ಪುಸ್ತಕ ಪರಿಚಯ: ಚರಿತ್ರೆಯ ಸೂಕ್ಷ್ಮಾವಲೋಕನ, ವರ್ತಮಾನದ ತಲ್ಲಣ, ಭವಿಷ್ಯದ ಭರವಸೆಯೇ ಸನಾತನ; ಮೇದಿನಿ ಕೆಸವಿನಮನೆ ಬರಹ-book review sanatana kannada book explains about sanatana dharma du gu lakshmana opinion medini kesuvinamane rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ಪರಿಚಯ: ಚರಿತ್ರೆಯ ಸೂಕ್ಷ್ಮಾವಲೋಕನ, ವರ್ತಮಾನದ ತಲ್ಲಣ, ಭವಿಷ್ಯದ ಭರವಸೆಯೇ ಸನಾತನ; ಮೇದಿನಿ ಕೆಸವಿನಮನೆ ಬರಹ

ಪುಸ್ತಕ ಪರಿಚಯ: ಚರಿತ್ರೆಯ ಸೂಕ್ಷ್ಮಾವಲೋಕನ, ವರ್ತಮಾನದ ತಲ್ಲಣ, ಭವಿಷ್ಯದ ಭರವಸೆಯೇ ಸನಾತನ; ಮೇದಿನಿ ಕೆಸವಿನಮನೆ ಬರಹ

ಸನಾತನ ಪುಸ್ತಕ: ಲೇಖನಗಳ ಸಂಗ್ರಹವಾದರೂ ಅಪಾರ ಮಾಹಿತಿ ಹಾಗೂ ಜ್ಞಾನದ ಮೊತ್ತವಿದು. ಚರಿತ್ರೆಯ ಸೂಕ್ಷ್ಮ ಅವಲೋಕನದೊಂದಿಗೆ ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಕುರಿತಾದ ಭರವಸೆಗಳು ಇಲ್ಲಿ ಕಾಣುತ್ತವೆ. ದುಗು ಲಕ್ಷ್ಮಣ ಅವರ ಸಂಗ್ರಹ ಕೃತಿ ʼಸನಾತನʼ ಪುಸ್ತಕದ ಬಗ್ಗೆ ಮೇದಿನಿ ಕೆಸವಿನಮನೆ ಬರಹ.

ಸನಾತನ ಪುಸ್ತಕದ ಮುಖಪುಟ (ಎಡಚಿತ್ರ) ಮೇದಿನಿ ಕೆಸವಿನಮನೆ (ಬಲಚಿತ್ರ)
ಸನಾತನ ಪುಸ್ತಕದ ಮುಖಪುಟ (ಎಡಚಿತ್ರ) ಮೇದಿನಿ ಕೆಸವಿನಮನೆ (ಬಲಚಿತ್ರ)

Book Review: ಸನಾತನ ಎಂದರೆ ಶಾಶ್ವತ ಎಂಬ ಅರ್ಥವಿದೆ. ‌ಅಂದರೆ ಅದು ಹಿಂದೆಯೂ ಇತ್ತು, ಈಗಲೂ‌ ಇದೆ, ಮುಂದೆಯೂ ಇರುತ್ತದೆ. ಇದನ್ನು ನಾವು ಸರಳವಾಗಿ ಜೀವನ ಧರ್ಮ ಎಂದುಕೊಳ್ಳಬಹುದು. ಬದುಕಿನ ಹಾದಿಗಳು ಕೆಲವೊಮ್ಮೆ‌ ಕವಲೊಡೆದರೂ ಸೇರುವ ಗಮ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲವೊಮ್ಮೆ ದಾರಿಯಲ್ಲಿ ಸಮಸ್ಯೆಗಳು, ಅಡತಡೆಗಳು ಬರುತ್ತವೆ. ನಿವಾರಿಸಿಕೊಂಡು ಸಾಗಬೇಕಾದುದು ನಮ್ಮ ನಿರಂತರ ಕ್ರಿಯೆಯಾಗಿರುತ್ತದೆ.

