ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ: ಹೊಸ ಕಾರು ಖರೀದಿಸಲು ಎಷ್ಟು ಖರ್ಚು ಮಾಡಬೇಕಾಗುತ್ತದೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ: ಹೊಸ ಕಾರು ಖರೀದಿಸಲು ಎಷ್ಟು ಖರ್ಚು ಮಾಡಬೇಕಾಗುತ್ತದೆ?

ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ: ಹೊಸ ಕಾರು ಖರೀದಿಸಲು ಎಷ್ಟು ಖರ್ಚು ಮಾಡಬೇಕಾಗುತ್ತದೆ?

BMW Car Price: ಹೊಸ ವರ್ಷದಲ್ಲಿ ಬಿಎಂಡಬ್ಲ್ಯು ಕಾರನ್ನು ಖರೀದಿಸಲು ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಹೊಸ ದರಗಳು ಜನವರಿ 1, 2025 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. (ವರದಿ: ವಿನಯ್‌ ಭಟ್)

ದುಬಾರಿ ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ
ದುಬಾರಿ ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ (PC: BMW India)

ಬಿಎಂಡಬ್ಲ್ಯು ಇಂಡಿಯಾ, ಜರ್ಮನ್ ಐಷಾರಾಮಿ ಕಾರು ತಯಾರಕ BMW ನ ಭಾರತೀಯ ಘಟಕವಾಗಿದ್ದು, ಜನವರಿ 2025 ರಿಂದ ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ಮೂರು ಪ್ರತಿಶತದಷ್ಟು ಹೆಚ್ಚಿಸಲಿದೆ. ಅಂದರೆ ಹೊಸ ವರ್ಷದಲ್ಲಿ ಬಿಎಂಡಬ್ಲ್ಯು ಕಾರನ್ನು ಖರೀದಿಸಲು ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಹೊಸ ದರಗಳು ಜನವರಿ 1, 2025 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. PTI ಸುದ್ದಿಗಳ ಪ್ರಕಾರ, ಕಂಪನಿಯ ಕಾರುಗಳ ಶ್ರೇಣಿಯು ಭಾರತದಲ್ಲಿ 2-ಸಿರೀಸ್ ಗ್ರ್ಯಾನ್ ಕೂಪೆ, 3- ಸಿರೀಸ್ ಲಾಂಗ್ ವೀಲ್‌ಬೇಸ್, 7- ಸಿರೀಸ್ ಲಾಂಗ್ ವೀಲ್‌ಬೇಸ್, X1, X3, X5, X7 ಮತ್ತು M340i ಅನ್ನು ಒಳಗೊಂಡಿದೆ.

ಸದ್ಯ BMW i4, i5, i7, i7 M70, iX1, BMW iX, Z4 M40i, M2 ಕೂಪೆ ನಂತಹ ಮಾದರಿಗಳನ್ನು ಮಾರಾಟ ಮಾಡುತ್ತದೆ. ಕಳೆದ ವಾರ, ಮೆರ್ಸಿಡೀಸ್- ಬೆನ್ಜ್ ಕೂಡ ಭಾರತದಲ್ಲಿನ ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ಜನವರಿ 1, 2025 ರಿಂದ ಶೇಕಡಾ ಮೂರು ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು, ಇನ್‌ಪುಟ್‌ ವೆಚ್ಚಗಳು, ಹಣದುಬ್ಬರದ ಒತ್ತಡಗಳು ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚಗಳು ಬೆಲೆ ಏರಿಕೆಗೆ ಕಾರಣವಾಗಿದೆ. ಭಾರತದಲ್ಲಿ ಮೆರ್ಸಿಡೀಸ್- ಬೆನ್ಜ್ ಕಾರುಗಳ ಬೆಲೆಗಳು GLC ಗೆ ರೂ. 2 ಲಕ್ಷದಿಂದ ಟಾಪ್ ಮೆರ್ಸಿಡೀಸ್-Maybach S 680 ಐಷಾರಾಮಿ ಲಿಮೋಸಿನ್‌ಗೆ ರೂ. 9 ಲಕ್ಷಕ್ಕೆ ಹೆಚ್ಚಾಗುತ್ತವೆ.

