ಕೊನೆಗೂ ಕರಡಿ ಕುಣಿತದ ಪ್ರಭಾವದಿಂದ ಹೊರಬಂದ ಷೇರುಪೇಟೆ, ಸೆನ್ಸೆಕ್ಸ್ 585 ಅಂಶ ಏರಿಕೆ, 25000 ದಾಟಿದ ನಿಫ್ಟಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊನೆಗೂ ಕರಡಿ ಕುಣಿತದ ಪ್ರಭಾವದಿಂದ ಹೊರಬಂದ ಷೇರುಪೇಟೆ, ಸೆನ್ಸೆಕ್ಸ್ 585 ಅಂಶ ಏರಿಕೆ, 25000 ದಾಟಿದ ನಿಫ್ಟಿ

ಕೊನೆಗೂ ಕರಡಿ ಕುಣಿತದ ಪ್ರಭಾವದಿಂದ ಹೊರಬಂದ ಷೇರುಪೇಟೆ, ಸೆನ್ಸೆಕ್ಸ್ 585 ಅಂಶ ಏರಿಕೆ, 25000 ದಾಟಿದ ನಿಫ್ಟಿ

ಸತತ ಐದಾರು ದಿನಗಳ ಕಾಲ ಕರಡಿ ಕುಣಿತದ ಪ್ರಭಾವಕ್ಕೆ ಸಿಲುಕಿ ನಲುಗಿದ್ದ ಭಾರತದ ಷೇರುಪೇಟೆ ಕೊನೆಗೂ ಇಂದು (ಅಕ್ಟೋಬರ್ 8) ಆ ಪ್ರಭಾವದಿಂದ ಹೊರಬಂದಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 585 ಅಂಶ ಏರಿಕೆಯಾಗಿದೆ. ನಿಫ್ಟಿ ಮತ್ತೆ 25000 ಅಂಶಗಳ ಗಡಿದಾಟಿದೆ.

ಭಾರತದ ಷೇರುಪೇಟೆಯಲ್ಲಿ ಇಂದು (ಅಕ್ಟೋಬರ್ 8) ಸೆನ್ಸೆಕ್ಸ್ 585 ಅಂಶ ಏರಿಕೆಯಾಗಿದೆ. ಅದೇ ರೀತಿ ನಿಫ್ಟಿ 25000 ದಾಟಿದೆ. (ಸಾಂಕೇತಿಕ ಚಿತ್ರ)
ಭಾರತದ ಷೇರುಪೇಟೆಯಲ್ಲಿ ಇಂದು (ಅಕ್ಟೋಬರ್ 8) ಸೆನ್ಸೆಕ್ಸ್ 585 ಅಂಶ ಏರಿಕೆಯಾಗಿದೆ. ಅದೇ ರೀತಿ ನಿಫ್ಟಿ 25000 ದಾಟಿದೆ. (ಸಾಂಕೇತಿಕ ಚಿತ್ರ) (Pexels)

ಮುಂಬಯಿ: ಭಾರತೀಯ ಷೇರುಪೇಟೆ ಸತತ 6 ದಿನಗಳ ಕರಡಿ ಕುಣಿತದ ಪ್ರಭಾವದಿಂದ ಇಂದು (ಅಕ್ಟೋಬರ್ 8) ಪಾರಾಗಿದೆ. ಇಂದಿನ ವಹಿವಾಟಿನಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನ ಸೆನ್ಸೆಕ್ಸ್ 584.81 (0.72%) ಅಂಶ ಏರಿದ್ದು 81,634.80 ಮಟ್ಟ ತಲುಪಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿ 50 ಸೂಚ್ಯಂಕವು 217.38 (0.88%) ಅಂಶ ಏರಿ 25,013.15 ಅಂಶ ತಲುಪಿದೆ. ಚೀನಾದ ಮಾರುಕಟ್ಟೆ ಏರುಮುಖವಾಗಿರುವುದು ಮತ್ತು ಜಮ್ಮು -ಕಾಶ್ಮೀರ, ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಪೇಟೆಯ ವಹಿವಾಟಿನ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಅದೇ ರೀತಿ ಹೂಡಿಕೆದಾರರ ಗಮನ ಈಗ ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಭೆಯ ಕಡೆಗೆ ಹೊರಳಿದೆ. ಬುಧವಾರ (ನಾಳೆ) ಇದರ ವಿವರ ಬಹಿರಂಗವಾಗಲಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ಪಟ್ಟಿಯಲ್ಲಿ ಏನೇನು

ಸೆನ್ಸೆಕ್ಸ್‌ನ ಪಟ್ಟಿಯಲ್ಲಿ ಇಂದು ಅದಾನಿ ಪೋರ್ಟ್ಸ್‌, ಎಂಆಂಡ್ಎಂ, ರಿಲಯನ್ಸ್ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಲ್‌&ಟಿ, ಎಸ್‌ಬಿಐ, ಅಲ್ಟ್ರಾಟೆಕ್‌ ಸಿಮೆಂಟ್‌, ಎನ್‌ಟಿಪಿಸಿ, ಕೊಟಾಕ್‌ ಬ್ಯಾಂಕ್‌ ಷೇರುಗಳು ಶೇಕಡ 1 ರಿಂದ ಶೇಕಡ 4.5ರ ತನಕ ಏರಿಕೆ ಕಂಡಿವೆ.

