ಯಾರೆಲ್ಲಾ ಪೆಟ್ರೋಲ್ ಬಂಕ್ ಹಾಕಬಹುದು; ಹೂಡಿಕೆಗೆ ಎಷ್ಟು ಹಣ ಬೇಕು? ಭೂಮಿ ಖರೀದಿಯಿಂದ ಪರವಾನಗಿವರೆಗೆ ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಯಾರೆಲ್ಲಾ ಪೆಟ್ರೋಲ್ ಬಂಕ್ ಹಾಕಬಹುದು; ಹೂಡಿಕೆಗೆ ಎಷ್ಟು ಹಣ ಬೇಕು? ಭೂಮಿ ಖರೀದಿಯಿಂದ ಪರವಾನಗಿವರೆಗೆ ಸಂಪೂರ್ಣ ವಿವರ

ಯಾರೆಲ್ಲಾ ಪೆಟ್ರೋಲ್ ಬಂಕ್ ಹಾಕಬಹುದು; ಹೂಡಿಕೆಗೆ ಎಷ್ಟು ಹಣ ಬೇಕು? ಭೂಮಿ ಖರೀದಿಯಿಂದ ಪರವಾನಗಿವರೆಗೆ ಸಂಪೂರ್ಣ ವಿವರ

Petrol Bunk: ಈಗೀಗ ಜನರು ತಮ್ಮ ಕೆಲಸದ ಜೊತೆಗೆ ವ್ಯವಹಾರಕ್ಕೆ ಕೈಹಾಕಲು ಬಯಸುತ್ತಿದ್ದಾರೆ. ಕೆಲವೊಬ್ಬರು ಪೆಟ್ರೋಲ್ ಬಂಕ್ ತೆರೆಯುವ ಕಡೆ ಯೋಚಿಸುತ್ತಾರೆ. ಆದರೆ ಅದನ್ನು ಹೇಗೆ ಪ್ರಾರಂಭಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ. ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಆಗುವ ವೆಚ್ಚದ ಮಾಹಿತಿ ಇಲ್ಲಿದೆ.

ಯಾರೆಲ್ಲಾ ಪೆಟ್ರೋಲ್ ಬಂಕ್ ಸ್ಥಾಪಿಬಹುದು; ಹೂಡಿಕೆಗೆ ಎಷ್ಟು ಹಣ ಬೇಕು?
ಯಾರೆಲ್ಲಾ ಪೆಟ್ರೋಲ್ ಬಂಕ್ ಸ್ಥಾಪಿಬಹುದು; ಹೂಡಿಕೆಗೆ ಎಷ್ಟು ಹಣ ಬೇಕು?

ಹಿಂದೆ ವಾಹನಗಳಿಗೆ ಇಂಧನ ತುಂಬಬೇಕೆಂದರೆ ನಗರ ಪ್ರದೇಶಗಳಲ್ಲಿ ಮಾತ್ರವೇ ಇದ್ದ ಪೆಟ್ರೋಲ್ ಬಂಕ್‌ಗೆ ಹೋಗಬೇಕಿತ್ತು. ನಗರ, ಪಟ್ಟಣಗಳಲ್ಲಿ ಮಾತ್ರ ಒಂದೋ ಎರಡೋ ಪೆಟ್ರೋಲ್‌ ಬಂಕ್‌ಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ. ಹಳ್ಳಿಗಳಲ್ಲಿಯೂ ಪೆಟ್ರೋಲ್ ಪಂಪ್‌ಗಳು ಎದ್ದು ನಿಂತಿವೆ. ಹಣ ಹೂಡಿಕೆ ಮಾಡುವ ಸಾಮರ್ಥ್ಯ ಇರುವ ಹಳ್ಳಿಯ ರೈತರು ಕೂಡಾ ಪೆಟ್ರೋಲ್ ಬಂಕ್ ತೆರೆಯುವ ಬಗ್ಗೆ‌ ಯೋಚಿಸುತ್ತಿದ್ದಾರೆ. ಉದ್ಯಮದಲ್ಲಿ ಲಾಭ ಗಳಿಸುವ ಉದ್ದೇಶದಿಂದ ಬಹಳಷ್ಟು ಜನರು ಹೊಸ ಪೆಟ್ರೋಲ್ ಬಂಕ್‌ ತೆರೆಯುವ ಇರಾದೆ ಹೊಂದಿದ್ದಾರೆ. ಹಾಗಿದ್ದರೆ, ಭಾರತದಲ್ಲಿ‌ ಯಾರೆಲ್ಲಾ ಪೆಟ್ರೋಲ್ ಬಂಕ್‌ ತೆರೆಯಬಹುದು? ಇದಕ್ಕೆ ಏನೆಲ್ಲಾ ಅಗತ್ಯವಿದೆ ಎಂಬ ವಿವರ ನೋಡೋಣ.

