ಒಂದು ಆಟ, ನಾಲ್ಕು ಪ್ರಸಂಗ, 10 ಮೇಳಗಳ ಕಲಾವಿದರು, ಇದು ಯಕ್ಷಸಂಕ್ರಾಂತಿ ವಿಶೇಷ; ಸೆ.21ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೈಭವ
ಕಳೆದೊಂದಿಷ್ಟು ವರ್ಷಗಳಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ‘ ವಿಶೇಷ ಯಕ್ಷಗಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಯಕ್ಷ ಪರಂಪರೆಗೆ ಹೊಸ ಅರ್ಥ ನೀಡುತ್ತಿದ್ದಾರೆ ನಾಗರಾಜ್ ಶೆಟ್ಟಿ ನೈಕಂಬ್ಳಿ. ಈ ವರ್ಷವೂ ಯಕ್ಷ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 21 ರಂದು ನಡೆಯಲಿರುವ ಯಕ್ಷ ಸಂಕ್ರಾಂತಿಯಲ್ಲಿ ಏನೆಲ್ಲಾ ವಿಶೇಷಗಳು ಇರಲಿವೆ ನೋಡಿ.
ಕರಾವಳಿಯ ಸಂಸ್ಕೃತಿ, ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದ್ದು ಗಂಡುಕಲೆ ಎಂದೇ ಖ್ಯಾತಿಯಾದ ಯಕ್ಷಗಾನ. ಇದು ಕರಾವಳಿಯ ಕಲೆಯೇ ಆದರೂ ಕನ್ನಡ ನಾಡಿನಾದ್ಯಂತ ಯಕ್ಷಗಾನಕ್ಕೆ ಹಲವು ಅಭಿಮಾನಗಳಿದ್ದಾರೆ. ಯಕ್ಷಾಭಿಮಾನಗಳ ಸಂಖ್ಯೆ ಮಹಾನಗರಿ ಬೆಂಗಳೂರಿನಲ್ಲೂ ಕಡಿಮೆ ಇಲ್ಲ. ಆ ಕಾರಣಕ್ಕೆ ಪ್ರತಿ ವರ್ಷ ಕರಾವಳಿ ವಿವಿಧ ಯಕ್ಷಗಾನ ಮೇಳಗಳು ಬೆಂಗಳೂರಿಗೆ ತಿರುಗಾಟ ನಡೆಸುತ್ತವೆ. ಆದರೆ ಈ ಯಕ್ಷ ಪರಂಪರೆಯಲ್ಲೇ ಭಿನ್ನತೆಯನ್ನು ಪ್ರದರ್ಶಿಸುವ ಸಲುವಾಗಿ ಕುಂದಾಪುರದ ಮಾರಣಕಟ್ಟೆ ಸಮೀಪದ ನೈಕಂಬ್ಳಿಯವರಾದ ನಾಗರಾಜ್ ಶೆಟ್ಟಿ ‘ಯಕ್ಷ ಸಂಕ್ರಾಂತಿ‘ ಎಂಬ ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
ಕಳೆದೊಂದಿಷ್ಟು ವರ್ಷಗಳಿಂದ ಯಕ್ಷ ಸಂಗ್ರಾಂತಿ ಯಕ್ಷಾಭಿಮಾನಿಗಳನ್ನೆಲ್ಲಾ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೈಭವಕ್ಕೆ ವೇದಿಕೆ ಸಜ್ಜಾಗಿದೆ. 2024ರ ಯಕ್ಷ ಸಂಕ್ರಾಂತಿಯಲ್ಲಿ ಏನೆಲ್ಲಾ ವಿಶೇಷಗಳು ಇರಲಿವೆ, ಯಾವ ದಿನ, ಯಾವ ಸಮಯಕ್ಕೆ ಯಕ್ಷಗಾನ ಪ್ರದರ್ಶನವಿದೆ ಎಂಬಿತ್ಯಾದಿ ವಿವರ ಇಲ್ಲಿದೆ.
ಯಕ್ಷ ಸಂಕ್ರಾಂತಿ 2024
ಈ ಬಾರಿ ಯಕ್ಷ ಸಂಕ್ರಾಂತಿಯಲ್ಲಿ ಒಟ್ಟು 10 ವಿವಿಧ ಮೇಳಗಳ ಕಲಾವಿದರು ಒಂದೇ ವೇದಿಕೆ ಯಕ್ಷಗಾನ ಪ್ರದರ್ಶನ ಮಾಡಲಿದ್ದಾರೆ. ಶ್ರೀ ಕೃಷ್ಣ ಸಂಧಾನ, ಸುಧನ್ವ, ಧರ್ಮಾಂಗಧ, ತಾಮ್ರಧ್ವಜ ಈ ಪ್ರಸಂಗಗಳನ್ನು ನೀವು ಒಂದೇ ವೇದಿಕೆಯಲ್ಲಿ ಒಂದೇ ಆಟದಲ್ಲಿ ನೋಡಲಿದ್ದೀರಿ. ಸೆಪ್ಟೆಂಬರ್ 21ರ ರಾತ್ರಿ 10 ಗಂಟೆಗೆ ಯಕ್ಷಗಾನ ಆರಂಭವಾಗಲಿದೆ.
