ವೈಯಕ್ತಿಕ ಹಣಕಾಸು ಸಲಹೆ: ಶ್ರೀಮಂತರಾಗುವ ಕನಸು ಕಾಣುತ್ತಿದ್ದೀರಾ, ಈ 3 ಹಣಕಾಸು ಹೂಡಿಕೆ ಆಯ್ಕೆಗಳನ್ನು ಗಮನಿಸಿ
How to become rich: ಶ್ರೀಮಂತರಾಗಲು ಬಯಸುವವರಿಗೆ ಹಲವು ಆಯ್ಕೆಗಳು ಇವೆ. ಮೊದಲನೆಯದಾಗಿ ಹೂಡಿಕೆ ಮಾಡಲು ಕೊಂಚ ಹಣ ಇರಬೇಕು. ನಿಯಮಿತವಾಗಿ ಹೂಡಿಕೆ ಮಾಡಬೇಕು. ಸರಿಯಾದ ಕಡೆ ಹೂಡಿಕೆ ಮಾಡಬೇಕು ಎನ್ನುತ್ತಾರೆ ತಜ್ಞರು.

ಪ್ರತಿಯೊಬ್ಬರಿಗೂ ಶ್ರೀಮಂತರಾಗಬೇಕೆಂಬ ಕನಸು ಇರುತ್ತದೆ. ನಮ್ಮಲ್ಲಿ ಸಾಕಷ್ಟು ಸಂಪತ್ತು ಇರಬೇಕು. ಕಾರು ಬಂಗಲೆ, ಮಕ್ಕಳು, ಮೊಮ್ಮಕ್ಕಳ ಕಾಲಕ್ಕೆ ಆಗುವಷ್ಟು ಸಂಪತ್ತು ಹೊಂದಿರಬೇಕು ಎಂದು ಕನಸು ಕಾಣುತ್ತೇವೆ. ಈ ರೀತಿ ಶ್ರೀಮಂತರಾಗಲು ಪ್ರಯತ್ನಿಸುವವರಲ್ಲಿ ಸಾಕಷ್ಟು ಜನರು ಯಶಸ್ಸು ಪಡೆಯುತ್ತಾರೆ. ಸಂಪತ್ತು ಹೆಚ್ಚಿಸಿಕೊಳ್ಳಬೇಕಾದರೆ ಒಳ್ಳೆಯ ಉದ್ಯೋಗ, ಆಸ್ತಿಪಾಸ್ತಿ, ವ್ಯವಹಾರ ಇತ್ಯಾದಿಗಳು ಇರಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಹೂಡಿಕೆ ಯೋಜನೆ ಇರಬೇಕಾಗುತ್ತದೆ. ಕೋಟ್ಯಧಿಪತಿಗಳೆಲ್ಲ ತಮ್ಮ ಕೋಟಿಕೋಟಿ ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿ ಅದನ್ನು ಬೆಳೆಸುತ್ತಾರೆ. ಹೂಡಿಕೆ ಕುರಿತು ಆಸಕ್ತಿ ಇರುವವರಿಗೆ ತಜ್ಞರು ಇಲ್ಲಿ ಮೂರು ಪ್ರಮುಖ ಹೂಡಿಕೆ ಆಯ್ಕೆಗಳ ಕುರಿತು ಮಾಹಿತಿ ನೀಡಿದ್ದಾರೆ.
1. ಈಕ್ವಿಟಿ/ಷೇರು ಹೂಡಿಕೆ ಮೂಲಕ ಶ್ರೀಮಂತರಾಗುವ ಆಯ್ಕೆ
ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಶ್ರೀಮಂತರಾಗಲು ಇರುವ ಜನಪ್ರಿಯ ಆಯ್ಕೆ. ಷೇರುಪೇಟೆಯ ಅನುಭವ ಇಲ್ಲದೆ ಹೂಡಿಕೆ ಮಾಡಿ ನಿರ್ಗತಿಕರಾದವರೂ ಇದ್ದಾರೆ. ಈಕ್ವಿಟಿ ಹೂಡಿಕೆ ಮಾಡಿದರೆ ಡಿವಿಡೆಂಡ್ ಮೂಲಕ ಹಣ ದೊರಕುತ್ತ ಇರುತ್ತದೆ. ಇದೇ ಸಮಯದಲ್ಲಿ ಹೂಡಿಕೆ ಮಾಡಿದ ಷೇರಿನ ಮೊತ್ತ ಹೆಚ್ಚಾದಗ ಅದರಿಂದಲೂ ಲಾಭ ದೊರಕುತ್ತದೆ.
"ಅತ್ಯುತ್ತಮ ರಿಟರ್ನ್ ನೀಡುವ ಇತಿಹಾಸ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿ ಹೂಡಿಕೆದಾರರು ಹೂಡಿಕೆ ರಿಸ್ಕ್ ಕಡಿಮೆ ಮಾಡಿಕೊಂಡು ದೀರ್ಘಕಾಲದಲ್ಲಿ ಅತ್ಯಧಿಕ ಗಳಿಕೆ ಮಾಡಬಹುದು" ಎಂದು ಜಿಸಿಎಲ್‌ನ ಸಿಇಒ ರವಿ ಸಿಂಘಾಲ್ ಹೇಳಿದ್ದಾರೆ.
2. ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಿ
ನಿಯಮಿತ ಆದಾಯ ಪಡೆಯಲು ಬಯಸುವವರಿಗೆ ಮ್ಯೂಚುಯಲ್ ಫಂಡ್‌ಗಳು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಷೇರುಗಳು, ಬಾಂಡ್‌ಗಳು ಮತ್ತು ಇತರೆ ಸೆಕ್ಯುರಿಟೀಸ್ ಮೇಲೆ ವೈವಿದ್ಯಮಯ ಹೂಡಿಕೆ ಮಾಡುವ ಮೂಲಕ ಮ್ಯೂಚುಯಲ್ ಫಂಡ್‌ಗಳಲ್ಲಿ ಆದಾಯ ಗಳಸಬಹುದು. "ಡಿವಿಡೆಂಡ್ ಮ್ಯೂಚುಯಲ್ ಫಂಡ್‌ಗಳು, ಇನ್‌ಕಂ ಫಂಡ್‌ಗಳು, ಬ್ಯಾಲೆನ್ಸಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು" ಟೆಕ್ನಿಕಲ್ ಅನಾಲಿಸ್ಟ್ ಮತ್ತು ಟ್ರೇಡರ್ ಧ್ರುವ ಜೈನ್ ಹೇಳಿದ್ದಾರೆ.
3. ರೆಂಟಲ್ ಆಫೀಸ್ ಸ್ಪೇಸ್ ಮೇಲೆ ಹೂಡಿಕೆ
ರೆಂಟಲ್ ಆಫೀಸ್ ಸ್ಪೇಸ್ ಮೇಲೆ ಹೂಡಿಕೆ ಮಾಡುವ ಮೂಲಕವೂ ಅತ್ಯುತ್ತಮವಾಗಿ ಗಳಿಕೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. "ನಿರ್ದಿಷ್ಟ ಸ್ಥಳ, ಗಾತ್ರ, ಕಟ್ಟಡದ ಕಂಡಿಷನ್ ನೋಡಿಕೊಂಡು ಮತ್ತು ಆ ಸ್ಥಳದಲ್ಲಿ ಆಫೀಸ್ ಸ್ಥಳಾವಕಾಶಕ್ಕೆ ಇರುವ ಬೇಡಿಕೆ ನೋಡಿಕೊಂಡು ಹೂಡಿಕೆ ಮಾಡಬಹುದು" ಎಂದು ಅವಂತಾ ಇಂಡಿಯಾದ ಎಂಡಿ ನಕುಲ್ ಮಥೂರ್ ಹೇಳಿದ್ದಾರೆ.
"ಅತ್ಯುತ್ತಮ ಬಿಸ್ನೆಸ್ ಇರುವ ಸ್ಥಳದಲ್ಲಿ ಸಣ್ಣ ಕಟ್ಟಡವಿದ್ದರೂ ಬಾಡಿಗೆ ನೀಡಿ ಅತ್ಯುತ್ತಮವಾಗಿ ಗಳಿಕೆ ಮಾಡಬಹುದು. ಸಾಕಷ್ಟು ಬಿಸ್ನೆಸ್‌ಗಳು ಅತ್ಯುತ್ತಮ ದರದಲ್ಲಿ ಒಳ್ಳೆಯ ಆಫೀಸ್ ಹುಡುಕುತ್ತ ಇರುತ್ತವೆ. ಹೀಗಾಗಿ, ಈ ರೀತಿಯ ಕಟ್ಟಡ ಹೊಂದಿರುವವರು ಉತ್ತಮ ಆದಾಯ ಪಡೆಯಬಹುದು" ಎಂದು ಅವರು ಹೇಳಿದ್ದಾರೆ.
ಹೂಡಿಕೆಗೆ ಮೊದಲು ಗಮನಿಸಿ
ಹಣ ಹೂಡಿಕೆ ಮಾಡುವ ಮೊದಲು ಹಣ ಗಳಿಸಲು ಕಲಿಯಬೇಕು. ಗಳಿಸಿದ ಹಣವನ್ನು ನಿಯಮಿತವಾಗಿ ವಿವಿಧ ಕಡೆ ಹೂಡಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಒಂದೇ ಕಡೆ ಹೂಡಿಕೆ ಮಾಡಬಾರದು. ಎಲ್ಲಾ ಮೊಟ್ಟೆಯನ್ನು ಒಂದೇ ಬಾಕ್ಸ್‌ನಲ್ಲಿ ಹಾಕಬಾರದು ಎಂಬ ಮಾತಿದೆ. ಷೇರುಪೇಟೆ, ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್, ಗೋಲ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೂಡಿಕೆಯ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಗಮನಿಸಿ: ಇದು ಮಾಹಿತಿಗಾಗಿ ನೀಡಿರುವ ಲೇಖನ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಓದುಗರಿಗೆ ಹೂಡಿಕೆ ಮಾಡಲು ಯಾವುದೇ ಕಂಪನಿಯನ್ನೂ ಸೂಚಿಸುವುದಿಲ್ಲ. ಮಾರುಕಟ್ಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ರಿಸರ್ಚ್ ಮತ್ತು ಜ್ಞಾನದೊಂದಿಗೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ.
