Ice Cream Cone Business: ಸ್ವಂತ ಬಿಸ್ನೆಸ್ ಮಾಡುವ ಆಲೋಚನೆ ಇದೆಯಾ? ಲಾಭದಾಯಕ ಐಸ್‌ಕ್ರೀಂ ಕೋನ್ ವ್ಯವಹಾರ ಆರಂಭಿಸಿ
Ice Cream Cone Business: ಈಗ ಸಾಕಷ್ಟು ಜನರು ಸ್ವಂತ ಉದ್ದಿಮೆ ಸ್ಥಾಪಿಸಿ ನಮಗೆ ನಾವೇ ಬಾಸ್ ಆಗಲು ಬಯಸುತ್ತಾರೆ. ಬಹುತೇಕ ಎಲ್ಲರೂ ಒಂದೇ ಬಗೆಯ ವ್ಯಾಪಾರ ಮಾಡುವುದಕ್ಕಿಂತ ಭಿನ್ನವಾದ ಬಿಸ್ನೆಸ್‌ಗಳಿಗೆ ಮುಂದಾಗುವುದು ಲಾಭಕರ. ಇಂತಹ ಒಂದು ಬಿಸ್ನೆಸ್- ಐಸ್ ಕ್ರೀಮ್ ಕೋನ್ ತಯಾರಿಸುವ ವ್ಯವಹಾರ. ಈ ಕುರಿತು ತಿಳಿದುಕೊಳ್ಳೋಣ ಬನ್ನಿ.
Ice Cream Cone Business: ಐಸ್‌ಕ್ರಿಮ್ ಅಂದ್ರೆ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಐಸ್‌ಕ್ರೀಮ್ ಚಪ್ಪರಿಸಿ ತಿನ್ನುತ್ತಾರೆ. ಬೇಸಿಗೆಯ ದಿನಗಳಲ್ಲಿ ಐಸ್ ಕ್ರೀಮ್ ಕಂಪನಿಗಳು ಮತ್ತು ಸಾಫ್ಟ್ ಡ್ರಿಂಕ್ಸ್ ಕಂಪನಿಗಳು ಉತ್ತಮ ವ್ಯಾಪಾರವನ್ನು ಮಾಡುತ್ತವೆ. ಚಳಿಗಾಲದಲ್ಲೂ ಐಸ್‌ಕ್ರೀಮ್ ತಿಂದು ಮಜಾ ತೆಗೆದುಕೊಳ್ಳುವವರಿಗೆ ಕಡಿಮೆಯಿಲ್ಲ. ಐಸ್ ಕ್ರೀಂ ವ್ಯಾಪಾರವು ಯಾವುದೇ ಸಮಯದಲ್ಲಿ ಉತ್ತಮವಾಗಿ ನಡೆಯುತ್ತದೆ. ಈಗ ಮದುವೆ ಸಮಾರಂಭಗಳಲ್ಲಿ ಐಸ್ ಕ್ರೀಮ್ ಬೇಕೇಬೇಕು. ಇದರಿಂದ ಐಸ್ ಕ್ರೀಂಗಳ ಅಭಿಮಾನಿಗಳ ಸಂಖ್ಯೆಯನ್ನು ತಿಳಿಯಬಹುದು. ನಿಮಗೂ ಐಸ್‌ಕ್ರೀಂ ಇಷ್ಟವಾಗಿರಬಹುದು. ಐಸ್‌ಕ್ರೀಮ್ ಕೋನ್ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಕೋನ್ ಅನ್ನು ಬಿಸ್ಕಿಟ್‌ನಂತೆ ಕಚ್ಚಿ ಕಚ್ಚಿ ತಿನ್ನುವ ಮೊದಲು ಇದು ಹೇಗೆ ತಯಾರಾಗುತ್ತದೆ? ಎಲ್ಲಿ ತಯಾರಾಗುತ್ತದೆ? ನಾವೂ ಇಂತಹ ಕೋನ್ ತಯಾರಿಸಿ ಬಿಸ್ನೆಸ್ ಮಾಡಬಾರದೇಕೆ? ಎಂದು ಯೋಚಿಸುವವರು ನೀವಾಗಿದ್ದರೆ ಈ ಕುರಿತು ತಿಳಿದುಕೊಳ್ಳೋಣ. ಐಸ್‌ಕ್ರೀಮ್ ಕೋನ್ ತಯಾರಿಸುವ ಮೂಲಕ ಪ್ರತಿದಿನ ಮನೆಯಲ್ಲಿಯೇ ಕುಳಿತು 1000 ರೂಪಾಯಿಯಿಂದ 3000 ರೂಪಾಯಿವರೆಗೆ ಸಂಪಾದಿಸಬಹುದು.
