ಪುಸ್ತಕ ಪರಿಚಯ: ಬದುಕನ್ನು ಆವರಿಸಿಕೊಂಡ, ಮುನ್ನಡೆಸುವ ಶಕ್ತಿಯೇ ಮನುಷ್ಯನಿಗೆ ಭಾರವಾದೀತೆ? ಏನಿದು ತಾಕಲಾಟ -ಯೋಗದಾ ಕಾದಂಬರಿ
ಕೇವಲ ಶಾಸ್ತ್ರಗ್ರಂಥಗಳ ಅಧ್ಯಯನ ಮಾತ್ರದಿಂದಲೇ ಇಂಥ ಮಹತ್ವದ ಕೃತಿಯನ್ನು ಬರೆಯಲು ಆಗುವುದಿಲ್ಲ. ಆಳವಾದ ಅಧ್ಯಯನದೊಂದಿಗೆ ಅಂತರ್ಮುಖಿ ಅನುಭವಗಳ ಪರಿಶೀಲನೆ ಸಾಧ್ಯವಾದರೆ ಮಾತ್ರ 'ಯೋಗದಾ'ದಂಥ ಕೃತಿ ರೂಪುಗೊಳ್ಳಲು ಸಾಧ್ಯ. ಅಷ್ಟರಮಟ್ಟಿಗೆ ಲೇಖಕರು ಯಶಸ್ವಿಯಾಗಿದ್ದಾರೆ.
ಗ್ರಾಮಕ್ಕೊಂದು ಗ್ರಾಮದೇವತೆ ಇರುವ ಕರ್ನಾಟಕದಲ್ಲಿ ದೇವಿಯ ಆರಾಧನಾ ಕ್ರಮ ಜನಪ್ರಿಯವಾದುದು. ದೇವಿಯನ್ನು ಶ್ರೀಚಕ್ರದ ರೂಪದಲ್ಲಿ ಪೂಜಿಸುವ ಕ್ರಮವೂ ನಮ್ಮ ಪರಂಪರೆಯ ಭಾಗವೇ ಆಗಿದೆ. ನಮ್ಮ ನಾಡಹಬ್ಬ ದಸರಾ ವೈಭವದ ಚಾಲನಾ ಶಕ್ತಿಯೇ ಚಾಮುಂಡೇಶ್ವರಿ ತಾಯಿ. ಆಕೆಯೂ ಸಹ ಶಕ್ತಿಸ್ವರೂಪಿಣಿಯೇ ಅಲ್ಲವೇ? ದೇವರ ಪೂಜೆಯೋ, ಅಗ್ನಿಹೋತ್ರ, ಧ್ಯಾನ, ಜಪಗಳ ಅನುಷ್ಠಾನಗಳೋ ಹೊರಗಿನಿಂದ ನೋಡಿದವರಿಗೆ ಅನ್ನಿಸುವುದೇ ಒಂದು ರೀತಿ. ಆದರೆ ಸ್ವತಃ ಅದನ್ನು ಒಪ್ಪಿ-ಅಪ್ಪಿ ಬದುಕಿನ ಭಾಗವಾಗಿಸಿಕೊಂಡವರಿಗೆ ಅದು ಜೀವನಕ್ರಮದ ಒಂದು ಭಾಗವಷ್ಟೇ ಆಗಿರುತ್ತದೆ. ಇಂಥ ಜೀವನಕ್ರಮಗಳನ್ನು ಪರಿಚಯಿಸುವ ಅಪರೂಪದ ಕಾದಂಬರಿ 'ಯೋಗದಾ'.