‘ಶ್ರೀ ಕೃಷ್ಣ ಪ್ರವೇಶದಿಂದ ಆರಂಭ ಆಗುವ ಸಂಧಾನದಲ್ಲಿ ವಿದುರ ಆತಿಥ್ಯದ ಭಾಗ ಇರುವುದಿಲ್ಲ. ಇನ್ನು ಪ್ರಭಾವತಿ ಭಾಗ ಹೊರತುಪಡಿಸಿ ಸುಧನ್ವಾರ್ಜುನ ಪ್ರಸ್ತುತಿಗೊಂಡರೆ, ನಾಟ್ಯ ಪ್ರಧಾನವಾದ ಧರ್ಮಾಂಗದ ಚುರುಕಿನಲ್ಲಿ ಮುಗಿಯುವ ಪ್ರಸಂಗ. ಕೊನೆಯಲ್ಲಿ ಬೆಳಗಿನ ಜಾವಕ್ಕೆ ತಾಮ್ರಧ್ವಜ ಶುದ್ಧ ನಡುತಿಟ್ಟಿನ ನಡೆ ಮತ್ತು ವೇಷಭೂಷಣದಲ್ಲಿ ಪ್ರಸ್ತುತಿಗೊಳ್ಳಲಿದೆ. ಹೀಗೆ ಪ್ರಮುಖ ರಸಘಟ್ಟಗಳನ್ನು ಒಟ್ಟುಗೂಡಿಸಿ ಕಲಾಭಿಮಾನಿಗಳನ್ನು ಸಂತುಷ್ಠಗೊಳಿಸುವ ಪ್ರಯತ್ನ ನಮ್ಮದು‘ ಎಂದು ಯಕ್ಷಸಂಕ್ರಾಂತಿ ಸಂಘಟಕರಾದ ನಾಗರಾಜ್ ಶೆಟ್ಟಿ ಯಕ್ಷಸಂಕ್ರಾಂತಿಯ ಪ್ರಸಂಗಗಳ ಬಗ್ಗೆ ವಿವರಿಸುತ್ತಾರೆ.
ಹಿಮ್ಮೇಳದಲ್ಲಿ ಭಾಗವಹಿಸುವ ಕಲಾವಿದರು
ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಉದಯ್ ಕುಮಾರ್ ಹೊಸಾಳ್, ಸೃಜನ್ ಗಣೇಶ ಹೆಗಡೆ, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ, ಪ್ರಜ್ವಲ್ ಮುಂಡಾಡಿ
ಪಾತ್ರ ಪರಿಚಯ ಹೀಗಿದೆ
ಕೌರವ: ಕೃಷ್ಣ ಯಾಜಿ ಬಳ್ಕೂರು
ಕೃಷ್ಣ: ರಾಮಚಂದ್ರ ಹೆಗಡೆ ಕೊಂಡದಕುಳಿ
ವಿದುರ: ರಮೇಶ್ ಭಂಡಾರಿ
ದೂತ: ದ್ವಿತೇಶ್ ಕಾಮತ್
ಕರ್ಣ: ಪ್ರಶಾಂತ ಹೆಗಡೆ
ದುಶ್ಯಾಸನ: ಮಂಜುನಾಥ್ ಹವ್ಯಕ
ಅರ್ಜುನ: ವಿದ್ಯಾಧರ್ ಜಲವಳ್ಳಿ
ಸುಧನ್ವ: ವಿಶ್ವನಾಥ್ ಹೆನ್ನಾಬೈಲ್
ಕೃಷ್ಣ: ರವಿ ಶೆಟ್ಟಿ ವಾಟಾರ್
ಭರತ: ಗಣಪತಿ ಹೆಗಡೆ ತೋಟಿಮನೆ
ಧರ್ಮಾಂಗಧ: ಉದಯ ಹೆಗಡೆ ಕಡಬಾಳ್
ಬಲಿ: ನವೀನ್ ಶೆಟ್ಟಿ ಐರ್ಬೈಲ್
ದೂತ: ದ್ವಿತೇಶ್ ಕಾಮತ್
ತಾಮ್ರಧ್ವಜ - ಆಜ್ರಿ ಗೋಪಾಲ ಗಾಣಿಗ
ಅರ್ಜುನ: ಐರ್ಬೈಲ್ ಆನಂದ ಶೆಟ್ಟಿ
ಕೃಷ್ಣ: ಕೋಟ ಸುರೇಶ್ ಬಂಗೇರ
ಮಯೂರಧ್ವಜ: ಸುನಿಲ್ ಹೊಲಾಡು
ಕುಮುದ್ವತಿ: ಮಾಧವ ನಾಗೂರು
ಬ್ರಾಹ್ಮಣ: ಸತೀಶ್ ಹಾಲಾಡಿ
ವೃಷಕೇತು: ಉಳ್ಳೂರು ನಾರಾಯಣ
ನಕುಲಧ್ವಜ: ಪ್ರಶಾಂತ್ ವರ್ಧನ
ಪ್ರದ್ಯುಮ್ನ: ಮಂಜು ಹವ್ಯಕ
ಅತಿಥಿ ಕಲಾವಿದರ ಜೊತೆಗೆ ಮಾರಣಕಟ್ಟೆ ಮೇಳ, ಮಂದಾರ್ತಿ ಮೇಳ, ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಮೆಕ್ಕೆಕಟ್ಟು ಮೇಳ, ಕಮಲಶಿಲೆ ಮೇಳ, ಹಾಲಾಡಿ ಮೇಳ, ಅಮೃತೇಶ್ವರಿ ಕೋಟ ಹಾಗೂ ಹಟ್ಟಿಯಂಗಡಿ ಮೇಳದ ಕಲಾವಿದವರು ಯಕ್ಷಸಂಕ್ರಾಂತಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ: 9741474255