ನಮಗೆ ಮೂವತ್ಮೂರು ಕೋಟಿ ದೇವತೆಗಳು. ಯಾರನ್ನು ಪೂಜಿಸಿದರೂ ಯಾರೂ ಅಲ್ಲಗಳೆಯುವುದಿಲ್ಲ. ವೇದವನ್ನೋದುವ - ವೇದವನ್ನು ನಿರಾಕರಿಸುವ, ದೇವರನ್ನು ನಂಬುವ - ಅವನ ಅಸ್ತಿತ್ವವನ್ನು ಅಲ್ಲಗಳೆಯುವ, ಮಂತ್ರವನ್ನು ಉಚ್ಚರಿಸಿ ಸಾತ್ವಿಕ ಪೂಜೆ ಮಾಡುವ - ತಾಂತ್ರಿಕ ಆಚರಣೆಯಿಂದ ಅತಿಮಾನುಷ ಶಕ್ತಿಯನ್ನು ಹೊಂದುವ ಯಾರನ್ನೂ ವಿರೋಧಿಸಿ ಅವರ ಸಾವು ನೋವಿಗೆ ಕಾರಣವಾಗದ ಒಂದು ಹಾದಿ ಇದ್ದರೆ ಅದು ಸನಾತನ, ಹಾಗಾಗಿಯೇ ಅದು ಶಾಶ್ವತ.

ಹಾಗಿದ್ದರೂ ನೂರೆಂಟು ಹೀಯಾಳಿಕೆಗಳು, ಮೂದಲಿಕೆಗಳು. ಸರ್ವಸ್ವತಂತ್ರವಿದ್ದರೂ ನಿಂದಿಸುವ, ಅಪಮಾನಿಸುವ ಜನಕ್ಕೇನೂ ಕೊರತೆಯಿಲ್ಲ. ಆ ನಿಂದಿಸುವ, ಅಪಮಾನಿಸುವ, ತಿರುಗಿ‌ ನಿಲ್ಲುವ ಸ್ವಾತಂತ್ರ್ಯವನ್ನು ಕೊಟ್ಟದ್ದೂ ಇದೇ ಧರ್ಮ ಎಂಬುದರ ಅರಿವಿಲ್ಲದೇ ಬಾಯಿಗೆ ಬಂದ ಹಾಗೆ ಮಾತಾಡುವ ಹುಲ್ಲುಕಡ್ಡಿಗಳಿಗೇನೂ ಕಡಿಮೆ ಇಲ್ಲ.

ಸ್ವಧರ್ಮವನ್ನು ನಿಂದಿಸುವ ಚಟ

ಇದೊಂದು ವ್ಯಸನ, ಸ್ವಧರ್ಮವನ್ನು ನಿಂದಿಸುವುದು ಒಂದು ಕೆಟ್ಟ ಚಟ. ಅದಕ್ಕೆ ಮದ್ದಿಲ್ಲ. ತಿಳಿವಳಿಕೆಯ ಕೊರತೆ ಒಂದಾದರೆ, ಧರ್ಮದ ಸಾರವನ್ನು ಅರಿಯುವ ಮನವೇ ಇಲ್ಲದುದು ಕೂಡಾ ದೊಡ್ಡ ಸಮಸ್ಯೆಯೇ. ಜಗತ್ತಿನ ಜ್ಞಾನವನ್ನೆಲ್ಲ ಹೀರಿ, ದೊಡ್ಡ ವ್ಯಕ್ತಿಯಾಗು ಎನ್ನುವ ಧರ್ಮವೆಂದರೆ ಮೂಢನಂಬಿಕೆ, ನೀನೂ ಬದುಕು, ಇತರರನ್ನೂ ಬದುಕಲು ಬಿಡು ಎಂದರೆ ಅಜ್ಞಾನ!

ನಿಜವಾಗಿಯೂ ಇಂದು ನಮಗೆ ಬೇಕಾದುದು ಏನು? ಮುಂದಿನ ಪೀಳಿಗೆಯನ್ನು ತಯಾರು ಮಾಡಲು ನಾವು ಕೊಡುತ್ತಿರುವ ಶಿಕ್ಷಣ ಎಂಥದ್ದು? ಇಡುತ್ತಿರುವ ಪಾಠಗಳು ಏನನ್ನು ಕಲಿಸುತ್ತಿವೆ? ದೇಶಾಭಿಮಾನ ಮೂಡಿಸದ ಶಿಕ್ಷಣದ ಪ್ರತಿಫಲ ಕೇವಲ‌ ಅಂಕಪಟ್ಟಿಯಲ್ಲಿ ಮಾತ್ರಾ ಕಾಣುತ್ತಿದೆಯೇ? ಅಥವಾ ವ್ಯಕ್ತಿತ್ವದಲ್ಲೂ ಕಾಣುತ್ತಿದೆಯೆ?