"ಆಕೆಯನ್ನ ಪಂಚೇಂದ್ರಿಯಗಳಿಂದ ನೋಡೋಕ್ಕೆ ಸಾಧ್ಯವಿಲ್ಲ. ಅಂತರಿಂದ್ರಿಯ ಅಂದ್ರೆ ಮನಸ್ಸಿನಿಂದ ಮಾತ್ರ ನೋಡೋದಕ್ಕೆ ಸಾಧ್ಯ. ಜಗನ್ಮಾತೆ ಮನೋಮಯಿ... ಆಕೆ ಕೆಂಚೇನಹಳ್ಳಿ ಮಾರಿಯಮ್ಮನ ರೂಪದಲ್ಲಾದರೂ ದರ್ಶನ ಕೊಡಬಹುದು; ಆಕೆ ಭೈರವಿಯಾಗಿ ಭಕ್ತರನ್ನು ಪೊರೆಯಬಹುದು; ಬನದ ಹುಣ್ಣಿಮೆಯಂದು ಆರಾಧಿಸುವ ಶಾಂಕರೀ ಆಗಿರಬಹುದು; ಶ್ರೀ ಯಂತ್ರದಲ್ಲಿ ನೆಲೆಸಿರುವ ಲಿಲಿತಾ ತ್ರಿಪುರ ಸುಂದರಿಯಾಗಿರಬಹುದು..." 'ಯೋಗದಾ' ಕಾದಂಬರಿಯಲ್ಲಿ ಬರುವ ಈ ವಾಕ್ಯಗಳನ್ನು ಗಮನಿಸಿದರೆ, ದೇವಿ ಆರಾಧನೆಯಲ್ಲಿ ಲೇಖಕರ ಆಸಕ್ತಿ ಮತ್ತು ಜ್ಞಾನಗಳು ಎದ್ದುಕಾಣುತ್ತವೆ. ಇಂಥ ಎಷ್ಟೋ ಮೌಲಿಕ ವಿಚಾರಗಳು ಈ ಕಾದಂಬರಿಯಲ್ಲಿ ಪ್ರಸ್ತಾಪವಾಗಿವೆ.
ದೇವಿ ಆರಾಧಕ ಕುಟುಂಬಗಳಲ್ಲಿ ಆಲೋಚನೆ (ವಿಚಾರ) ಮತ್ತು ಬದುಕಿನ ಕ್ರಮ (ಆಚಾರ) ಭಿನ್ನವಿರುವುದಿಲ್ಲ. ಅಧ್ಯಾತ್ಮ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕುವ ಈ ರೀತಿಯ ಕುಟುಂಬಗಳು ಹೇಗಿರುತ್ತವೆ? ಅನುಷ್ಠಾನ ಎನ್ನುವುದು ವಂಶಪಾರಂಪರ್ಯವಾಗಿಯಷ್ಟೇ ಬರಬೇಕೇ? ಆಧುನಿಕರ ಮನಸ್ಸಿನಲ್ಲಿ ಈ ಪದ್ಧತಿಗಳ ಬಗ್ಗೆ ಇರುವ ಭಾವನೆ ಎಂಥದ್ದು? ಆಧುನಿಕರ ಬಗ್ಗೆ ಹಿರಿಯರ ಮನಸ್ಸಿನಲ್ಲೇಕೆ ಅಷ್ಟು ಪೂರ್ವಗ್ರಹಗಳಿವೆ? ಹೀಗೆ ಕಾದಂಬರಿಯ ಮೂಲಕ ಹಲವು ಪ್ರಶ್ನೆಗಳನ್ನು ಲೇಖಕಿ ಶೋಧಿಸಿದ್ದಾರೆ. ಇಂಥ ಎಷ್ಟೋ ಪ್ರಶ್ನೆಗಳು ಹಾಗೂ ಉತ್ತರಗಳ ಜುಗಲ್‌ಬಂದಿ ಕಾದಂಬರಿ ಓದಿ, ಪುಸ್ತಕ ಮಡಚಿಟ್ಟ ನಂತರವೂ ಓದುಗರ ಮನಸ್ಸಿನಲ್ಲಿ ಈಡಾಡುತ್ತಲೇ ಇರುತ್ತವೆ.
"ಯಾಕೆ ಎಲ್ಲರಿಗೂ ದೇವರೇ ಭಾರ? ಮನೆಯಲ್ಲಿ ಪೂಜೆ ಪುರಸ್ಕಾರ ಎಂದರೆ ಈಗಿನವರಿಗೆ ತಾತ್ಸಾರ ಸಹಜವಾದದ್ದೇ. ಎಲ್ಲರ ಮನೆ ಕಥೆಯೂ ಇದೇ ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದರು" (ಪುಟ 76) ಎನ್ನುವ ಸಾಲುಗಳು ಈ ಕಾದಂಬರಿಯ ಆರಂಭದಲ್ಲಿಯೇ ಬರುತ್ತವೆ.
ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಈ ವಾಕ್ಯಗಳೇ 'ಯೋಗದಾ' ಕಾದಂಬರಿಯ ಸೂತ್ರ ಹಿಡಿದಂತೆಯೂ ಭಾಸವಾಗುತ್ತದೆ. ದೇವರು ನಿಜಕ್ಕೂ ಭಾರವೇ ಎನ್ನುವ ಪ್ರಶ್ನೆ ಹಲವೆಡೆ ಎದ್ದು ಕಂಡರೆ, ದೇವರೆಂಬುದು ಮನುಷ್ಯರ ಭಾರವನ್ನು ಹಗುರಾಗಿಸುವ ಶಕ್ತಿಯೂ ಹೌದಲ್ಲವೇ ಎನ್ನುವ ಉತ್ತರ ರೂಪದ ಮತ್ತೊಂದು ಪ್ರಶ್ನೆ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಈ ಜಿಜ್ಞಾಸೆಯ ಸೊಗಸು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದಲಾದರೂ ನೀವು 189 ಪುಟಗಳ ಈ ಕಾದಂಬರಿಯನ್ನು ಇಡಿಯಾಗಿ ಓದಿ ಆಸ್ವಾದಿಸಬೇಕು. ನವರಾತ್ರಿಯ 9 ದಿನಗಳಲ್ಲಿ, ದೇವಿ ಆರಾಧಕರ ಮನೆಯಲ್ಲಿ ನಡೆಯುವ ಘಟನೆಗಳನ್ನು ಸೊಗಸಾಗಿ ಹೆಣೆದು ರೂಪಿಸಿದ ಕೃತಿ ಇದು.
ದೇವರನ್ನು ಎಲ್ಲಿ ಹುಡುಕಬೇಕು?
ದೇವರು, ದೇವರ ಪೂಜೆ, ಬದುಕಿನ ಉದ್ದೇಶದ ಬಗ್ಗೆ ಇರುವ ಶ್ರದ್ಧೆಯನ್ನು ಹಲವು ಹಂತಗಳಲ್ಲಿ ಈ ಕೃತಿ ಶೋಧಿಸುತ್ತದೆ. ಕೃತಿಯ ಮಹತ್ವ ಮನಗಾಣುವ ದೃಷ್ಟಿಯಿಂದ ಎರಡು ಪ್ಯಾರಾ ಉದ್ಧರಿಸುತ್ತೇನೆ.
"ಈಗಿನವರು ಕುಕ್ಕೆ, ಧರ್ಮಸ್ಥಳ, ತಿರುಪತಿ, ರಾಮೇಶ್ವರ, ಶೃಂಗೇರಿ ಎಂದು ಎಲ್ಲಿಗಾದರೂ ತೀರ್ಥಕ್ಷೇತ್ರಗಳಿಗೆ ಎರಡ್ಮೂರು ದಿನ ಟ್ರಿಪ್ ಹಾಕಿದರೆ ಖುಷಿಯಿಂದ ಹೋಗಿ, ಅಲ್ಲಿನ ಜನಜಂಗುಳಿ ನೋಡಿ ಬರುವಾಗ ಹೋಗುವಾಗಿನ ಖುಷಿ ಇಲ್ಲದೇ ಸಾಕಪ್ಪ ಅಂತ ಬರುತ್ತಾರೆ. ಮತ್ತೆ ಮುಂದಿನ ಸಲ ಹೊರಟರೆ ಅದೇ ಉತ್ಸಾಹ ಖುಷಿಯಿಂದಲೇ ಹೊರಡುವುದರಲ್ಲಿ ಅನುಮಾನವೇ ಇಲ್ಲ. ಆದರೆ ಮನೆಯಲ್ಲಿ ದೇವರ ಮನೆಯಲ್ಲಿ ಕುಳಿತು ಒಂದು ಗಂಟೆ ದೇವರೆಡೆಗೆ ಮನಸ್ಸು ಕೇಂದ್ರೀಕರಿಸಲು ಅವರ ಮನಸ್ಸು ಸಹಕರಿಸೋಲ್ಲ! ಇಲ್ಲಿ ಕಾಣದ ದೇವರು ಅಲ್ಲಿ ಹೇಗೆ ದರ್ಶನ ಕೊಡ್ತಾನೋ ಗೊತ್ತಿಲ್ಲ..."
ಮೇಲಿನದು ಈ ಕಾದಂಬರಿಯಲ್ಲಿ ಬರುವ ದೀಕ್ಷಿತರ್ ಎನ್ನುವ ಅಗ್ನಿಹೋತ್ರಿಗಳು (ಆಗ್ನಿಯ ಆರಾಧಕರು) ಹೇಳುವ ಮಾತು. ಕೆಳಗಿನದು ಕಾದಂಬರಿಯ ಕೇಂದ್ರ ಪಾತ್ರವಾದ ಶಂಕರ ತನ್ನ ಹೆಂಡತಿಗೆ ಹೇಳುವ ಮಾತು.
