Success Story: ಬೇಕರಿ ಬಿಸ್ನೆಸ್ ಆರಂಭಿಸಲು ವಾರ್ಷಿಕ 18 ಲಕ್ಷ ರೂ ವೇತನದ ಉದ್ಯೋಗ ಬಿಟ್ಟ ಬೆಂಗಳೂರು ಮಹಿಳೆ
ಅತ್ಯಧಿಕ ವೇತನ ನೀಡುವ ಎಚ್‌ಆರ್ ಉದ್ಯೋಗವನ್ನು ಬಿಟ್ಟು ಬೇಕರಿ ಬಿಸ್ನೆಸ್ ಆರಂಭಿಸಿದ ತನ್ನ ಪತ್ನಿಯ ಕುರಿತು ಬೆಂಗಳೂರಿನ ಟೆಕಿ ಸಾಗರ್ ಮಾಹಿತಿ ಹಂಚಿಕೊಂಡಿದ್ದಾರೆ. ಅಸ್ಮಿತಾ ಅವರು ಕ್ರಂಬಲ್ ಎಂಬ ಬೇಕರಿಯನ್ನು ಜನವರಿ 2024ರಲ್ಲಿ ಆರಂಭಿಸಿದ್ದರು.

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಟೆಕ್ಕಿ ಸಾಗರ್ ಮೋಯ್ ಸೇನ್‌ಗುಪ್ತಾ ಅವರು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಅವರು ತಮ್ಮ ಪತ್ನಿಯ ಬೇಕರಿ ಬಿಸ್ನೆಸ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ ಜತೆಗೆ ತಮ್ಮ ಪತ್ನಿ ಅಸ್ಮಿತಾ ಮಾಡಿರುವ ಕಪ್‌ಕೇಕ್‌ನ ಫೋಟೋವನ್ನೂ ಹಂಚಿಕೊಂಡಿದ್ದಾರೆ. "ಅವಳು ಬೇಕರಿ ಬಿಸ್ನೆಸ್ ಮಾಡಿದಳು, ಥ್ಯಾಂಕ್ ಯು ಗಾಡ್" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಪ್ಯಾಶನ್ ಅನ್ನು ಅನುಸರಿಸುವ ನಿರ್ಧಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ಯಾಶನ್ ಮತ್ತು ಹಣ ಇವೆರಡಲ್ಲಿ ಯಾವುದು ಮುಖ್ಯ ಎಂದು ಕೇಳಿದ್ದಾರೆ. ಅದಕ್ಕೆ ಸಾಗರ್ "ಹಣ ಮತ್ತು ನಂತರ ಪ್ಯಾಶನ್" ಎಂದು ಉತ್ತರ ನೀಡಿದ್ದಾರೆ.
ಅಸ್ಮಿತಾ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಜನಿಸಿದರು. ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವೆಲ್ಫೇರ್ & ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರು ತನ್ನ ವೃತ್ತಿಜೀವನದ ಬದಲಾವಣೆಯ ಕುರಿತು ಹಿಂದೂಸ್ತಾನ್‌ಟೈಮ್ಸ್ ಜತೆ ಮಾತನಾಡಿದ್ದಾರೆ. "ಕನಿಷ್ಠ ಒಂದು ವರ್ಷದ ಮೂಲಭೂತ ಅವಶ್ಯಕತೆ ಪೂರೈಸಲು ಬೇಕಾದ್ದಷ್ಟು ಹಣ ಉಳಿತಾಯ ಮಾಡಿರಬೇಕು" ಎಂದು ಅಸ್ಮಿತಾ ಹೇಳಿದ್ದಾರೆ.
"ಕೆಲಸ ಬಿಡುವ ಮೊದಲು ಮುಂದಿನ 12 ತಿಂಗಳಿಗೆ ಆಗುವಷ್ಟು ಹಣ ಉಳಿತಾಯ ಮಾಡಿ. ನಿಮ್ಮ ಮಂದಿನ ಆಲೋಚನೆ ಕುರಿತು ಸ್ಪಷ್ಟತೆ ಇರಲಿ. ಅಂತಿಮವಾಗಿ ನಿಮ್ಮ ಮೇಲೆ ನಂಬಿಕೆ ಇರಲಿ" ಎಂದು ಅಸ್ಮಿತಾ ಹೇಳಿದ್ದಾರೆ.
