ಗಾಸಿಪ್‌ನಿಂದ ದೂರವಿರಿ, ಮುಜುಗರ ಪಡುವುದನ್ನು ನಿಲ್ಲಿಸಿ, ನೆರೆಮನೆಯವರ ಚಿಂತೆ ಬಿಡಿ; ಗೃಹಿಣಿಯರಿಗಾಗಿ ಹೊಸ ವರ್ಷದ ನಿರ್ಣಯಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಗಾಸಿಪ್‌ನಿಂದ ದೂರವಿರಿ, ಮುಜುಗರ ಪಡುವುದನ್ನು ನಿಲ್ಲಿಸಿ, ನೆರೆಮನೆಯವರ ಚಿಂತೆ ಬಿಡಿ; ಗೃಹಿಣಿಯರಿಗಾಗಿ ಹೊಸ ವರ್ಷದ ನಿರ್ಣಯಗಳು

ಗಾಸಿಪ್‌ನಿಂದ ದೂರವಿರಿ, ಮುಜುಗರ ಪಡುವುದನ್ನು ನಿಲ್ಲಿಸಿ, ನೆರೆಮನೆಯವರ ಚಿಂತೆ ಬಿಡಿ; ಗೃಹಿಣಿಯರಿಗಾಗಿ ಹೊಸ ವರ್ಷದ ನಿರ್ಣಯಗಳು

New Year 2025 Resolution: ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್‌ ಸಾಮಾನ್ಯ. ಆದರೆ ಗೃಹಿಣಿಯರು ಇತರರಿಗಿಂತ ಭಿನ್ನವಾಗಿ ಈ ವರ್ಷ ನಿರ್ಣಯಗಳನ್ನು ಕೈಗೊಳ್ಳಬಹುದು. ಇದರಿಂದ ಅವರ, ಮನೆಯವರ ಮಕ್ಕಳ ಭವಿಷ್ಯಕ್ಕೆ ಖಂಡಿತ ಒಳ್ಳೆಯದಾಗುತ್ತದೆ. ಗಾಸಿಪ್‌ನಿಂದ ದೂರವಿರುವುದು, ಅಗತ್ಯವಿಲ್ಲದ ವಿಚಾರಗಳಿಗೆ ಚಿಂತೆ ಬಿಡುವುದನ್ನು ಸೇರಿದಂತೆ ಏನೆಲ್ಲಾ ರೆಸಲ್ಯೂಷನ್‌ ಮಾಡಬಹುದು ನೋಡಿ

ಗೃಹಿಣಿಯರಿಗಾಗಿ ಹೊಸ ವರ್ಷದ ನಿರ್ಣಯಗಳು
ಗೃಹಿಣಿಯರಿಗಾಗಿ ಹೊಸ ವರ್ಷದ ನಿರ್ಣಯಗಳು (PC: Canva)

