Bengaluru Chitra Santhe: ಬೆಂಗಳೂರಿನಲ್ಲಿ ಯಶಸ್ವಿಯಾದ 22ನೇ ಚಿತ್ರಸಂತೆ; ಹೇಗಿತ್ತು ನೋಡಿ ಕಲಾಕೃತಿಗಳ ಮೆರುಗು
ಜನವರಿ 5ರಂದು ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿ ನಡೆದ ಚಿತ್ರಸಂತೆಯ ಸುಂದರ ನೋಟ ಇಲ್ಲಿದೆ. ನೀವು ಚಿತ್ರಸಂತೆಗೆ ಹೋಗಿಲ್ಲ ಎಂದಾದರೆ ಇದನ್ನು ಮಿಸ್ ಮಾಡದೆ ಓದಿ.
ಬೆಂಗಳೂರಿನಲ್ಲಿ ಜನವರಿ 5ರಂದು 22ನೇ ಚಿತ್ರಸಂತೆ ನಡೆಯಿತು. ನೂರರಿಂದ ಹಿಡಿದು ಲಕ್ಷ ರೂಪಾಯಿ ಮೌಲ್ಯದ ಪೇಂಟಿಂಗ್‌ಗಳು ಚಿತ್ರಸಂತೆಯಲ್ಲಿ ನೋಡಲು ಮತ್ತು ಕೊಳ್ಳಲು ಲಭ್ಯವಿದ್ದವು. ಅಕ್ರಾಲಿಕ್, ಆಯ್ಲ್ ಪೇಂಟಿಂಗ್, ವಾಟರ್ ಪೇಂಟಿಂಗ್, ಪೆನ್ಸಿಲ್ ಆರ್ಟ್, ವರ್ಲಿ ಆರ್ಟ್, ಮಂಡಲ ಆರ್ಟ್, ಅಬ್‌ಸ್ಟ್ರಾಕ್ಟ್ ಆರ್ಟ್, ಇಲ್ಯೂಶನ್ ಆರ್ಟ್ ಹೀಗೆ ಸಾಕಷ್ಟು ರೀತಿಯ ವಿಭಿನ್ನವಾದ ಶೈಲಿಯ ನಾನಾ ರೀತಿಯ ಚಿತ್ರಗಳು ಕಂಡು ಬಂದವು ಸಾವಿರಕ್ಕೂ ಹೆಚ್ಚು ಸ್ಟಾಲ್‌ಗಳಿದ್ದವು. ಈ ಬಾರಿ ಹೆಣ್ಣು ಮಗುವನ್ನು ಮುಖ್ಯ ಥೀಮ್ ಆಗಿಟ್ಟುಕೊಂಡು ಚಿತ್ರಸಂತೆ ನಡೆಯಿತು.
ನೀವು ಚಿತ್ರಸಂತೆಗೆ ಹೋಗಿಲ್ಲ ಎಂದಾದರೆ ಇದನ್ನು ಮಿಸ್ ಮಾಡದೆ ಓದಿ
ಇದೆಲ್ಲವೂ ಒಂದಷ್ಟು ಮುಖ್ಯವಿಚಾರವಾದರೆ ಈ ಚಿತ್ರಸಂತೆಯ ದೃಶ್ಯ ಹೇಗಿತ್ತು? ಅಲ್ಲಿನ ದೃಶ್ಯ ಹೇಗಿತ್ತು ಎಂಬ ವಿಚಾರ ಇಲ್ಲಿದೆ. ಒಂದು ವೇಳೆ ನೀವು ಚಿತ್ರಸಂತೆಗೆ ಈ ಬಾರಿ ಹೋಗಲು ಸಾಧ್ಯವಾಗಿಲ್ಲ ಎಂದಾದರೆ ಖಂಡಿತ ಇದನ್ನು ಮಿಸ್ ಮಾಡದೆ ಓದಿ. ಕುಮಾರ ಕೃಪಾ ರಸ್ತೆಯಲ್ಲಿ ಈ ಚಿತ್ರ ಸಂತೆ ನಡೆದಿತ್ತು. ಸುಮಾರು 1,500 ಕಲಾವಿದರ ಕಲಾಕೃತಿಗಳಿದ್ದವು. ಕಾಲಿಡಲು ಜಾಗವೇ ಇಲ್ಲದಷ್ಟು ಜನಸಂದಣಿಯಿಂದ ಚಿತ್ರ ಸಂತೆ ತುಂಬಿತ್ತು. ಚಿತ್ರಗಳ ಸಂತೆಯೋ ಅಥವಾ ಜನರದ್ದೇ ಸಂತೆಯೋ? ಎಂಬ ಪ್ರಶ್ನೆ ಮೂಡುವಂತಿತ್ತು. ಯಾಕೆಂದರೆ ಅಷ್ಟೊಂದು ಜನರ ನಡುವೆ ರಸ್ತೆಯ ಅಕ್ಕಪಕ್ಕದಲ್ಲಿ ಸಾಲಾಗಿ ಜೋಡಿಸಿಟ್ಟ ಚಿತ್ರಗಳನ್ನು ಕಾಣುವುದಕ್ಕಿಂತ ಹೆಚ್ಚಾಗಿ ಅತ್ತಿತ್ತ ಓಡಾಡುವವರ ತಲೆಗಳೇ ಕಾಣುತ್ತಿತ್ತು.