2020ರಲ್ಲಿ ಅಸ್ಮಿತಾ ಅವರು ಹವ್ಯಾಸವಾಗಿ ಬೇಕಿಂಗ್ ಆರಂಭಿಸಿದ್ದರು. ಲಾವೊನ್ನೆ ಅಕಾಡೆಮಿ ಆಫ್ ಬೇಕಿಂಗ್ ಸೈನ್ಸ್ ಮತ್ತು ಪೇಸ್ಟ್ರಿ ಆರ್ಟ್ಸ್‌ನಿಂದ ಸರ್ಟಿಫಿಕೇಷನ್ ಪಡೆದರು. ಇದಾದ ಬಳಿಕ ಎಚ್‌ಆರ್ ಆಗಿ ಕೆಲಸ ಆರಂಭಿಸಿದರು.
ಜನವರಿ 12, 2024ರಂದು ಅವರು ಇನ್‌ಸ್ಟಾಗ್ರಾಂನಲ್ಲಿ ತನ್ನ ಬೇಕರಿ ಪುಟ ತೆರೆದು ಮಾಹಿತಿ ಹಂಚಿಕೊಂಡಿದ್ದರು. "6 ತಿಂಗಳ ಹಿಂದೆ ನಾನು ನನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನನ್ನ ಕೆಲಸವನ್ನು ತೊರೆದೆ. ನನ್ನ ಪುಟ್ಟ ಬೇಕರಿ ಕ್ರಂಬಲ್ ಆರಂಭಿಸಿದ್ದೇನೆ. ನಿಮ್ಮ ಮೊದಲ ಆರ್ಡರ್ ಈಗಲೇ ನೀಡಿ!!" ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದರು.
ಬೆಂಗಳೂರು ಅವಕಾಶಗಳ ನಗರ
"ನಾನು 2020ರಲ್ಲಿ ಹವ್ಯಾಸವಾಗಿ ಬೇಕಿಂಗ್ ಆರಂಭಿಸಿದೆ. ನನ್ನ ವೃತ್ತಿಜೀವನದ ಇನ್ನೊಂದು ಬದಿಯಲ್ಲಿ ಏನಿದೆ ಎಂದು ತಿಳಿಯುವ ಕುತೂಹಲ ಇತ್ತು. ಹೀಗಾಗಿ, ಈ ಸಾಹಸಕ್ಕೆ ಮುಂದಾದೆ" ಎಂದು ಅಸ್ಮಿತಾ ಹೇಳಿದ್ದಾರೆ. "ಬೆಂಗಳೂರು ಅವಕಾಶಗಳ ನಗರ. ಇಲ್ಲಿ ಜನರು ರಿಸ್ಕ್ ತೆಗೆದುಕೊಂಡು ಕಂಪನಿಯನ್ನು ಆರಂಭಿಸುವುದು ನನ್ನನ್ನು ಆಕರ್ಷಿಸಿತ್ತು. ಇದು ನನಗೆ ಹೊಸ ಬಿಸ್ನೆಸ್ ಆರಂಭಿಸಲು ಪ್ರೋತ್ಸಾಹ ನೀಡಿದೆ" ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ಪೋಸ್ಟ್‌ನಲ್ಲಿ ಸಾಗರ್ ಹೀಗೆ ಬರೆದಿದ್ದಾರೆ. "ಡೀಪ್‌ಸೀಕ್, ಚಾಟ್‌ಜಿಪಿಟಿ ಮತ್ತು ಕ್ಲೌಡ್‌ಗಳಿಂದ ಡೆವಲಪರ್ ಉದ್ಯೋಗಗಳು ಸಂಪೂರ್ಣವಾಗಿ ಸ್ವಯಂಚಾಲಿತವಾಗುತ್ತಿರುವ ಸಮಯದಲ್ಲಿ ನನಗೆ ಕೆಲಸ ನೀಡಲು ಉದ್ಯೋಗದಾತರು ಇದ್ದಾರೆ" ಎಂದು ತಮ್ಮ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