ಕೋನ್ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು
ಐಸ್‌ಕ್ರೀಮ್ ಕೋನ್ ತಯಾರಿಸಲು ಒಂದಿಷ್ಟು ಕಚ್ಚಾ ವಸ್ತುಗಳು ಬೇಕು. ಈ ಬಿಸ್ನೆಸ್ ಮಾಡುವ ಮುನ್ನ ಈ ಕುರಿತು ಯೋಚಿಸಿ. ಐಸ್ ಕ್ರೀಮ್ ಕಪ್ ಮತ್ತು ಕೋನ್ ತಯಾರಿಕೆಗೆ ಅಗತ್ಯವಿರುವ ಎಲ್ಲಾ ಕಚ್ಚಾ ವಸ್ತುಗಳು, ವೆಚ್ಚಗಳು, ಮಾರುಕಟ್ಟೆ ಬೆಲೆಗಳನ್ನು ತಿಳಿಯಿರಿ. ಮೈದಾ, ಸಕ್ಕರೆ, ತುಪ್ಪ, ಹಾಲು ಸೇರಿದಂತೆ ಐಸ್ ಕ್ರೀಂ ಕೋನ್, ಕಪ್ ತಯಾರಿಸಲು ಬೇಕಾಗುವ ಇತರ ಪದಾರ್ಥಗಳ ಬಗ್ಗೆ ಅಧ್ಯಯನ ಮಾಡಿ. ನಿಮ್ಮ ಉತ್ಪನ್ನದ ಗುಣಮಟ್ಟ ಉತ್ತಮವಾಗಿರಬೇಕಾದರೆ ಸರಿಯಾದ ಕಚ್ಚಾ ವಸ್ತುವನ್ನು ಬಳಸಬೇಕು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಲು ಆದ್ಯತೆ ನೀಡಿ.
ವೆಚ್ಚವನ್ನು ಅಂದಾಜು ಮಾಡಿ
ಕೋನ್ ಬಿಸ್ನೆಸ್ ಮಾಡುವ ಮೊದಲು ಅಗತ್ಯ ವಸ್ತುಗಳು ಏನೆಲ್ಲ ಬೇಕೆಂದು ತಿಳಿಯಿರಿ. ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ದರ ಕಡಿಮೆಯಾಗುತ್ತದೆ. ಇದರಿಂದ ಲಾಭ ಹೆಚ್ಚುತ್ತದೆ. ಕೋನ್ ಮತ್ತು ಕಪ್ ಗಳನ್ನು ತಯಾರಿಸಿದ ನಂತರ ಪ್ಯಾಕಿಂಗ್‌ಗೆ ಖರ್ಚಾಗುತ್ತದೆ. ಇಷ್ಟು ಮಾತ್ರವಲ್ಲ ವಿದ್ಯುತ್ ಬಿಲ್, ನೀರು, ನೌಕರರ ಸಂಬಳ ಮುಂತಾದ ಇತರ ಖರ್ಚುಗಳಿವೆ.
ಪರವಾನಗಿ ಮುಖ್ಯ
ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಮೈಕ್ರೋ ಲೋನ್ ಕಂಪನಿಗಳ ಮೂಲಕ ನಿಮ್ಮ ಕಂಪನಿಗೆ ಅಗತ್ಯವಾದ ಹೂಡಿಕೆಯನ್ನು ಸಹ ನೀವು ಪಡೆಯಬಹುದು. ಯಾವುದೇ ಆಹಾರ ಸಂಸ್ಕರಣಾ ಕಂಪನಿಗೆ ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಮುಖ್ಯವಾಗಿದೆ. ನೀವು ಐಸ್ ಕ್ರೀಮ್ ಕೋನ್, ಕಪ್ ತಯಾರಿಕಾ ಕಂಪನಿಯನ್ನು ಸ್ಥಾಪಿಸಲು ಬಯಸಿದರೆ ನೀವು FSSAIಯಿಂದ ಲೈಸನ್ಸ್ ಪಡೆಯಬೇಕು. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯೋಗದಿಂದ ಅನುಮತಿ ಪಡೆಯುವುದರ ಜತೆಗೆ ಸ್ಥಳೀಯ ಪಂಚಾಯಿತಿ ಅನುಮತಿ, ನಗರಸಭೆ ಅನುಮತಿಯನ್ನೂ ತೆಗೆದುಕೊಳ್ಳಬೇಕು.
