ಪುಸ್ತಕ ಪರಿಚಯ: ಬ್ರಾಹ್ಮಣರ ವಲಸೆಯ ಹೊಳಹು ಮೂಡಿಸಿದ ಕಾದಂಬರಿ ‘ವೈವಸ್ವತ’; ಪ್ರಭಾಕರ ಕಾರಂತ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ಪರಿಚಯ: ಬ್ರಾಹ್ಮಣರ ವಲಸೆಯ ಹೊಳಹು ಮೂಡಿಸಿದ ಕಾದಂಬರಿ ‘ವೈವಸ್ವತ’; ಪ್ರಭಾಕರ ಕಾರಂತ ಬರಹ

ಪುಸ್ತಕ ಪರಿಚಯ: ಬ್ರಾಹ್ಮಣರ ವಲಸೆಯ ಹೊಳಹು ಮೂಡಿಸಿದ ಕಾದಂಬರಿ ‘ವೈವಸ್ವತ’; ಪ್ರಭಾಕರ ಕಾರಂತ ಬರಹ

Book Review: ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿಯನ್ನು ಓದುತ್ತ ಹೋದಂತೆ, ಬ್ರಾಹ್ಮಣರ ವಲಸೆಯ ಹೊಳಹು ನೀಡುತ್ತ ಹೋಯಿತು. ಅಹಿಚ್ಛತ್ರ ಎಂಬ ಊರು ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವಂತೆ ಮಾಡಿದೆ ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿಯು ಬ್ರಾಹ್ಮಣರ ವಲಸೆಯ ಹೊಳಹು ನೀಡಿತು. ಹಲವು ಚಿಂತನೆಗಳನ್ನು ಒರೆಗೆ ಹಚ್ಚಿತು ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟಿದ್ದಾರೆ.
ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿಯು ಬ್ರಾಹ್ಮಣರ ವಲಸೆಯ ಹೊಳಹು ನೀಡಿತು. ಹಲವು ಚಿಂತನೆಗಳನ್ನು ಒರೆಗೆ ಹಚ್ಚಿತು ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ, ಕೌಟುಂಬಿಕ ಕಾದಂಬರಿಗಳು ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ಅನೇಕ ಸಂದರ್ಭಗಳಲ್ಲಿ ಇವು ಪ್ರಚಲಿತ ವಿದ್ಯಮಾನಗಳಿಗೆ ಅನುಗುಣವಾಗಿಯೂ ಇರುತ್ತವೆ. ಇನ್ನು ಕೆಲವೊಮ್ಮೆ ಇತಿಹಾಸದ ಕಡೆಗೆ ಹೊಳಹು ನೀಡುವಂಥ ವಿಚಾರಗಳನ್ನೂ ಮುಂದಿಡುತ್ತವೆ. ರೇಖಾ ಕಾಖಂಡಕಿ ಅವರ ವೈವಸ್ವತ ಕಾದಂಬರಿಯನ್ನು ಓದಿದ ಲೇಖಕ, ಚಿಂತಕ ಪ್ರಭಾಕರ ಕಾರಂತ ಅವರು, ಅದರಲ್ಲಿ ಬ್ರಾಹ್ಮಣರ ವಲಸೆಯ ಹೊಳಹು ಸಿಕ್ಕಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿ

ರೇಖಾ ಕಾಖಂಡಕಿಯವರ "ವೈವಸ್ವತ"ಓದಿ ಮುಗಿಸಿದಾಗ ನನಗೆ ಬ್ರಾಹ್ಮಣರ ವಲಸೆಯ ಹೊಳಹೊಂದು ಸಿಕ್ಕಂತಾಯಿತು. ಪೂಜೆ ಪುನಸ್ಕಾರಗಳಲ್ಲಿ ಸಂಕಲ್ಪ ಮಾಡುವಾಗ ಬಹುತೇಕ ಬ್ರಾಹ್ಮಣರು ಗೋದಾವರ್ಯಾಃ ಧಕ್ಷಿಣ ತೀರೇ ಎಂಬುದು ಬರುತ್ತದೆ.ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂದ್ರದ ಮೂಲಕ ಸಾಗುವ ಗೋದಾವರೀ ತೀರದಲ್ಲಿ ಒಂದು ಕಾಲದಲ್ಲಿ ಬ್ರಾಹ್ಮಣರು ವಾಸವಾಗಿದ್ದುದು ಇದರಿಂದ ಖಚಿತವಾಗುತ್ತದೆ.

