ರಿಮಾಜಿನ್ಡ್ ಬಗ್ಗೆ ನಿಮಗೆ ಗೊತ್ತೆ? ಹಳೆಯ ಬಟ್ಟೆಗಳನ್ನು ಹೇಗೆಲ್ಲ ಬಳಸಬಹುದು ಎನ್ನುವುದಕ್ಕೆ ಇವರು ಎಲ್ಲರಿಗೂ ಮಾದರಿ
ಹಳೆಯ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಬಳಸಿಕೊಂಡು ಯಾವೆಲ್ಲಾ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಶೈಲಜಾ ರಂಗರಾಜನ್ ಎಂಬುವರು ತೋರಿಸಿಕೊಟ್ಟಿದ್ದಾರೆ. ಇವರ ರಿಮಾಜಿನ್ಡ್ ಹೇಗೆ ಕೆಲಸ ಮಾಡುತ್ತೆ ಅನ್ನೋದರ ವಿವರ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್‌ಫೈಲ್ಡ್ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಇಲ್ಲಿನ ಐಟಿ-ಬಿಟಿ ಕಂಪನಿಗಳು, ರುಚಿಯಾದ ವೆರೈಟಿ ಆಹಾರದ ಹೋಟೆಲ್‌ಗಳು ಹಾಗೂ ಸಾಲು ಸಾಲಾಗಿ ನಿಂತಿರುವ ಮಾಲ್‌ಗಳು. ಟೆಕ್ಕಿಗಳಿಗೆ ಪ್ರಮುಖ ತಾಣವಾಗಿರುವ ವೈಟ್‌ಫೀಲ್ಡ್‌ನಲ್ಲಿ ಸಂಸ್ಥೆಯೊಂದು ಸದ್ದಿಲ್ಲದೆ ಹಳೆಯ ಬಟ್ಟೆಗಳು ಹಾಗೂ ಇತರೆ ಉತ್ಪನ್ನಗಳನ್ನು ಹೇಗೆಲ್ಲಾ ಬಳಸಿಕೊಂಡು ಗೃಹೋಪಯೋಗಿ ವಸ್ತುಗಳನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಈ ಸಂಸ್ಥೆಯ ಹೆಸರು ರಿಮ್ಯಾಜಿನ್ಡ್. ವಸ್ತುಗಳ ಮರು ಬಳಕೆ ಮೂಲಕ ನಗರ ಪ್ರದೇಶದ ಬಡವರು ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗವನ್ನು ನೀಡುತ್ತಿದೆ.
ಶೈಲಜಾ ರಂಗರಾಜನ್ ಎಂಬುವರು 2016 ರಲ್ಲಿ ರಿಮ್ಯಾಜಿನ್ಡ್ ಎಂಬ ಸಂಸ್ಥೆಯನ್ನು ಕಟ್ಟಿ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಸುತ್ತಮುತ್ತಲಿನ ಕಸದಿಂದ ರಸವನ್ನು ತೆಗೆಯುತ್ತಿದ್ದಾರೆ. ಹೌದು ಇವರು ಹಳೆಯ ಬಟ್ಟೆಗಳನ್ನು ಬಳಸಿ ಮನೆಯ ಅಲಂಕಾರದ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ತಯಾರಕರು ಮತ್ತು ಮಾರಾಟಗಾರರ ಒಟ್ಟುಗೂಡಿಸುವ ಕೊಂಡಿಯಾಗಿ ಇವರು ಕೆಲಸ ಮಾಡುತ್ತಿದ್ದು, ಇವರು ತಯಾರಿಸುತ್ತಿರುವ ಪರಿಸರಕ್ಕೆ ಮಾರಕವಲ್ಲದ ವಸ್ತುಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಹೀಗೂ ಮಾಡಬಹುದೇ ಎಂದು ಅಚ್ಚರಿಯಿಂದ ನೋಡುವಂತೆ ಮಾಡಿದ್ದಾರೆ.
ತಮ್ಮ ಸಂಸ್ಥೆಯ ಬಗ್ಗೆ ಮಾತನಾಡಿರುವ ಶೈಲಜಾ ರಂಗರಾಜನ್ ಅವರು, ರಿಮ್ಯಾಜಿನ್ಡ್ ಘನ ತ್ಯಾಜ್ಯ ನಿರ್ವಹಣೆಯಲ್ಲಿ (ಎಸ್‌ಡಬ್ಲ್ಯೂಎಂ) ನನ್ನ ಸ್ವಯಂ ಪ್ರೇರಿತ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಎಸ್‌ಡಬ್ಲ್ಯೂಎಂ ಸ್ವಯಂ ಸೇವಕರಾಗಿ ಕೆಲಸ ಮಾಡುವಾಗ ಇಂದು ನಾವು ಉತ್ಪಾದಿಸುತ್ತಿರುವ ಕಸದಿಂದಾಗಿ ನಾವೇ ಸೃಷ್ಟಿಸುತ್ತಿರುವ ಬಿಕ್ಕಟ್ಟನ್ನು ನೋಡಿದೆ. ಆಗ ಇದಕ್ಕೊಂದು ಪರಿಣಾಮ ಕಂಡುಕೊಳ್ಳಬೇಕೆಂದು ನಿರ್ಧಾರ ಮಾಡಿ ರಿಮ್ಯಾಜಿನ್ಡ್ ಸಂಸ್ಥೆಯನ್ನು ಕಟ್ಟಿರುವುದಾಗಿ ಹೇಳಿದ್ದಾರೆ.
ಹೊಸದಾಗಿ ಸಂಪನ್ಮೂಲಗಳನ್ನು ಬಳಸಿಕೊಳ್ಳದೆ ತಿರಸ್ಕರಿಸುವ ಉತ್ಪಗಳಿಗೆ ಹೊಸ ಜೀವವನ್ನು ಕೊಡುವ ನಿರ್ಧಾರ ಮಾಡಿದರು. ಈ ಭಾಗವೇ ಇದೀಗ ಹಳೆಯ ಬಟ್ಟೆಗಿಂದ ತಯಾರಿಸುತ್ತಿರುವ ಉತ್ಪನ್ನಗಳು. ಇವರ ಯೋಚನೆ, ಯೋಜನೆಯಿಂದ ನಗರ ಹಾಗೂ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಉದ್ಯೋಗವೂ ಸಿಕ್ಕಿದೆ. ಜೀವನ ನಡೆಸಲು ಆರ್ಥಿಕವಾಗಿ ನೆರವಾಗುತ್ತಿದ್ದಾರೆ.
ಇನ್ನು ರಿಮ್ಯಾಜಿನ್ಡ್‌ನಿಂದ ತಯಾರಿಸಿರುವ ಉತ್ಪನ್ನಗಳು ಖರೀದಿಸುವ ಗ್ರಾಹಕರು ಕೂಡ ಸಂತಸವನ್ನು ವ್ಯಕ್ತಪಡಿಸುತ್ತಿದ್ದು, ತ್ಯಾಜ್ಯವನ್ನು ಭೂಮಿಗೆ ಹೋಗದಂತೆ ಬಿಡಲು ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ ಎಂದು ಶೈಲಜಾ ಅವರೇ ವಿವರಿಸಿದ್ದಾರೆ. ಉತ್ಪನ್ನಗಳನ್ನು ತಯಾರಿಸಲು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಜೊತೆಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