ಇಡ್ಲಿ ಪ್ರಿಯರು ಒಮ್ಮೆಯಾದ್ರೂ ಭೇಟಿ ನೀಡಲೇಬೇಕಾದ ಬೆಂಗಳೂರಿನ 5 ಬೆಸ್ಟ್ ಹೊಟೇಲ್‌ಗಳಿವು
ಸಾಂಪ್ರದಾಯಿಕ ಉಡುಪಿ ಶೈಲಿಯ ಇಡ್ಲಿಯಿಂದ ದೇಶದ ವಿವಿಧ ರುಚಿಯ ಇಡ್ಲಿಗಳನ್ನು ಟೇಸ್ಟ್ ಮಾಡಬೇಕು ಅಂದ್ರೆ ನೀವು ಖಂಡಿತ ಬೆಂಗಳೂರಿಗೆ ಬರಬೇಕು. ಬೆಂಗಳೂರಲ್ಲಿ ಬೆಸ್ಟ್ ಇಡ್ಲಿ ಸಿಗೋ ಹೋಟೆಲ್‌ಗಳು ಯಾವುವು ಅಂತ ಕೇಳೋರಿಗೆ ಇಲ್ಲಿದೆ ಉತ್ತರ. (ಲೇಖನ: ಭಾಗ್ಯಾ ದಿವಾಣ)
ನಮ್ಮ ಬೆಂಗಳೂರಿನಲ್ಲಿ ಆಹಾರ ಪ್ರಿಯರನ್ನು ಸೆಳೆಯುವುದಕ್ಕಾಗಿ ವಿಭಿನ್ನವಾಗಿರುವ ರೆಸ್ಟೋರೆಂಟ್‌ಗಳು ಅದೆಷ್ಟೋ ಸಂಖ್ಯೆಯಲ್ಲಿ ತಲೆಯೆತ್ತಿವೆ. ಆದರೆ ಬೆಂಗಳೂರಿಗರಿಗೆ ಬೆಳಗಾದರೆ ಸಾಕು ಬಾಯಿ ಚಪ್ಪರಿಸಿಕೊಂಡು ರುಚಿಕರವಾದ ಇಡ್ಲಿಯನ್ನು ಸವಿಯಬೇಕೆಂದರೆ ರೆಸ್ಟೋರೆಂಟ್‌ಗಳಿಗಿಂತ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಸದ್ದು ಗದ್ದಲವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಹೊಟೇಲ್ ಇಲ್ಲವೇ ಟಿಫನ್ ಸೆಂಟರ್‌ಗಳೇ ಹೆಚ್ಚಿಗೆ ಪ್ರಿಯವಾಗುತ್ತವೆ.
ಬೆಂಗಳೂರಿನಲ್ಲಿರುವ ನೀವು ತಿಳಿಯಲೇಬೇಕಾದ ಕೆಲವು ಹಳೆಯ ಮತ್ತು ಪ್ರಸಿದ್ಧ ಹೋಟೆಲ್‌ಗಳಿವೆ. ಇಲ್ಲಿ ಯಾವ ಆಡಂಬರವೂ ಇಲ್ಲದೇ ರುಚಿಕರವಾದ ಇಡ್ಲಿಗಳನ್ನು ಹಸಿರು ಚಟ್ನಿಯ ಜೊತೆಗೆ ನೀವು ಸವಿಯಬಹುದು. ಆದರೆ ವಾರಾಂತ್ಯದಲ್ಲಿ ಮಾತ್ರ ಬೆಳಿಗ್ಗೆ 6:00 ಗಂಟೆಯಿಂದಲೇ ಭಾರೀ ಜನ ಸಂದಣಿಯಿಂದ ಕೂಡಿರುವ ಈ ಸ್ಥಳಗಳಲ್ಲಿ ಸರತಿಸಾಲಿನಲ್ಲಿ ನಿಂತರೂ ಜನ ಇಡ್ಲಿಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಬೆಂಗಳೂರಿನಲ್ಲಿ ಬೆಳಗಿನ ಉಪಾಹಾರಕ್ಕಾಗಿ ನೀವು ವೆರೈಟಿ ಇಡ್ಲಿಗಳನ್ನು ಟೇಸ್ಟ್ ಮಾಡಲು ಕೆಲವು ಉತ್ತಮ ಸ್ಥಳಗಳನ್ನು ನಾವು ತಿಳಿಸುತ್ತೇವೆ.
