ಫೆಡ್ಡಿಗೆ ಈಗ ಕನ್ನಡ ಬರುತ್ತೆ; ಫೆಡರಲ್ ಬ್ಯಾಂಕ್ ಚಾಟ್‌ಬೋಟ್‌ ಜತೆಗೆ ನೀವು ಈಗ ಆರಾಮಾಗಿ ಚಾಟ್ ಮಾಡಬಹುದು-business news banking news feddy goes kannada federal bank and bhashini join forces to enrich chatbot feddy uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫೆಡ್ಡಿಗೆ ಈಗ ಕನ್ನಡ ಬರುತ್ತೆ; ಫೆಡರಲ್ ಬ್ಯಾಂಕ್ ಚಾಟ್‌ಬೋಟ್‌ ಜತೆಗೆ ನೀವು ಈಗ ಆರಾಮಾಗಿ ಚಾಟ್ ಮಾಡಬಹುದು

ಫೆಡ್ಡಿಗೆ ಈಗ ಕನ್ನಡ ಬರುತ್ತೆ; ಫೆಡರಲ್ ಬ್ಯಾಂಕ್ ಚಾಟ್‌ಬೋಟ್‌ ಜತೆಗೆ ನೀವು ಈಗ ಆರಾಮಾಗಿ ಚಾಟ್ ಮಾಡಬಹುದು

ಫೆಡರಲ್ ಬ್ಯಾಂಕ್ ಗ್ರಾಹಕರಿಗೆ ಒಂದು ಖುಷಿ ಸುದ್ದಿ. ನಿಮ್ಮ ಬ್ಯಾಂಕಿನ ಫೆಡ್ಡಿ ಈಗ ಕನ್ನಡದಲ್ಲೂ ಸಂವಹನ ನಡೆಸುತ್ತೆ. ನಿಮ್ಮ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸುತ್ತೆ. ಈ ಚಾಟ್‌ಬೋಟ್‌ಗೆ ಬಲ ತುಂಬುವುದಕ್ಕಾಗಿ ಫೆಡರಲ್ ಬ್ಯಾಂಕ್ ಭಾಷಿಣಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಗ್ರಾಹಕ ಸ್ನೇಹಿ ಉಪಕ್ರಮದ ವಿವರ ಇಲ್ಲಿದೆ.

ಫೆಡ್ಡಿಗೆ ಈಗ ಕನ್ನಡ ಬರುತ್ತೆ; ಫೆಡರಲ್ ಬ್ಯಾಂಕ ಚಾಟ್‌ ಬೋಟ್‌ಗೆ ಭಾಷಿಣಿಯ ಬಲ
ಫೆಡ್ಡಿಗೆ ಈಗ ಕನ್ನಡ ಬರುತ್ತೆ; ಫೆಡರಲ್ ಬ್ಯಾಂಕ ಚಾಟ್‌ ಬೋಟ್‌ಗೆ ಭಾಷಿಣಿಯ ಬಲ (Federal Bank)

ಬೆಂಗಳೂರು: ನಮ್ಮ ಭಾಷೆ ಬಿಟ್ಟು ಇಂಗ್ಲಿಷ್ ಅಥವಾ ಹಿಂದಿ ಭಾಷೆ ಅಥವಾ ಇನ್ಯಾವುದೇ ಭಾಷೆಯಲ್ಲಿ ಸರಾಗ ವ್ಯವಹರಿಸಬೇಕು ಎಂದರೆ ಸ್ವಲ್ಪ ಕಷ್ಟವೇ. ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಹೋದರೆ, ಬ್ಯಾಂಕುಗಳ ವೆಬ್‌ಸೈಟ್‌ಗಳಿಗೆ ಹೋದಾಗ ಗ್ರಾಹಕರಿಗೆ ಇದೇ ದೊಡ್ಡ ಸವಾಲು. ಚಾಟ್‌ಬೋಟ್‌ಗಳೂ ಅಷ್ಟೆ.. ಇಂಗ್ಲಿಷ್, ಹಿಂದಿ ಬಿಟ್ಟರೆ ಬೇರೆ ಭಾಷೆಯಲ್ಲಿ ಉತ್ತರಿಸಲ್ಲ. ಅವುಗಳ ಜೊತೆಗೆ ವ್ಯವಹರಿಸವುದು ಹೇಗೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ತಲೆ ಚಿಟ್‌ ಹಿಡಿದು ಚೂರಾಗಿರುತ್ತೆ. ಇವೆಲ್ಲದರ ನಡುವೆ ಫೆಡರಲ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸಮಾಚಾರ ಒಂದಿದೆ. ಫೆಡರಲ್ ಬ್ಯಾಂಕ್‌ನ ಚಾಟ್‌ಬೋಟ್ ಫೆಡ್ಡಿಗೆ ಈಗ ಕನ್ನಡ ಬರುತ್ತೆ!. ಈ ಚಾಟ್‌ಬೋಟ್ ಸಂವಹನಕ್ಕೆ ಬಲತುಂಬಲು ಫೆಡರಲ್ ಬ್ಯಾಂಕ್ ಭಾಷಿಣಿ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಸುದ್ದಿ ಈಗ ಗ್ರಾಹಕ ಸಂವಹನ ಸುಧಾರಣೆಯ ದೃಷ್ಟಿಯಿಂದ ಗಮನಸೆಳೆದಿದೆ.

ಫೆಡರಲ್ ಬ್ಯಾಂಕ್ ಚಾಟ್‌ ಬೋಟ್‌ ಫೆಡ್ಡಿಗೆ ಭಾಷಿಣಿಯ ಬಲ

ಭಾರತದ ಬ್ಯಾಂಕಿಂಗ್ ವಲಯದ ಖಾಸಗಿ ಬ್ಯಾಂಕ್‌ ಫೆಡರಲ್ ಬ್ಯಾಂಕ್‌ ತನ್ನ ಎಐ ವರ್ಚುವಲ್ ಅಸಿಸ್ಟಂಟ್‌ ಫೆಡ್ಡಿಗೆ ಪ್ರಾದೇಶಿಕ ಭಾಷೆಯ ಬಲ ತುಂಬುವುದಕ್ಕಾಗಿ ಎಐ ಆಧಾರಿತ ಭಾಷಾ ತರ್ಜುಮೆ ವೇದಿಕೆ ಭಾಷಿಣಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (RBIH) ನ ಸ್ಥಳೀಯ ಭಾಷಾ ಉಪಕ್ರಮದ ಭಾಗವಾಗಿ ಈ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಫೆಡರಲ್ ಬ್ಯಾಂಕ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಾಲಿನಿ ವಾರಿಯರ್‌ ಮತ್ತು ಭಾಷಿಣಿಯ ಸಿಇಒ ಅಮಿತಾಭ್ ನಾಗ್ ಸಹಿ ಹಾಕಿದ್ದಾರೆ. ಇದು ಫೆಡ್ಡಿಯ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸಿದ್ದು, ಭಾರತದಾದ್ಯಂತ ವಿಸ್ತೃತ ಗ್ರಾಹಕರು ತಮ್ಮ ಬ್ಯಾಂಕಿಂಗ್ ವಹಿವಾಟಿನ ಕುರಿತು ಸಂವಹನ ನಡೆಸುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಫೆಡ್ಡಿ ಯಾರು? ಎಷ್ಟು ಭಾಷೆ ಬರುತ್ತೆ

ಎಐ ಆಧಾರಿತ ಚಾಟ್‌ ಬೋಟ್‌/ ಎಐ ವರ್ಚುವಲ್ ಅಸಿಟ್ಟೆಂಟ್ ಎಂದು ಫೆಡ್ಡಿಯನ್ನು ಫೆಡರಲ್ ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಿದೆ. ತ್ವರಿತ ಮತ್ತು ಅನುಕೂಲಕರ ಬ್ಯಾಂಕಿಂಗ್ ಸೇವೆಗಳನ್ನು ಬಯಸುವ ಗ್ರಾಹಕರ ವಲಯದಲ್ಲಿ ಫೆಡ್ಡಿ ಈಗಾಗಲೇ ಜನಪ್ರಿಯ ಟೂಲ್ ಆಗಿ ಬಳಕೆಯಲ್ಲಿದೆ. ಫೆಡರಲ್ ಬ್ಯಾಂಕ್ ಚಾಟ್‌ಬೋಟ್‌ನ ಭಾಷಾ ವ್ಯವಸ್ಥೆಗಾಗಿ ಭಾಷಿಣಿ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕಾರಣ ಫೆಡ್ಡಿಗೆ ಈಗ 14 ಭಾಷೆ ಬರುತ್ತೆ. ಅದು ಭಾರತದ 14 ಬೇರೆ ಬೇರೆ ಭಾಷೆಗಳಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಬಲ್ಲದು. ಇಂಗ್ಲಿಷ್ ಹೊರತು ಪಡಿಸಿ, ಹಿಂದಿ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಗುಜರಾತಿ, ಕನ್ನಡ, ಮಲಯಾಳಂ, ಒಡಿಯಾ, ಅಸ್ಸಾಮೀಸ್, ಪಂಜಾಬಿ, ಉರ್ದು, ಮಣಿಪುರಿ ಮತ್ತು ಬೋಡೋ ಭಾಷೆಗಳಲ್ಲಿ ಫೆಡ್ಡಿ ವ್ಯವಹರಿಸಬಲ್ಲದು.

ಭಾರತ ಹಲವು ಭಾಷೆಗಳ ದೇಶ. ನಾವು ನಮ್ಮ ಗ್ರಾಹಕರ ವಿಶಿಷ್ಟ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಮುಂಚೂಣಿಯಲ್ಲಿದ್ದೇವೆ. ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ವ್ಯವಹಾರ ಸಂವಹನವನ್ನು ಒದಗಿಸುವ ಮೂಲಕ ನಮ್ಮ ಫೆಡ್ಡಿ ಇನ್ನಷ್ಟು ಬಳಕೆದಾರ ಸ್ನೇಹಿ ಆಗಿರುವ ಖುಷಿ ಇದೆ. ಇದಕ್ಕೆ ಭಾಷಿಣಿಯ ಬೆಂಬಲ ಮುಖ್ಯ. ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ ಬೆಂಬಲ ಸಿಕ್ಕಿದ್ದರಿಂದ ಇದು ಸಾಧ್ಯವಾಯಿತು ಎಂದು ಶಾಲಿನಿ ವಾರಿಯರ್‌ ಹೇಳಿದ್ದಾರೆ.

ಫಿನ್‌ಟೆಕ್‌ನ ಭಾಷಾ ಸಮಸ್ಯೆ ಪರಿಹರಿಸುವುದಕ್ಕೆ ಫೆಡರಲ್ ಬ್ಯಾಂಕ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಭಾಷಿಣಿ ಸಂವಹನವನ್ನು ಸರಳಗೊಳಿಸಲು ಪ್ರಯತ್ನಿಸುತ್ತಿದೆ. ಈ ಪ್ರಯೋಗ ಬಳಕೆದಾರರ ಪಾಲ್ಗೊಳ್ಳುವಿಕೆಯಲ್ಲಿ ಹೊಸ ಸ್ತರವನ್ನು ಸೃಷ್ಟಿಸಲಿದೆ ಎಂದು ಭಾಷಿಣಿ ಸಿಇಒ ಅಮಿತಾಭ್ ನಾಗ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಭಾಷಾ ಬ್ಯಾಂಕಿಂಗ್, ಭಾಷಿಣಿಯಂತಹ ಎಐ-ಚಾಲಿತ ಸಲ್ಯೂಷನ್‌ಗಳಿಂದ ನಡೆಸಲ್ಪಡುತ್ತಿದೆ. ಇದು ಕೇವಲ ಒಂದು ನವೋನ್ವೇಷಣೆಯಲ್ಲ. ಈ ಡಿಜಿಟಲ್ ಕ್ರಾಂತಿಯ ಪ್ರಯೋಜನವನ್ನು ಶತಕೋಟಿ ಭಾರತೀಯರಿಗೆ ಖಾತ್ರಿಪಡಿಸುವುದು ಅವಶ್ಯ ಎಂದು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ ಸಿಇಒ ರಾಜೇಶ್ ಬನ್ಸಾಲ್ ಹೇಳಿದರು.

mysore-dasara_Entry_Point