ಹೊಸ ವರ್ಷ 2025ರ ನಿರ್ಣಯಗಳು: ವರ್ಷಗಳು ಉರುಳುತ್ತಿವೆ, ಮತ್ತೊಂದು ಹೊಸ ವರ್ಷ ಬಂದೇ ಬಿಡ್ತು, ವಾರದಿಂದ ಜನರು ಕಾಯುತ್ತಿದ್ದ ಸಮಯ ಹತ್ತಿರ ಬಂತು. ಹೊಸ ವರ್ಷವನ್ನು ಸ್ವಾಗತಿಸಲು ಪ್ರಪಂಚ ಕಾಯುತ್ತಿದೆ. ಗಡಿಯಾರದ ಮುಳ್ಳು ಸರಿಯಾಗಿ 12 ದಾಟುತ್ತಿದ್ದಂತೆ 2025ನ್ನು ಸ್ವಾಗತಿಸಲು ಎಲ್ಲರೂ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಉಡುಗೊರೆ, ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಹೊಸ ವರ್ಷ ಎಂದರೆ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಬರುವ ಮಾತೇ ಹೊಸ ವರ್ಷದ ನಿರ್ಣಯಗಳ ಬಗ್ಗೆ, ಅಂದರೆ ಹೊಸ ವರ್ಷದ ರೆಸಲ್ಯೂಷನ್‌. ಈ ಬಾರಿ ಏನು ನಾನು ಜಿಮ್‌ಗೆ ಹೋಗಿ ಸಣ್ಣ ಆಗಬೇಕು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕು, ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು, ಟ್ರಾವೆಲಿಂಗ್‌ ಮಾಡಬೇಕು, ಇಂಗ್ಲೀಷ್‌ ಕಲಿಯಬೇಕು ಹೀಗೆ ನೂರಾರು ಆಸೆಗಳು ಇರುತ್ತದೆ. ಇನ್ನು ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಆತ್ಮೀಯರೊಂದಿಗೆ ಎಂಜಾಯ್‌ ಮಾಡುವುದು, ದೂರು ಊರುಗಳಿಗೆ ಹೋಗಿ ಮಧ್ಯರಾತ್ರಿ ಪಾರ್ಟಿ ಮಾಡುವುದು, ಗೇಮ್‌ ಆಡುವುದು, ಡ್ರಿಂಕ್ಸ್‌, ಮೋಜು, ಮಸ್ತಿ ಹೀಗೆ ತಮಗೆ ತೋಚಿದಂತೆ ಹೊಸ ವರ್ಷವನ್ನು ಆಚರಿಸುತ್ತಾರೆ.

ಆದರೆ ದಿನವಿಡೀ ಮನೆಯಲ್ಲೇ ದಿನ ದೂಡುತ್ತಿರುವ ಗೃಹಿಣಿಯರಿಗೆ ಹೊಸ ವರ್ಷ ಹೇಗಿರಬಹುದು? ಇತರ ದಿನಗಳಂತೆ ಜನವರಿ 1 ಕೂಡಾ ನಮಗೆ ಸಾಮಾನ್ಯ ದಿನವೇ ಎಂದು ಹಲವರು ಹೇಳುವುದನ್ನು ನೀವು ಕೇಳಬಹುದು. ಆದರೆ ನೀವೂ ಏಕೆ ಎಲ್ಲರಿಗಿಂತ ವಿಭಿನ್ನವಾಗಿ ಹೊಸ ವರ್ಷವನ್ನು ಆಚರಿಸಬಾರದು? ಹೊಸ ನಿರ್ಣಯಗಳನ್ನು ಏಕೆ ತೆಗೆದುಕೊಳ್ಳಬಾರದು? ನಿಮಗಾಗಿ ಇಲ್ಲಿ ಕೆಲವೊಂದು ಸಲಹೆಗಳಿವೆ.

ಮನೆಯಲ್ಲೇ ಹೊಸ ಉದ್ಯೋಗ ಶುರು ಮಾಡಿ

ಗೃಹಿಣಿಯರು ಬೆಳಗ್ಗಿನಿಂದ ಸಂಜೆವರೆಗೂ ಅಡುಗೆ, ಪಾತ್ರೆ, ಬಟ್ಟೆ, ಕ್ಲೀನಿಂಗ್‌, ಟಿವ ಎಂದು ಸಮಯ ದೂಡುವ ಬದಲಿಗೆ ಮನೆಯಲ್ಲಿ ಹೊಸ ಉದ್ಯೋಗ ಏಕೆ ಪ್ರಾರಂಭಿಸಬಾರದು? ನೀವು ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದನ್ನು ನೀವೇ ಗುರುತಿಸಿಕೊಳ್ಳಿ, ಅಡುಗೆ, ಕಸೂತಿ, ಹೊಲಿಗೆ ಅದರಲ್ಲೇ ಸಣ್ಣದಾಗಿ ಬಿಸ್ನೆಸ್‌ ಶುರು ಮಾಡಿ, ಮೊದಲು ನಿಮ್ಮ ಆತ್ಮೀಯರ ಸಹಾಯ ಪಡೆಯಿರಿ, ನಿಮ್ಮ ಬಳಿ ಆಂಡ್ರಾಯ್ಡ್‌ ಫೋನ್‌ ಇದ್ದರೆ ವಾಟ್ಸಾಪ್‌ ಮೂಲಕ ನಿಮ್ಮ ಬಿಸ್ನೆಸ್‌ ಬಗ್ಗೆ ಇತರರಿಗೆ ಮಾಹಿತಿ ನೀಡಿ. ಇದರಿಂದ ನಿಮ್ಮ ಖರ್ಚಿಗೆ ಸಂಪಾದನೆಯೂ ಆಗಬಹುದು, ಹೊಸತನ್ನು ಕಲಿತಂತೆಯೂ ಆಗುತ್ತದೆ.

