BSNL: ಬಿಎಸ್ಎನ್ಎಲ್ನಿಂದ ಮಹತ್ವದ ನಿರ್ಧಾರ; ಶಬರಿಮಲೆಯಲ್ಲಿ ಭಕ್ತರಿಗಾಗಿ ಉಚಿತ ವೈಫೈ ಟವರ್ ಅಳವಡಿಕೆ
BSNL Free Wi Fi: ಶಬರಿಮಲೆಯ 48 ಸ್ಥಳಗಳಲ್ಲಿ ಬಿಎಸ್ಎನ್ಎಲ್ ಉಚಿತ ವೈ-ಫೈ ಸಂಪರ್ಕ ಕಲ್ಪಿಸಿದೆ. ಬಿಎಸ್ಎನ್ಎಲ್ನ ಈ ಉಪಕ್ರಮವು ಶಬರಿಮಲೆಯಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕದ ಮೂಲಕ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸೇವೆಗಳನ್ನು ಮತ್ತಷ್ಟು ಸಂಯೋಜಿಸುತ್ತದೆ.
BSNL Free Wi Fi: ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಸದ್ಯ ಏರುಗತಿಯಲ್ಲಿದೆ. ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಸುಂಕದ ಬೆಲೆಯನ್ನು ಹೆಚ್ಚಿಸಿದ ನಂತರ, ಹೆಚ್ಚಿನ ಗ್ರಾಹಕರು ಬಿಎಸ್ಎನ್ಎಲ್ ಹಾದಿಯನ್ನು ಅನುಸರಿಸುತ್ತಿದ್ದಾರೆ. ಏಕೆಂದರೆ ಬಿಎಸ್ಎನ್ಎಲ್ ಯಾವುದೇ ಬೆಲೆಯನ್ನು ಹೆಚ್ಚಿಸಿಲ್ಲ. ಬದಲಾಗಿ ಇನ್ನಷ್ಟು ಅಗ್ಗದ ಯೋಜನೆಗಳನ್ನು ತರುತ್ತಿದೆ. ಈಗ 4ಜಿ ನೆಟ್‌ವರ್ಕ್ ಅನ್ನು ಪೂರ್ಣ ಪ್ರಮಾಣದಲ್ಲಿ ತರುವ ಕೆಲಸ ಚುರುಕುಗೊಂಡಿದೆ.
ಶಬರಿಮಲೆಯ 48 ಸ್ಥಳಗಳಲ್ಲಿ ಉಚಿತ ವೈ ಫೈ
ಇದರ ಮಧ್ಯೆ ಶಬರಿಮಲೆ ಅಯ್ಯಪ್ಪ ಮಾಲಾಧಾರಣೆ ನಡೆಯುತ್ತಿದೆ. ಪ್ರತಿ ವರ್ಷ ಈ ಋತುವಿನಲ್ಲಿ ಲಕ್ಷಾಂತರ ಜನರು ಅಯ್ಯಪ್ಪನ ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಬಾರಿ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ನೆಟ್ ವರ್ಕ್ ಬಲಪಡಿಸುವ ಉದ್ದೇಶದಿಂದ ಬಿಎಸ್‌ಎನ್‌ಎಲ್ ಭಾರೀ ಪ್ಲಾನ್ ಮಾಡಿದೆ. ಇದಕ್ಕಾಗಿ ಬಿಎಸ್ಎನ್ಎಲ್ ಶಬರಿಮಲೆಯ 48 ಸ್ಥಳಗಳಲ್ಲಿ ವೈ-ಫೈ ಸಂಪರ್ಕ ಕಲ್ಪಿಸಿದೆ. ಬಿಎಸ್ಎನ್ಎಲ್ನ ಈ ಉಪಕ್ರಮವು ಶಬರಿಮಲೆಯಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕದ ಮೂಲಕ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸೇವೆಗಳನ್ನು ಮತ್ತಷ್ಟು ಸಂಯೋಜಿಸುತ್ತದೆ.
