ಪುಸ್ತಕ ಪರಿಚಯ: ಅಹಿಂಸೆ ಪಾಲಿಸಿದ ಅಶೋಕನಲ್ಲ, ಸಾಮ್ರಾಟ್ ಅಶೋಕನ ನಿಜ ವೈಭವ ವರ್ಣಿಸುವ ಕೃತಿ ಮಾಗಧ; ಲೇಖಕಿ ಶೋಭಾ ರಾವ್ ಅಭಿಮತ
Book Review: ಅಹಿಂಸೆ ಪಾಲಿಸಿದ ಅಶೋಕನಲ್ಲ, ಸಾಮ್ರಾಟ್ ಅಶೋಕನ ನಿಜ ವೈಭವ ವರ್ಣಿಸುವ ಕೃತಿ ಮಾಗಧ ಕಾದಂಬರಿ. ಲೇಖಕಿ ಸಹನಾ ವಿಜಯಕುಮಾರ್ ಅವರ ಇತಿಹಾಸದ ಅಧ್ಯಯನದ ಫಲವಾಗಿ ಪುರಾವೆಗಳನ್ನು ಆಧರಿಸಿ ನಿರೂಪಿತವಾದ ಕಾದಂಬರಿ ಇದು ಎಂದು ಲೇಖಕಿ ಶೋಭಾ ರಾವ್ ಹೇಳಿದ್ದಾರೆ.
Book Review: ಭಾರತದ ಇತಿಹಾಸವನ್ನು ವಿಶೇಷವಾಗಿ ಮಗಧ ಸಾಮ್ರಾಜ್ಯದ ಇತಿಹಾಸವನ್ನು ಆಧರಿಸಿದ ಐತಿಹಾಸಿಕ ಕಾದಂಬರಿ ಮಾಗಧ. ಲೇಖಕಿ ಸಹನಾ ವಿಜಯಕುಮಾರ್ ಅವರು ನಾಲ್ಕೂವರೆ ವರ್ಷಕ್ಕೂ ಹೆಚ್ಚು ಕಾಲ ಇತಿಹಾಸ ಅಧ್ಯಯನ ನಡೆಸಿ ರಚಿಸಿದ ಕಾದಂಬರಿ ಇದು. ಸಾಮ್ರಾಟ್ ಅಶೋಕನ ಲಿಪಿಗಳನ್ನು ಸರಿಯಾಗಿ ಅಧ್ಯಯನ ನಡೆಸದೇ ಇತಿಹಾಸವನ್ನು ನಿರೂಪಿಸಲಾಗಿದೆ. ಅಂತಹ ಇತಿಹಾಸವನ್ನು ಒಪ್ಪುವ ಮನಸ್ಸಾಗಲಿಲ್ಲ. ಹಾಗಾಗಿ ಅಧ್ಯಯನ ನಡೆಸಿದೆ. ಆ ಅಧ್ಯಯನ ನಡೆಸಿದಂತೆ ಕಾದಂಬರಿಯ ಚೌಕಟ್ಟು, ಕಥಾಪಾತ್ರಗಳು ಗಟ್ಟಿಯಾಗುತ್ತ ಹೋದವು ಎಂದು ಲೇಖಕಿ ಸಹನಾ ವಿಜಯಕುಮಾರ್ ಇತ್ತೀಚೆಗೆ ನಡೆದ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬದ ಸಂದರ್ಭದಲ್ಲಿ ಹೇಳಿದ್ದರು. ಇಂತಹ ಅಧ್ಯಯನ ಆಧಾರಿತ ಕಾದಂಬರಿಯನ್ನು ಓದಿರುವ ಲೇಖಕಿ ಶೋಭಾ ರಾವ್ ಅವರು ಈ ಐತಿಹಾಸಿಕ ಕಾದಂಬರಿ “ಮಾಗಧ” ನಿಜವಾದ ಸಾಮ್ರಾಟ್ ಅಶೋಕನ ಪರಿಚಯ ಮಾಡಿಸಿಕೊಡುತ್ತದೆ. ಅಹಿಂಸೆ ಪಾಲಿಸಿದ ಅಶೋಕ ಎಂಬ ನಿರೂಪಣೆಗಿಂತ ಆತನ ಕ್ಷಾತ್ರತ್ವವನ್ನು ಮನದಟ್ಟುಮಾಡಿಕೊಡುತ್ತದೆ ಎಂದು ಹೇಳಿಕೊಂಡಿದ್ದಾರೆ. “ಮಾಗಧ” ಕಾದಂಬರಿಯನ್ನು ಅವರು ಪರಿಚಯ ಮಾಡಿಕೊಟ್ಟಿರುವುದು ಹೀಗೆ-
ಅಹಿಂಸೆ ಪಾಲಿಸಿದ ಅಶೋಕನಲ್ಲ, ಸಾಮ್ರಾಟ್ ಅಶೋಕನ ನಿಜ ವೈಭವ ವರ್ಣಿಸುವ ಕೃತಿ ಮಾಗಧ
“ಮಾತು ಬಲು ಕೆಟ್ಟದ್ದು, ಒಂದಕ್ಕೆರೆಡು ಬೆಳೆದು ಇರುವುದರ ಜೊತೆ ಇಲ್ಲದಿರುವುದೂ ಸೇರಿ ಬಾಯಲ್ಲಿ ಆಡುವುದು ಮನಸ್ಸಿನ ಸತ್ಯವನ್ನು ಮರೆಮಾಚುತ್ತದೆ. ಕ್ರಮೇಣ ಮನಸ್ಸು ಅದನ್ನೇ ಸತ್ಯವೆಂತ ನಂಬಿ ಮೂಲವನ್ನು ಅಳಿಸುತ್ತೆ.”
ಇತಿಹಾಸವೂ ಹೀಗೆ. ಅದರಲ್ಲೂ ಈ ದೇಶದ ಇತಿಹಾಸ ಈಗಿರುವುದು ಮೂಲವನ್ನು ಬಹುತೇಕ ಅಳಿಸಿದ್ದೇ ಅಂತ ಬಹುತೇಕ ಬಾರಿ ಅನ್ನಿಸುತ್ತಿತ್ತು. ಅಲ್ಲಲ್ಲಿ ಪುರಾವೆ ಸಿಗುತ್ತಿತ್ತು. ಮಾಗಧ ಪುರಾವೆಗಳನ್ನು ಆಧರಿಸಿ ನಿರೂಪಿತವಾದ ಕಾದಂಬರಿ. ಸಶಕ್ತ ಕಾದಂಬರಿ. ನಿಸ್ಸಂಶಯವಾಗಿಯೂ ಕನ್ನಡದ ಮೇರುಕೃತಿಗಳ ಸಾಲಿನಲ್ಲಿ ನಿಲ್ಲುವ ಕೃತಿಯಿದು.
