಳಿಗೂ 'ನಮ್ಮ ಮೆಟ್ರೋ' ಜಾಲ ವಿಸ್ತರಣೆಯಾಗುವ ಸಾಧ್ಯತೆಯಿದೆ (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ಹೊರವಲಯದಲ್ಲಿರುವ ಉಪ ನಗರಗಳಿಗೂ "ನಮ್ಮ ಮೆಟ್ರೋ" (Namma Metro) ಜಾಲವನ್ನು ವಿಸ್ತರಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಮೆಟ್ರೊ ತನ್ನ ಕಾರಿಡಾರ್‌ಗಳ ಮಾರ್ಗವನ್ನು 118 ಕಿಮೀ ವರೆಗೆ ವಿಸ್ತರಿಸಲು ಕಾರ್ಯಸಾಧ್ಯತಾ ವರದಿ (Feasibility Report) ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಪ್ಯಾಕೇಜ್ 1 ರಲ್ಲಿ ಮೂರು ಕಾರಿಡಾರ್‌ಗಳ 50 ಕಿಮೀ ಮಾರ್ಗ ಮತ್ತು ಪ್ಯಾಕೇಜ್ 2 ರಲ್ಲಿ ಒಂದು ಕಾರಿಡಾರ್‌ ನ 68 ಕಿಮೀ ಉದ್ದದ ಮಾರ್ಗಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಲಾಗಿದೆ.

ಪ್ಯಾಕೇಜ್‌ 1 ರ 50 ಕಿಮೀ ಅಂತರದಲ್ಲಿ ಮೂರು ಕಾರಿಡಾರ್‌ಗಳ ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ ಮಾರ್ಗ ಸೇರಿದೆ. ಪ್ಯಾಕೇಜ್‌ 2 ರ 68 ಕಿ.ಮೀ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ– ಆನೇಕಲ್‌– ಅತ್ತಿಬೆಲೆ– ಸರ್ಜಾಪುರ– ವರ್ತೂರು– ಕಾಡುಗೋಡಿ ವೃಕ್ಷ ಉದ್ಯಾನ ಮಾರ್ಗ ಸೇರಿದೆ.

ಮಾರ್ಚ್‌ 27ರವರೆಗೆ ಬಿಡ್‌ಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂದೇ ಅವುಗಳನ್ನು ತೆರೆಯಲಾಗುವುದು. ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಬಿಎಂಆರ್‌ಸಿಎಲ್‌ ಟೆಂಡರ್‌ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರ್ಯಸಾಧ್ಯತಾ ವರದಿಯೊಂದಿಗೆ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೊ ಮಾರ್ಗಗಳ ಅಲೈನ್‌ಮೆಂಟ್‌, ಭೂಸ್ವಾಧೀನ, ಭೂಮಿ ಪಡೆಯಲು ಎದುರಾಗುವ ಸಮಸ್ಯೆಗಳೂ ಸೇರಿದಂತೆ ಎಲ್ಲ ರೀತಿಯ ಅಂಶಗಳನ್ನು ಸೇರಿಸಿಯೇ ವರದಿಯನ್ನು ಸಲ್ಲಿಸುವಂತೆ ಹೇಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದು ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರ ಒಪ್ಪಿದ ನಂತರ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತದೆ.

ಮೆಟ್ರೋ ವಿಸ್ತರಣೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ

ಉಪ ನಗರಗಳಿಗೆ 'ನಮ್ಮ ಮೆಟ್ರೋ' ವಿಸ್ತರಣೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಮೊದಲು ಬೆಂಗಳೂರಿನ ಹೃದಯ ಭಾಗದ ಎಲ್ಲ ಪ್ರದೇಶಗಳಿಗೂ ಮೆಟ್ರೋ ವಿಸ್ತರಣೆಯಾಗಬೇಕು. ಈ ಕೆಲಸ ಆಗದೆ ಸಿದ್ದರಾಮಯ್ಯ ಸರ್ಕಾರ ಹೊಸಕೋಟೆ, ಬಿಡದಿ, ನೆಲಮಂಗಲಕ್ಕೆ ವಿಸ್ತರಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ನಗರದೊಳಗಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದು ಮೆಟ್ರೋದ ಮೂಲ ಉದ್ದೇಶವಾಗಬೇಕು. ಉಪನಗರಗಳಿಗೆ 'ನಗರ ರೈಲು ಯೋಜನೆ' ಇದ್ದೇ ಇದೆ ಎಂದು ವಾದಿಸಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಜಾಲವನ್ನು ತುಮಕೂರು ಮತ್ತು ದೇವನಹಳ್ಳಿವರೆಗೂ ವಿಸ್ತರಿಸುವುದಾಗಿ ಹೇಳಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ತುಮಕೂರು ವರೆಗೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿ ವರೆಗೆ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದಾಗಿ ಪ್ರಸ್ತಾಪಿಸಿದ್ದರು.

ಬೆಂಗಳೂರಿನಲ್ಲಿ ಮೆಟ್ರೋ ಜಾಲ

ಸದ್ಯ ಬೆಂಗಳೂರಿನಲ್ಲಿ 115 ಕಿಮೀ ಮೆಟ್ರೋ ಮಾರ್ಗವಿದೆ. ಮೊದಲ ಹಂತದಲ್ಲಿ 42.3 ಕಿಮೀ ಉದ್ದದ ನಮ್ಮ ಮೆಟ್ರೋ ಮಾರ್ಗದಲ್ಲಿ 40 ನಿಲ್ದಾಣಗಳಿವೆ. ಎರಡನೇ ಹಂತದಲ್ಲಿ 72.095 ಕಿಮೀ ಉದ್ದದ ಮೆಟ್ರೋ ಜಾಲವಿದ್ದು 61 ನಿಲ್ದಾಣಗಳಿವೆ.

(This copy first appeared in Hindustan Times Kannada website. To read more like this please visit kannada.hindustantimes.com )