ನಿಟಿಲಾಪುರ ಕೃಷ್ಣ ಮೂರ್ತಿಯವರು ಸಹ್ಯಾದ್ರಿ ಖಂಡದ ಉಲ್ಲೇಖದಂತೆ ಕದಂಬವಂಶದ ಮಯೂರವರ್ಮನ ಮೊಮ್ಮಗ ಲೋಕಾದಿತ್ಯ ರಾಜನು ಬ್ರಾಹ್ಮಣ ಸಮೂಹವನ್ನು ಅಹಿಚ್ಛತ್ರದಿಂದ ಕರಾವಳಿ ಜಿಲ್ಲೆಗೆ ಕರೆತಂದರು ಎಂದಿದ್ದಾರೆ. ಈ ಅಹಿಚ್ಛತ್ರ ಅರ್ಜುನ ಗೆದ್ದು ದ್ರೋಣಾಚಾರ್ಯರಿಗೆ ವಹಿಸಿದ ರಾಜ್ಯ ಎಂದು ಸಂಸ್ಕೃತ _ಕನ್ನಡ ಶಬ್ದಕೋಶ ದಲ್ಲಿದ್ದರೆ, ಪುರಾಣ ನಾಮ ಚೂಡಾಮಣಿಯಲ್ಲಿ ರೋಹಿಲ ಖಂಡದ ಉತ್ತರ ಪಾಂಚಾಲದ ರಾಜದಾನಿ ಎಂದಿದೆ ಎಂದು ಸಂಶೋಧಕ ಪ.ನಾ.ಮಯ್ಯ ಹೇಳಿದ್ದಾರೆ. ಚಂದ್ರಶೇಖರ ಹೊಳ್ಳ ಹರಿದ್ವಾರ ಹೃಷಿಕೇಷದ ಶಿವಾಲಿ ಪರ್ವತ ಶ್ರೇಣಿಯ ಊರುಗಳ ಆಚಾರ ವಿಚಾರ,ಪೂಜಾ ವಿಧಾನ ಮತ್ತು ಊರ ಹೆಸರುಗಳು ಕರಾವಳಿಯ ಊರುಗಳಿಗೆ ಹೋಲುತ್ತದೆ ಎಂದು ತಿಳಿಸಿದ್ದಾರೆ. ಬ್ರಾಹ್ಮಣರು ಅಹಿಚ್ಛತ್ರದಿಂದ ಗೋದಾವರಿಯ ತೀರಕ್ಕೆ ಬಂದು ಕರಾವಳಿಗೆ ವಲಸೆ ಬಂದಿರಬೇಕು ಎಂಬ ಊಹೆಗೆ ಇದು ಅವಕಾಶ ಕಲ್ಪಿಸಿದೆ. ಶಾಸನ ತಜ್ಞ ಪ್ರೊ ಗುರುರಾಜ ಭಟ್ಟರು ಮಯೂರವರ್ಮ ಅಥವ ಅವರ ಉತ್ತರಾಧಿಕಾರಿಗಳು ಬ್ರಾಹ್ಮಣರನ್ನು ಕರೆತಂದ ಕುರಿತು ಶಾಸನಾಧಾರವಿಲ್ಲ ಎಂದು ಸ್ಪಸ್ಟ ಪಡಿಸಿದ್ದಾರೆ. ತುಳುನಾಡು ಮಯೂರವರ್ಮನ ಆಳ್ವಿಕೆಗೇ ಒಳಪಟ್ಟ ಕುರಿತು ಯಾವುದೇ ಆಧಾರವಿಲ್ಲ ಎಂದು ಕೆ.ವಿ.ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. ಪರಶುರಾಮನು ಬ್ರಾಹ್ಮಣ ಸಮೂಹವನ್ನು ಉತ್ತರದಿಂದ ಕರೆತಂದ ಎಂದು ಮತ್ತೊಂದು ಪುರಾಣ ಹೇಳುತ್ತದೆ.

