ಕಡಿಮೆ ಬಂಡವಾಳದಲ್ಲಿ ಬ್ಯುಸಿನೆಸ್ ಶುರು ಮಾಡ್ಬೇಕು ಅನ್ನೋರಿಗೆ ಬೆಸ್ಟ್ ಅಣಬೆ ಕೃಷಿ; ಮನೆಯಲ್ಲೇ ಸುಲಭವಾಗಿ ಅಣಬೆ ಬೆಳೆಸಲು ಇಲ್ಲಿದೆ ಟ್ರಿಕ್ಸ್
ಹೊಸತಾಗಿ ಏನಾದ್ರೂ ಬ್ಯುಸಿನೆಸ್ ಮಾಡಬೇಕು, ಬಂಡವಾಳ ಕಡಿಮೆ ಇದೆ ಅಂತಿದ್ರೆ ಮನೆಯಲ್ಲೇ ಮಶ್ರೂಮ್ ಬೆಳೆದು ಮಾರಾಟ ಮಾಡಬಹುದು. ಇದರಿಂದ ಸಾಕಷ್ಟು ಹಣ ಸಂಪಾದಿಸಬಹುದು. ಈ ಬಗ್ಗೆ ಇಲ್ಲಿದೆ ವಿವರ.; ಇಲ್ಲಿದೆ ಟ್ರಿಕ್ಸ್

ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಮಾಡಬೇಕು ಎನ್ನುವುದು ಹಲವರ ಕನಸು. ಆದರೆ ಇದಕ್ಕೆ ಸೂಕ್ತ ಬಂಡವಾಳವಿಲ್ಲದೇ ಹಿಂದೇಟು ಹಾಕುವವರೇ ಹೆಚ್ಚು. ಇನ್ನೂ ಕೆಲವರು ಹಣವಿದ್ದರೂ ಸ್ಥಳಾವಕಾಶದ ಕೊರತೆ ಅನುಭವಿಸಬಹುದು. ಆದರೆ ಹಣವೂ ಕಡಿಮೆ ಇದ್ದು, ಸ್ಥಳಾವಕಾಶವೂ ಕಡಿಮೆ ಇದೆ ಎಂದರೆ ನೀವು ಅಣಬೆ ಕೃಷಿ ಆರಂಭಿಸಬಹುದು. ಇದು ಸದ್ಯದ ಭರವಸೆಯ ವ್ಯವಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಣಬೆ ಕೃಷಿ ಅತ್ಯಂತ ಜನಪ್ರಿಯ ಉದ್ಯಮವಾಗಿದೆ.
ಅಣಬೆ ಬೆಳೆಯಲು ಹೆಚ್ಚು ಭೂಮಿಯ ಅಗತ್ಯವಿಲ್ಲ. ಹೆಚ್ಚು ಹೂಡಿಕೆ ಮಾಡುವ ಅಗತ್ಯವೂ ಇಲ್ಲ. ಮನೆಯಲ್ಲಿಯೇ ಕಡಿಮೆ ವೆಚ್ಚದಲ್ಲಿ ಅಣಬೆ ಕೃಷಿ ಆರಂಭಿಸಬಹುದು. ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ ಅಣಬೆಗಳು. ಇದರಲ್ಲಿ ಪ್ರೊಟೀನ್ ಕೂಡ ಸಮೃದ್ಧವಾಗಿದೆ. ಇದು ಶುದ್ಧ ಸಾವಯವ ಕೃಷಿ. ಮಧುಮೇಹಿಗಳಿಗೆ ಇದು ಉತ್ತಮ ಆಹಾರ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಸಣ್ಣ ಜಮೀನುಗಳಲ್ಲಿಯೂ ಅಣಬೆಗಳನ್ನು ಬೆಳೆಸುವ ಮೂಲಕ ನೀವು ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು.
ಅಣಬೆ ಕೃಷಿ
ಅಣಬೆಗಳನ್ನು ಬೆಳೆಯುವ ಜಾಗವನ್ನು ಸೋಂಕು ಮುಕ್ತವನ್ನಾಗಿಸುವುದು ಬಹಳ ಮುಖ್ಯ. ಈ ಪ್ರದೇಶದಲ್ಲು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
- ಅಣಬೆ ಬೆಳೆಸುವ ಮೊದಲು ಹುಲ್ಲನ್ನು ಜೋಡಿಸಿ ಪಕ್ಕಕ್ಕೆ ಇರಿಸಿ.
- ಅಣಬೆ ಬೀಜಗಳು, ಜೋಡಿಸಿ ಇಟ್ಟ ಹುಲ್ಲು ಮತ್ತು ಮಣ್ಣನ್ನು 5 ಕೆಜಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಬೇಕು.
- ಈ ಚೀಲಗಳಲ್ಲಿ ಬೇವಿನ ತುಂಡುಗಳಿಂದ 20 ರಂಧ್ರಗಳನ್ನು ಮಾಡಿ ಮತ್ತು ಆ ರಂಧ್ರಗಳಲ್ಲಿ ಹತ್ತಿಯನ್ನು ಹಾಕಿ.
- ನಂತರ ಚೀಲಗಳನ್ನು ಪ್ರತ್ಯೇಕ ಕೋಣೆಯಲ್ಲಿ ಸೀಲಿಂಗ್‌ಗೆ ಕಟ್ಟಿದ ಹಗ್ಗದಿಂದ ನೇತು ಹಾಕಬೇಕು.
