New Year 2024: ಹೊಸ ವರ್ಷದ ಸ್ವಾಗತಕ್ಕೆ ಹೊಸ ಸ್ಥಳಗಳ ಹುಡುಕಾಟದಲ್ಲಿದ್ದೀರಾ? ಇಲ್ಲಿವೆ ನೋಡಿ
New Year 2024: ಹೊಸ ವರ್ಷದ ಸಂಭ್ರಮಾಚರಣೆಯನ್ನು ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳುವ ಮೂಲಕ ಆಚರಿಸಬೇಕು ಎಂಬ ಪ್ಲಾನ್ನಲ್ಲಿ ನೀವಿದ್ದೀರಾ..? ಹಾಗಾದರೆ ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಲು ಹೇಳಿ ಮಾಡಿಸಿದಂತಹ ಸ್ಥಳಗಳ ವಿವರ ಇಲ್ಲಿದೆ
New Year 2024: ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. 2024ನೇ ವರ್ಷವನ್ನು ಇನ್ನಷ್ಟು ಸ್ಮರಣೀಯ ವರ್ಷವೆಂದು ಮಾಡಬೇಕೆಂದು ನೀವು ಎಂದುಕೊಂಡಿದ್ದರೆ ಕುಟುಂಬಸ್ಥರ ಜೊತೆ ಸೇರಿ ಫ್ಯಾಮಿಲಿ ಟೂರ್ಗೆ ತೆರಳಲು ಇನ್ನೂ ಕಾಲ ಮಿಂಚಿಲ್ಲ. ಹೊಸ ವರ್ಷವನ್ನು ಪ್ರವಾಸದ ನಡುವೆಯೇ ಕುಟುಂಬಸ್ಥರೆಲ್ಲ ಒಟ್ಟು ಸೇರಿ ಸ್ವಾಗತಿಸಿದರೆ ಅದಕ್ಕಿಂತ ಸ್ಮರಣೀಯ ಕ್ಷಣ ನಿಮಗೆ ಇನ್ನೊಂದು ಸಿಗಲಿಕ್ಕಿಲ್ಲ. ನೀವು ಕೂಡ 2023ರ ಕೊನೆಯ ವೀಕೆಂಡ್ನಲ್ಲಿ ಕುಟುಂಬಸ್ಥರೆಲ್ಲ ಸೇರಿ ಎಲ್ಲಾದರೂ ಪ್ರವಾಸಕ್ಕೆ ತೆರಳಬೇಕು ಎಂದುಕೊಂಡಿದ್ದರೆ ಇಲ್ಲೊಂದಿಷ್ಟು ಸಲಹೆಗಳು ನಿಮಗೆ ಸಿಗಲಿವೆ.
ನೈನಿತಾಲ್
ಉತ್ತರಾಖಂಡ್ನ ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಮಜಾವೇ ಬೇರೆ. ಡಿಸೆಂಬರ್ ಹಾಗೂ ಜನವರಿ ಸಮಯದಲ್ಲಿ ಇಲ್ಲಿನ ಚುಮು ಚುಮು ಚಳಿ ನಿಮಗೆ ನಿಜವಾಗಿಯೂ ಖುಷಿ ನೀಡಲಿದೆ. ಈ ಸಮಯದಲ್ಲಿ ಹಿಮಪಾತ ಕೂಡ ಇರುವುದರಿಂದ ನೀವು ಸಖತ್ ಎಂಜಾಯ್ ಮಾಡಬಹುದು. ಇಲ್ಲಿನ ನೈನಾ ದೇವಿ ದೇವಸ್ಥಾನ ಹಾಗೂ ನೈನಿತಾಲ್ ಸರೋವರ ಕೂಡ ಈ ಪ್ರವಾಸದ ಕೇಂದ್ರ ಬಿಂದುಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಎಲ್ಲಾ ಪ್ರದೇಶಗಳಿಗೆ ತೆರಳಲು ನಿಮಗೆ ಸುಲಭವಾಗು ಕ್ಯಾಬ್ ವ್ಯವಸ್ಥೆ ಸಿಗಲಿದೆ.