ಬ್ರಾಹ್ಮಣರ ಮೂಲ ಅಹಿಚ್ಛತ್ರ; ತಾಳಗುಪ್ಪ ಶಾಸನದ ಉಲ್ಲೇಖ

ಪ.ನಾ.ಮಯ್ಯರು ಹೇಳುವಂತೆ ಮಯೂರವರ್ಮನ ಆಳ್ವಿಕೆ ಕ್ರಿ. ಶ.350 ರಲ್ಲಿ ಆರಂಭವಾಗಿದ್ದು ಅವರ ಮಗ ಅಥವಾ ಮೊಮ್ಮಗ ಬ್ರಾಹ್ಮಣರನ್ನು ಎಂಟನೇ ಶತಮಾನದಲ್ಲಿ ಕರೆ ತಂದಿದ್ದು ಹೊಂದಿಕೆಯಾಗದು.ಗುರುರಾಜ ಭಟ್ಟರು ತಾಳಗುಪ್ಪ ಶಾಸನವನ್ನು ಉಲ್ಲೇಖಿಸಿ ಮುಕ್ಕಣ್ಣ 32 ಬ್ರಾಹ್ಮಣರನ್ನೂ 12000 ಅಗ್ನಿಹೋತ್ರಿಗಳನ್ನು ಅಹಿಚ್ಛತ್ರದಿಂದ ಕರೆತಂದು ಸ್ಥಾನಗುಂದ ಅಗ್ರಹಾರದಲ್ಲಿ ಸ್ಥಾಪಿಸಿದ್ದನ್ನು ವಿವರಿಸಿದ್ದಾರೆ.ಸೊರಬ ಶಾಸನದಲ್ಲಿ ಶಿವಮೊಗ್ಗ ಕುಪ್ಪತ್ತೂರು ಅಗ್ರಹಾರ ಬ್ರಾಹ್ಮಣ ವಾಸಸ್ಥಳ ಆಗಿದ್ದನ್ನು ತಿಳಿಸುತ್ತದೆ. ಚೋಳರ ದಾಳಿ ಮತ್ತು ಕದಂಬರ ಅಂತಃಕಲಹದ ಕಾರಣ ಈ ಬ್ರಾಹ್ಮಣರು ತುಳುನಾಡಿಗೆ ವಲಸೆ ಬಂದರಬಹುದು. ಅವರು ಶಿವಳ್ಳಿ, ಕೋಟ,ಕಂದಾವರ, ಪಂಚಗ್ರಾಮ ಗಳಲ್ಲಿ ನೆಲೆನಿಂತಿರಬೇಕು. ಇದೇ ಮುಂದೆ ಆಯಾ ಪಂಗಡವಾಯಿತು ಎಂದು ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ.