ಮುಖಕ್ಕೆ ಬಣ್ಣದ ಚಿಟ್ಟೆಗಳು
ಯಾವಾಗಲೂ ಏನಾದರೂ ಒಂದು ವಿಶೇಷ ಎನಿಸಿದರೆ ಎಲ್ಲರೂ ಅದನ್ನೇ ತಾವೂ ಮಾಡುತ್ತಾರೆ. ಅದೇ ರೀತಿ ಸಾಕಷ್ಟು ಜನ ತಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು ಚಿತ್ರಸಂತೆಯನ್ನು ಖುಷಿಯಿಂದ ಸುತ್ತಿದ್ದಾರೆ. ಫೇಸ್‌ಪೇಂಟಿಂಗ್ ಮಾಡಿಸಿಕೊಂಡವರ ಮುಖದ ಮೇಲೆಲ್ಲ ನೀಲಿ ಹಾಗೂ ಬಿಳಿ ಬಣ್ಣದ ಚಿಟ್ಟೆಗಳು ಹಾರುತ್ತಿದ್ದವು. ಇನ್ನು ಸಾಕಷ್ಟು ಜನ ಫೋಟೋ ತೆಗೆದುಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದರು. ಕೆಲವರು ಮಾತ್ರ ಪೇಂಟಿಂಗ್ ಕೊಳ್ಳಲು ಬಂದಿದ್ದರೆ ಹಲವರು ಚಿತ್ರವನ್ನು ಆಸ್ವಾದಿಸಲು ಬಂದಿದ್ದರು.
ಯಾವ ಚಿತ್ರಗಳು ಹೆಚ್ಚಿದ್ದವು?
ಅಲ್ಲಲ್ಲಿ ನವಿಲುಗರಿಗಳನ್ನು ಮಾರಾಟ ಮಾಡುತ್ತಿದ್ದರು. ಅಲಂಕಾರಿಕ ವಸ್ತುಗಳು ಮರದ ವಸ್ತುಗಳು, ಕಸದಿಂದ ರಸ ಹೀಗೆ ಸಾಕಷ್ಟು ಕಲಾಕೃತಿಗಳೂ ಸಹ ಲಭ್ಯವಿದ್ದವು. ಮನೆಗಳಲ್ಲಿ ತೂಗಿ ಹಾಕುವ ಪೇಂಟಿಂಗ್‌ಗಳು ಒಂದೆಡೆಯಾದರೆ ದೊಡ್ಡ ದೊಡ್ಡ ಹೋಟೆಲ್ ಹಾಗೂ ರೆಸಾರ್ಟ್‌ಗಳಿಗೆ ಲುಕ್ ನೀಡುವ ಅಂದದ ಬಿಗ್ ಫ್ರೆಮ್ ಪೇಂಟಿಂಗ್‌ಳು ಹೆಚ್ಚು ಆಕರ್ಶಕವಾಗಿದ್ದವು. ಪ್ರಾಣಿ ಪಕ್ಷಿಗಳು, ದೇವರ ಚಿತ್ರಗಳು ಮತ್ತು ಲೈವ್ ಸ್ಕೆಚ್‌ಗಳು ಎಲ್ಲೆಡೆ ಹೆಚ್ಚಾಗಿ ಕಾಣಿಸುತ್ತಿದ್ದವು. ಬಣ್ಣ ಹಾಗೂ ಆರ್ಟ್ ಬುಕ್‌ಗಳ ಮಾರಾಟವೂ ಇತ್ತು. ಯಾರೇ ಹೋದರು ನಾನೂ ಒಂದು ಚಿತ್ರಬಿಡಿಸಬೇಕು ಎನ್ನುವ ಪ್ರೇರಣೆ ಅಲ್ಲಿ ಸಿಗುವಂತಿತ್ತು.