ಇದು ಮಗಧ ಸಾಮ್ರಾಜ್ಯದ ಕತೆ, ಕಳಿಂಗ ಯುದ್ಧದ ಕತೆ, ಆ ಕಾಲದ ರಾಜಕೀಯ, ಧರ್ಮ, ಅರ್ಥವ್ಯವಸ್ಥೆ ಹೇಗಿತ್ತು ಅನ್ನುವುದರ ಕುರಿತಾದ ಕತೆ, ಸಾಮ್ರಾಟ್ ಅಶೋಕನ ಕತೆ, ಒಂದು ರಾಷ್ಟ್ರದ ನಾಯಕ ಹೇಗಿರಬೇಕು ಎಂದು ನಿರೂಪಿಸುವ ಕತೆ. ಇಲ್ಲಿಯ ಅಶೋಕ ನಾವು ಶಾಲೆಯಲ್ಲಿ ಓದಿದ ಅಶೋಕನ ಹಾಗೆ ಬರೀ ಸಾಲು ಮರಗಳನ್ನು ನೆಡೆಸಲಿಲ್ಲ, ಧರ್ಮ ಪ್ರಸಾರ ಮಾಡಲಿಲ್ಲ, ಯಾವುದೋ ಒಂದು ಮತಕ್ಕೆ ತನ್ನನ್ನು ತಾನು ಸೀಮಿತವಾಗಿಸಿಕೊಳ್ಳಲಿಲ್ಲ. ರಾಜಧರ್ಮದ ನಿಯಮಕ್ಕೆ ತಕ್ಕ ಹಾಗೆ ಬದುಕಿದ, ಚಾಣಕ್ಯನ ನಿಯಮ ಅನುಸರಿಸಿದ. ಭರತವರ್ಷದ, ಭರತ ಖಂಡದ ಐಕ್ಯತೆಗಾಗಿ ಹಗಲಿರುಳು ಶ್ರಮಿಸಿದ. ಯುವನರನ್ನು ಗಡಿಯಿಂದ ಈಚೆಗೆ ಕಾಲಿಡದ ಹಾಗೆ ನೋಡಿಕೊಂಡ. ಕಠಿಣವಾಗಬೇಕಾದಲ್ಲಿ ಕಠಿಣನಾಗಿ, ಮೃದುವಾಗ ಬೇಕಿದ್ದಲ್ಲಿ ಮೃದುವಾದರೂ ತೋರಿಸಿಕೊಳ್ಳದೆ ಎಲ್ಲಿಯೂ ಬಿಗಿ ಸಡಿಲಿಸದ, ಭಾವಾವೇಶಕ್ಕೆ ಒಳಗಾಗದ, ಕರ್ತವ್ಯನಿರತನಾದ, ಹಿಂಸೆ ಅನಿವಾರ್ಯವಾದಲ್ಲಿ ಕಿಂಚಿತ್ತೂ ಯೋಚಿಸದೆ ಮುನ್ನುಗ್ಗಿದ ಅವನು ನಿಜಾರ್ಥದ ರಾಜ.
ಚಾಣಕ್ಯನ ಅರ್ಥಶಾಸ್ತ್ರವನ್ನು ಪೂರ್ಣವಾಗಿ ಪರಿಪಾಲಿಸಿದವ. ರಾಷ್ಟ್ರವನ್ನು ಮುಖ್ಯವಾಗಿಸಿಕೊಂಡು ಉಳಿದದ್ದು ನಂತರ ಎಂದು ಬದುಕಿದವ. ಒಬ್ಬ ಶೂರ, ಶಾಸನಬದ್ಧ, ರಾಷ್ಟ್ರಕ್ಕಾಗಿಯೇ ಎಂಬಂತೆ ಬದುಕಿದ ಜೀವವನ್ನು ಕೇವಲ ಧರ್ಮ ಪ್ರಸಾರ ಮಾಡಿದ, ಸಾಲು ಮರಗಳನ್ನು ನಡೆಸಿದ, ಅಹಿಂಸೆ ಪಾಲಿಸಿದ ಎಂದು ಬಿಂಬಿಸಿ ಅವನ ಕ್ಷಾತ್ರತ್ವವನ್ನೇ ಮರೆಮಾಚಿದ್ದು ಅವನಿಗೆ ಮಾಡಿದ ಅವಮಾನ. ಮಾಗಧ ಓದಿದವರಿಗೆ ಇಲ್ಲಿಯ ನಿಜದ ಕ್ಷಾತ್ರ ತುಂಬಿದ ಅಶೋಕ ಕಾಣಿಸುತ್ತಾನೆ. ಬೆರಗು ಮೂಡಿಸುತ್ತಾನೆ. ಹೀಗಿದ್ದನಾ ಅವನು ಎಂದು ಅಚ್ಚರಿ ಹುಟ್ಟಿಸುತ್ತಾನೆ, ದುರಂತ ನಾಯಕ ಇವ ಅನ್ನಿಸಿ ಕಣ್ಣು ಮಂಜಾಗುವ ಹಾಗೆ ಮಾಡುತ್ತಾನೆ.