"... ಪ್ರತಿಯೊಬ್ಬರಿಗೂ ತಾನು ಈಗಿರೋದಕ್ಕಿಂತ ಮತ್ತೂ ಚೆನ್ನಾಗಿ ಬದುಕಕ್ಕು, ಬದುಕನ್ನು ಹೆಚ್ಚು ಹೆಚ್ಚು ಸಾರ್ಥಕತೆಯಿಂದ ಕಳಿಯಕ್ಕು ಅನ್ನೋ ಆಕಾಂಕ್ಷೆ ಇರ್ತು ಅಲ್ದಾ? ನಮ್ಮ ಬದುಕಲ್ಲಿ ಅದು ಯಾವುದರಿಂದ ಸಾಧ್ಯ ಅಂತ ತಿಳಿದುಕೊಳ್ಳೋಕೆ ತೊಂಬತ್ತೆಂಟು ಪರ್ಸೆಂಟ್ ಜನರಿಗೆ ಸಾಧ್ಯವೇ ಆಗದಿಲ್ಲೆ. ಆದರೆ ನಾನು ಉಳಿದ ಆ ಎರಡು ಪರ್ಸೆಂಟಲ್ಲಿ ಬತ್ತಿ. ನೀನು ಶ್ರೀವಿದ್ಯಾ ಉಪಾಸನೆ ಕುರಿತಾಗಿ ನಂಗೆ ಇನ್ನೂ ಹೆಚ್ಚೇನು ಸಲಹೆ ಕೊಡೋದು ಬ್ಯಾಡ" ...
ಈ ಎರಡೂ ಪ್ಯಾರಾಗಳಲ್ಲಿ ದೇವರನ್ನು ಎಲ್ಲಿ ಹುಡುಕಬೇಕು ಎನ್ನುವುದರಿಂದ ಹಿಡಿದು ಹೇಗೆ ಹುಡುಕಬೇಕು ಎಂಬಲ್ಲಿಯವರೆಗಿನ ಹಲವು ಅತ್ಯಂತ ಗಹನ ವಿಚಾರಗಳು ಇಡಿಕಿರಿದು ತುಂಬಿವೆ. ದೇವಿಯನ್ನು ಕೊಂಡಾಡುವ, ಸ್ವರೂಪವನ್ನು ಬಣ್ಣಿಸುವ ಲಲಿತಾ ಸಹಸ್ರನಾಮವೂ ಸಹ 'ಅಂತರ್ಮುಖಿಯಾಗಿ ನಿನ್ನ ಮನಸ್ಸಿನಲ್ಲಿ ದೇವಿಯನ್ನು ಹುಡುಕು' ಎಂದು ಕಿವಿಮಾತು ಹೇಳುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಆರಾಧನೆಯ ವಾರಸುದಾರಿಕೆಯ ಪ್ರಶ್ನೆ
ಈ ಕಾದಂಬರಿಯ ಮತ್ತೊಂದು ಕೇಂದ್ರ ಪಾತ್ರ ಸದಾನಂದ ಭಟ್ಟ ಎನ್ನುವ ಶ್ರೀಚಕ್ರ ಉಪಾಸಕರದು. ಹಿನ್ನೆಲೆಗಿಂತಲೂ ಶ್ರದ್ಧೆಯನ್ನೇ ಗಮನಿಸಿ ಉಪಾಸನೆಯ ಅಧಿಕಾರ ಹಸ್ತಾಂತರಿಸುವ ಅಪರೂಪದ ಉದಾಹರಣೆಗೂ ಅವರ ಮೂಲಕ ಲೇಖಕಿ ಒಂದು ಮಾದರಿ ಹಾಕಿಕೊಟ್ಟಿದ್ದಾರೆ. 'ಆನಿದ್ದಿ ಬಾ ಶಂಕ್ರ ಹೆದರಬೇಡ' ಎನ್ನುತ್ತಾ ಶಿಷ್ಯನ ಕೈಹಿಡಿದು ಸಾಧನೆಯ ಸನ್ಮಾರ್ಗದಲ್ಲಿ ಮುನ್ನಡೆಸುವ ಅಪರೂಪದ ಗುರು ಅವರು.