ತಾಜಾವೆನ್ನಿಸುವ ʻತಾಜಾ ತಿಂಡಿʼ
ಬೆಂಗಳೂರು ನಗರದ ದಕ್ಷಿಣ ಭಾಗದ ಜಯನಗರದಲ್ಲಿ ಕಳೆದ 9 ವರ್ಷಗಳ ಹಿಂದೆ ಚಿಕ್ಕದಾಗಿ ಶುರುವಾಗಿದ್ದ ತಾಜಾ ತಿಂಡಿ ಹೊಟೇಲ್, ಸದ್ಯ ಅಪಾರ ಜನಪ್ರಿಯತೆ ಗಳಿಸುವುದರ ಜೊತೆಗೆ ಗೂಗಲ್‌ನಲ್ಲೂ ಹೆಚ್ಚಿನ ರೇಟಿಂಗ್ ಪಡೆದುಕೊಂಡಿದೆ ಎಂದರೆ ನಂಬಲೇಬೇಕು. ಇಲ್ಲಿ ಆಹಾರ ಪ್ರಿಯರನ್ನು ಸೆಳೆಯುವುದಕ್ಕಾಗಿ ಕೇಸರಿಬಾತ್, ಖಾರಾಬಾತ್, ಚೌಚೌ ಬಾತ್, ಮಸಾಲಾ ದೋಸೆ ಮತ್ತು ಇನ್ನು ಅನೇಕ ಬಗೆಯ ದೋಸೆಗಳು ಲಭ್ಯವಿದೆಯಾದರೂ ಇಡ್ಲಿಗೆ ಸರಿಸಾಟಿಯಾಗಿ ಯಾವುದೂ ಇಲ್ಲ. ಇಡ್ಲಿಹಿಟ್ಟನ್ನು ಇಲ್ಲಿಯೇ ಯಂತ್ರಗಳನ್ನು ಬಳಸಿ ತಯಾರಿಸಲಾಗುತ್ತಿದ್ದು, ಬಿಸಿ ಬಿಸಿ ಇಡ್ಲಿಯನ್ನು ಬಾಯಿಯಲ್ಲಿ ಇಡುತ್ತಿದ್ದಂತೆಯೇ ಕರಗಿ ಬಿಡುವಷ್ಟು ಮೆತ್ತಗಿರುತ್ತವೆ. ಇಡ್ಲಿಯ ಜೊತೆಗೆ ಸಿಗುವ ಹಸಿರು ಚಟ್ನಿಯಂತೂ ಬಲು ಅಪರೂಪ ನಮ್ ಜೋಡಿ ಎನ್ನುವಂತಿರುತ್ತದೆ.
ಇಡ್ಲಿಗೆ ಫೇಮಸ್ ರಾಮೇಶ್ವರಂ ಕೆಫೆ
ದಕ್ಷಿಣ ಭಾರತದ ಖಾದ್ಯಗಳನ್ನೇ ಅರಸಿ ಊರೆಲ್ಲಾ ಸುತ್ತುವ ಮಂದಿ, ಬೆಂಗಳೂರಿನ ಹೃದಯಭಾಗದಲ್ಲಿರುವ ಇಂದಿರಾನಗರದ 12ನೇ ಮುಖ್ಯ ರಸ್ತೆಯತ್ತ ಹೋಗಬೇಕು. ಇಲ್ಲಿರುವ ರಾಮೇಶ್ವರಂ ಕೆಫೆ ಅದೆಷ್ಟು ಬಗೆ ಬಗೆಯ ಖಾದ್ಯಗಳನ್ನು ನೀಡುತ್ತಿವೆ ಗೊತ್ತಾ? ಇವರ ಮೆನುವಿನಲ್ಲಿ ಬೆಳಗಿನ ಉಪಹಾರಕ್ಕಾಗಿ ಓಪನ್ ಬಟರ್ ಮಸಾಲಾ ದೋಸೆ, ಘೀ ಪೋಡಿ ಮಸಾಲಾ ದೋಸೆ, ಬೆಳ್ಳುಳ್ಳಿ ರೋಸ್ಟ್ ದೋಸೆ, ಅಕ್ಕಿ ರೋಟಿ, ಗೊಂಗುರ ರೈಸ್, ವೆನ್ ಪೊಂಗಲ್ ಮತ್ತು ವಡಾ ಮುಂತಾದವುಗಳಿವೆ.