ಹೊಸಬರ ಪರಿಚಯ ಮಾಡಿಕೊಳ್ಳಿ

ನೀವು ವಾಕಿಂಗ್‌, ದೇವಸ್ಥಾನ, ರೇಷನ್‌, ನಿಮ್ಮ ಮಕ್ಕಳನ್ನು ಸ್ಕೂಲ್‌ಗೆ ಬಿಡಲು ಹೊರಗೆ ಹೋದಾಗ ಹೊಸ ಜನರ ಪರಿಚಯ ಮಾಡಿಕೊಳ್ಳಿ. ಬೇಗ ಕೆಲಸ ಮುಗಿಸಿ ನಿಮಗೆ ಸಹಾಯವಾಗಬಹುದಾದ ವಿಚಾರಗಳ ಬಗ್ಗೆ ಚರ್ಚಿಸಿ, ಅದು ನಿಮಗಿಂತ ಚಿಕ್ಕವರೂ ಆಗಿರಬಹುದು, ನಿಮ್ಮ ಅಕ್ಕ ಪಕ್ಕದ ಮನೆಯ ವಿದ್ಯಾರ್ಥಿಗಳೂ ಆಗಿರಬಹುದು. ಅವರಿಂದ ಹೊಸ ವಿಚಾರಗಳನ್ನು ಕಲಿತುಕೊಳ್ಳಿ. ಅವರನ್ನು ನಿಮ್ಮ ಮನೆಗೆ ಆಹ್ವಾನಿಸಿ, ಅವರು ಆಹ್ವಾನಿಸಿದರೆ ಅವರ ಮನೆಗೂ ಹೋಗಿ ಬನ್ನಿ.

ಸಾಧ್ಯವಾದಷ್ಟೂ ಬೇಗ ಎದ್ದೇಳಿ

ಕೆಲವು ಗೃಹಿಣಿಯರು ಲೇಟಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುತ್ತಾರೆ, ಆದರೆ ಹೊಸ ವರ್ಷದಿಂದ ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕನಿಷ್ಠ ಬೆಳಗ್ಗೆ 7 ಗಂಟೆ ಒಳಗೆ ಏಳುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ನೀವು ಮನೆ ಕೆಲಸಗಳನ್ನು ಬೇಗ ಮುಗಿಸಬಹುದು. ನಿಮ್ಮ ಇತರ ಕೆಲಸಗಳಿಗೆ ಸಮಯವೂ ಸಿಕ್ಕಂತಾಗುತ್ತದೆ.

