ಪುಸ್ತಕ ವಿಮರ್ಶೆ: ನೀನಿಲ್ಲದೇ ನನಗೇನಿದೆ; ಗಂಡು ಹೆಣ್ಣು ಕೂಡಿದರೆ ಕೂಸು ಹುಟ್ಟಬಹುದು, ಆದರೆ, ಪ್ರೀತಿ ಹುಟ್ಟಬಹುದೇ? ಪಚ್ಚು ಕುಟ್ಟಿದಪಲ್ಕೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ವಿಮರ್ಶೆ: ನೀನಿಲ್ಲದೇ ನನಗೇನಿದೆ; ಗಂಡು ಹೆಣ್ಣು ಕೂಡಿದರೆ ಕೂಸು ಹುಟ್ಟಬಹುದು, ಆದರೆ, ಪ್ರೀತಿ ಹುಟ್ಟಬಹುದೇ? ಪಚ್ಚು ಕುಟ್ಟಿದಪಲ್ಕೆ ಬರಹ

ಪುಸ್ತಕ ವಿಮರ್ಶೆ: ನೀನಿಲ್ಲದೇ ನನಗೇನಿದೆ; ಗಂಡು ಹೆಣ್ಣು ಕೂಡಿದರೆ ಕೂಸು ಹುಟ್ಟಬಹುದು, ಆದರೆ, ಪ್ರೀತಿ ಹುಟ್ಟಬಹುದೇ? ಪಚ್ಚು ಕುಟ್ಟಿದಪಲ್ಕೆ ಬರಹ

ಪುಸ್ತಕ ವಿಮರ್ಶೆ: ಬಲವಾಗಿಯೋ ಮೃದುವಾಗಿಯೋ ಹೆಣ್ಣಿನ ಬದುಕಿನಲ್ಲಿ ಗಂಡು , ಗಂಡಿನ ಬದುಕಲ್ಲಿ ಹೆಣ್ಣು ಕಾಲೂರಬೇಕು; ಹಸಿ ಮಣ್ಣಿನಲ್ಲಿ ಹಕ್ಕಿ ನಡೆದಂತೆ. ಕೈ ಕೈ ಹಿಡಿದು ಒಂದಿಷ್ಟು ದೂರವಾದರೂ ಹೆಜ್ಜೆಗೆ ಹೆಜ್ಜೆ ಬೆಸೆಯಬೇಕು, ದಾರಿ ತುಂಬಾ ಗೆಜ್ಜೆ ಮಾತ್ರವಲ್ಲ ಹೃದಯ ಕೂಡ ಘಲ್ ಘಲ್ಲೆನ್ನಬೇಕು, ಯಾವ ತಾಳದಲ್ಲಿ ಮನಸ್ಸು ಹಾಡಿದರೂ ಬಂಧಿಶ್ ಮಾತ್ರ ಪ್ರೇಮರಾಗದ್ದಾಗಿರಬೇಕು.