ಪ.ನಾ.ಮಯ್ಯರು ಇದನ್ನೆಲ್ಲಾ ಅಭ್ಯಸಿಸಿ ಶಂಕರಾಚಾರ್ಯರು ಕೊಲ್ಲೂರು ಮತ್ತು ಕುಮಾರಾದ್ರಿಗೆ ಬೇಟಿ ನೀಡಿ ಬ್ರಾಹ್ಮಣರಲ್ಲಿ ವಿವಿಧ ದೇವತಾರಾಧನೆಯ ಬಿನ್ನ ಅಭಿಪ್ರಾಯ ತೊಡೆಯಲು ಪಂಚಾಯತನ ಪೂಜಾ ಪದ್ದತಿ ಜಾರಿಗೆ ತಂದರು ಎಂಬುದನ್ನು ಶಂಕರ ವಿಜಯದ ಆಧಾರದಲ್ಲಿ ಒದಗಿಸುತ್ತಾರೆ. 7 ನೇ ಶತಮಾನದಲ್ಲೇ ತುಳುನಾಡಿನಲ್ಲಿ ಬ್ರಾಹ್ಮಣ ಅಸ್ತಿತ್ವ ಇದ್ದುದನ್ನು ವಡ್ಡರ್ಸೆ ಮಹಾಲಿಂಗೇಶ್ವರ ಶಾಸನ ಸ್ಪಸ್ಟಪಡಿಸುವುದನ್ನೂ ವಿವಿಧ ತಜ್ಞರನ್ನು ಉಲ್ಲೇಖಿಸಿ ಮಯ್ಯರು ತಿಳಿಸುತ್ತಾರೆ.

ವೈವಸ್ವತ ಕಾದಂಬರಿಯಲ್ಲಿ ಬ್ರಾಹ್ಮಣರ ವಲಸೆಯ ಹೊಳಹು

ವೈವಸ್ವತ ಕಾದಂಬರಿಯೂ ಒಂದು ಕುಟುಂಬದ ವಲಸೆ ಕಥನವಾಗಿದೆ. ಅದಕ್ಕಾಗಿ ಲಭ್ಯವಿರುವ ಚಾರಿತ್ರಿಕ ಗ್ರಂಥವನ್ನು ಲೇಖಕಿ ಅಧ್ಯಯನ ಮಾಡಿದ್ದಾರೆ. ಆಂಧ್ರದ ಓರಂಗಲ್ ನಿಂದ 1367 ನೇ ಇಸವಿಯಲ್ಲಿ ವಲಸೆ ನಡೆದಿದ್ದನ್ನು ಅವರು ಉಲ್ಲೇಖಿಸುತ್ತಾರೆ.

ಅಹಮದ್ ನಗರದ ಮಹಮ್ಮದ್ ಷಹಾ ನಿಂದ ಆದ ಓರಂಗಲ್ ದಾಳಿ, ಅಲ್ಲಾವುದ್ದೀನ್ ಖಿಲ್ಜಿ ದಾಳಿ ಸಂದರ್ಭ ಆ ಪ್ರದೇಶದಲ್ಲಿ ವಲಸೆ ನಡೆದಿದೆ. ಮುಸಲ್ಮಾನರ ಆಡಳಿತದಲ್ಲಿ ಮನೆಯ ಹೆಂಗಸರನ್ನು ಹೊತ್ತುಕೊಂಡು ಹೋಗುವ ಘಟನೆ ವ್ಯಾಪಕವಾಯಿತು. ಆಸ್ತಿ ಪಾಸ್ತಿಯನ್ನು ಭಲಾತ್ಕಾರವಾಗಿ ಕಿತ್ತುಕೊಳ್ಳಲಾಗುತ್ತಿತ್ತು. ಗೋಮಾಂಸ ಭಕ್ಷಣೆ ಮಾಡಿಸಿ ಮತಾಂತರ ಮಾಡಲಾಗುತ್ತಿತ್ತು. ಆಗ ಆಂದ್ರಪ್ರದೇಶದಿಂದ ದೊಡ್ಡ ವಲಸೆ ನಡೆದಿದೆ. ಬಹುತೇಕ ಬ್ರಾಹ್ಮಣರು ಆಗಲೇ ವಲಸೆ ಬಂದಿರಬೇಕು ಎಂದು ನನಗೆ ಅನಿಸಿತು. ನೋಡಿದರೆ ಡಾ.ಶಿವರಾಮ ಕಾರಂತರೂ 14 ನೇ ಶತಮಾನದಲ್ಲಿ ಬ್ರಾಹ್ಮಣರು ಮಲ್ಲಿಕಾಫರನ ಧಾಳಿಯಾದಾಗ ಬರಿಗೈಯಲ್ಲಿ ಊರು ಬಿಟ್ಟರು ಎಂದು ಅಭಿಪ್ರಾಯ ಪಟ್ಟಿದ್ದನ್ನು ಪ.ನಾ.ಮಯ್ಯರೂ ದಾಖಲಿಸಿದ್ದಾರೆ. ಕೋಟದ ಗುರುನರಸಿಂಹ ದೇವಸ್ಥಾನದ ಅರ್ಚಕರ ಪೂರ್ವಿಕರು ತೆಲಗು ಮಾತನಾಡುತ್ತಿದ್ದುದನ್ನು ಮಯ್ಯರು ದಾಖಲಿಸಿದ್ದಾರೆ.