ರಾಜ್ಯಧರ್ಮ ಪಾಲಿಸಿದ ಸಾಮ್ರಾಟ್ ಅಶೋಕ
ಗಡಿ ಭದ್ರವಾಗಿದ್ದರೆ ಮಾತ್ರ ದೇಶ ಸುರಕ್ಷಿತ. ಅದರ ನಂತರ ಉಳಿದೆಲ್ಲಾ ಸಾಧ್ಯ ಎಂಬ ಸತ್ಯ ಅರಿತವನು ಅಶೋಕ. ಅದಕ್ಕಾಗಿಯೇ ಶ್ರಮಿಸಿದವನು. ಯುದ್ಧಾಕಾಂಕ್ಷಿ ಅಲ್ಲ. ಆದರೆ ಏಕತೆಯ ಪ್ರಶ್ನೆ ಬಂದಾಗ ಯಾವುದಕ್ಕೂ ಹೇಸದವನು. ಜನಪದಗಳಿಗೆ ಸ್ವಾತಂತ್ರ್ಯ ಕೊಟ್ಟರೂ ಅವರು ಸ್ವೇಚ್ಛಾಚಾರಿಗಳ ಹಾಗೆ ಕಟ್ಟೆಚ್ಚರದಿಂದ ಕಾದವನು, ತನ್ನ ಮಕ್ಕಳು ತನಗಿಂತ ಬಲಿಷ್ಠರಾಗಿ ರಾಷ್ಟ್ರ ಕಾಪಾಡಲಿ ಎಂದು ಬಯಸಿದವನು. ಅವನು ನೊಂದಿದ್ದು ಕಳಿಂಗದ ಜೊತೆ ಯುದ್ಧ ಮಾಡಿದಕ್ಕಾಗಿ ಅಲ್ಲ, ಅರ್ಥ ಮಾಡಿಕೊಳ್ಳದೆ ಯುದ್ಧ ಸೃಷ್ಟಿಸಿದ ಪರಿಸ್ಥಿತಿಗಾಗಿ. ಕೋಪಗೊಂಡಿದ್ದು ದೂರದೃಷ್ಟಿಯಿಲ್ಲದೆ ಈ ಕ್ಷಣದ ಲಾಭಕ್ಕೆ ಸ್ವಾರ್ಥಕ್ಕೆ. ವೈಯುಕ್ತಿಕ ಹಿತಾಸಕ್ತಿಗೆ ರಾಷ್ಟ್ರ ಹಿತ ಬಲಿಕೊಡುವವರನ್ನು ಕಂಡಾಗ. ಆ ನಂತರ ಅವನು ಯಾವ ಭಾವಾವೇಶಕ್ಕೂ ಒಳಗಾಗದೆ ಕಳಿಂಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ, ತನ್ನದೇ ಪ್ರತಿನಿಧಿಗಳನ್ನು ನಿಯಮಿಸಿ ಆಡಳಿತ ನಡೆಸಿ ರಾಜ್ಯಧರ್ಮ ಪಾಲಿಸಿದ.