ಬೆಳಗ್ಗೆ 9.30ರ ಒಳಗೆ ಬ್ರೇಕ್‌ಫಾಸ್ಟ್‌ ಸೇವಿಸಿ

ಅಡುಗೆ, ಕ್ಲೀನಿಂಗ್‌, ಸ್ನಾನ, ಪೂಜೆ ಮುಗಿಸುವರೆಗೂ ಎಷ್ಟೊ ಮಹಿಳೆಯರು ಬೆಳಗಿನ ಉಪಹಾರ ಸೇವಿಸುವುದಿಲ್ಲ. 12 ಆಗಲೀ 1 ಗಂಟೆ ಆಗಲಿ ಪೂಜೆ ಮುಗಿಯುವವರೆಗೂ ತಿಂಡಿ ತಿನ್ನುವುದಿಲ್ಲ. ಆದರೆ ದೇವರ ಪೂಜೆ ಜೊತೆಗೆ ನಿಮ್ಮ ಆರೋಗ್ಯವೂ ಅಷ್ಟೇ ಮುಖ್ಯ, ಕುಟುಂಬದ ಸದಸ್ಯರ ಸಹಾಯದಿಂದ ಬೇಗ ಕೆಲಸ ಮಾಡಿ, ಪೂಜೆ ಮುಗಿಸಿ 9.30ರ ಒಳಗೆ ಬ್ರೇಕ್‌ಫಾಸ್ಟ್‌ ಸೇವಿಸಿ. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹಾಳಾಗಬಹುದು. ಅದರಲ್ಲೂ ಬಿಪಿ, ಶುಗರ್‌ನಂಥ ಆರೋಗ್ಯ ಸಮಸ್ಯೆ ಇರುವವರಿಗೆ ಅನಾರೋಗ್ಯ ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ಬೇಗ ಕೆಲಸ ಮುಗಿಸಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ತಿಂಡಿ, ಊಟ ಮುಗಿಸಿ.

ಧೈರ್ಯವಾಗಿ ಮಾತನಾಡಿ

ಎಷ್ಟೋ ಗೃಹಿಣಿಯರು ಜನರ ಎದುರು ಮಾತನಾಡಲು ಮುಜುಗರ ಪಡುತ್ತಾರೆ. ಆದರೆ ಇದರಿಂದ ನೀವು ಜೀವನದಲ್ಲಿ ಏನೂ ಸಾಧಿಸಲು ಆಗುವುದಿಲ್ಲ. 2025ರ ರೆಸಲ್ಯೂಷನ್‌ ಎಂಬುವಂತೆ ನಿಮಗೆ ಪರಿಚಯವಿರುವವರ ಜೊತೆ ಮಾತನಾಡಿ, ನಿಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಿ, ಇದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವರ ಮಾತುಗಳನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಏಕೆಂದರೆ ನೀವು ಅವರ ಮಾತುಗಳನ್ನು ಆಲಿಸುವುದರಿಂದ ಅದು ಮತ್ತೊಬ್ಬರಿಗೆ ಖುಷಿ ಎನಿಸಬಹುದು.

ಗಾಸಿಪ್‌ ನಿಲ್ಲಿಸಿ

ಕೆಲವರಿಗೆ ಗಾಸಿಪ್‌ ಮಾಡುವ ಅಭ್ಯಾಸವಿರುತ್ತದೆ. ಆದರೆ ಹೀಗೆ ಮಾಡುವುರಿಂದ ಮತ್ತೊಬ್ಬರಿಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಮರೆಯಬೇಡಿ, ಮುಂದೆ ಅದು ನಿಮಗೂ ಮುಳ್ಳಾಗಬಹುದು, ಆದ್ದರಿಂದ ಮತ್ತೊಬ್ಬರ ಬಗ್ಗೆ ಮಾತನಾಡುವುದನ್ನು ಬಿಡಿ, ಅದೇ ಸಮಯವನ್ನು ನಿಮ್ಮ ಬೆಳವಣಿಗೆಗೆ ಮೀಸಲಿಡಿ. ಮತ್ತೊಬ್ಬರೊಂದಿಗೆ ಮನಸ್ತಾಪ ಇದ್ದಲ್ಲಿ, ಮತ್ತೊಬ್ಬರಿಂದ ನಿಮಗೆ ಏನೇ ಸಮಸ್ಯೆ ಆಗುತ್ತಿದ್ದಲ್ಲಿ ನೇರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ, ಆದರೆ ಬೆನ್ನ ಹಿಂದೆ ಮಾತನಾಡುವುದನ್ನು ಬಿಡಿ.