ಗೋವಾದಲ್ಲಿ ಪೋರ್ಚುಗೀಸರು ಬರುವುದಕ್ಕೂ ಮೊದಲು ಆಂದ್ರದಿಂದ ಈ ವಲಸೆ ನಡೆದಿದೆ. ನಂಬಿದ ಧರ್ಮ ಬಿಡಲಾಗದೇ ಮತ್ತು ಮನೆ ಹೆಂಗಸರನ್ನು ಹೆಣ್ಣು ಮಕ್ಕಳನ್ನು ಮುಸಲ್ಮಾನರ ಪಾಲಾಗದಂತೆ ರಕ್ಷಿಸಲು ಬ್ರಾಹ್ಮಣರು ಊರೂರುಗಳಿಂದ ಚೆಲ್ಲಾ ಪಿಲ್ಲಿಯಾಗಿ ಧಕ್ಷಿಣಮುಖವಾಗಿ ವಲಸೆ ಬಂದರು ಎಂಬ ವಾದವೇ ಹೆಚ್ಚು ಸಮಂಜಸವಾಗಿದೆ.

ತುಳುನಾಡಿನಲ್ಲಿ ನಲೆಸಿದ ಬ್ರಾಹ್ಮಣರು ಶಂಕರಾಚಾರ್ಯರ ಪ್ರಭಾವದಿಂದ ಅದ್ವೈತ ಅನುಯಾಯಿಗಳಾದರು. ಮುಂದೆ ಮಧ್ವಾಚಾರ್ಯರ ಕಾಲದಲ್ಲಿ ಮಧ್ವ ಮತ ಪ್ರಚಾರಕ್ಕೆ ಬಂದಿತು. ಆ ನಂತರ ಶ್ರೀ ವಾದಿರಾಜರ ಕಾಲದಲ್ಲಿ ಮುದ್ರಾಧಾರಣೆ ಕಡ್ಡಾಯಗೊಳಿಸಿದಾಗ ಅನೇಕ ಬ್ರಾಹ್ಮಣರು ಶೃಂಗೇರಿಯತ್ತ ವಲಸೆ ಬಂದರು. ಶೃಂಗೇರಿಯ ಶಿವಳ್ಳಿಯೆಂಬ ಬ್ರಾಹ್ಮಣರು 1599 ರಲ್ಲಿ ಶೃಂಗೇರಿಯ ಸಮೀಪ ಆನೆಗುಂದದಲ್ಲಿ ದೇವಸ್ಥಾನದಲ್ಲಿ ಶೃಂಗೇರಿಯ ಮಠ ನೆಲೆಕಲ್ಪಿಸಿದ ಕುರಿತು ಶೃಂಗೇರಿಯ ಕಡತದಲ್ಲಿ ದಾಖಲಾಗಿದೆ. ಕಂಕನಾಡಿಯ ಮ.ಸು.ಅಚ್ಯುತ ಶರ್ಮ ಎಂಬುವವರು ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನೆಲೆ ಎಂಬ ಕೃತಿ 1969 ರಲ್ಲಿ ಪ್ರಕಟಿಸಿದ್ದು ಅದರಲ್ಲಿ ಮುದ್ರಾಧಾರಣೆಗೆ ಒಪ್ಪದ ಬ್ರಾಹ್ಮಣರನ್ನು ಅಲ್ಲಿಂದ ಓಡಿಸಿದ್ದನ್ನು ಕೆಲವು ದಾಖಲೆ ಆಧಾರದಲ್ಲಿ ವಿವರಿಸಿದ್ದಾರೆ. ಸ್ಥಾನಿಕ ಬ್ರಾಹ್ಮಣ ಸಂಘದ ಪುಸ್ತಕದಲ್ಲೂ ಈ ವಿವರಗಳು ಬರುತ್ತವೆ. ಹರಿಹರಪುರ ಮಠದ ಪುಸ್ತಕಗಳಲ್ಲೂ ಇಂತಹ ಉಲ್ಲೇಖಗಳಿವೆ.