ಭಿಕ್ಷುವಾಗಲು ಬಂದು ತನ್ನ ಮೂಲ ಕಸುಬು ಇಲ್ಲದೇ , ಸುಮ್ಮನೆ ಕೂರಲಾಗದೇ ತಳಮಳಗೊಂಡು ಮತ್ತೆ ತನ್ನ ಕಾಯಕಕ್ಕೆ ಮರಳಿ ಜೊತೆಗಾರರಿಗೆ ಅದರ ಮಹತ್ವ ಮೌನವಾಗಿಯೇ ಆಚರಿಸಿ ತೋರಿಸಿ ಕರ್ತವ್ಯ ನಿರ್ವಹಿಸಿದ ತೃಪ್ತಿಯಲ್ಲಿ ನಿರಾಳವಾಗುವ ಅದರಲ್ಲೇ ಅರಿವು ಕಂಡುಕೊಳ್ಳುವ ಹೆಣ ಸುಡುವ ಕೆಲಸದವ, ಭಿಕ್ಷೆ ನೀಡುತ್ತಿದ್ದ ಕುಟುಂಬದ ಸಂಕಷ್ಟದ ಸಮಯದಲ್ಲಿ ತನ್ನ ವೈಯುಕ್ತಿಕ ಸಾಧನೆಗಿಂತ ಮಾನವೀಯತೆ ಮುಖ್ಯ ಎಂದು ದೀಕ್ಷೆ ತ್ಯಜಿಸಿ ಅವರಿಗೆ ಬೆಂಬಲವಾಗಿ ನಿಲ್ಲಲು ಹೊರಡುವ ಮುನಿ, ಅವರನ್ನು ಅಷ್ಟೇ ಗೌರವದಿಂದ ಕಳಿಸಿಕೊಡುವ ಇತರ ಜೈನ ಮುನಿಗಳು, ನೇರವಾಗಿ ಹೇಳಿಯೂ ಹೇಳದ ಪಾಠ ಒಂದೇ ಅದೇ ಕರ್ತವ್ಯ ಪಾಲನೆ. ಜವಾಬ್ದಾರಿ ನಿರ್ವಹಣೆ.
“ಮಾಗಧ”ದಲ್ಲಿ ಹೆಣ್ಣು ಪಾತ್ರಗಳು ತುಂಬು ಸಶಕ್ತ ಪಾತ್ರಗಳು
ಇಲ್ಲಿನ ಹೆಣ್ಣು ಪಾತ್ರಗಳು ತುಂಬು ಸಶಕ್ತ ಪಾತ್ರಗಳು. ಬಹುಶಃ ಹೆಣ್ಣೇ ಹೆಣ್ಣಿನ ಪಾತ್ರ ಚಿತ್ರಿಸಿದ್ದಕ್ಕಾಗಿ ಇರಬಹುದೇನೋ ಇಲ್ಲಿ ನೈಜವಾಗಿ ಕಾಣಿಸುತ್ತದೆ. ತ್ಯಾಗ ಇದ್ದರೂ ಆತ್ಮಾಭಿಮಾನ ಕಳೆದುಕೊಂಡಿಲ್ಲ. ಜವಾಬ್ದಾರಿಯನ್ನು ಸಮಸಮವಾಗಿ ನಿರ್ವಹಿಸಿದ ರೀತಿ ಕಾಣಿಸುತ್ತದೆ. ಇಲ್ಲಿ ಬರುವ ಪ್ರತಿ ಪಾತ್ರವೂ ಅದೆಷ್ಟು ಅಚ್ಚುಕಟ್ಟಾಗಿ ವರ್ತಿಸಿವೆ ಎಂದರೆ ಅದನ್ನು ಓದಿಯೇ ಅನುಭವಿಸಬೇಕು. ಪ್ರತಿ ಪಾತ್ರವೂ ಹೇಳುವುದು ಒಂದೇ ಜವಾಬ್ದಾರಿ ನಿರ್ವಹಣೆ.
