Boiled Egg: ಮೊಟ್ಟೆ ಬೇಯಿಸಿದ ಬಳಿಕ ನೀರನ್ನು ಚೆಲ್ಲದಿರಿ, ಪೋಷಕಾಂಶವಿರುವ ನೀರನ್ನು ಹೀಗೆಲ್ಲ ಬಳಸಿ ನೋಡಿ
ಮೊಟ್ಟೆಯನ್ನು ಬೇಯಿಸಿ ತಿನ್ನುವುದೆಂದರೆ ಬಹಳಷ್ಟು ಮಂದಿಗೆ ಇಷ್ಟ. ಬೇಯಿಸಿದ ಮೊಟ್ಟೆಗೆ ಖಾರ ಮತ್ತು ಪುಡಿ ಉಪ್ಪು ಉದುರಿಸಿ ತಿಂದರೆ ರುಚಿಯೋ ರುಚಿ. ಕಡಿಮೆ ದರದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಒದಗಿಸುವ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಮೊಟ್ಟೆ ಬೇಯಿಸಿದ ಬಳಿಕ ಅದರ ನೀರನ್ನು ನೀವು ಚೆಲ್ಲುತ್ತೀರಾ? ಹಾಗಾದರೆ ಈ ಸ್ಟೋರಿ ಓದಿ..

ಬೇಯಿಸಿದ ಮೊಟ್ಟೆ ತಿನ್ನುವುದೆಂದರೆ ಮಕ್ಕಳಿಂದ ತೊಡಗಿ ಎಲ್ಲರಿಗೂ ಇಷ್ಟ. ಮೊಟ್ಟೆ ತಿನ್ನುವುದರಿಂದ ಹಲವು ಲಾಭಗಳಿವೆ. ಬಹಳಷ್ಟು ಪೋಷಕಾಂಶ ಹೊಂದಿರುವ ಮೊಟ್ಟೆಯನ್ನು ಬಳಸಿಕೊಂಡು ಹಲವು ರುಚಿಕರ ಖಾದ್ಯ ತಯಾರಿಸಬಹುದು. ಅಲ್ಲದೆ, ಮೊಟ್ಟೆಯನ್ನು ಬೇಯಿಸಿ, ಅದರಲ್ಲಿ ಕೂಡ ಹಲವು ತಿನಿಸು ತಯಾರಿಸಬಹುದು ಇಲ್ಲವೇ ಹಾಗೆಯೇ ಕೂಡ ತಿನ್ನಬಹುದು. ಮೊಟ್ಟೆಯನ್ನು ಬೇಯಿಸಿ ತಿನ್ನುವುದೇನೋ ಹೌದು, ಆದರೆ ಹಾಗೆ ಮೊಟ್ಟೆ ಬೇಯಿಸಲು ಬಳಸಿದ ನೀರನ್ನು ನೀವು ಬಳಿಕ ಏನು ಮಾಡುತ್ತೀರಿ? ಬಹುತೇಕ ಎಲ್ಲರೂ ಮೊಟ್ಟೆ ಬೇಯಿಸಿದ ಬಳಿಕ ಉಳಿದ ನೀರನ್ನು ಸಿಂಕ್‌ಗೆ ಚೆಲ್ಲುತ್ತೀರಿ. ಆದರೆ ಆ ನೀರನ್ನು ಇನ್ನು ಮುಂದೆ ಚೆಲ್ಲಬೇಡಿ. ಮೊಟ್ಟೆಯಲ್ಲಿ ಹೇಗೆ ಪೋಷಕಾಂಶಗಳು ಇರುವುದೋ, ಹಾಗೆಯೇ ಮೊಟ್ಟೆ ಬೇಯಿಸಿದ ನೀರಿನಲ್ಲೂ ಹಲವು ಪೋಷಕಾಂಶಗಳು ಇರುತ್ತವೆ. ಮೊಟ್ಟೆಯನ್ನು ಬೇಯಿಸಿದಾಗ ಅದರ ಸಿಪ್ಪೆಯಿಂದ ಬೇರ್ಪಡುವ ಪೋಷಕಾಂಶಗಳು, ಮೊಟ್ಟೆ ಒಡೆದರೆ ಅದರ ಬಿಳಿಯ ಪದರದ ಅಂಶಗಳು ನೀರಿನಲ್ಲಿ ಸೇರಿಕೊಂಡಿರುತ್ತವೆ. ಮುಖ್ಯವಾಗಿ ಕ್ಯಾಲ್ಸಿಯಂ, ಮೆಗ್ನೇಷಿಯಂ, ಪೊಟ್ಯಾಶಿಯಂ, ಫಾಸ್ಫರಸ್ ಮತ್ತು ಕಬ್ಬಿಣದ ಅಂಶಗಳು ಇರುತ್ತವೆ. ಹೀಗಾಗಿ ಮೊಟ್ಟೆ ಬೇಯಿಸಿದ ನೀರನ್ನು ಮರುಬಳಕೆ ಮಾಡಬಹುದು. ಮೊಟ್ಟೆ ಬೇಯಿಸಿದ ನೀರನ್ನು ಹಲವು ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಇಲ್ಲಿ ಹೇಳಿರುವ ಕೆಲವು ಟಿಪ್ಸ್ ಟ್ರೈ ಮಾಡಿ.