ಕೋಟ ಬ್ರಾಹ್ಮಣರ ವೃತ್ತಾಂತ

ಇದನ್ನೆಲ್ಲಾ ಒಟ್ಟೂ ಸೇರಿಸಿದಾಗ ನಮ್ಮ ಕೂಟ ಬ್ರಾಹ್ಮಣ ಪಂಗಡದ ಕುರಿತು ನನಗೆ ಕೆಲ ಅನುಮಾನ ಕಾಡುತ್ತದೆ. ಕೂಟ ಬ್ರಾಹ್ಮಣರು ಕೋಟದ ನರಸಿಂಹ ದೇವಸ್ಥಾನದ ಪೂಜಾ ಕೈಂಕರ್ಯ ಮಾಡಿಕೊಂಡು ಬಂದವರು. ಈ ನರಸಿಂಹ ವಿಗ್ರಹ ಎಂಟನೇ ಶತಮಾನದ್ದೆಂದು ಪ್ರೊ ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ಶಂಕರಾಚಾರ್ಯರ ಪ್ರಭಾವದಿಂದ ಪಂಚಾಯತನ ಪೂಜೆ ಮಾಡುತ್ತಿದ್ದುದೂ ಖಚಿತವಾಗುತ್ತದೆ. ಶಿವ ಕೇಶವರಲ್ಲಿ ಭೇದವಿಲ್ಲದ ಸ್ಮಾರ್ಥ ಬ್ರಾಹ್ಮಣರು ಕೋಟ ಬ್ರಾಹ್ಮಣರು. ಕೋಟ ಪ್ರದೇಶವು ಸೀತಾನದಿ ಎಡಕ್ಕೆ ಮತ್ತು ಕಲ್ಯಾಣಪುರ ನದಿಯ ಶಿವಳ್ಳಿಯ ಪಕ್ಕ ಇದ್ದ ಪ್ರದೇಶವಾಗಿದೆ. ಉಡುಪಿಯ ನೇರ ಸಂಪರ್ಕಕ್ಕೆ ಕೂಟ ಬಾರದಿರಲು ಈ ನದಿಗಳೇ ಕಾರಣ. ಆದರೂ ಮುದ್ರಾ ಧಾರಣೆ ಕಡ್ಡಾಯವಾದ ಸಂಗತಿ ಕೂಟ ಬ್ರಾಹ್ಮಣರಿಗೂ ಚಿಂತೆಗೆ ಕಾರಣವಾಗಿದೆ. ಅವರು ಮುಂದೆ ಬರಲಿರುವ ಅಪಾಯ ತಪ್ಪಿಸಿಕೊಳ್ಳಲು ತಮಗೆ ಶೃಂಗೇರಿಯ ಮಠವೂ ಬೇಡ, ಉಡುಪಿಯ ಮಠವೂ ಬೇಡ ಎಂದು ನಿರ್ಧರಿಸಿ ತಮ್ಮ ಆರಾಧ್ಯ ದೈವ ನರಸಿಂಹನೇ ತಮ್ಮ ಗುರು ಎಂದು ಘೋಷಿಸಿರುವ ಸಾಧ್ಯತೆ ಇದೆ. ಅಂದಿನಿಂದ ಯೋಗಾನಂದ ನರಸಿಂಹ ಯೋಗಾನಂದ ಗುರು ನರಸಿಂಹ ಎಂದು ಪೂಜಿಸಲ್ಪಟ್ಟ ಎಂದು ಊಹಿಸಬಹುದು. ಶಾಸನದಲ್ಲೂ ಗುರು ನರಸಿಂಹ ಉಲ್ಲೇಖವಿದ್ದರೆ ಮಾತ್ರ ಈ ವಾದ ಬಿದ್ದುಹೋಗುತ್ತದೆ.

