ಬ್ಯೂಟಿ ಮತ್ತು ಫಿಟ್‌ನೆಸ್‌ಗಾಗಿ ಮನೆಯಲ್ಲೇ ತಯಾರಿಸಿದ ಈ ಪಾನೀಯ ಕುಡೀತಾರೆ ಪ್ರಿಯಾಂಕಾ ಚೋಪ್ರಾ; ನೀವೂ ಮಾಡ್ಬೋದು
ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯ ಆಹಾರ ಪದ್ಧತಿಯನ್ನು ಪ್ರೀತಿಸುತ್ತಾರೆ. ತಮ್ಮ ಸೌಂದರ್ಯ ಹಾಗೂ ಫಿಟ್‌ನೆಸ್ ವಿಚಾರದಲ್ಲಿಯೂ ಅವರೂ ದೇಸಿ ಆಹಾರಕ್ರಮ ಅನುಸರಿಸುತ್ತಾರೆ. ಪ್ರತಿದಿನ ಅವರು ತಮ್ಮ ದಿನವನ್ನು ಶಕ್ತಿಯುತವಾಗಿ ಆರಂಭಿಸಲು ಬೆಳಗ್ಗೆ ಕುಡಿಯುವ ಪಾನೀಯದ ಕುರಿತು ಮಾಹಿತಿ ತಿಳಿಸಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೊವರ್‌ಗಳನ್ನು ಹೊಂದಿರುವ ಭಾರತೀಯ ಸೆಲೆಬ್ರಿಟಿ ಇವರು. ಇವರ ಸೌಂದರ್ಯ ಹಾಗೂ ಫಿಟ್‌ನೆಸ್ ಸಲಹೆಗಳನ್ನು ಹಲವರು ಅನುಸರಿಸುತ್ತಾರೆ. ಎಷ್ಟೇ ಮಾಡರ್ನ್ ಆದರೂ, ದೇಸಿ ಹುಡುಗಿಯಾಗಿ ತಮ್ಮ ಸೌಂದರ್ಯ ಹಾಗೂ ಫಿಟ್‌ನೆಸ್ ವಿಚಾರದಲ್ಲಿ ಇವರು ರಾಜಿಯಾಗಿಲ್ಲ. ತಮ್ಮ ಮನೆಯಲ್ಲೇ ತಯಾರಿಸುವ ಬ್ಯೂಟಿ ಹ್ಯಾಕ್ಸ್ ಅನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಮನೆಯಲ್ಲಿಯೇ ನೈಸರ್ಗಿಕ ಮತ್ತು ಸಾವಯವ ಪದಾರ್ಥಗಳಿಂದ ತಯಾರಿಸುವ ಇವರ ಬ್ಯೂಟಿ ಸೀಕ್ರೆಟ್ ನೀವು ಕೂಡಾ ಅನುಸರಿಸಬಹುದು.
ಪ್ರಿಯಾಂಕಾ ಹೇಳಿರುವ ಸೌಂದರ್ಯ ಸಲಹೆಗಳು ದೇಹದ ಆರೋಗ್ಯಕ್ಕೂ ಒಳ್ಳೆಯದು. ಮುಖದ ಸೌಂದರ್ಯ ಮಾತ್ರವಲ್ಲದೆ ತ್ವಚೆ, ತುಟಿ ಹಾಗೂ ಒಟ್ಟಾರೆ ಆರೋಗ್ಯಕ್ಕಾಗಿ ಪ್ರಿಯಾಂಕಾ ಅವರು ಶಿಫಾರಸು ಮಾಡುವ ದೇಸಿ ಹ್ಯಾಕ್ಸ್ ಹೀಗಿದೆ ನೋಡಿ.
ಪ್ರಿಯಾಂಕಾ ಬೆಳಗ್ಗೆ ಏನ್ ಕುಡೀತಾರೆ?
ತಾವು ನಿತ್ಯ ಬೆಳಗ್ಗೆ ಕುಡಿಯುವ ಪಾನೀಯದ ಬಗ್ಗೆ ವೋಗ್ ಇಂಡಿಯಾಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಪಿಂಕಿ ಹೇಳಿಕೊಂಡಿದ್ದಾರೆ. ಉತ್ತಮ ರೋಗನಿರೋಧಕ ಶಕ್ತಿಗಾಗಿ ಪ್ರತಿದಿನ ಬೆಳಗ್ಗೆ ಇದನ್ನು ಪ್ರಿಯಾಂಕಾ ಕುಡಿಯುತ್ತಾರಂತೆ. ಇದನ್ನು ಖುದ್ದು ಪ್ರಿಯಾಂಕಾ ಅವರು ತಮ್ಮ ಮನೆಯಲ್ಲಿ ತಯಾರಿಸುತ್ತಾರೆ. "ನನ್ನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾನು ಬೆಳಿಗ್ಗೆ ಬಿಸಿ ನೀರಿಗೆ ಶುಂಠಿ, ಅರಿಶಿನ, ನಿಂಬೆ ಮತ್ತು ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದೇನೆ. ಏಕೆಂದರೆ ನಾನು ಪ್ರತಿನಿತ್ಯ ಚಿತ್ರೀಕರಣ ಕೆಲಸ ಮಾಡುತ್ತಿರುತ್ತೇನೆ. ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗಬಾರದು ಎಂದು ಅವರು ಹೇಳಿಕೊಂಡಿದ್ದಾರೆ.