ಇದೊಂದು ಪುಸ್ತಕ ಸರ್ವಕಾಲಕ್ಕೂ ಬೇಕು. ಲೇಖನಗಳ ಸಂಗ್ರಹವಾದರೂ ಅಪಾರ ಮಾಹಿತಿ ಹಾಗೂ ಜ್ಞಾನದ ಮೊತ್ತ ಇದು. ಚರಿತ್ರೆಯ ಸೂಕ್ಷ್ಮ ಅವಲೋಕನದೊಂದಿಗೆ ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಕುರಿತಾದ ಭರವಸೆಗಳು ಇಲ್ಲಿ ಕಾಣುತ್ತವೆ.

ಶ್ರೀಯುತ ದು ಗು ಲಕ್ಷ್ಮಣರವರು ಬರೆದ ಲೇಖನಗಳ ಸಂಗ್ರಹ ಕೃತಿ - ಸನಾತನ. ನಿಜಕ್ಕೂ ಅವರು ಬರೆಯುವ ಲೇಖನಗಳನ್ನು ಓದುವಾಗ ನನಗೆ ಆಶ್ಚರ್ಯವಾಗುತ್ತದೆ.‌ ಅಷ್ಟೊಂದು ಧೈರ್ಯ ಹಾಗೂ ಅಪಾರ ತಿಳಿವಳಿಕೆ. ಘನ ವ್ಯಕ್ತಿತ್ವದ, ಸಹಿಷ್ಣು ವ್ಯಕ್ತಿ ಅವರು. ಉತ್ತಮ‌ ವಾಗ್ಮಿ. ದೇಶದ ಪರವಾದ ಕಾಳಜಿ, ಬುದ್ಧಿಜೀವಿಗಳ ವಿವಿಧ‌ ಮುಖಗಳ ಅನಾವರಣ, ಭಾರತದ ಮಹೋನ್ನತ ಸಂಸ್ಕೃತಿಯ ಪರಿಚಯ, ಜನಸಾಮಾನ್ಯರ ಆದರಣೀಯ ವ್ಯಕ್ತಿತ್ವದ ಪರಿಚಯ, ಮತಾಂತರ ಇತ್ಯಾದಿ ವಿಷಯಗಳನ್ನು ಹೊಂದಿದ ಮೂವತ್ತು ಲೇಖನಗಳು ಇದರಲ್ಲಿವೆ.

ಒಂದೇ ಗುಕ್ಕಿಗೆ ಓದಿ ಮುಗಿಸಲು ಸಾಧ್ಯವಾಗುವುದಿಲ್ಲ. ನಿಧಾನವಾಗಿ ದಿನಕ್ಕೊಂದರಂತೆ ಓದಿದರೆ ಪ್ರಸ್ತುತ ಕಾಲಘಟ್ಟದ ಅರಿವಾಗುತ್ತದೆ.‌ ನಾವೆಲ್ಲಿದ್ದೇವೆ? ಎಲ್ಲಿರಬೇಕಿತ್ತು? ಎಂಬುದೂ ತಿಳಿಯುತ್ತದೆ.

ಅವರದೇ ಸಾಲು: “ಧರ್ಮಾಭಿಮಾನವಿದ್ದರೆ ಸಾಲದು. ದೇಶಾಭಿಮಾನವೂ ಅಗತ್ಯ. ಧರದಮಾಭಿಮಾನದ ಜೊತೆಗೆ ದೇಶಾಭಿಮಾನವಿಲ್ಲದಿದ್ದರೆ, ನಮ್ಮನ್ನು ಬೆಳೆಸಿದ ಸಮಾಜಕ್ಕೆ ಋಣ ಸಂದಾಯ ಮಾಡಿದಂತಾಗುವುದಿಲ್ಲ”

ಪುಸ್ತಕದ ವಿವರ:

ಕೃತಿಯ ಹೆಸರು: ಸನಾತನ,

ಲೇಖಕರು: ದು ಗು ಲಕ್ಷ್ಮಣ,

ಬೆಲೆ: 160,

ಪ್ರಕಾಶನ: ಸಮೃದ್ಧ ಸಾಹಿತ್ಯ