ಕೂಟ ಬ್ರಾಹ್ಮಣರು ಜನಸಂಖ್ಯೆ ಏರಿದಂತೆ ಹೊಟ್ಟೆ ಪಾಡಿಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅನೇಕ ಕಡೆ ಅಲ್ಲಿಂದ ವಲಸೆ ಬಂದರು. ಅವರು ಶೃಂಗೇರಿಯ ಮಠಕ್ಕೂ ಭಕ್ತರಾದರು. ಶೃಂಗೇರಿಯ ಮಠದಲ್ಲಿ ಅನೇಕ ವೇದವಿದ್ವಾಂಸರು ಕೂಟ ಬ್ರಾಹ್ಮಣರಾಗಿದ್ದು ಕಂಡುಬರುತ್ತದೆ. ಜೊತೆಗೆ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಪೂಜೆ ಕೂಟದವರೇ ನೆಡೆಸುತ್ತಿದ್ದುದ್ದುದೂ ಉಲ್ಲೇಖಾರ್ಹ. ಇದಲ್ಲದೇ ಗೋಕರ್ಣ ಸೇರಿದಂತೆ ವಿವಿಧ ಕಡೆಯ ಶೃಂಗೇರಿಯ ಶಾಖಾ ಮಠದಲ್ಲೂ ಕೂಟ ಬ್ರಾಹ್ಮಣರದೇ ಪಾರುಪತ್ಯ. ಹೀಗೆಂದೇ ಕೂಟ ಬ್ರಾಹ್ಮಣರು ಶೃಂಗೇರಿಯ ಕುರಿತು ಭಕ್ತಿ ಗೌರವದಿಂದ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತದೆ.ಸ್ವಾತಂತ್ರ್ಯ ಪೂರ್ವದಲ್ಲಿ ಶರನ್ನವರಾತ್ರಿ ಉತ್ಸವ ಸಂಧರ್ಭ ಶೃಂಗೇರಿಗೆ ನೂರಾರು ಮುತ್ತೈದೆಯರು ಕೋಟದಿಂದ ಬಂದು ದೇವೀ ದರ್ಶನ ಮಾಡುತ್ತಿದ್ದರು. ಅವರಿಗೆ ದಶಮಿ ದಿನ ಸುಮಂಗಲೀ ಪೂಜೆ ಮಾಡಿ ಸೀರೆ,ರವಿಕೆ ಕಣ,ಬಳೆ ಅರಸಿನ ಕುಂಕುಮ ಇತ್ಯಾದಿ ಮಂಗಳ ದ್ರವ್ಯ ಕೊಟ್ಟು ಗೌರವಿಸಲಾಗುತ್ತಿತ್ತು. ಇದು ಕೂಟ ಬ್ರಾಹ್ಮಣರೂ ಅದೂ ಕೋಟ ಪ್ರದೇಶದವರೂ ಶೃಂಗೇರಿಯ ಕುರಿತು ಗೌರವ ಇಟ್ಟುಕೊಂಡಿದ್ದಕ್ಕೆ ಒಂದು ಸಾಕ್ಷಿ ಒದಗಿಸುತ್ತದೆ.