ನೀನಿಲ್ಲದೇ ನನಗೇನಿದೆ ಪುಸಕ್ತ ವಿಮರ್ಶೆ
ನೀನಿಲ್ಲದೇ ನನಗೇನಿದೆ ಪುಸಕ್ತ ವಿಮರ್ಶೆ

ಪ್ರೀತಿ–ಪ್ರೇಮ–ದಾಂಪತ್ಯ, ಮದುವೆಯಾಚೆಗಿನ ಬದುಕು, ಸಂಸಾರ ಈ ಎಲ್ಲವೂ ಸಂಬಂಧವೆಂಬ ಸಂಕೋಲೆಯಲ್ಲಿ ಬಂಧಿತವಾಗುವ ಸುಮಧುರ ಅಧ್ಯಾಯಗಳು. ಆದರೆ ಕೆಲವೊಮ್ಮೆ ಇಷ್ಟವಿಲ್ಲದ ಮದುವೆಗೂ ಕೊರಳೊಡ್ಡಿ ಬದುಕುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಆ ಅನಿವಾರ್ಯವನ್ನೇ ಅದೃಷ್ಟ ಎಂದುಕೊಂಡು ಮುಂದೆ ಸಾಗಿದರೆ ಬದುಕು ಸುಂದರ. ಇಂತಹ ದಾಂಪತ್ಯ, ಪ್ರೀತಿ–ಪ್ರೇಮ ಬದುಕಿನ ಬಗ್ಗೆ ನೀನಿಲ್ಲದೇ ನನಗೇನಿದೆ ಪುಸ್ತಕದಲ್ಲಿ ಸುಂದರವಾಗಿ ಬರೆದಿದ್ದಾರೆ ಡಾ. ವಿರೂಪಾಕ್ಷ ದೇವರಮನೆ. ಅವರ ಈ ಪುಸ್ತಕದ ಬಗ್ಗೆ ಮನೋಜ್ಞವಾಗಿ, ಹೃದಯ ತಟ್ಟುವಂತೆ ಫೇಸ್‌ಬುಕ್‌ನಲ್ಲಿ ವಿಮರ್ಶೆ ಬರೆದಿದ್ದಾರೆ ಲೇಖಕ ಪಚ್ಚು ಕುಟ್ಟಿದಪಲ್ಕೆ. ಅವರ ಬರಹವನ್ನ ನೀವೂ ಓದಿ.

ಪಚ್ಚು ಕುಟ್ಟಿದಪಲ್ಕೆ ಬರಹ

ನೀನಿಲ್ಲದೇ ನನಗೇನಿದೆ! ಡಾ. ವಿರೂಪಾಕ್ಷ ದೇವರಮನೆ

ಬದುಕಿಗೆ ಕೆಲವರು ಬಲಗಾಲಿಟ್ಟು ಬರುತ್ತಾರೆ; ಅಲ್ಲಿಂದ ಬದುಕೇ ಬದಲಾಗುತ್ತದೆ. ಎಡಗಾಲಿಟ್ಟೂ ಈ ಬದುಕಿಗೆ ಬರುವವರು ಇದ್ದಾರೆ; ತಂಗಾಳಿಯೋ ಬಿರುಗಾಳಿಯೋ ಯಾರು ಹೇಗೆ ಬೀಸಿ ಬಂದರೂ ಬದಲಾಗುವುದು ಮಾತ್ರ ಬದುಕೇ.

ಯಾರೂ ಬರದಿದ್ದರೆ ಬಹುಶಃ ಏನೂ ಆಗುವುದಿಲ್ಲವೇನೋ. ಏನೂ ಆಗದಿದ್ದರೆ ಮತ್ತದೇ ಬದಲಾಗದ ಬದುಕು. ಏನಾದರೂ ಆಗಬೇಕಾದರೆ ಯಾರಾದರೊಬ್ಬರು ಬರಬೇಕು, ಜೊತೆಗೂ ಇರಬೇಕು. ಬಲವಾಗಿಯೋ ಮೃದುವಾಗಿಯೋ ಹೆಣ್ಣಿನ ಬದುಕಿನಲ್ಲಿ ಗಂಡು , ಗಂಡಿನ ಬದುಕಲ್ಲಿ ಹೆಣ್ಣು ಕಾಲೂರಬೇಕು; ಹಸಿ ಮಣ್ಣಿನಲ್ಲಿ ಹಕ್ಕಿ ನಡೆದಂತೆ. ಕೈ ಕೈ ಹಿಡಿದು ಒಂದಿಷ್ಟು ದೂರವಾದರೂ ಹೆಜ್ಜೆಗೆ ಹೆಜ್ಜೆ ಬೆಸೆಯಬೇಕು, ದಾರಿ ತುಂಬಾ ಗೆಜ್ಜೆ ಮಾತ್ರವಲ್ಲ ಹೃದಯ ಕೂಡ ಘಲ್ ಘಲ್ಲೆನ್ನಬೇಕು, ಯಾವ ತಾಳದಲ್ಲಿ ಮನಸ್ಸು ಹಾಡಿದರೂ ಬಂಧಿಶ್ ಮಾತ್ರ ಪ್ರೇಮರಾಗದ್ದಾಗಿರಬೇಕು.