ಗಿಡಗಳಿಗೆ ನೀರು ಮತ್ತು ಪೋಷಕಾಂಶ
ಮೊಟ್ಟೆ ಬೇಯಿಸಿದ ನೀರನ್ನು ಅದಾಗಿಯೇ ತಣ್ಣಗಾಗಲು ಬಿಡಿ. ಪೂರ್ತಿ ತಣ್ಣಗಾದ ನೀರನ್ನು ಮನೆಯ ಗಿಡಗಳಿಗೆ ಬಳಸಬಹುದು. ಗಿಡಗಳಿಗೆ ಅಗತ್ಯ ಪ್ರಮಾಣದ ಪೋಷಕಾಂಶ ಇದರಲ್ಲಿ ದೊರೆಯುತ್ತದೆ. ಮುಖ್ಯವಾಗಿ ಮೊಟ್ಟೆ ಬೇಯಿಸಿದ ನೀರಿನಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಅದು ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಅಂಶವೂ ಇದ್ದು, ಗಿಡಗಳ ಬೇರು ಹೆಚ್ಚು ಆಳಕ್ಕೆ ಹೋಗಲು ಸಹಕಾರಿ. ಮೊಟ್ಟೆ ಬೇಯಿಸಿದ ನೀರನ್ನು ತಣ್ಣಗಾಗಿಸಿ, ಗಿಡಕ್ಕೆ ಹಾಕಿ ನೋಡಿ, ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಗಿಡಗಳು ಹೆಚ್ಚು ಹಸಿರಾಗುತ್ತಾ ಹೋಗುತ್ತವೆ. ಸಮೃದ್ಧವಾಗಿ ಬೆಳೆಯುತ್ತವೆ.
ತಲೆಯ ಅಂದಕೂ ಬಳಸಬಹುದು
ಮೊಟ್ಟೆ ಬೇಯಿಸಿದ ನೀರಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಹೀಗಾಗಿ ನೀರನ್ನು ಚೆಲ್ಲಬೇಡಿ, ಅದರ ಬದಲು ತಲೆಕೂದಲನ್ನು ಶುದ್ಧೀಕರಿಸಲು ಬಳಸಿ, ಇದರಿಂದ ತಲೆಹೊಟ್ಟು, ತಲೆ ಕೂದಲು ತುದಿ ಒಡೆದಿರುವುದು ಮತ್ತು ಸಿಕ್ಕಾಗಿರುವುದು ಸರಿಯಾಗುತ್ತದೆ. ತಲೆಕೂದಲು ಆರೋಗ್ಯವಾಗಿ, ಹೊಳೆಯುತ್ತದೆ, ಚೆನ್ನಾಗಿ ಬೆಳೆಯುತ್ತದೆ. ರೇಷ್ಮೆಯಂತಹ ತಲೆಕೂದಲಿಗೆ ಇದು ಸಹಕಾರಿ.
ಇದನ್ನೂ ಓದಿ: ತಲೆಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ
ಅಡುಗೆ ಕೋಣೆಯ ಕ್ಲೀನಿಂಗ್
ಅಡುಗೆ ಮನೆಯನ್ನು ಶುದ್ಧೀಕರಿಸಲು ಕೂಡ ಮೊಟ್ಟೆ ಬೇಯಿಸಿದ ನೀರನ್ನು ಬಳಸಬಹುದು. ಅಡುಗೆಮನೆಯ ಪಾತ್ರೆ, ಸ್ಟೌವ್, ಇತ್ಯಾದಿ ಪರಿಕರಗಳನ್ನು ಸುಲಭದಲ್ಲಿ ಶುಚಿಗೊಳಿಸಬಹುದು. ರಾಸಾಯನಿಕ ಇರುವ ಕ್ಲೀನರ್‌ಗಳಿಗಿಂತ ಮೊಟ್ಟೆ ಬೇಯಿಸಿದ ನೀರು ಹೆಚ್ಚು ಪ್ರಯೋಜನಕಾರಿ, ಹೀಗಾಗಿ ಡಿಶ್‌ವಾಷರ್ ಮತ್ತು ವಾಷಿಂಗ್ ಮೆಷಿನ್‌ನಲ್ಲೂ ಬಳಸಲು ಅಡ್ಡಿಯಿಲ್ಲ. ಹೀಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಮೊಟ್ಟೆ ಬೇಯಿಸಿದ ನೀರನ್ನು ಇನ್ನು ಮುಂದೆ ಚೆಲ್ಲಬೇಡಿ. ಮೇಲೆ ಹೇಳಿರುವ ರೀತಿಯಲ್ಲಿ ಗಿಡಗಳಿಗೆ, ತಲೆಯ ಆರೋಗ್ಯಕ್ಕೆ ಮತ್ತು ಅಡುಗೆ ಮನೆಯನ್ನು ಶುಚಿಗೊಳಿಸಲು ಬಳಸಬಹುದು. ಮೊಟ್ಟೆ ಬೇಯಿಸಿದ ನೀರನ್ನು ಸಿಂಕ್‌ಗೆ ಚೆಲ್ಲಿ ವ್ಯರ್ಥ ಮಾಡುವ ಬದಲು, ಈ ರೀತಿ ಪ್ರಯೋಜನಕಾರಿಯಾಗಿ ಬಳಸಬಹುದು.