ಇದು ರೋಗನಿರೋಧಕ ಶಕ್ತಿಗಾಗಿ ಪಿಂಕಿ ನಿತ್ಯ ಅನುಸರಿಸುವ ಹ್ಯಾಕ್. ಉಳಿದಂತೆ ಈವರೆಗೂ ಇಂಥಾ ಹಲವು ಹ್ಯಾಕ್‌ಗಳನ್ನು ಹಂಚಿಕೊಂಡಿದ್ದಾರೆ. ವರ್ಷಗಳಿಂದ ಅವರು ಹಂಚಿಕೊಂಡಿರುವ ಇತರ ಕೆಲವು ದೇಸಿ ಹ್ಯಾಕ್‌ಗಳು ಹೀಗಿವೆ.
ಪಾದಗಳಿಗೆ ಬೆಳ್ಳುಳ್ಳಿ ಉಜ್ಜುವುದು
ಬೆಳ್ಳುಳ್ಳಿಯನ್ನು ಪಾದಗಳಿಗೆ ಉಜ್ಜುವುದರಿಂದ ಉರಿಯೂತದ ನೋವನ್ನು ನಿವಾರಿಸುತ್ತದೆ. ಈ ಪ್ರಾಚೀನ ಪರಿಹಾರವು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ದಿ ಬ್ಲಫ್ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡ ನಂತರ, ಕತ್ತರಿಸಿದ ಬೆಳ್ಳುಳ್ಳಿಯನ್ನು ಹಿಮ್ಮಡಿಗೆ ಉಜ್ಜಿ ಪರಿಹಾರ ಕಂಡುಕೊಂಡ ಕುರಿತು ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಬೆಳ್ಳುಳ್ಳಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಅದು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಅದನ್ನು ಪಾದಗಳಿಗೆ ಉಜ್ಜಿದರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಲಿಪ್ ಸ್ಕ್ರಬ್
ಸಣ್ಣ ಬೌಲ್‌ನಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಮುದ್ರದ ಉಪ್ಪನ್ನು ಹಾಕಿ. ಅದಕ್ಕೆ ಶುದ್ಧ ತರಕಾರಿ ಗ್ಲಿಸರಿನ್ ಮತ್ತು ಪನ್ನೀರು (ರೋಸ್ ವಾಟರ್) ಸೇರಿಸಿ. ಆ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಿ. ನಿಮ್ಮ ತುಟಿ ತಾಜಾತನದಿಂದ ಕೂಡಿರುತ್ತದೆ.
ಬಾಡಿ ಸ್ಕ್ರಬ್
ಈ ಬಾಡಿ ಸ್ಕ್ರಬ್, ಡಿಟ್ಯಾನಿಂಗ್ ಮತ್ತು ಎಕ್ಸ್ಫೋಲಿಯೇಟಿಂಗ್ ಎರಡಕ್ಕೂ ಸಹಾಯ ಮಾಡುತ್ತದೆ. ಒಂದು ಕಪ್ ಕಡಲೆ ಹಿಟ್ಟು, ಸ್ವಲ್ಪ ಮೊಸರು, ನಿಂಬೆ ರಸ ಮತ್ತು ಹಾಲು ತೆಗೆದುಕೊಳ್ಳಿ. ನಿಮ್ಮದು ಎಣ್ಣೆಯುಕ್ತ ತ್ವಚೆಯಾಗಿದ್ದರೆ ಸ್ಕಿಮ್ ಹಾಲು ಮತ್ತು ಕಡಿಮೆ ಕೊಬ್ಬಿನ ಮೊಸರನ್ನು ಬಳಸಲು ಪ್ರಿಯಾಂಕಾ ಸಲಹೆ ನೀಡುತ್ತಾರೆ. ಇದಕ್ಕೆ ಶ್ರೀಗಂಧದ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ನಿಮ್ಮ ಆದ್ಯತೆಗೆ ಅನುಸಾರ ಪ್ರಮಾಣದಲ್ಲಿ ಬದಲಾವಣೆ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.