ನೆರೆಮನೆಯವರ ಚಿಂತೆ ಬೇಡ

ಇನ್ನೂ ಕೆಲವರಿಗೆ ನೆರೆಮನೆಯವರು, ಸಂಬಂಧಿಕರ ಸಂಪತ್ತಿನ ಬಗ್ಗೆಯೇ ಹೆಚ್ಚು ಚಿಂತೆ. ಆದರೆ ಮತ್ತೊಬ್ಬರ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದರ ಬದಲಿಗೆ ನಿಮ್ಮ ಜೀವನದಲ್ಲಿ ಏನು ಆಗುತ್ತಿದೆ, ನೀವು ಮುಂದೆ ಬರಲು ಏನು ಮಾಡಬಹುದು ಎಂಬುದರ ಕಡೆ ಗಮನ ಹರಿಸಿ, ದೇವರು ನಿಮಗೆ ಕೊಟ್ಟಿರುವದರಲ್ಲೇ ತೃಪ್ತಿ ಪಡಿ. ಕೆಲವೊಂದು ವಿಚಾರಗಳಲ್ಲಿ ನೀವು ಮತ್ತೊಬ್ಬರಿಗೆ ಮಾದರಿ ಆಗಬೇಕಿರುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತು ನೆನಪಿರಲಿ.

ಅಕ್ಷರ ಅಭ್ಯಾಸ ಮಾಡಿ

ನೀವು ವಿದ್ಯಾವಂತರಾದರೆ ಒಂದೆರಡು ಮಕ್ಕಳಿಗೆ ಟ್ಯೂಷನ್‌ ಹೇಳಿಕೊಡಿ, ಅದರಿಂದ ನಿಮ್ಮ ಜ್ಞಾನವೂ ಹೆಚ್ಚುತ್ತದೆ, ಪಾಕೆಟ್‌ ಮನಿಗೆ ಕಾಸೂ ಆಗುತ್ತದೆ, ಇತರ ಮಕ್ಕಳಿಗೆ ಪಾಠ ಹೇಳಲು ಸಾಧ್ಯವಾಗದಿದ್ದರೆ ನಿಮ್ಮ ಮಕ್ಕಳಿಗೇ ಹೇಳಿಕೊಡಿ. ಒಂದು ವೇಳೆ ನೀವು ಅನಕ್ಷರಸ್ಥರಾದರೆ ಅಕ್ಷರಾಭ್ಯಾಸ ಮಾಡಿ, ಆಗಿನ ಶಿಕ್ಷಣಕ್ಕೂ, ಈಗಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಈಗಿನ ಮಕ್ಕಳ ಸಿಲಬಸ್‌ನಿಂದ ಕೂಡಾ ನೀವು ಸಾಕಷ್ಟು ಕಲಿಯಬಹುದು, ಹೊಸ ವಿಚಾರಗಳನ್ನು ನಿಮ್ಮ ಮಕ್ಕಳಿಂದಲೇ ಕೇಳಿ ತಿಳಿದುಕೊಳ್ಳಿ. ಇದರಿಂದ ನಿಮಗೆ ಬಹಳಷ್ಟು ಸಹಾಯವಾಗುತ್ತದೆ.

