ಹೈಯರ್ ಡೋಸ್ ಅಪಾಯಕಾರಿ; ಆಂಟಿಬಯಾಟಿಕ್ ಸಮರ್ಪಕ ಬಳಕೆ-ನಿಯಂತ್ರಣಕ್ಕೆ ನೀತಿ ಅಗತ್ಯ: ಡಾ.ಸಿಎನ್ ಮಂಜುನಾಥ್
ಆಂಟಿಬಯಾಟಿಕ್ ಅಮೃತವೂ ಹೌದು. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ನಿಧಾನವಾಗಿ ಅಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆಂಟಿಬಯಾಟಿಕ್‌ನ ಸಮರ್ಪಕ ಬಳಕೆ ಹಾಗೂ ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಸಿಎನ್ ಮಂಜುನಾಥ್ ತಿಳಿಸಿದ್ದಾರೆ.
ಬೆಂಗಳೂರು: ಸಣ್ಣ ಮಟ್ಟದ ಕಾಯಿಲೆಗಳಿಗೂ ಹೈಯರ್ ಡೋಸ್ ಅಂಟಿಬಯಾಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಅಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಅಂಟಿಬಯಾಟಿಕ್ ಸಮರ್ಪಕ ಬಳಕೆ ಹಾಗೂ ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಪದ್ಮಶ್ರೀ ಡಾ.ಸಿ ಎನ್ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮೈಕ್ರೋಲ್ಯಾಬ್ಸ್‌ನ ಸಂಸ್ಥೆಯಿಂದ ರಾಷ್ಟ್ರೀಯ ಮಟ್ಟದ ಫೀವರ್‌ಕಾನ್ 2024ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹಳಷ್ಟು ಅರೋಗ್ಯ ಸಮಸ್ಯೆಗಳ ಪ್ರಥಮ ಲಕ್ಷಣ ಜ್ವರ. ಇದನ್ನು ಸರಿಯಾಗಿ ಪರಿಶೀಲನೆ ಮಾಡುವುದು ಬಹಳ ಅಗತ್ಯ. ತಂತ್ರಜ್ಞಾನ ಮುಂದುವರೆದಂತೆ ವೈದ್ಯರು ರೋಗಿಗಳ ಮಾಹಿತಿಗಳನ್ನು ಪರಿಶೀಲಿಸಿ ತಮ್ಮ ಚಿಕಿತ್ಸೆ ಆರಂಭಿಸುತ್ತಿದ್ದಾರೆ. ಬಹಳಷ್ಟು ಜನರು ರೋಗಿಗಳನ್ನು ನೋಡಿರುವುದೇ ಇಲ್ಲ. ರೋಗಿಗಳನ್ನು ನೋಡುವುದು ಹಾಗೂ ಅವರನ್ನು ಮುಟ್ಟಿ ಪರಿಶೀಲಿಸುವುದರಿಂದ ಇನ್ನಿತರೆ ವಿಷಯಗಳನ್ನು ತಿಳಿಯಬಹುದಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸೂಪರ್ ಸ್ಪೇಷಾಲಿಟಿ ಚಿಕಿತ್ಸಾ ಪದ್ದತಿ ವ್ಯಾಪಕವಾಗುತ್ತಾ, ಬಹಳಷ್ಟು ಸಂದರ್ಭಗಳಲ್ಲಿ ಪೀಸ್ ಮೀಲ್‌ನಂತಹ ಡಯಾಗ್ನೈಸ್‌ಗಳು ಆಯಾ ಅಂಗಾಂಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ತಿಳಿಸುತ್ತವೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಸಂಪೂರ್ಣ ದೇಹದ ಸಮಗ್ರ ಪರಿಶೀಲನೆ ಅಗತ್ಯವಿದ್ದು ಇದಕ್ಕೆ ಫ್ಯಾಮಿಲಿ ಫಿಸಿಷಿಯನ್‌ಗಳ ಅಗತ್ಯ ಹೆಚ್ಚಾಗಿದೆ ಎಂದರು.
ವೈದ್ಯಕೀಯ ಶಾಸ್ತ್ರದ ರೋಗ ನಿರ್ಣಯದಲ್ಲಿ ಜ್ವರ ನಿರ್ವಹಣೆ ಬಹಳ ಪ್ರಮುಖವಾದ ಅಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ರೋಗಿಗಳ ಕಾಯಿಲೆಗಳನ್ನು ವೇಗವಾಗಿ ನಿವಾರಿಸುವ ಭರಾಟೆಯಲ್ಲಿ ಆಂಟಿಬಯಾಟಿಕ್‌ಗಳ ಬಳಕೆಯನ್ನು ಅಗತ್ಯಕ್ಕಿಂತಲೂ ಬೇಗ ಹಾಗೂ ಹೆಚ್ಚಾಗಿ ಮಾಡಲಾಗುತ್ತಿದೆ. ಅಲ್ಲದೆ, ತರಕಾರಿಗಳು ಹಾಗೂ ಹಣ್ಣುಗಳ ಕೃಷಿಯಲ್ಲೂ ಆಂಟಿಬಯಾಟಿಕ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದರು.
ಅಂಟಿಬಯಾಟಿಕ್ ಸಮರ್ಪಕ ಬಳಕೆಗೆ ಹೊಸ ನೀತಿ ಅಗತ್ಯ
ಆಂಟಿಬಯಾಟಿಕ್‌ಗಳು ಅಮೃತವೂ ಹೌದು, ಆದರೆ ಅತಿಯಾದ ಅಮೃತ ವಿಷ ಎನ್ನುವಂತೆ ಅತಿಯಾದ ಅಂಟಿಬಯಾಟಿಕ್‌ನಿಂದ ನಿಧಾನವಾಗಿ ಅಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ವೈದ್ಯ ಸಮೂಹ ಮುಂದಾಗಬೇಕಾಗಿದೆ. ಅಲ್ಲದೇ, ಅಂಟಿಬಯಾಟಿಕ್‌ನ ಸಮರ್ಪಕ ಬಳಕೆ ಹಾಗೂ ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಸಿಎನ್ ಮಂಜುನಾಥ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸೋಷಿಯೇಷನ್ ಆಫ್ ಇಂಡಿಯನ್ ಫಿಸಿಷಿಯನ್ಸ್ ಅಧ್ಯಕ್ಷರಾದ ಡಾ.ಜಿ ನರಸಿಮ್ಲೂ, ಡಾ.ಎ ಮುರುಗನಾಥನ್, ಡಾ.ಟಿಎಸ್ ರವೀಂದ್ರ, ಫೀವರ್‌ಕಾನ್‌ನ ಸಂಚಾಲಕರಾದ ಡಾ ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ವಿಶ್ವದ ವಿವಿಧ ಭಾಗಗಳಿಂದ 75 ಸಾವಿರಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದಾರೆ.
ವಿಭಾಗ