ಶಂಕರನಿಗೆ ಶ್ರೀಚಕ್ರದ ದೀಕ್ಷೆ ಕೊಟ್ಟ ಇದೇ ಗುರುಗಳು ಮುಂದೆ ಶಂಕರನ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ 'ಮುಂದೇನು' ಎನ್ನುವ ಪ್ರಶ್ನೆಗೂ ತಮ್ಮ ಶಿಷ್ಯ ಪರಂಪರೆಯ ಮೂಲಕ ಪ್ರೇರಣಾದಾಯಿಯಾಗುತ್ತಾರೆ. 'ಯಾರ ಮನೆಗೆ ಯಾವಾಗ ಬರಬೇಕು? ಯಾವಾಗ ಹೋಗಬೇಕು ಎನ್ನುವುದು ದೇವಿಗೆ ಗೊತ್ತಿದೆ' ಎನ್ನುವ ಮಾತು ಮತ್ತು ಭಾವ ಹಲವು ಬಾರಿ ಕಾದಂಬರಿಯಲ್ಲಿ ಸ್ಪಷ್ಟವಾಗಿ ಬಂದಿದೆ. ಅದೇ ಹೊತ್ತಿಗೆ ವಾರಸುದಾರಿಕೆಯ ಪ್ರಶ್ನೆಯನ್ನೂ ವಿವಿಧ ಮಗ್ಗುಲುಗಳಲ್ಲಿ ಕಾದಂಬರಿಕಾರ್ತಿ ಪರಿಶೀಲಿಸಿದ್ದಾರೆ.
ಶ್ರೀಚಕ್ರದ ರೂಪದಲ್ಲಿ ತನಗೆ ದೇವಿ ಒಲಿದ ಬಗ್ಗೆ ಸಂತೃಪ್ತಿಯಿರುವ ಕಥಾನಾಯಕ ಶಂಕರನಿಗೆ ಸಹಜವಾಗಿಯೇ ತನ್ನ ನಂತರ ಮುಂದೇನು ಎನ್ನುವ ಬಗ್ಗೆ ಪ್ರಶ್ನೆಗಳಿವೆ. ಗಂಡುಮಕ್ಕಳಿಲ್ಲದ ಕುಟುಂಬ ಎನ್ನುವುದು ಈ ಪ್ರಶ್ನೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕೆ ಮನೆಗೆ ಬರುವವರು, ಸ್ವತಃ ಪತ್ನಿ ಸಹ ಹಲವು ಬಾರಿ ಹಲವು ರೀತಿಗಳಲ್ಲಿ ಇದೇ ವಿಚಾರ ಪ್ರಸ್ತಾಪಿಸಿದರೂ 'ಎಲ್ಲವೂ ಅವಳಿಗೆ ಗೊತ್ತು' ಎನ್ನುವ ಬದ್ಧ ನಂಬಿಕೆಯಲ್ಲಿ ಶಂಕರ ಬದುಕು ಸಾಗಿಸುತ್ತಾರೆ. ತನಗೆ ಶ್ರೀಚಕ್ರ ಕೊಟ್ಟ ಗುರುಗಳ ಮಗನೇ ಬಂದು ಕೇಳಿದಾಗಲೂ ಅವರ ನಿಲುವು ಬದಲಾಗುವುದಿಲ್ಲ. ಮುಂದೇನು ಆಗಬಹುದು ಎನ್ನುವ ಇಣುಕು ನೋಟದೊಂದಿಗೆ ಶ್ರೀಚಕ್ರ ಆರಾಧಕರು ಮತ್ತು ಆಹಿತಾಗ್ನಿ ದೀಕ್ಷಿತರ ಕುಟುಂಬದಲ್ಲಿ ಏಕಕಾಲಕ್ಕೆ ನೆಮ್ಮದಿ ಮೂಡಬಹುದೆಂಬ ಮುಂಬೆಳಕು ಕಾದಂಬರಿಯ ಕೊನೆಯ ಪುಟಗಳಲ್ಲಿ ಪ್ರಕಾಶಿಸುತ್ತದೆ.