ಬಿಎಸ್ಎನ್ಎಲ್ ಶಬರಿಮಲೆ, ಪಂಪಾ, ನಿಲಕ್ಕಲ್‌ನಲ್ಲಿ ಸಾರ್ವಜನಿಕ ವೈ-ಫೈ ಸೇವೆಗಳನ್ನು ಒದಗಿಸುತ್ತದೆ. ತಿರುವನಂತಪುರಂ ದೇವಸ್ವಂ ಮಂಡಳಿಯ ಸಹಯೋಗದಲ್ಲಿ ಈ ಜಾಲವು ವ್ಯಾಪಕವಾಗಿ ಅಭಿವೃದ್ಧಿಗೊಂಡಿದೆ. ಇದಲ್ಲದೇ ಶಬರಿಮಲೆ ಮಾರ್ಗದಲ್ಲಿ 4ಜಿ ಟವರ್‌ಗಳನ್ನು ಸಿದ್ಧಪಡಿಸಿದೆ. ಇದಲ್ಲದೇ ಪಂಪಾ ಮತ್ತು ಶಬರಿಮಲೆಯಲ್ಲಿ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು 24 ಗಂಟೆಗಳ ಗ್ರಾಹಕ ಸೇವಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ವರದಿ ಆಗಿದೆ.
ವೈ ಫೈ ಸೆಟ್ಟಿಂಗ್ ಹೀಗೆ ಮಾಡಿಕೊಳ್ಳಿ
ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ಶಬರಿಮಲೆ, ನಿಲಕ್ಕಲ್, ಪಂಪಾದಲ್ಲಿ ಬಿಎಸ್‌ಎನ್‌ಎಲ್ ವೈ-ಫೈ ಸೇವೆಗಳನ್ನು ಪಡೆಯಬಹುದು. ಇದಕ್ಕಾಗಿ ಮೊದಲು ಫೋನ್‌ನ ವೈ-ಫೈ ಆಯ್ಕೆಯನ್ನು ಆನ್ ಮಾಡಿ. ಇದರ ನಂತರ ಡಿಸ್ಪ್ಲೇ ಮೇಲೆ ಗೋಚರಿಸುವ ಬಿಎಸ್‌ಎನ್‌ಎಲ್ ವೈಫೈ ನೆಟ್‌ವರ್ಕ್ ಆಯ್ಕೆಯನ್ನು ಆರಿಸಿ. ನಂತರ ತೆರೆಯುವ ವೆಬ್ ಪುಟದಲ್ಲಿ ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಗೆಟ್ ಪಿನ್ ಕ್ಲಿಕ್ ಮಾಡಿ. ಫೋನ್‌ನಲ್ಲಿ SMS ಆಗಿ ಸ್ವೀಕರಿಸಿದ 6-ಅಂಕಿಯ ಪಿನ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ ಬಿಎಸ್‌ಎನ್‌ಎಲ್ ವೈ ಫೈಗೆ ಪ್ರವೇಶ ಪಡೆಯಬಹುದು.
ಶಬರಿಮಲೆ, ಪಂಪಾ ಮತ್ತು ನಿಲಕ್ಕಲ್‌ನಂತಹ ಸ್ಥಳಗಳಲ್ಲಿ 300 Mbps ವೇಗದೊಂದಿಗೆ ಅತ್ಯಾಧುನಿಕ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಕಲ್ಪಿಸಲಾಗಿದೆ. ದೇವಸ್ವಂ ಮಂಡಳಿ, ಪೊಲೀಸ್, ಅರಣ್ಯ, ಆರೋಗ್ಯ ಇಲಾಖೆಗಳು, ಬ್ಯಾಂಕ್‌ಗಳು, ಸುದ್ದಿ ಮಾಧ್ಯಮಗಳು, ಇತರ ಸರ್ಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಫೈಬರ್ ಸಂಪರ್ಕಕ್ಕಾಗಿ ಇಲ್ಲಿ ಟೆಲಿಕಾಂ ಸೇವೆಗಳನ್ನು ಸ್ಥಾಪಿಸಿವೆ. ಪಂಪಾದಿಂದ ಸನ್ನಿಧಾನಂ ವರೆಗಿನ ಎಲ್ಲಾ ಆಕ್ಸಿಜನ್ ಪಾರ್ಲರ್‌ಗಳು ಮತ್ತು ತುರ್ತು ವೈದ್ಯಕೀಯ ಕೇಂದ್ರಗಳು ಫೈಬರ್ ಸಂಪರ್ಕವನ್ನು ಹೊಂದಿವೆ.
ವರದಿ: ವಿನಯ್ ಭಟ್ .