ವಲಸೆ ಎಂಬ ಮನುಷ್ಯನ ನಿರಂತರ ಪ್ರಕ್ರಿಯೆಗೆ ಬ್ರಾಹ್ಮಣರೂ ಹೊರತಲ್ಲ. ನಮ್ಮ ತಂದೆಯ ತಂದೆ ಕೋಟ ದಿಂದ ಕೊಪ್ಪ ತಾಲ್ಲೂಕಿನ ಮುಶಿನಕೊಪ್ಪಕ್ಕೆ ಬಂದು ನಂತರ ಭಂಡಿಗಡಿಯಲ್ಲಿ ನೆಲೆ ನಿಂತವರು. ನನ್ನ ತಂದೆ ಶಿವಮೊಗ್ಗ ಜಿಲ್ಲೆಯ ತನ್ನ ಅಜ್ಜನ ಆಶ್ರಯಕ್ಕೆ ಹೋಗಿ ಮರಸೂರಿನಲ್ಲಿ ನೆಲೆಸಿದರು. ಊರು ಮುಳುಗಡೆಯಾದಾಗ ನಾನು ಮತ್ತೆ ಕೊಪ್ಪ ತಾಲ್ಲೂಕಿನ ಹೊಸಕೊಪ್ಪಕ್ಕೆ ವಲಸೆ ಬಂದೆ. ನನ್ನ ಮಕ್ಕಳು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರೆ ತಮ್ಮನೋರ್ವ ಅಮೆರಿಕ ಪ್ರಜೆ ಆಗಿದ್ದಾನೆ. ಇದೆಲ್ಲಾ ನಮಗೆ ತಿಳಿದ ವಲಸೆ. ಇನ್ನು ನಮ್ಮ ಪೂರ್ವಜರು ಆಂದ್ರಕ್ಕೆ ಯಾವ ಅಹಿಚ್ಛತ್ರದಿಂದ ಬಂದರೋ, (ಶಕಟಪುರದ ಮಠದವರು ಬದರೀ ಶಂಕರಾಚಾರ್ಯರೆಂದು ಹಾಕಿಕೊಳ್ಳುತ್ತಾರೆ ಅವರ ಹಿಂದಿನ ಸ್ವಾಮೀಜಿ ಉತ್ತರದಲ್ಲಿ ನಡೆದ ವಿಪ್ಲವದಿಂದ ವಲಸೆ ಬಂದವರಂತೆ) ಅದೂ ಯಾವ ಮ್ಲೇಚ್ಛರ ದಾಳಿಯ ಕಾರಣವೋ,ಅಲ್ಲಿಂದ ಮುಸಲ್ಮಾನರ ದಾಳಿಯಿಂದ ಶಿವಮೊಗ್ಗ ಸಮೀಪ ನೆಲೆಸಿದರೋ ಅಲ್ಲಿಂದ ಯಾವಾಗ ತುಳುನಾಡು ತಲ್ಪದರೋ ಈ ವಲಸೆ ಕಥನ ಊಹಿಸಿದರೆ ರೋಮಾಂಚನ ಆಗುತ್ತದೆ.

ಬರಹ: ಪ್ರಭಾಕರ ಕಾರಂತ, ಲೇಖಕರು

ಪುಸ್ತಕದ ಹೆಸರು: ವೈವಸ್ವತ
ಲೇಖಕರು: ರೇಖಾ ಕಾಖಂಡಕಿ
ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು
ಖರೀದಿಗೆ ಸಂಪರ್ಕ: ankitapustaka.com
ಬೆಲೆ: ರೂ 350/-

ಪ್ರಭಾಕರ ಕಾರಂತ, ಲೇಖಕರು
ಪ್ರಭಾಕರ ಕಾರಂತ, ಲೇಖಕರು
Whats_app_banner