ಸಹಸ್ರ ವರ್ಷಗಳ ಕಾಲ ತಾನು ಸ್ಥಾಪಿಸಿದ ಧರ್ಮ ಇರಬೇಕು ಎನ್ನುವ ಆಸೆ, ಅದಕ್ಕಾಗಿ ರಾಜಾಶ್ರಯದ ಮೊರೆ, ಒಮ್ಮೆ ಬೆಂಬಲ ಸಿಕ್ಕ ಮೇಲೆ ಅದನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆ, ಕೇವಲ ವಿಸ್ತರಣೆ ಉದ್ದೇಶದಿಂದ ಬಂದವರನ್ನೆಲ್ಲಾ ಸುಮ್ಮಗೆ ಸೇರಿಸಿಕೊಳ್ಳುತ್ತಾ ಹೋಗುವುದು, ಹಾಗೆ ಸೇರಿಸಿಕೊಳ್ಳುವ ಜನರಿಗೆ ಏನು ಮಾಡಬೇಕು ತಿಳಿಯದೆ ಗೊಂದಲ, ಅದರಿಂದ ಉಂಟಾಗುವ ಕೋಲಾಹಲ, ಸೋಮಾರಿತನ ಜವಾಬ್ದಾರಿ ರಹಿತ ಜೀವನದ ಲಾಲಸೆ ಎಲ್ಲವೂ ಹೇಗೆ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಿಳಿಯುತ್ತದೆ. ಯಾವುದೇ ಆದರೂ ಸ್ವ ಶಕ್ತಿಯಿಂದ ಮಾತ್ರವೇ ಪ್ರವರ್ಧಮಾನಕ್ಕೆ ಬರಲು ಸಾಧ್ಯ, ಯಾವುದೋ ಆಧಾರವನ್ನು ಅವಲಂಬಿಸಿ ಬೆಳೆದದ್ದು ಆಧಾರ ಕಳಚಿದ ಕೂಡಲೇ ನಾಶವಾಗುತ್ತದೆ. ತನ್ನ ಜೊತೆಗೆ ಇತರರನ್ನೂ ನಾಶ ಮಾಡುತ್ತದೆ. ಹಾಗಾಗಿ ಅಶೋಕನಿಗೆ ಕೇವಲ ಪ್ರಸಾರವಾಗಬೇಕು ಎನ್ನುವ ಕಾರಣಕ್ಕೆ ವಿಸ್ತರಣೆಯಾಗುವ, ಮೂಲ ಕರ್ತವ್ಯ ಮರೆತು ಪಲಾಯನ ಮಾಡುವ ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಆಸ್ಥೆ ಇರಲಿಲ್ಲ, ಹೇಗೆ ನಡೆಯುತ್ತದೆ ಎಂದು ತಿಳಿಯುವ ಕುತೂಹಲವಿತ್ತು ಅಷ್ಟೇ. ಅವನು ಯಾವ ಧರ್ಮವನ್ನೂ ಸಾರಲಿಲ್ಲ ಎನ್ನುವುದು ಅವನ ಶಾಸನಗಳ ಅಧ್ಯಯನ ತಿಳಿಸುತ್ತದೆ ಎನ್ನುವುದಕ್ಕೆ ಆಧಾರ ಇಲ್ಲಿದೆ. ಆಸೆಯೇ ದುಃಖಕ್ಕೆ ಮೂಲ ಎಂದವರಿಗೆ ಸಹಸ್ರ ವರ್ಷಗಳ ಇದು ಜೀವಂತ ಇರಬೇಕು ಅನ್ನಿಸಿದ್ದೂ ಆಸೆಯೇ ಅಲ್ಲವಾ ಎನ್ನುವ ಪ್ರಶ್ನೆ ಮನಸ್ಸಿಗೆ ಕನ್ನಡಿ ಹಿಡಿಯುತ್ತದೆ.
ನಾವು ಆಳಿಸಿಕೊಳ್ಳುವ ಮನಸ್ಥಿತಿಯವರು ಎಂಬ ಭಾವವನ್ನು ಚುಚ್ಚುತ್ತದೆ ಮಾಗಧ
ಅಲೆಗ್ಸಾಂಡರ್ ಮತ್ತೆ ಮತ್ತೆ ಬರಬೇಕು, ವಿಂಧ್ಯವನ್ನು ದಾಟಿ ಬರಬೇಕು ಆಗ ಮೂಡುತ್ತೇ ಐಕ್ಯಮತ್ಯ ಅನ್ನೋದು ಈ ಕಾದಂಬರಿಯಲ್ಲಿ ಬರುವ ಸಾಲು, ಭಾರತೀಯರ ಮನಸ್ಥಿತಿಗೆ, ನಿರ್ವೀಯತೆಗೆ, ಕೂಪ ಮಂಡೂಕದ ಆಲೋಚನೆಗೆ, ನಾವು ಅನ್ನದೆ ನಾನು ಅನ್ನುವ ಭಾವಕ್ಕೆ ಹಿಡಿದ ಕನ್ನಡಿಯಂತಹ ಸಾಲು. ಈ ಕ್ಷಣಕ್ಕೂ ಪ್ರಸ್ತುತವಾಗಿರುವ ಸಾಲು. ಅಶೋಕ ಸಿಂಹಾಸನ ಏರಿದ್ದು, ಆಳಿದ್ದು, ಯುದ್ಧ ಮಾಡಿದ್ದು ಇದೊಂದು ಕಾರಣಕ್ಕೆ. ನಾವು ಆಳಿಸಿಕೊಳ್ಳುವ ಮನಸ್ಥಿತಿಯವರು ಎಂದೋ ಎಲ್ಲೋ ಓದಿದ ಸಾಲು ಮತ್ತೆ ಮತ್ತೆ ಮಾಗಧ ಓದುವಾಗ ನೆನಪಾಗುತ್ತಿದ್ದದ್ದು ಸುಳ್ಳಲ್ಲ.