ಮನೆಯೊಳಗೆ, ಮನದೊಳಗೆ ಕಾಲಿಟ್ಟವರ ಕಾಲು ಬಲವೋ, ಎಡವೋ ಯಾವುದಾದರೇನು ಅಲ್ಲಿಂದಾದರೂ ಬದುಕು ಒಂದಿಷ್ಟಾದರೂ ನದಿಯಾಗಬೇಕು, ಕುಲುಕುವ ಕೊಳವಲ್ಲ; ಹೊಸ ಹುಮ್ಮಸ್ಸಿನಲ್ಲೇ ಸದಾ ಹರಿಯಬೇಕು, ಒಟ್ಟಿನಲ್ಲಿ ಬಾಳು ಬದಲಾಗಬೇಕು. ಅದಕ್ಕಾದರೂ ಯಾರಾದರೊಬ್ಬರಿಗೆ ಬಾಗಿಲು ತೆರೆಯಬೇಕು, ಹೊಸಿಲಲ್ಲಿ ನಮಗಾಗಿ ನಿಂತಿದ್ದವರನ್ನು ಎದ್ದು ಬರ ಮಾಡಿಕೊಳ್ಳಬೇಕು, ನಾವೂ ನಮ್ಮವರ ಬಾಗಿಲು ಒಮ್ಮೆಯಾದರು ಬಡಿಯಬೇಕು.

ಆ ನಮ್ಮವರು ಯಾರು..?

ಮದುವೆ ಎಲ್ಲರಿಗೂ ಆಗುತ್ತದೆ; ನಾವೂ ಆಗುತ್ತೇವೆ. ಕೆಲವೊಮ್ಮೆ ಇಷ್ಟಪಟ್ಟೇ ಆಗುತ್ತೇವೆ. ಇನ್ನು ಕೆಲವೊಮ್ಮೆ ಮನೆಯವರ ಇಷ್ಟ ಕಷ್ಟಗಳಿಗಾಗಿ ಆಗುತ್ತೇವೆ; ಆಗಬೇಕಾಗುತ್ತದೆ. ಗಂಡಾಗಲಿ, ಹೆಣ್ಣಾಗಲಿ ಕನಸುಗಳು ಬಹಳಷ್ಟು ಇರುತ್ತದೆ, ಹಗಲಿನಲ್ಲೂ ಕಂಡಿರುತ್ತೇವೆ. ಅದೊಂದು ದಿನ ಯಾರೋ ಈ ಬಾಳಿಗೆ ಬಲಗಾಲಿಟ್ಟು ಬರುತ್ತಾರೆ, ಬದುಕಿನ ಕೊನೆಯವರೆಗೂ ಒಟ್ಟೊಟ್ಟಿಗೆ ನಡೆಯುತ್ತಾರೆ, ನಡೆಸುತ್ತಾರೆ, ದಣಿವಿಗೆ ಹೆಗಲಾಗುತ್ತಾರೆ, ಕತ್ತಲಿಗೆ ಹಗಲಾಗುತ್ತಾರೆ. ಆದರೆ ಯಾರವರು? ಎಲ್ಲಿಹರು? ಎಂಬ ಕುತೂಹಲಗಳೇ ನಿಜಕ್ಕೂ ರೋಚಕವಾದದ್ದು.

ಮದುವೆಯಾದರಷ್ಟೇ ಆ ಕುತೂಹಲ ತಣಿಯುತ್ತದೆ. ನಿಜ ಹೇಳಬೇಕೆಂದರೆ ಬದುಕು ಅಲ್ಲಿಂದ ಬದಲಾಗುತ್ತದೆ.

ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು ಜಗತ್ತಿನ ಅತ್ಯದ್ಭುತ ಸಮೀಕರಣದಂತೆ, ಚಂದದ್ದೊಂದು ವಿಸ್ಮಯದಂತೆ ಹೇಗೆಗೋ ಹೊಂದಾಣಿಕೆಯಾಗಿ ಜೊತೆಯಾಗುತ್ತದೆ, ಜೋಡಿಯೂ ಆಗುತ್ತದೆ. ಆದರೆ ಹಗಲಿರುಳು ಕಂಡ ಕನಸಿನಂತೆಯೇ ಸುಖವಾದ ದಾಂಪತ್ಯ ಸಾಧ್ಯವೇ? ಗಂಡು ಹೆಣ್ಣು ಕೂಡಿಕೊಂಡು ಕೂಸು ಹುಟ್ಟೀತು, ಸಂಸಾರ ಬೆಳೆದೀತು. ಆದರೆ ಪ್ರೀತಿ?