ಭಾರತದಲ್ಲಿ ಒಂದು ಪೆಟ್ರೋಲ್‌ ಬಂಕ್‌ ಸ್ಥಾಪಿಸಬೇಕೆಂದರೆ, ಆ ವ್ಯಕ್ತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ 55 ವರ್ಷ ಮೀರಿರಬಾರದು. ಕನಿಷ್ಠ 10ನೇ ತರಗತಿ ಅಥವಾ ಇಂಟರ್ ಮೀಡಿಯೇಟ್ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು ರಿಟೇಲ್ ಔಟ್ ಲೆಟ್ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. ಪೆಟ್ರೋಲ್ ಪಂಪ್ ಸ್ಥಾಪಿಸಲು ಬಯಸುವ ಅರ್ಜಿದಾರರು ಕನಿಷ್ಠ 25 ಲಕ್ಷ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿರಬೇಕು. ಇದೇ ವೇಳೆ ಅರ್ಜಿದಾರರ ಕುಟುಂಬದ ನಿವ್ವಳ ಮೌಲ್ಯ 50 ಲಕ್ಷ ರೂ.ಗಿಂತ ಕಡಿಮೆ ಇರಬಾರದು.

ಪೆಟ್ರೋಲ್ ಪಂಪ್ ತೆರೆಯಲು ನೀವು ಪೆಟ್ರೋಲ್ ಕಂಪನಿಯಿಂದ ಪರವಾನಗಿ ಪಡೆಯಬೇಕು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ, ರಿಲಯನ್ಸ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಪೆಟ್ರೋಲ್ ಪಂಪ್ ಕಾರ್ಯಾಚರಣೆಗೆ ಪರವಾನಗಿ ನೀಡುತ್ತವೆ. ಭಾರತದಲ್ಲಿ ಈ ಹೆಸರಿನ ಪೆಟ್ರೋಲ್‌ ಬಂಕ್‌ಗಳನ್ನು ನೀವು ನೋಡಿರಬಹುದು. ಅವುಗಳ ಪರವಾನಗಿಯನ್ನು ಕಟ್ಟುನಿಟ್ಟಾಗಿ ಪಡೆಯಬೇಕು. ಒಂದು ವೇಳೆ ಸೂಕ್ತ ಪರವಾನಗಿ ಇಲ್ಲದಿದ್ದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

ಎಷ್ಟು ಸ್ಥಳದ ಅಗತ್ಯವಿದೆ

ಗ್ರಾಮೀಣ ಪ್ರದೇಶಗಳಲ್ಲಿನ ಪೆಟ್ರೋಲ್ ಪಂಪ್ ಸ್ಥಾಪಿಸಲು ಪ್ರತಿ ಯೂನಿಟ್‌ಗೆ 800 ಚದರ ಮೀಟರ್ ಸ್ಥಳಾವಕಾಶ ಬೇಕಾಗುತ್ತದೆ. 2 ಘಟಕಗಳಿಗೆ 1200 ಚದರ ಮೀಟರ್ ಸ್ಥಳ ಬೇಕಾಗಬಹುದು. ಇದೇ ವೇಳೆ ನಗರ ಪ್ರದೇಶಗಳಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಲು 1 ಘಟಕಕ್ಕೆ 500 ಚದರ ಮೀಟರ್ ಸ್ಥಳ ಬೇಕಾಗುತ್ತದೆ. 2 ಘಟಕಗಳ ಸ್ಥಾಪನೆಗೆ 800 ಚದರ ಮೀಟರ್ ಜಾಗ ಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಪೆಟ್ರೋಲ್ ಪಂಪ್ ತೆರೆಯಲು, ಪ್ರತಿ ಘಟಕಕ್ಕೆ 1200 ಚದರ ಮೀಟರ್ ಸ್ಥಳಾವಕಾಶದ ಅಗತ್ಯವಿದೆ. ಅಂದರೆ, 2 ಘಟಕಗಳನ್ನು ಸ್ಥಾಪಿಸಲು 2000 ಚದರ ಮೀಟರ್ ಜಾಗದ ಅಗತ್ಯವಿದೆ.