ಯಾವುದು ಕುತೂಹಲ ಮೂಡಿಸಿತ್ತು?
ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು ಅದರೊಟ್ಟಿಗೆ ಬೇರೆ ಬೇರೆ ರಾಜ್ಯಗಳ ಆರ್ಟಿಸ್ಟ್‌ಗಳು ಬಂದಿದ್ದರು. ಸ್ಯಾಂಡ್ ಆರ್ಟ್ ಕೂಡ ಎಲ್ಲರ ಮನ ಸೆಳೆದಿತ್ತು. ಹೆಚ್ಚಾಗಿ ಬರೀ ಕಪ್ಪು ಹಿಂಬಾಗಕ್ಕೆ ಮರಳನ್ನು ಅಂಟಿಸಿ ಮಾಡಿದ ಚಿತ್ರ, ಅತ್ತಿಂದಿತ್ತ ತಿರುಗಿಸಿದಾಗ ಬಣ್ಣ ಬದಲಾಗುವ ಚಿತ್ರ, ಪುಡಿಯಾದ ಗಾಜಿನಿಂದಲೇ ಮಾಡಿದ ಚಿತ್ರ, ಬರೀ ಟಾಡ್‌ಗಳನ್ನಿಟ್ಟು ಬಿಡಿಸಿದ ಚಿತ್ರ. ದಾರದಿಂದ ಬಿಡಿಸಿದ ಚಿತ್ರ ಹೀಗೊಂದಿಷ್ಟು ವಿಶೇಷ ಕುತೂಹಲ ಹುಟ್ಟಿಸುವಂತ ಚಿತ್ರಗಳಿದ್ದವು. ಪ್ರತಿಯೊಂದು ಸ್ಟಾಲ್ ಕೂಡ ತನ್ನದೇ ವಿಶೇಷ ಹೆಸರನ್ನು ಹೊಂದಿತ್ತು. ಎಲ್ಲರೂ ತಮ್ಮ ಇನ್ಸ್ಟಾಗ್ರಾಂ ಐಡಿಯನ್ನು ಶೇರ್ ಮಾಡಿಕೊಂಡು ಅಲ್ಲಿಯೂ ಪ್ರೋತ್ಸಾಹ ಕೊಡಿ ಎಂದು ಕೇಳಿಕೊಂಡರು.
ಬಿಎಂಟಿಸಿ ಸಪೋರ್ಟ್
ತುಂಬಾ ಕಾಳಜಿಯಿಂದ ಗಡಿಬಿಡಿ ಮಾಡದೇ ಜನರನ್ನು ಸಾಗಿಸಲು ಬಸ್ ವ್ಯವಸ್ಥೆ ಇತ್ತು. ಖಾಸಗಿ ವಾಹನ ಹೆಚ್ಚಾದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂಬ ಕಾಳಜಿಯಿಂದ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅದರಿಂದ ಅನುಕೂಲವಾಗಿದ್ದು ಸಾಕಷ್ಟು ಜನ ಸಾರ್ವಜನಿಕ ವಾಹನವನ್ನೇ ಬಳಸಿದ್ದರು.
ಬರಹ: ಸುಮಾ ಕಂಚೀಪಾಲ್
ಇದನ್ನೂ ಓದಿ: Chitra Santhe: ನೃತ್ಯಭಂಗಿಯಿಂದ ಕಪ್ಪು ಕಲ್ಲಿನವರಿಗೆ; ಚಿತ್ರಸಂತೆಯಲ್ಲಿ ಕಂಡ ಅತ್ಯಾಕರ್ಷಕ ಗಣಪತಿ ಫೋಟೊಗಳಿವು