ಈ ಪುಸ್ತಕ ಅಂತಹದ್ದೊಂದು ಪ್ರೀತಿಯ ಕುರಿತಾದದ್ದು, ಅದರಲ್ಲೂ ವಿಶೇಷವಾಗಿ ದಾಂಪತ್ಯ ಜೀವನದಲ್ಲಿನ ಪ್ರೀತಿ ಪ್ರೇಮದ ಬಗ್ಗೆಯೇ ಇದು ಇರುವಂತಹದ್ದು. ನಾವು ನಮಗಾಗಿ ಎದೆಗೆ ಮಾತ್ರವಲ್ಲ ಒಂದಿಡೀ ಬದುಕಿಗಾಗಿಯೇ ಸಂಪೂರ್ಣವಾಗಿ ಬರ ಮಾಡಿಕೊಂಡವರ ಸುಖ ದುಃಖಕ್ಕೆ ಸಂಬಂಧಿಸಿದ್ದು. ಬದಲಾಗದ ನಾವು ಈಗಲಾದರೂ ಬದಲಾಗಿ ಎಂದು ಹೇಳುವಂತಹದ್ದು.

ಗಂಡ ಹೆಂಡತಿಯ ನಡುವೆ ಪ್ರೀತಿಯೇ ಇರದಿದ್ದರೆ, ಪ್ರೀತಿ ಹುಟ್ಟದಿದ್ದರೆ, ಹುಟ್ಟಲು ಅಂತಹದ್ದೊಂದು ಅವಕಾಶವನ್ನು, ಆ ವಾತಾವರಣವನ್ನು ಕಲ್ಪಿಸದಿದ್ದರೆ ಏನಾಗುತ್ತದೆ. ಅದರ ಬದಲಿಗೆ ಪ್ರೀತಿಯ ಸಾಮೀಪ್ಯ ಇದ್ದರೆ ಏನಾಗುತ್ತದೆ, ಏಕೆ ಇರಬೇಕು ದಾಂಪತ್ಯದಲ್ಲಿ, ಸಾಂಗತ್ಯದಲ್ಲಿ ಪ್ರೀತಿ, ನಿಜ ಅರ್ಥದಲ್ಲಿಯೂ ದಾಂಪತ್ಯ ಎನ್ನುವುದು ಅದೆಷ್ಟು ಮಧುರವಾದದ್ದು, ಗಂಡ ಹೆಂಡತಿ ಸಂಬಂಧ ಅನ್ನುವುದೇ ಅದೆಷ್ಟು ಪವಿತ್ರವಾದದ್ದು, ಏತಕ್ಕಾಗಿ ಈಗೀಗ ಮದುವೆಗಳು ಬಹಳ ಬೇಗ ಮುರಿದು ಬೀಳುತ್ತದೆ, ಇದಕ್ಕೆಲ್ಲಾ ಏನು ಕಾರಣ.. ಎನ್ನುವುದೆಲ್ಲವನ್ನೂ ಬಹಳಷ್ಟು ನಿಜ ಜೀವನದ ಉದಾಹರಣೆಗಳೊಂದಿಗೆಯೇ ಲೇಖಕ ಡಾ. ವಿರೂಪಾಕ್ಷ ದೇವರಮನೆ ಅವರಿಲ್ಲಿ ಸೊಗಸಾಗಿ ಹೇಳುತ್ತಾ ಹೋಗುತ್ತಾರೆ. ಓದಿ, ಚೆನ್ನಾಗಿದೆ.

