ಇಂದಿನಿಂದ ನ. 27ವರೆಗೆ ಭೀಷ್ಮ ಪಂಚಕ; ಗಂಗಾಪುತ್ರನು ಪಾಂಡವರಿಗೆ ಉಪದೇಶ ಬೋಧಿಸಿದ ಈ 5 ದಿನಗಳ ವೈಶಿಷ್ಟ್ಯವೇನು?
Bhishma Panchak: ಭೀಷ್ಮನ ಅಂತ್ಯ ಅರ್ಜುನನಿಂದ ಆಗಿರುತ್ತದೆ. ಆದರೆ ಇಚ್ಛಾ ಮರಣಿ ಆದ ಭೀಷ್ಮನು ಮಹಾಭಾರತ ಯುದ್ಧದ ಕೊನೆಯವರೆಗೂ ಜೀವಂತವಾಗಿರುತ್ತಾರೆ. ಯುದ್ಧ ಮುಗಿದ ನಂತರ ಶ್ರೀ ಕೃಷ್ಣ ಪರಮಾತ್ಮನು ಪಾಂಡವರನ್ನು ಭೀಷ್ಮನ ಬಳಿಗೆ ಕರೆದೊಯ್ದು ಪಾಂಡವರಿಗೆ ಉಪದೇಶ ನೀಡುವಂತೆ ಹೇಳುತ್ತಾನೆ.
Bhishma Panchak: ಭೀಷ್ಮ ಪಂಚಕ, ವ್ರತದ ಹೆಸರೇ ಹೇಳುವಂತೆ ಪಂಚ ಎಂದರೆ ಐದು ಎಂದು ಅರ್ಥ. ಪಂಚಕ ಎಂದರೆ ಐದು ದಿನಗಳು. ಅಂದರೆ ಭೀಷ್ಮ ಪಂಚಕ ವ್ರತವು ಐದು ದಿನಗಳ ಕಾಲ ನಡೆಯುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಭೀಷ್ಮ ಪಂಚಕವು ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಆರಂಭವಾಗುತ್ತದೆ. ಈ ವ್ರತವು ಏಕಾದಶಿಯಿಂದ ಹುಣ್ಣಿಮೆಯವರೆಗೂ ಇರುತ್ತದೆ.
ನವೆಂಬರ್ 23 ರಿಂದ 27ವರೆಗೆ ಭೀಷ್ಮ ಪಂಚಕ
ಈ ಬಾರಿ ಭೀಷ್ಮ ಪಂಚಕ ವ್ರತವು ನವೆಂಬರ್ 23, ಗುರುವಾರ (ಇಂದಿನಿಂದ) ಆರಂಭವಾಗಿ ಸೋಮವಾರ 27ರಂದು ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಉತ್ಥಾನ ದ್ವಾದಶಿ, ತುಳಸಿ ಪೂಜೆ, ಮಹಾಪ್ರದೋಷ, ವೈಕುಂಠ ಚತುರ್ದಶಿ, ಶಿವದೀಪೋತ್ಸವದಂತಹ ಆಚರಣೆಗಳು ಇರುತ್ತದೆ. ಈ ಅವಧಿಯಲ್ಲಿ ತಾರಾಬಲ ಚಂದ್ರಬಲಗಳನ್ನು ಅನುಸರಿಸಿ ಶಿವ, ವಿಷ್ಣು ಮತ್ತು ಇನ್ನಾವುದೇ ದೇವತೆಗಳ ಮೂಲ ಮಂತ್ರ ದೀಕ್ಷೆಯನ್ನು ಪಡೆಯಬಹುದು. ಈ ಬಗ್ಗೆ ನಾರದರು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ. ಸ್ಕಂದ ಪುರಾಣದಲ್ಲಿ ತಿಳಿಸಿರುವಂತೆ ಈ ಅವಧಿಯಲ್ಲಿ ಯಾರೇ ಆಗಲಿ, ತುಳಸಿಮಣಿಯ ಸರವನ್ನು ಭಗವಾನ್ ವಿಷ್ಣುವಿಗೆ ಅರ್ಪಿಸಿ, ತಾವು ಧರಿಸಿದ್ದಲ್ಲಿ ಶ್ರೀಕೃಷ್ಣಪರಮಾತ್ಮನ ಅನುಗ್ರಹ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ವಿವರಗಳು ನಿರ್ಣಯ ಸಿಂಧು ಗ್ರಂಥದಲ್ಲಿ ದೊರೆಯುತ್ತವೆ. ಭೀಷ್ಮ ಪಂಚಕ ವ್ರತದ ಅವಧಿಯಲ್ಲಿ ಪಿತೃಪೂಜೆ ಮಾಡುವುದು ಶ್ರೇಷ್ಠ. ತಂದೆ ತಾಯಿಗಳ ಆಶೀರ್ವಾದ ಪಡೆದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ.