ಅನುಮತಿ ಪಡೆಯಲು ಪರವಾನಗಿ ಶುಲ್ಕ 2 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂ.ವರೆಗೆ ಇರುತ್ತದೆ. ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗೆ 100 ರೂಪಾಯಿಗಳಿಂದ 1000 ರೂ.ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ. ಎಸ್ಸಿ/ಎಸ್ಟಿ/ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ಇರುತ್ತದೆ.

ಖರ್ಚು ಎಷ್ಟಾಗುತ್ತದೆ?

ಪೆಟ್ರೋಲ್‌ ಬಂಕ್‌ ಸ್ಥಾಪಿಸುವ ಭೂಮಿಯ ಮೌಲ್ಯ ಹಾಗೂ ಗಾತ್ರದ ಆಧಾರದ ಮೇಲೆ ಭೂಮಿಯ ಬೆಲೆ 30 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗೆ ಇರಬಹುದು. ಬೃಹತ್‌ ನಗರಗಳಲ್ಲಿ ಈ ದರ ಇನ್ನೂ ಹೆಚ್ಚಿರುತ್ತದೆ. ನೀವು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೂ ತೆಗೆದುಕೊಳ್ಳಬಹುದು. ಅದು ನಗರ ಅಥವಾ ಗ್ರಾಮೀಣ ಪ್ರದೇಶ ಎಂಬುದನ್ನು ಅವಲಂಬಿಸಿ ಭೂ ಮಾಲೀಕರಿಗೆ ಪಾವತಿಸಬೇಕಾಗುತ್ತದೆ.

ಬಳಸುವ ಸಾಮಗ್ರಿಗಳು ಮತ್ತು ಪೆಟ್ರೋಲ್ ಬಂಕ್‌ ಗಾತ್ರದ ಆಧಾರದ ಮೇಲೆ ವೆಚ್ಚವು ರೂ.30 ಲಕ್ಷದಿಂದ 1 ಕೋಟಿಯವರೆಗೆ ಹೋಗಬಹುದು. ಪೆಟ್ರೋಲ್ ಪಂಪ್ ನಿರ್ವಹಣೆಗೆ ಅಗತ್ಯವಿರುವ ಇಂಧನ ವಿತರಣಾ ಘಟಕ, ಶೇಖರಣಾ ಟ್ಯಾಂಕ್‌ಗಳು ಮತ್ತು ಇತರ ಉಪಕರಣಗಳಿಗಾಗಿ 20 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ವೆಚ್ಚ ಬೀಳುತ್ತದೆ.

ಪೆಟ್ರೋಲ್‌ ಬಂಕ್‌ನಿಂದ ಬರುವ ಆದಾಯವು, ನಿಮ್ಮ ಪೆಟ್ರೋಲ್ ಪಂಪ್ ಎಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈಗೀಗ ಇಂಧನ ಬೆಲೆ ಹೆಚ್ಚುತ್ತಿರುವ ಕಾರಣದಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಸರಿಯಾದ ಸ್ಥಳದಲ್ಲಿ ಪೆಟ್ರೋಲ್‌ ಬಂಕ್‌ ಸ್ಥಾಪಿಸಿದರೆ ಉತ್ತಮ.

ಗಮನಿಸಿ: ಈ ಅಂಶಗಳನ್ನು ಮಾಹಿತಿಯ ಉದ್ದೇಶದಿಂದ ನೀಡಲಾಗಿದೆ. ಯಾವುದೇ ವ್ಯವಹಾರಕ್ಕೆ ಕೈಹಾಕುವ ಮೊದಲು ಹಾಗೂ ಹೂಡಿಕೆ ಮಾಡುವ ಮುನ್ನ, ಸೂಕ್ತ ವ್ಯಕ್ತಿಗಳೊಂದಿಗೆ ಚರ್ಚಿಸಿ ನಿರ್ಧರಿಸಿ.

Whats_app_banner