ಕೋನ್ ತಯಾರಿಸುವ ಯಂತ್ರ ಬೇಕು
ಐಸ್ ಕ್ರೀಮ್ ಕೋನ್ ತಯಾರಿಸುವ ಯಂತ್ರವು ನಿಮಿಷಕ್ಕೆ 10 ರಿಂದ 30 ಕೋನ್‌ಗಳನ್ನು ತಯಾರಿಸುತ್ತದೆ. ಉತ್ಪಾದನಾ ವೆಚ್ಚವು ಪ್ರತಿ ಕೋನ್‌ಗೆ 50 ಪೈಸೆಯಿಂದ 2 ರೂಪಾಯಿಗಳವರೆಗೆ ಇರುತ್ತದೆ. ಮಾರುಕಟ್ಟೆಯಲ್ಲಿ ಕೋನ್ 5 ರೂ.ವರೆಗೆ ಮಾರಾಟವಾಗುತ್ತದೆ. ಅದೇ ರೀತಿ ಐಸ್ ಕ್ರೀಂ ಕಪ್ ತಯಾರಿಕೆಯ ಬೆಲೆ ಪ್ರತಿ ಕಪ್ ಗೆ 75 ಪೈಸೆಯಿಂದ 2 ರೂಪಾಯಿ ಬೇಕು. ಇವುಗಳನ್ನು ಮಾರುಕಟ್ಟೆಯಲ್ಲಿ 3 ರೂಪಾಯಿಯಿಂದ 6 ರೂಪಾಯಿಗೆ ಮಾರಾಟ ಮಾಡಬಹುದು. 2 ರೂಪಾಯಿ ವೆಚ್ಚದಲ್ಲಿ ಕೋನ್ ತಯಾರಿಸಿದರೆ ಮಾರುಕಟ್ಟೆಯಲ್ಲಿ 5 ರೂಪಾಯಿಗೆ ಮಾರಾಟ ಮಾಡಬಹುದು. ಇದರಿಂದ ಪ್ರತಿ ಕೋನ್ ಗೆ 3 ರೂಪಾಯಿವರೆಗೆ ಲಾಭ ಸಿಗುತ್ತದೆ.
2 ರೂಪಾಯಿಗೆ ಒಂದು ಐಸ್‌ಕ್ರೀಮ್ ಕಪ್ ಮಾಡಿದರೆ 6 ರೂಪಾಯಿವರೆಗೆ ಮಾರಬಹುದು. ಅಂದರೆ ಒಂದು ಕಪ್‌ಗೆ 4 ರೂಪಾಯಿ ಲಾಭ ಪಡೆಯಬಹುದು. ನೀವು ದಿನಕ್ಕೆ 1000 ಕೋನ್ ಅಥವಾ ಕಪ್‌ಗಳನ್ನು ಮಾರಾಟ ಮಾಡಿದರೆ ನೀವು 1000 ರಿಂದ 3000 ರೂಪಾಯಿಗಳನ್ನು ಗಳಿಸಬಹುದು.
ಡಿಸ್ಕೈಮರ್: ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಇದು ಒಂದು ಮಾರ್ಗವಾಗಿದೆ ಎಂದು ಈ ಲೇಖನದ ಮೂಲಕ ನಾವು ಹೇಳಿದ್ದೇವೆ. ಆದರೆ, ಯಾವುದೇ ವ್ಯಾಪಾರ ಆರಂಭಿಸುವ ಮೊದಲು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಈ ಕ್ಷೇತ್ರದಲ್ಲಿ ಒಂದಿಷ್ಟು ಅನುಭವ ಪಡೆಯುವುದು ಒಳ್ಳೆಯದು. ಬೇರೆ ಐಸ್‌ಕ್ರೀಮ್ ಕೋನ್ ವ್ಯವಹಾರಗಳನ್ನು ಅವಲೋಕಿಸಿ. ಸಾಕಷ್ಟು ಅಧ್ಯಯನ ಮಾಡಿ ಮುಂದುವರೆಯಿರಿ.