ರಕ್ತಸಂಬಂಧಿಗಳ ವಿರುದ್ಧ ಯುದ್ದ ಮಾಡುವ ಪಾಂಡವರು
ಕೆಲವೊಂದು ಗ್ರಂಥಗಳಲ್ಲಿ ಈ ಪೂಜೆಯನ್ನು ನಿರ್ದಿಷ್ಟ ಸಮುದಾಯದ ಜನರು ಮಾಡಬೇಕು ಎನ್ನಲಾಗಿದೆ. ಆದರೆ ದೇವರ ಪೂಜೆಯನ್ನು ಒಳ್ಳೆಯ ಮನಸ್ಸು ಭಕ್ತಿ ಇರುವ ಯಾರು ಬೇಕಾದರೂ ಈ ವ್ರತವನ್ನು ಆಚರಿಸಬಹುದು. ಈ ವ್ರತದ ಹಿಂದೆ ಮಹಾಭಾರತದ ಕಥೆಯಿದೆ. ಮಹಾಭಾರತ ಯುದ್ಧವು 18 ದಿನಗಳ ಕಾಲ ನಡೆಯುತ್ತದೆ. ಮಹಾಭಾರತ ಯುದ್ಧದ ಅಂತ್ಯದಲ್ಲಿ ಪಾಂಡವರಿಗೆ ಜಯ ಲಭಿಸುತ್ತದೆ. ತಮ್ಮ ರಕ್ತ ಸಂಬಂಧಿಗಳಾದ ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯ ಮುಂತಾದವರ ವಿರುದ್ಧವೇ ಪಾಂಡವರು ಯುದ್ಧ ಮಾಡಿರುತ್ತಾರೆ.
ಪಾಂಡವರಿಗೆ ರಾಜಧರ್ಮ ಉಪದೇಶಿಸುವ ಭೀಷ್ಮ
ಭೀಷ್ಮನ ಅಂತ್ಯವೂ ಅರ್ಜುನನಿಂದ ಆಗಿರುತ್ತದೆ. ಆದರೆ ಇಚ್ಛಾ ಮರಣಿ ಆದ ಭೀಷ್ಮನು ಮಹಾಭಾರತ ಯುದ್ಧದ ಕೊನೆಯವರೆಗೂ ಜೀವಂತವಾಗಿರುತ್ತಾರೆ. ಯುದ್ಧ ಮುಗಿದ ನಂತರ ಶ್ರೀ ಕೃಷ್ಣ ಪರಮಾತ್ಮನು ಪಾಂಡವರನ್ನು ಭೀಷ್ಮನ ಬಳಿಗೆ ಕರೆದೊಯ್ದು ಪಾಂಡವರಿಗೆ ಉಪದೇಶ ನೀಡುವಂತೆ ಹೇಳುತ್ತಾನೆ. ಇದನ್ನು ಒಪ್ಪಿದ ಭೀಷ್ಮ ಐದು ದಿನಗಳ ಕಾಲ ರಾಜಧರ್ಮ, ಸಮುದಾಯ ಧರ್ಮ ಮುಂತಾದವುಗಳನ್ನು ಪಾಂಡವರಿಗೆ ಉಪದೇಶಿಸುತ್ತಾನೆ.
ಭೀಷ್ಮ ಪಂಚಕ ವ್ರತ ಆಚರಿಸಿದರೆ ಮೋಕ್ಷ
ಭೀಷ್ಮನ ಉಪದೇಶದಿಂದ ಸಂತೋಷಗೊಂಡ ಶ್ರೀ ಕೃಷ್ಣನು ಪಾಂಡವರಿಗೆ ದಿನನಿತ್ಯ ಧರ್ಮವನ್ನು ಬೋಧಿಸಿದ ಈ ಐದು ದಿನಗಳನ್ನು ಭೀಷ್ಮ ಪಂಚಕ ವ್ರತ ಎಂಬ ಹೆಸರಿನಿಂದ ಕರೆಯುತ್ತಾನೆ. ಈ ವ್ರತವನ್ನು ಆಚರಿಸುವವರು ಲೌಕಿಕ ಜೀವನದಲ್ಲಿ ವಿವಿಧ ಸುಖಗಳನ್ನು ಅನುಭವಿಸಿದ ನಂತರ ಮೋಕ್ಷವನ್ನು ಪಡೆಯುತ್ತಾರೆ. ಭೀಷ್ಮ ಪಂಚಕದ ವೇಳೆಯಲ್ಲಿ ಒಟ್ಟಾರೆ ಐದು ದಿನಗಳವರೆಗೆ ಉಪವಾಸ ಆಚರಿಸಬೇಕು. ಕೆಲವರು ಅರ್ಘ್ಯವನ್ನು ಅರ್ಪಿಸಲು, ನೀರಿನಲ್ಲಿ ಸಿಂಧೂರ ಮತ್ತು ಹೂಗಳನ್ನು ಬೆರೆಸುತ್ತಾರೆ.