ಭಾಷೆ ಸರಳ, ವಿಚಾರ ಗಹನ
ಅಧ್ಯಾತ್ಮದಲ್ಲಿ ಆಸಕ್ತಿಯಿರುವವರು, ದೇವಿಯ ಆರಾಧಕರು, ಶ್ರದ್ಧೆಯು ಮನಸ್ಸನ್ನು ಯಾವ ಎತ್ತರಕ್ಕೆ ಮುಟ್ಟಿಸಬಲ್ಲದು ಎಂದು ತಿಳಿಯಬಯಸುವವರು ಓದಲೇಬೇಕಾದ ಕೃತಿಯಿದು. ಎಷ್ಟೋ ಗಹನ ವಿಚಾರಗಳನ್ನು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಕಾದಂಬರಿಕಾರ್ತಿ ವಿವರಿಸಿದ್ದಾರೆ. ಕೇವಲ ಶಾಸ್ತ್ರಗ್ರಂಥಗಳ ಅಧ್ಯಯನ ಮಾತ್ರದಿಂದಲೇ ಇಂಥ ಮಹತ್ವದ ಕೃತಿಯನ್ನು ಬರೆಯಲು ಆಗುವುದಿಲ್ಲ. ಆಳವಾದ ಅಧ್ಯಯನದೊಂದಿಗೆ ಅಂತರ್ಮುಖಿ ಅನುಭವಗಳ ಪರಿಶೀಲನೆ ಸಾಧ್ಯವಾದರೆ ಮಾತ್ರ 'ಯೋಗದಾ'ದಂಥ ಕೃತಿ ರೂಪುಗೊಳ್ಳಲು ಸಾಧ್ಯ. ಅಷ್ಟರಮಟ್ಟಿಗೆ ಲೇಖಕರು ಯಶಸ್ವಿಯಾಗಿದ್ದಾರೆ.
ಕಾದಂಬರಿ ಓದಿ ಮುಗಿಸಿದ ನಂತರ ದೇವರು ಎನ್ನುವುದು ಬದುಕಿಗೆ ಹೊರತಾದುದೋ, ಅಥವಾ ಭಾರವೋ ಅಲ್ಲ. ಅದು ನಮ್ಮದೇ ಬದುಕಿನ ಭಾಗ ಮತ್ತು ನಮ್ಮ ಭಾರವನ್ನು ನಮಗೇ ತಿಳಿಯದಂತೆ ಹೊತ್ತ ಮಹತ್ವದ ಶಕ್ತಿ ಎನ್ನುವ ಭಾವನೆ ಓದುಗರಲ್ಲಿಯೂ ಮೂಡುತ್ತದೆ.
ಶಾಕ್ತ ಪಂಥ, ತಂತ್ರದ ಬಗ್ಗೆ ಮುನ್ನುಡಿಯಲ್ಲಿ ಹಲವು ಮೌಲಿಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ವಿದ್ವಾಂಸ ಡಾ ಜಿ.ಬಿ.ಹರೀಶ ಅವರು ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ. 'ತಂತ್ರ ಮಾರ್ಗವಲ್ಲ, ಅದು ಬದುಕು' ಎನ್ನುವ ಸತ್ಯಕಾಮರ ಮಾತನ್ನು ನೆನಪಿಸಿಕೊಳ್ಳುವ ಮೂಲಕ ಇಂಥ ಕೃತಿಗಳನ್ನು ಓದಲು ಬೇಕಾದ ಮಾನಸಿಕತೆಯನ್ನೂ ಓದುಗರಿಗೆ ನೆನಪಿಸಿದ್ದಾರೆ.
ಪುಸ್ತಕದ ವಿವರ
ಪುಸ್ತಕದ ಹೆಸರು: ಯೋಗದಾ (ಉಪದೇಶ, ಉಪಾಸನೆ, ಉತ್ತರದಾಯಿತ್ವಗಳ ಅನಂತ ಕತೆ...)
ಪ್ರಕಾರ: ಕಾದಂಬರಿ
ಲೇಖಕಿ: ವಿದ್ಯಾ ಕೆ.ಎನ್., ಲೇಖಕರ ಇಮೇಲ್: vidyanarahari@gmail.com
ಪ್ರಕಾಶನ: ಅಯೋಧ್ಯಾ ಪಬ್ಲಿಕೇಶನ್ಸ್ ಪ್ರೈ ಲಿ, ಪುನೀತ್ ರಾಜ್‌ಕುಮಾರ್ ರಸ್ತೆ, ಬನಶಂಕರಿ, ಬೆಂಗಳೂರು. ಮೊಬೈಲ್ ಸಂಖ್ಯೆ: 96209 16996
ಪುಟಗಳು: 190, ಬೆಲೆ: 230/-