770 ಪುಟಗಳ ಬೃಹತ್ ಕಾದಂಬರಿ. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾನು ಕಂಡ ಅತ್ಯುತ್ತಮ, ವಸ್ತುನಿಷ್ಠ ಕಾದಂಬರಿ. ಪ್ರತಿ ಸಾಲು ಲೇಖಕಿಯ ಅಧ್ಯಯನ ಶೀಲತೆಗೆ, ಶ್ರದ್ಧೆಗೆ, ಈ ಕಾದಂಬರಿಗೆ ತನ್ನನ್ನು ತಾನು ಸಮರ್ಪಿಸಿಕೊಂಡ ರೀತಿಗೆ ಸಾಕ್ಷಿ. ಕೊಟ್ಟ ಪ್ರತಿ ಪೈಸಕ್ಕೂ ನ್ಯಾಯ ಒದಗಿಸುವ, ಮತ್ತೆ ಮತ್ತೆ ಓದಬಲ್ಲ, ಕನ್ನಡದ ಅತ್ಯುತ್ತಮ ಕೃತಿಗಳ ಸಾಲಿನಲ್ಲಿ ನಿಲ್ಲಬಲ್ಲ ಕಾದಂಬರಿ.
ಬಹಳ ವರ್ಷಗಳ ನಂತರ ಅಷ್ಟು ಗಾತ್ರದ ಕಾದಂಬರಿ ಓದುತ್ತಾ ಕೆಳಗಿಡಲು ಸಂಕಟವೆನಿಸಿ, ಕೆಲಸ ಮಾಡುತ್ತಾ, ಏಕಾಂತ ಸೃಷ್ಟಿಸಿಕೊಳ್ಳುತ್ತಾ, ನಿದ್ದೆಯ ವೇಳೆಯನ್ನು ಮುಂದೂಡುತ್ತಾ, ಮಗನಿಂದ ತಪ್ಪಿಸಿಕೊಳ್ಳುತ್ತಾ, ಯಾರೂ ರಗಳೆ ಮಾಡಬೇಡಿ ಎಂದು ರೂಮಿನಲ್ಲಿ ಬಂಧಿಯಾಗುತ್ತಾ ಮುಂದೇನು ಎಂದು ಕುತೂಹಲ ಕಾಪಿಡುತ್ತಾ, ಅಲ್ಲಲ್ಲಿ ಆಲೋಚಿಸುತ್ತಾ, ವಿಷಾದ ಅನುಭವಿಸುತ್ತಾ, ವಾಹ್ ಎಂದುಕೊಳ್ಳುತ್ತಾ, ಹೊಸ ಅರಿವಿಗೆ ಪಕ್ಕಾಗುತ್ತಾ, ಅಚ್ಚರಿಗೊಳ್ಳುತ್ತಾ, ಈ ಕ್ಷಣಕ್ಕೆ ಇದನ್ನು ಓದುವ ಹೊರತಾಗಿ ಬೇರೇನೂ ಇಲ್ಲವೇನೋ ಎನ್ನುವ ಹಾಗೆ ಮುಗಿಸದೆ ಇರಲಾರೆ ಎಂಬ ತವಕದಲ್ಲಿಯೇ ಓದಿದೆ, ಅದರೊಟ್ಟಿಗೆ ಜೀವಿಸಿದೆ. ಊಹೂ ಅದು ಓದಿಸಿಕೊಂಡಿತು. ಭಾಷೆ, ಶೈಲಿ, ಅಧ್ಯಯನ ಶೀಲತೆ, ಕಥನಕಟ್ಟುವ ರೀತಿ ಎಲ್ಲವೂ ಒಂದಕ್ಕೊಂದು