ಆದರೂ ಅವೆಲ್ಲದಕ್ಕೂ ಹೆಚ್ಚಿನ ಬೇಡಿಕೆಯಿರುವ ಬೆಳಗ್ಗಿನ ತಿಂಡಿ ತಟ್ಟೆ ಇಡ್ಲಿ. ಮೃದುವಾದ ಸ್ಪಂಜಿನಂತಿರುವ ಇಡ್ಲಿ, ಅದರ ಮೇಲೆ ಘಮ್ಮೆನ್ನುವ ತುಪ್ಪ ಸವರಿ, ಜೊತೆಗೆ ಸಾಂಬಾರ್ ಹಾಗೂ ಚಟ್ನಿ ತಿನ್ನುವ ಸಂಭ್ರಮ ಹೇಳೋದಕ್ಕೆ ಅಸಾಧ್ಯ. ತಿಂಡಿಯ ಜೊತೆಗೆ ಒಂದು ಕಪ್ ಫಿಲ್ಟರ್ ಕಾಫಿಯಿದ್ದರೆ ಸ್ವರ್ಗಕ್ಕೆ ಮೂರೇ ಗೇಣು..
ಬಜೆಟ್ ಫ್ರೆಂಡ್ಲಿ ಆಶಾ ಟಿಫಿನ್ಸ್
ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಬಜೆಟ್ ಫ್ರೆಂಡ್ಲೀ ಹೊಟೇಲ್ ಆಶಾ ಟಿಫನ್ಸ್. ಕುಟುಂಬ ಅಥವಾ ಸ್ನೇಹಿತರೊಂದಿಗೆ ಕುಳಿತು ಸುವಾಸನೆ ಭರಿತ ಫಿಲ್ಟರ್ ಕಾಫಿ ಹೀರುವುದಕ್ಕಿದು ಸೂಕ್ತವಾದ ಸ್ಥಳ. ಭಾರೀ ಬೇಡಿಕೆ ಹೊಂದಿರುವ ರುಚಿಕರ, ಮೃದುವಾದ ಇಡ್ಲಿ, ಕ್ಲಾಸಿಕ್ ಹಸಿರು ಚಟ್ನಿಯೊಂದಿಗೆ ಸವಿಯುವುದಕ್ಕಾಗಿ ಬೆಂಗಳೂರಿನ ಮೂಲೆ ಮೂಲೆಯಿಂದ ಆಹಾರ ಪ್ರಿಯರು ಇಲ್ಲಿಗೆ ಭೇಟಿ ಕೊಡುತ್ತಾರೆ. ಅತೀ ಕಡಿಮೆ ಬೆಲೆಯಲ್ಲಿ ನಾಲಿಗೆಯ ರುಚಿ ಹತ್ತಿಸುವ ಇಡ್ಲಿ ಚಟ್ನಿ ಬೇಕೆನ್ನುವ ಮಂದಿಗಿದು ಉತ್ತಮ ಆಯ್ಕೆ.