ರಣತಂಬೋರ್ ರಾಷ್ಟ್ರೀಯ ಉದ್ಯಾನವನ
ಇದು ಕೂಡಾ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಸಾಕಷ್ಟು ವನ್ಯ ಜೀವಿಗಳನ್ನು ಅದರಲ್ಲೂ ವಿಶೇಷವಾಗಿ ಹುಲಿಗಳನ್ನು ಅನ್ವೇಷಿಸಬಹುದಾಗಿದೆ. ಐಷಾರಾಮಿ ಹೆರಿಟೇಜ್ ರೆಸಾರ್ಟ್ಗಳು, ಅತ್ಯಾಧುನಿಕ ವಸತಿ ವ್ಯವಸ್ಥೆ, ರಾಜಸ್ಥಾನದ ರುಚಿಯಾದ ಪಾಕ ವಿಧಾನ ನಿಮಗೆ ನಿಜಕ್ಕೂ ಮಜಾ ನೀಡಲಿದೆ. ಹನಿಮೂನ್ಗೆ ಹೋಗಬೇಕೆಂದು ಪ್ಲಾನ್ ಮಾಡಿದವರೂ ಸಹ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.
ವಾರಣಾಸಿ
ಭಾರತದ ಪುರಾತನ ನಗರಗಳ ಪೈಕಿ ಉತ್ತರ ಪ್ರದೇಶದ ವಾರಣಾಸಿ ಕೂಡ ಒಂದು . ಇಲ್ಲಿನ ದುರ್ಗಾ ದೇವಾಲಯ ಹಾಗೂ ಕಾಶಿ ವಿಶ್ವನಾಥ ದೇಗುಲಗಳು ಫ್ಯಾಮಿಲಿ ಟೂರ್ಗೆ ಹೇಳಿ ಉತ್ತಮ ಸ್ಥಳ ಎನಿಸಲಿದೆ. ಇನ್ನೂ ಅನೇಕ ಐತಿಹಾಸಿಕ ದೇಗುಲಗಳನ್ನು ನೀವು ಅನ್ವೇಷಣೆ ಮಾಡಬಹುದಾಗಿದೆ. ಗಂಗಾ ನದಿಯಲ್ಲಿ ದೋಣಿ ವಿಹಾರವನ್ನೂ ನೀವು ಮಾಡಬಹುದಾಗಿದೆ. ಇಲ್ಲಿನ ಬನಾರಸಿ ಸೀರೆಗಳು ಮಹಿಳೆಯರಿಗೆ ಇಷ್ಟವಾಗದೇ ಇರದು.
ಜೈಪುರ , ರಾಜಸ್ಥಾನ
ರಾಜಸ್ಥಾನದ ರಾಜಧಾನಿ ಎನಿಸಿರುವ ಜೈಪುರ ಕೂಡ ನಿಮ್ಮ ವರ್ಷಾಂತ್ಯದ ಪ್ರವಾಸಕ್ಕೆ ಉತ್ತಮ ಆಯ್ಕೆಯಾಗಿದೆ. ರಾಜಸ್ಥಾನದ ರಾಜಮನೆತನಗಳ ವೈಭವವನ್ನು ನೀವು ಈ ಪ್ರವಾಸದ ಮೂಲಕ ತಿಳಿದುಕೊಳ್ಳಬಹುದು. ಜನವರಿಯಲ್ಲಿ ಜೈಪುರದಲ್ಲಿ ಪ್ರಖ್ಯಾತ ಜೈಪುರ ಸಾಹಿತ್ಯ ಉತ್ಸವ ಕೂಡ ನಡೆಯುತ್ತದೆ. ಈ ಸಮಯದಲ್ಲಿ ನೀವು ಜೈಪುರದ ರಾಜ ವೈಭವವನ್ನು ಇನ್ನಷ್ಟು ಕಣ್ತುಂಬಿಕೊಳ್ಳಬಹುದಾಗಿದೆ.
ಮಾಮಲ್ಲಾಪುರಂ, ಮಧುರೈ
ಜನವರಿಯಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದುಕೊಳ್ಳುವವರಿಗೆ ತಮಿಳುನಾಡಿನ ಈ ಪ್ರದೇಶಗಳು ಒಳ್ಳೆಯ ಸ್ಥಳವಾಗಿವೆ. ಮಮಲ್ಲಾಪುರಂ ನೃತ್ಯೋತ್ಸವ ಹಾಗೂ ಮಧುರೈನ ಪೊಂಗಲ್ ಆಚರಣೆಗಳಿಗೆ ನೀವು ಸಾಕ್ಷಿಯಾಗಬಹುದಾಗಿದೆ. ಇಲ್ಲಿನ ಸ್ಥಳೀಯ ಪಾಕ ವಿಧಾನ ಕೂಡ ಬಾಯಲ್ಲಿ ನೀರು ತರಿಸಲಿದೆ. ಪೊಂಗಲ್ ಸಮಯದಲ್ಲಿ ಇಲ್ಲಂತೂ ರಂಗೋಲಿಗಳ ಹಬ್ಬವೇ ಇರಲಿದೆ. ಇವುಗಳನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ ಎನಿಸಲಿದೆ.