ಪೈಪೋಟಿ ಕೊಟ್ಟು ಒಂದರೊಳಗೆ ಒಂದು ಮಿಳಿತವಾಗಿ ಸಮೃದ್ಧ ರಸಪಾಕವಾಗಿ ಮಾಗಧ ರೂಪುಗೊಂಡಿದೆ. ಅಯ್ಯೋ ಮುಗಿದು ಹೋಯಿತಾ ಎಂದೆನಿಸಿದೆ. ಹೆಮ್ಮೆಯೂ ವಿಷಾದವೂ ಏಕಕಾಲದಲ್ಲಿ ಮೂಡಿದೆ.
ಕನ್ನಡದಲ್ಲಿ ಓದುಗರಿಲ್ಲಾ ಅನ್ನುವುದು ಭ್ರಮೆ, ಸತ್ವಭರಿತ ಕೃತಿಗಳು ಅಷ್ಟಾಗಿ ಬರುತ್ತಿಲ್ಲ ಅನ್ನೋದು ಸರಿಯೇನೋ. ಮಾಗಧ ಇನ್ನಷ್ಟು ಮುದ್ರಣ ಕಾಣಲಿ, ಕ್ಷಾತ್ರತ್ವ ಈ ಕ್ಷಣದ ತುರ್ತು, ಅಶೋಕನ ಕ್ಷಾತ್ರತ್ವ ನಮ್ಮೊಳಗೆ ಕಿಡಿ ಮೂಡಿಸಲಿ ಅನ್ನೋದು ಹಾರೈಕೆ.
ಬರಹ: ಶೋಭಾ ರಾವ್, ಲೇಖಕಿ
ಪುಸ್ತಕದ ಹೆಸರು: ಮಾಗಧ
ಲೇಖಕರು: ಸಹನಾ ವಿಜಯಕುಮಾರ್
ಪ್ರಕಾಶಕರು: ಸಾಹಿತ್ಯ ಭಂಡಾರ ಅಂಗಡಿ ಸಂ. 8, ಜೆಎಂ ಲೇನ್, ಬಳೆಪೇಟೆ, ಚಿಕ್ಕಪೇಟೆ, ಬೆಂಗಳೂರು-560053.
ಖರೀದಿಗೆ ಸಂಪರ್ಕ: 080 2287 7618/ 7483681708 (ವಾಟ್ಸ್‌ಆಪ್ ಆರ್ಡರ್)
ಬೆಲೆ: 915 ರೂಪಾಯಿ
ಮಗಧ ಸಮ್ರಾಟ್ ಅಶೋಕ ಮಹಾಅಹಿಂಸಾಮೂರ್ತಿ ಎಂಬುದು ಸತ್ಯಕ್ಕೆ ದೂರವಾದುದು: ಸಹನಾ ವಿಜಯಕುಮಾರ್
ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬದ ಸಂದರ್ಭದಲ್ಲಿ ಮಾಗಧ ಕೃತಿಯ ಲೇಖಕಿ ಸಹನಾ ವಿಜಯ ಕುಮಾರ್ ಅವರು, ಕೃತಿಗೆ ಸಂಬಂಧಿಸಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಜೊತೆ ನಡೆಸಿದ ಮಾತುಕತೆಯ ವಿಡಿಯೋ ಇಲ್ಲಿದೆ.