ಅದೇ ಬಾನು, ಅದೇ ಸೂರ್ಯ, ಅದೇ ಸಂಜೆ, ಅದರಾಚೆಗೆ ಸಮಯಕ್ಕೆ ಸರಿಯಾಗಿ ಮಲಗುವ ಅದೇ ರಾತ್ರಿ, ಅದು ಕಳೆದರೆ ಕತ್ತಲು ಸರಿಸಿ ಎದ್ದೇಳುವ ಮತ್ತೊಂದು ಬೆಳಗು, ಜೊತೆಯಲ್ಲಿ ಈ ಜನ್ಮಕ್ಕೆನೇ ಬದಲಾಗದ, ಬದಲಾಗಲಾರೆವು ಎಂದುಕೊಂಡೇ ಬದುಕುವ ಅದೇ ಅದೇ ಹಳೆಯ ನಾವು. ಸುತ್ತಲಿನ ಯಾವುದೂ ವಿಶೇಷ ಅನ್ನಿಸುವುದೇ ಇಲ್ಲ, ನಮಗಿಲ್ಲಿ ಎಲ್ಲವೂ ಸಪ್ಪೆಯೇ. ಬದಲಾಗಬೇಕು ನಾವು. ಕನಿಷ್ಠ ಪಕ್ಷ ನಮಗಾಗಿ ಬಂದ ಸಂಗಾತಿಗಾದರೂ; ಪ್ರೀತಿಗಾಗಿ ಬದಲಾಗಿ ಬಿಟ್ಟರೆ ಆ ಕ್ಷಣದಿಂದ ಕಣ್ಣಿಗೆ ಕಾಣುವುದೆಲ್ಲವೂ ಅದೆಷ್ಟು ಸುಂದರ...

ನೀನಿಲ್ಲದೇ ನನಗೇನಿದೆ | ಡಾ. ವಿರೂಪಾಕ್ಷ ದೇವರಮನೆ | ಸಾವಣ್ಣ ಎಂಟರ್ ಪ್ರೈಸಸ್ ಬೆಂಗಳೂರು | 2013 | 160 ಪುಟಗಳು | 200 Rs.

#ಪುಸ್ತಕಗಳು ಪಚ್ಚು ಕುಟ್ಟಿದಪಲ್ಕೆ.

ಪಚ್ಚು ಕುಟ್ಟಿದಪಲ್ಕೆ ಅವರು ಅಕ್ಟೋಬರ್ 10 ರಂದು ಈ ಪೋಸ್ಟ್ ಪ್ರಕಟಿಸಿದ್ದಾರೆ. ಇವರ ಪೋಸ್ಟ್‌ ಅನ್ನು 70ಕ್ಕೆ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಲವರು ಪುಸ್ತಕದ ಬಗೆಗಿನ ಇವರ ಬರಹವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

ಪಚ್ಚು ಕುಟ್ಟಿದಪಲ್ಕೆ ಅವರ ಬರಹಕ್ಕೆ ಬಂದ ಕಾಮೆಂಟ್‌ಗಳು

‘ಪುಸ್ತಕ ಕ್ಕಿಂತ ನಿಮ್ಮ ಈ ಬರೆಹದ ಮೂಲಕ ಸುಂದರ ದಾಂಪತ್ಯಕ್ಕೆ ಚೆಂದದ ಕಿವಿಮಾತು ಚೆನ್ನಾಗಿ ಹೇಳಿದ್ದೀರಿ. ಧನ್ಯವಾದಗಳು‘ ಎಂದು ಪುಸ್ತಕದ ಲೇಖಕರಾದ ಡಾ. ವಿರೂಪಾಕ್ಷ ದೇವರಮನೆ ಕಾಮೆಂಟ್ ಮಾಡಿದ್ದಾರೆ.

‘ಚೆಂದಕ್ಕೆ ಶಬ್ದಗಳ ಜೋಡಿಸಿ ವಾಕ್ಯ ರಚನೆ ಮಾಡುವ ನಿಮ್ಮ ಕುಸುರಿ ಕೆಲಸ ಬೇಗ ಹೃದಯಕ್ಕೆ ತಟ್ಟಿತು‘ ಶ್ಯಾಮ್ ಭೀಮಗುಳಿ ಎನ್ನುವವರು ಪಚ್ಚು ಅವರ ಬರಹಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

‘ನಿಮ್ಮ ಸೊಗಸಾದ ಬರಹದಿಂದ ಪುಸ್ತಕ ಓದುವ ಕುತೂಹಲ ಹೆಚ್ಚಾಯ್ತು‘ ಎಂದು ಅಶ್ವಿನಿ ಅಶೋಕ್ ಕಾಮೆಂಟ್ ಮಾಡಿದ್ದಾರೆ.