- ಆ ಕೊಠಡಿಯಲ್ಲಿ ಗಾಳಿಯಾಡದಂತೆ ಮಾಡಬೇಕು ಮತ್ತು ಅಣಬೆ ಬೀಜ ಇರುವ ಚೀಲಗಳನ್ನು 22 ದಿನಗಳವರೆಗೆ ಕತ್ತಲೆಯಲ್ಲಿ ಇರಿಸಬೇಕು.
- ಕೋಣೆಯ ಉಷ್ಣತೆಯು ಸುಮಾರು 28 ಡಿಗ್ರಿಗಳಾಗಿರಬೇಕು.
- 22 ದಿನಗಳ ನಂತರ, ಚೀಲಗಳನ್ನು ಬೇರೆ ಕೋಣೆಗೆ ಸ್ಥಳಾಂತರಿಸಬೇಕು.
- ಪ್ರತಿದಿನ ರಂಧ್ರದ ಮೂಲಕ ಅಣಬೆ ಬೆಳೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: Womens Day: ಬುಟಿಕ್‌ನಿಂದ ಸಲೂನ್‌ವರೆಗೆ, ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಯಾವೆಲ್ಲಾ ಸ್ವಂತ ಬ್ಯುಸಿನೆಸ್ ಮಾಡಬಹುದು ನೋಡಿ
ಎಷ್ಟು ಇಳುವರಿ ಪಡೆಯಬಹುದು?
- ಒಂದು ಕಿಲೋ ಅಣಬೆ ಬೀಜಗಳಿಂದ 10 ಚೀಲ ಅಣಬೆಗಳನ್ನು ಪಡೆಯಬಹುದು.
- ಒಂದು ಚೀಲದಿಂದ 40 ದಿನಗಳಲ್ಲಿ ಕನಿಷ್ಠ 2 ಕೆಜಿ ಅಣಬೆ ಸಿಗುತ್ತದೆ.
- ಇಳುವರಿ 5 ರಿಂದ 6 ಕೆಜಿ.
- ಮಾರುಕಟ್ಟೆಯಲ್ಲಿ ಅಣಬೆಗಳು ಕಿಲೋಗೆ 300 ರಿಂದ 350 ರೂ.ಗೆ ಮಾರಾಟವಾಗುತ್ತಿವೆ.
ಅಣಬೆ ಮಾರ್ಕೆಟಿಂಗ್
ಆರಂಭದಲ್ಲಿ ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಅಣಬೆಗಳನ್ನು ಮಾರಾಟ ಮಾಡಲು ಪ್ರಯತ್ನಿಸಿ. ಒಣಗಿದ ಅಣಬೆ ಪುಡಿಯನ್ನು ಅನ್ನದೊಂದಿಗೆ ಬೆರೆಸಿ ಸೇವಿಸುವುದು ಶಿಶುಗಳಿಗೆ ಅತ್ಯುತ್ತಮವಾದ ಪೌಷ್ಟಿಕಾಂಶದ ಪೂರಕವಾಗಿದೆ. ಅಣಬೆಗಳನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಮಶ್ರೂಮ್ ಬಿರಿಯಾನಿ, ಪರೋಟ ಕರಿ, ಸೂಪ್, ಮಶ್ರೂಮ್ ಮಂಚೂರಿಯನ್, ಕಟ್ಲೆಟ್ಸ್, ಕರಿ, ಸಲಾಡ್, ಪಿಜ್ಜಾ, ಬರ್ಗರ್‌ನಂತಹ ಖಾದ್ಯಗಳಿಗೆ ಅಣಬೆಗಳನ್ನು ಸೇರಿಸಲಾಗುತ್ತದೆ.
ಅಣಬೆ ತಿನ್ನುವುದರಿಂದಾಗುವ ಪ್ರಯೋಜನಗಳು
- ಅಣಬೆಗಳು ವಿಟಮಿನ್ ಡಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
- ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಆಂಟಿವೈರಲ್, ಆಂಟಿಮೈಕ್ರೊಬಿಯಲ್, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ.
ಅಣಬೆಗೆ ಯಾವ ರೋಗ ಬರುತ್ತದೆ?
ಹವಾಮಾನ ಬದಲಾವಣೆಯಿಂದಾಗಿ ಅಣಬೆಗಳು ಹಸಿರು ಶಿಲೀಂಧ್ರ (ಪಾಚಿ)ಕ್ಕೆ ಗುರಿಯಾಗುತ್ತವೆ. ಆದರೆ ಪಾವಿಸ್ಟಿನ್ ಎಂಬ ಶಿಲೀಂಧ್ರನಾಶಕವನ್ನು ಹಸಿರು ಪಾಚಿ ಇರುವ ಪ್ರದೇಶಕ್ಕೆ ಸಿರಿಂಜ್ ಬಳಸಿ ಚುಚ್ಚಿದರೆ, ರೋಗವನ್ನು ಗುಣಪಡಿಸಬಹುದು.
ಅಣಬೆ ಕೃಷಿ
ಅಣಬೆ ಕೃಷಿ ತರಬೇತಿಯನ್ನು ಹೆಚ್ಚಾಗಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುತ್ತದೆ. ನಿಮಗೆ ತಿಳಿದಿರುವ ಜನರಿಂದಲೂ ನೀವು ಮಾಹಿತಿಯನ್ನು ಪಡೆಯಬಹುದು. ಅಣಬೆ ಬೆಳೆಗಾರರು ಯೂಟ್ಯೂಬ್‌ನಲ್ಲಿಯೂ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