ಪ್ರವಾಸಿಗರನ್ನೂ ಆಕರ್ಷಿಸುವ ಮಾವಳ್ಳಿ ಟಿಫಿನ್ ರೂಮ್
ಬೆಂಗಳೂರಿನ ಮಾವಳ್ಳಿ ಟಿಫನ್ ರೂಮ್ ಅಥವಾ ಎಂಟಿಆರ್‌ಗೆ 95 ವರ್ಷದ ಪರಂಪರೆಯಿದೆ. ಅಕ್ಕಿ ಇಡ್ಲಿಗಿಂತಲೂ ಹೆಚ್ಚಿಗೆ ಇಲ್ಲಿ ಲಭ್ಯವಿರುವ ರವೆ ಇಡ್ಲಿಗೆ ಹೆಚ್ಚಿನ ಬೇಡಿಕೆಯಿದೆ. ರವೆ ಇಡ್ಲಿಯ ಮೇಲೆ ಉದುರು ಉದುರಾಗಿ ಕಾಣಿಸಿಕೊಳ್ಳುವ ತುಪ್ಪ ಹಾಗೂ ರುಚಿಕರವಾದ ತೆಂಗಿನಕಾಯಿ ಹಸಿರು ಚಟ್ನಿಯನ್ನು ಸವಿಯುವುದಕ್ಕಾಗಿ ಬೆಂಗಳೂರಿಗರು ಮಾತ್ರವಲ್ಲದೆ ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿ ಕೊಡುತ್ತಾರೆ. ಚಟ್ನಿ ಬೇಡವೆನ್ನುವ ಮಂದಿಯನ್ನು ಆಲೂಗೆಡ್ಡೆ ಸಾಗು ನೀಡಿ ತೃಪ್ತಿಪಡಿಸುವ ಸಾಮರ್ಥ್ಯ ಇಲ್ಲಿನ ಬಾಣಸಿಗರಿಗಿದೆ.
ಗುಣಮಟ್ಟದಲ್ಲಿ ರಾಜಿಮಾಡದ ಬ್ರಾಹ್ಮಣರ ಕಾಫಿ ಬಾರ್
1965 ರಿಂದಲೂ ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಬ್ರಾಹ್ಮಣರ ಕಾಫಿ ಬಾರ್, ಇಂದಿಗೂ ಅದೇ ರುಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡುಬಂದಿದೆ. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ವಡಾ, ಫಿಲ್ಟರ್ ಕಾಫಿ, ಹಾಲು ಹೀಗೆ ಎಲ್ಲವೂ ಒಂದೇ ಸೂರಿನಡಿ ಇಲ್ಲಿ ಲಭ್ಯವಿದ್ದು, ಹಳೆ ತಲೆಮಾರಿನ ಅಡುಗೆ ಶೈಲಿ ಹಾಗೂ ರುಚಿಯೊಂದಿಗೆ ಇಂದಿನ ಯುವ ಪೀಳಿಗೆಯನ್ನು ಬೆಸೆಯುವಲ್ಲಿ ಬ್ರಾಹ್ಮಣರ ಕಾಫಿ ಬಾರ್ ಯಶಸ್ವಿಯಾಗಿದೆ. ಇಲ್ಲಿ ಲಭ್ಯವಿರುವ ಇಡ್ಲಿ ವಡಾಕ್ಕೆ ವರ್ಷಗಳಿಂದಲೇ ಬೇಡಿಕೆ ಹೆಚ್ಚುತ್ತಲೇ ಇದ್ದು, ಒಂದು ಕಪ್ ಬಿಸಿ ಕಾಫಿಯೊಂದಿಗೆ ಬೆಳಗಿನ ಉಪಾಹಾರವನ್ನು ಆಸ್ವಾದಿಸಲು ಇದು ಒಳ್ಳೆಯ ಆಯ್ಕೆ.
ಮನೆಯಲ್ಲಿ ಒಂದೇ ಬಗೆಯ ಇಡ್ಲಿಯನ್ನು ತಿಂದು ಬೇಸರವಾಗಿದೆ ಎನ್ನುವ ಮಂದಿ, ಬೆಂಗಳೂರಿನ ಈ ಹಳೆಯ ಹೊಟೇಲ್‌ಗಳಿಗೆ ತಪ್ಪದೇ ಭೇಟಿ ಕೊಟ್ಟು ನೋಡಿ. ವಿಭಿನ್ನ ರುಚಿಯ, ವಿಭಿನ್ನ ಬಗೆಯ ಇಡ್ಲಿ-ಚಟ್ನಿಯಂತೂ ನಿಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಸೆಳೆಯದೇ ಇರದು.
ವಿಭಾಗ