ಪ್ರವಾಸಕ್ಕೆ ಹೋಗಿ ಬನ್ನಿ

ಎಷ್ಟೋ ಮಹಿಳೆಯರಿಗೆ ಮನೆ ಸುತ್ತಮುತ್ತ, ಪರಿಚಯಸ್ಥರು , ನೆಂಟರ ಮನೆ ಬಿಟ್ಟರೆ ಎಲ್ಲೂ ಹೊರಗೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಿರುವುದಿಲ್ಲ. ನೀವು ಇದುವರೆಗೂ ಹೊರಗೆ ಪ್ರವಾಸ ಹೋಗಿಲ್ಲದಿದ್ದರೆ ನಿಮ್ಮ ಮನೆಯವರೊಂದಿಗೆ ಮಾತನಾಡಿ ಅವರೊಂದಿಗೆ ಹೋಗಿ ಬನ್ನಿ, ಹೊಸ ಸ್ಥಳ ನೋಡಿದಂತೆ ಆಗುತ್ತದೆ, ನಿಮ್ಮ ಮೂಡ್‌ ರಿಫ್ರೆಶ್‌ ಆಗುತ್ತದೆ.

ವಿದ್ಯಾಭ್ಯಾಸ ಮುಂದುವರೆಸಿ

ನಿಮಗೆ ಓದಿನಲ್ಲಿ ಆಸಕ್ತಿ ಇದ್ದು ಕಾರಣಾಂತರಗಳಿಂದ ಅದನ್ನು ಮುಂದುವರೆಸಲು ಇಷ್ಟು ದಿನಗಳು ಸಾಧ್ಯವಾಗದಿದ್ದರೆ, ನಿಮ್ಮ ಮನೆಯವರ ಬೆಂಬಲ ಇದ್ದರೆ ದೂರ ಶಿಕ್ಷಣದ ಮೂಲಕ ವಿದ್ಯಾಭ್ಯಾಸ ಮಾಡಿ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬರೆಯಿರಿ, ಪ್ರೋತ್ಸಾಹ ಇದ್ದರೆ ಮುಂದೆ ಕಾಲೇಜಿಗೆ ಕೂಡಾ ಹೋಗಿಬರಬಹುದು.

ಮಕ್ಕಳಿಗೆ ಅಡುಗೆ ಹೇಳಿಕೊಡಿ

ಅಡುಗೆ ಕೂಡಾ ಒಂದು ವಿದ್ಯೆ. ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ನಿಮ್ಮ ಮನೆ ಕೆಲಸ ಮುಗಿಸಿ, ಅವರ ಹೋಂವರ್ಕ್‌, ಓದು ಮುಗಿದ ನಂತರ ಅವರಿಗೆ ಅಡುಗೆ ಹೇಳಿಕೊಡಿ. ಮನೆ ಕೆಲಸದ ಬಗ್ಗೆಯೂ ತಿಳಿಸಿಕೊಡಿ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ. ರಜೆ ಅಥವಾ ನಿಮ್ಮ ಅನಾರೋಗ್ಯದ ಸಮಯದಲ್ಲಿ ಇದು ಖಂಡಿತ ಸಹಾಯಕ್ಕೆ ಬರುತ್ತದೆ.

ಸಂಗೀತ, ಭರತನಾಟ್ಯ ಕಲಿಯಿರಿ

ಎಷ್ಟೋ ಮಹಿಳೆಯರಿಗೆ ಸಂಗೀತ, ಭರತನಾಟ್ಯ ಕಲಿಯುವ ಆಸೆ ಇರುತ್ತದೆ, ಆದರೆ ಬೆಂಬಲ ಇಲ್ಲದೆಯೂ, ಸಮಯದ ಅಭಾವದಿಂದಲೋ ಅದನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಇನ್ನಾದರೂ ನಿಮ್ಮ ಆಸೆ, ಕನಸುಗಳಿಗಾಗಿ ಸಮಯ ಕೊಡಿ, ನಿಮಗೆ ಇಷ್ಟವಾದದ್ದನ್ನು ಕಲಿಯಿರಿ.

ಹೊಸ ವರ್ಷ ಹೊಸ ರೆಸಲ್ಯೂಷನ್‌ ನಿಮ್ಮ ಬದುಕಲ್ಲಿ ಬದಲಾವಣೆ ತರಲಿ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು

------

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner