BHIM UPI App: ಭೀಮ್ ಯಪಿಐ ಆಪ್ ಬಳಸಿ ಯುಪಿಐ ಪಿನ್ ರಿಸೆಟ್ ಮಾಡೋದು ಹೇಗೆ, ಈ ಸರಳ ಸ್ಟೆಪ್ಸ್ ಅನುಸರಿಸಿ ಸುರಕ್ಷಿತವಾಗಿರಿ
ಡಿಜಿಟಲ್ ಪೇಮೆಂಟ್ ಆಯ್ಕೆಗಳು ನಮ್ಮ ಬದುಕನ್ನು ಸರಳಗೊಳಿಸಿರುವುದು ಸತ್ಯ. ಆದರೆ ಸುರಕ್ಷತೆಯ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ನಿಮ್ಮ ಖಾತೆಯಲ್ಲಿ ಹಣ ಸುರಕ್ಷಿತವಾಗಿರಲು ಆಗಾಗ ಯುಪಿಐ ಪಿನ್ ರಿಸೆಟ್ ಮಾಡುವುದು ಮುಖ್ಯವಾಗುತ್ತದೆ. ಭೀಮ್ ಯುಪಿಐ ಆಪ್ ಮೂಲಕ ನಿಮ್ಮ ಯುಪಿಐ ಪಿನ್ ರಿಸೆಟ್ ಮಾಡಲು ಇಲ್ಲಿದೆ ಸಿಂಪಲ್ ಗೈಡ್‌ಲೈನ್ಸ್.
ಕಳೆದ ಒಂದಿಷ್ಟು ವರ್ಷಗಳಿಂದ ಹಣದ ವ್ಯವಹಾರಗಳೆಲ್ಲವೂ ಯುಪಿಐ ಮೂಲಕವೇ ನಡೆಯುತ್ತಿದೆ. ನಗದು ರೂಪದಲ್ಲಿ ಹಣದ ವ್ಯವಹಾರ ಬಹುತೇಕ ನಿಂತಿದೆ ಅಂತಲೇ ಹೇಳಬಹುದು. ಈ ಯುಪಿಐ ಎನ್ನುವುದು ನಮ್ಮೆಲ್ಲರ ಬದುಕಿನ ಭಾಗವೇ ಆಗಿ ಹೋಗಿದೆ. ಇದರ ಕಾರಣದಿಂದ ಬ್ಯಾಂಕ್ ವ್ಯವಹಾರಗಳು ಹಿಂದೆದಿಗಿಂತಲೂ ಸರಳವಾಗಿದೆ. ಆದರೆ ಯುಪಿಐ ವಿಚಾರದಲ್ಲಿ ಒಂದಿಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕೂಡ ಮುಖ್ಯವಾಗುತ್ತದೆ. ಯುಪಿಐ ವ್ಯವಹಾರದಲ್ಲಿ ಯುಪಿಐ ಪಿನ್ ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಥವಾ ಯುಪಿಐ ವ್ಯವಹಾರದಲ್ಲಿ ಯಾವುದೇ ಅನಧೀಕೃತ ವಹಿವಾಟು ನಡೆಯುವುದನ್ನು ತಪ್ಪಿಸಲು ಯುಪಿಐ ಪಿನ್‌ಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಈ ಪಿನ್ ಸೀಕ್ರೆಟ್ ಆಗಿರುವ ಕಾರಣ ಬಳಕೆದಾರರಿಗೆ ಮಾತ್ರ ತಿಳಿದಿರುತ್ತದೆ.
ಆದರೂ ಇತ್ತೀಚಿನ ದಿನಗಳಲ್ಲಿ ಸೈಬರ್‌ಕ್ರೈಮ್‌ಗಳು ಹೆಚ್ಚುತ್ತಿದೆ. ಜೊತೆಗೆ ಯುಪಿಐನಲ್ಲೂ ಅವ್ಯವಹಾರಗಳು ನಡೆಯುತ್ತಿವೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸುರಕ್ಷಿತವಾಗಿ ಇರಿಸಲು ಹಾಗೂ ಹಣಕಾಸಿನ ಮಾಹಿತಿಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಪೂರ್ವಭಾವಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಂತಹ ಮುನ್ನೆಚ್ಚರಿಕೆಯ ಕ್ರಮದ ಒಂದು ಭಾಗ ಯುಪಿಐ ಪಿನ್ ಅನ್ನು ಮರು ಹೊಂದಿಸುವುದು. ಯುಪಿಐ ಪಿನ್ ರಿಸೆಟ್ ಮಾಡುವ ವಿಚಾರ ಬಂದಾಗ ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಹಾಗೂ ಭೀಮ್ ಯುಪಿಐ ನಂತಹ ಅಪ್ಲಿಕೇಶನ್‌ಗಳನ್ನು ಬಳಸಬಹುದು.
ಪಿನ್ ರಿಸೆಟ್ ಮಾಡಲು ಏನೆಲ್ಲಾ ಬೇಕು?
* ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ 6 ಸಂಖ್ಯೆಗಳು
* ಡೆಬಿಟ್ ಕಾರ್ಡ್‌ನ ವಾಲಿಡಿಟಿ ಅವಧಿ
* ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
BHIM ಆಪ್ ಬಳಸಿ ಯುಪಿಐ ಪಿನ್ ರಿಸೆಟ್ ಮಾಡುವುದು ಹೇಗೆ?
* BHIM ಯುಪಿಐ ಆಪ್ ತೆರೆಯಿರಿ
* ಬ್ಯಾಂಕ್ ಖಾತೆ ಆಯ್ಕೆಯನ್ನು ಆರಿಸಿ
* ಯುಪಿಐ ಪಿನ್ ರಿಸೆಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಹೊಸ ಯುಪಿಐ ಪಿನ್ ಹೊಂದಿಸಲು ಡೆಬಿಟ್ ಕಾರ್ಡ್ ಕೊನೆಯ 6 ಸಂಖ್ಯೆಗಳು, ಡೆಬಿಟ್ ಕಾರ್ಡ್ ವಾಯಿದೆ ದಿನಾಂಕ ನಮೂದಿಸಿ
* ಈಗ ಬ್ಯಾಂಕ್ ಕಡೆಯಿಂದ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್‌ಗೆ ಒಂದು ಒಟಿಪಿ ಬರುತ್ತದೆ
* ಆಗ ನಿಮಗೆ ಹೊಸ ಯುಐಪಿ ಪಿನ್ ಎಂಟರ್ ಮಾಡಬಹುದು
* ನಂತರ ಇನ್ನೊಮೆ ಪಿನ್ ಎಂಟರ್ ಮಾಡಲು ಕೇಳುತ್ತದೆ
* ನಂತರ ಯುಪಿಐ ಪಿನ್ ರಿಸೆಟ್ ಆಗಿರುತ್ತದೆ
ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ, BHIM ಯುಪಿಐ ಆಪ್ ಬಳಸಿ ನಿಮ್ಮ ಯುಪಿಐ ಪಿನ್ ರಿಸೆಟ್ ಮಾಡಬಹುದು, ಆ ಮೂಲಕ ಸುರಕ್ಷಿತ ಡಿಜಿಟಲ್ ವ್ಯವಹಾರ ನಡೆಸಬಹುದು. ನೀವು Google Pay, PhonePe, Paytm ಅಥವಾ ಯಾವುದೇ ಇತರ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿರಲಿ, ಈ ಕ್ರಿಯೆಯಿಂದಾಗಿ ನಿಮ್ಮ ಹಣಕಾಸಿನ ಮಾಹಿತಿಯು ಸುರಕ್ಷಿತವಾಗಿರುತ್ತದೆ. ಸೈಬರ್ ಅಪಾಯಗಳಿಂದ ನಿಮ್ಮ ಬ್ಯಾಂಕ್ ಖಾತೆ ಹಾಗೂ ಯುಪಿಐ ವ್ಯವಹಾರಗಳನ್ನು ಸುರಕ್ಷಿತವಾಗಿರಿಸಲು ಆಗಾಗ ಯುಪಿಐ ಪಿನ್ ಅನ್ನು ನಿಯಮಿತವಾಗಿ ಬದಲಿಸುವುದನ್ನು ಮರೆಯದಿರಿ.
(This copy first appeared in Hindustan Times Kannada website. To read more like this please logon to kannada.hindustantimes.com)