ಇನ್ನೊಂದೆಡೆ, ಟಾಟಾ ಸ್ಟೀಲ್, ಟೈಟಾನ್‌, ಬಜಾಜ್‌ ಫಿನ್‌ಸರ್ವ್‌, ಜೆಎಸ್‌ಡಬ್ಲ್ಯು ಸ್ಟೀಲ್, ಬಜಾಜ್ ಫಿನಾನ್ಸ್‌, ಟಾಟಾ ಮೋಟಾರ್ಸ್‌, ಐಟಿಸಿ ಷೇರುಗಳು ಇಂದು ಶೇಕಡ 2.7ರಷ್ಟು ನಷ್ಟ ಅನುಭವಿಸಿವೆ.

ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇಕಡ 1.86 ಏರಿದರೆ, ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡ 2.44 ಏರಿಕೆ ಕಂಡಿದೆ. ಇದೇ ವೇಳೆ, ನಿಫ್ಟಿ ಮೆಟಲ್ ಇಂಡೆಕ್ಸ್‌ ಏರಿಕೆ ದಾಖಲಿಸಿದೆ. ನಿಫ್ಟಿ ಮೀಡಿಯಾ ಸೂಚ್ಯಂಕ ಶೇಕಡ 3 ಏರಿದ್ದು, ನಿಫ್ಟಿ ಆಟೋ ಶೇಕಡ 1.84 ಏರಿಕೆಯಾಗಿದೆ. ನಿಫ್ಟಿ ಫಾರ್ಮಾ ಕೂಡ ಶೇಕಡ 1.5 ಏರಿದೆ.

ಮೆಟಲ್ ಸ್ಟಾಕ್‌ಗಳು ಕುಸಿದುದೇಕೆ

ಷೇರುಪೇಟೆ ಚೇತರಿಕೆ ತೋರಿಸಿದರೂ ನಿಫ್ಟಿ ಮೆಟಲ್‌ ಸ್ಟಾಕ್‌ಗಳು ಶೇಕಡ 1 ರಷ್ಟು ಕುಸಿತ ದಾಖಲಿಸಿವೆ. ಚೀನಾದ ಷೇರುಪೇಟೆಯ ಏರಿಕೆ ಮತ್ತು ಅಲ್ಲಿನ ವಿದ್ಯಮಾನಗಳಿಗೆ ಸ್ಪಂದಿಸಿದ ಭಾರತದ ನಿಫ್ಟಿ ಮೆಟಲ್‌ ಸೂಚ್ಯಂಕ ಈ ಕುಸಿತ ದಾಖಲಿಸಿದೆ. ಇದರಲ್ಲಿ ಎನ್‌ಎಂಡಿಸಿ ಗರಿಷ್ಠ ನಷ್ಟ ಅನುಭವಿಸಿದೆ. ಇದು ಶೇಕಡ 4.4 ನಷ್ಟ ದಾಖಲಿಸಿದ್ದು, ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡ 8ರಷ್ಟು ಕುಸಿತ ದಾಖಲಿಸಿತ್ತು. ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಕೂಡ ಶೇಕಡ 2ಕ್ಕಿಂತ ಹೆಚ್ಚು ಕುಸಿದಿದೆ.

ಏಷ್ಯಾದ ಸೂಚ್ಯಂಕಗಳು ಮಂಗಳವಾರ ಬೆಳಗ್ಗೆ ಮಿಶ್ರ ಪ್ರತಿಕ್ರಿಯೆ ತೋರಿಸಿದ್ದವು. ಹಾಂಗ್‌ಸೆಂಗ್‌ ಶೇಕಡ 9ಕ್ಕಿಂತ ಹೆಚ್ಚು ಕುಸಿದು 20,940ಕ್ಕೆ ಇಳಿದಿದೆ. ಇನ್ನೊಂದೆಡೆ, ನಿಕ್ಕಿ ಶೇಕಡ 1ಕ್ಕೂ ಹೆಚ್ಚು ಕುಸಿದು 38,938ರಲ್ಲಿ ವಹಿವಾಟು ಮುಗಿಸಿದೆ. ಇನ್ನು ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಏರಿಕೆ ತೋರಿದೆ. ಚೀನಾ ಸರ್ಕಾರ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಪ್ಯಾಕೇಜ್ ಘೋಷಿಸಿದ ಬಳಿಕ ಈ ವಿದ್ಯಮಾನ ಗೋಚರಿಸಿತು. ಶಾಂಘೈ ಕಾಂಪೋಸಿಟ್‌ ಶೇಕಡ 4.4 ಏರಿಕೆಯಾಗಿ 3,490ರಲ್ಲಿ ವಹಿವಾಟು ಮುಗಿಸಿದೆ. ಕೊರಿಯನ್ ಸೂಚ್ಯಂಕ ಕೋಸ್ಪಿ ಶೇಕಡ 0.6 ಕುಸಿದು 2,594ರಲ್ಲಿ ವಹಿವಾಟುಕೊನೆಗೊಳಿಸಿದೆ.

Whats_app_banner