ಕಂಪನಿ ಮಾರಾಟದಲ್ಲಿ ಹೆಚ್ಚಳ

ಭಾರತದಲ್ಲಿ ಬಿಎಂಡಬ್ಲ್ಯು ಮತ್ತು ಮಿನಿ ಬ್ರ್ಯಾಂಡ್‌ಗಳ ಮಾರಾಟವು ಈ ವರ್ಷದ ಜನವರಿಯಿಂದ ಸೆಪ್ಟೆಂಬರ್‌ವರೆಗೆ 10,556 ಯುನಿಟ್‌ಗಳಷ್ಟಿದ್ದು, ವರ್ಷದಿಂದ ವರ್ಷಕ್ಕೆ 10 ಪ್ರತಿಶತದಷ್ಟು ಹೆಚ್ಚಾಗಿದೆ. ಕಂಪನಿಯು ಕಳೆದ ವರ್ಷ 2023 ರ ಮೊದಲ ಒಂಬತ್ತು ತಿಂಗಳಲ್ಲಿ 9,580 ಬಿಎಂಡಬ್ಲ್ಯು ಮತ್ತು ಮಿನಿ ವಾಹನಗಳನ್ನು ಮಾರಾಟ ಮಾಡಿತ್ತು. ಈ ಅವಧಿಯಲ್ಲಿ ಕಂಪನಿ ಮೊಟೊರಾಡ್ ಬ್ರಾಂಡ್‌ನ 5,638 ಯುನಿಟ್‌ಗಳನ್ನು ಕೂಡ ಮಾರಾಟ ಮಾಡಿದೆ.

ಈ ವರ್ಷ ಒಂಬತ್ತು ತಿಂಗಳಲ್ಲಿ ಮಾರಾಟವಾದ 10,556 ಯುನಿಟ್‌ಗಳಲ್ಲಿ 10,056 ಯುನಿಟ್‌ಗಳು ಬಿಎಂಡಬ್ಲ್ಯು ಬ್ರಾಂಡ್‌ನದ್ದಾಗಿದ್ದರೆ ಉಳಿದ 500 ಯುನಿಟ್‌ಗಳು ಮಿನಿ ಬ್ರ್ಯಾಂಡ್‌ನದ್ದಾಗಿದೆ ಎಂದು ಬಿಎಂಡಬ್ಲ್ಯು ಗ್ರೂಪ್ ಹೇಳಿದೆ. ದೇಶದ ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ವಿಭಾಗದ ಪಾಲು ಇನ್ನೂ ಸಾಕಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಐಷಾರಾಮಿ ಕಾರು ಮಾರುಕಟ್ಟೆ ಇನ್ನೂ ಚಿಕ್ಕದಾಗಿದೆ. ದೇಶದ ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಇದರ ಪಾಲು ಶೇಕಡಾ ಎರಡಕ್ಕಿಂತ ಕಡಿಮೆ ಎನ್ನಬಹುದು.

ಇನ್ನು ಮುಂದಿನ ವರ್ಷದ ಜನವರಿಯಿಂದ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಎಸ್​ಯುವಿಗಳು ಮತ್ತು ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇಕಡಾ 3 ರಷ್ಟು ಹೆಚ್ಚಿಸಲಿದೆ. ಹಣದುಬ್ಬರ ಮತ್ತು ಸರಕುಗಳ ಬೆಲೆಗಳ ಏರಿಕೆಯಿಂದಾಗಿ ಇನ್‌ಪುಟ್‌ ವೆಚ್ಚದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೆ JSW MG ಮೋಟಾರ್ ಇಂಡಿಯಾ ತನ್ನ ವಾಹನಗಳ ವಿವಿಧ ಮಾದರಿಗಳ ಬೆಲೆಯನ್ನು ಜನವರಿಯಿಂದ ಶೇಕಡಾ ಮೂರು ರಷ್ಟು ಹೆಚ್ಚಿಸಲಿದೆ.

ವರದಿ: ವಿನಯ್‌ ಭಟ್

Whats_app_banner