MF Lite: ಪ್ಯಾಸಿವ್ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಗಲಿದೆ ವೈವಿಧ್ಯ; ಹೂಡಿಕೆದಾರರಿಗೆ ಹಲವು ಹೊಸ ಅನುಕೂಲ ಕಲ್ಪಿಸಿದ ಸೆಬಿ
ಕನ್ನಡ ಸುದ್ದಿ  /  ಜೀವನಶೈಲಿ  /  Mf Lite: ಪ್ಯಾಸಿವ್ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಗಲಿದೆ ವೈವಿಧ್ಯ; ಹೂಡಿಕೆದಾರರಿಗೆ ಹಲವು ಹೊಸ ಅನುಕೂಲ ಕಲ್ಪಿಸಿದ ಸೆಬಿ

MF Lite: ಪ್ಯಾಸಿವ್ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಗಲಿದೆ ವೈವಿಧ್ಯ; ಹೂಡಿಕೆದಾರರಿಗೆ ಹಲವು ಹೊಸ ಅನುಕೂಲ ಕಲ್ಪಿಸಿದ ಸೆಬಿ

ಮ್ಯೂಚುವಲ್ ಫಂಡ್ ಮಾರುಕಟ್ಟೆ ವಿಸ್ತರಣೆಗೆ ಸೆಬಿ ಗಮನಹರಿಸಿದ್ದು, ಎಲ್ಲರಿಗೂ ಅನುಕೂಲವಾಗುವಂತೆ ಎಂಎಫ್ ಲೈಟ್ ಅನ್ನು ಜಾರಿಗೊಳಿಸಿದೆ. ಪ್ಯಾಸಿವ್ ಫಂಡ್‌ಗಳ ಮಾರುಕಟ್ಟೆ ವಿಸ್ತರಣೆಗೆ ಇದು ನೆರವಾಗಲಿದ್ದು, ಅದರ ವಿವರ ಇಲ್ಲಿದೆ.

ಹೊಸಬರಿಗಾಗಿ ನಿಯಮ ಸಡಿಲಿಸಿ ಎಂಎಫ್‌ ಲೈಟ್ ಪರಿಚಯಿಸಿದ ಸೆಬಿ
ಹೊಸಬರಿಗಾಗಿ ನಿಯಮ ಸಡಿಲಿಸಿ ಎಂಎಫ್‌ ಲೈಟ್ ಪರಿಚಯಿಸಿದ ಸೆಬಿ (LM)

ನವದೆಹಲಿ: ಪ್ಯಾಸಿವ್ ಮ್ಯೂಚುವಲ್ ಫಂಡ್‌ ಯೋಜನೆಗಳನ್ನು ಪ್ರಾರಂಭಿಸಲು ಬಯಸುವ ಸಂಸ್ಥೆಗಳಿಗೆ ಬಹಳ ಸರಳವಾದ ನಿಬಂಧನೆಗಳ ಚೌಕಟ್ಟನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನುಮೋದಿಸಿದೆ. ಇದನ್ನು ಮ್ಯೂಚುವಲ್ ಫಂಡ್ ಲೈಟ್ ಅಥವಾ ಎಂಎಫ್‌ ಲೈಟ್ ಎಂದು ಘೋಷಿಸಿರುವ ಸೆಬಿ, ಅನುಸರಣೆ ಅಗತ್ಯಗಳನ್ನು ಕಡಿಮೆ ಮಾಡುವ ಮತ್ತು ಮಾರುಕಟ್ಟೆಯಲ್ಲಿ ಹೊಸ ಸಂಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಮ್ಯೂಚುವಲ್ ಫಂಡ್ಸ್ ಲೈಟ್‌ (ಎಂಎಫ್‌ ಲೈಟ್‌) ಚೌಕಟ್ಟುಗಳನ್ನು ಸೆಬಿಯು, ನಿರ್ದಿಷ್ಟವಾಗಿ ಪ್ಯಾಸಿವ್‌ ಮ್ಯೂಚುವಲ್ ಫಂಡ್‌ ಯೋಜನೆಗಳನ್ನು ಪ್ರಾರಂಭಿಸುವ ಫಂಡ್ ಹೌಸ್‌ಗಳನ್ನು ಗುರಿಯಾಗಿಟ್ಟುಕೊಂಡು ರೂಪಿಸಿದೆ. ಪ್ರಾಯೋಜಕ ಸಂಸ್ಥೆಯ ನಿವ್ವಳ ಮೌಲ್ಯ, ಟ್ರ್ಯಾಕ್ ರೆಕಾರ್ಡ್ ಮತ್ತು ಲಾಭ ಸೇರಿದಂತೆ ಪ್ರಾಯೋಜಕರ ಅರ್ಹತೆಗೆ ಸಂಬಂಧಿಸಿದಂತೆ ಸರಳ ಮಾನದಂಡಗಳನ್ನು ಚೌಕಟ್ಟಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಟ್ರಸ್ಟಿಗಳ ಜವಾಬ್ದಾರಿಗಳಿಗೆ ಬದಲಾವಣೆಗಳು ಮತ್ತು ಅನುಮೋದನೆ ಪ್ರಕ್ರಿಯೆಯ ವಿವರವೂ ಇದೆ.

ಏನಿದು ಎಂಎಫ್‌ ಲೈಟ್‌

ಸೆಬಿ ಇತ್ತೀಚೆಗೆ ಪ್ಯಾಸಿವ್ ಮ್ಯೂಚುವಲ್ ಫಂಡ್‌ ಯೋಜನೆಗಳನ್ನು ನಿರ್ವಹಿಸುವ ಸಂಸ್ಥೆಗಳಿಗಾಗಿ ಪರಿಚಯಿಸಿದ ಹೊಸ ಚೌಕಟ್ಟನ್ನು ಮ್ಯೂಚುವಲ್ ಫಂಡ್ ಲೈಟ್ (ಎಂಎಫ್ ಲೈಟ್) ಎಂದು ಘೋಷಿಸಿದೆ. ಪ್ಯಾಸಿವ್‌ ಮ್ಯೂಚುಯಲ್ ಫಂಡ್‌ಗಳನ್ನು ನಿರ್ವಹಿಸುವ ನಿಯಮಗಳನ್ನು ಸರಳಗೊಳಿಸುವುದು ಈ ಚೌಕಟ್ಟಿನ ಗುರಿ.

ಪ್ಯಾಸಿವ್ ಮ್ಯೂಚುವಲ್ ಫಂಡ್‌ ಒದಗಿಸುವ ಹೊಸ ಕಂಪನಿಗಳಿಗೆ ಉತ್ತೇಜನ ಒದಗಿಸುವುದು ಎಂಎಫ್‌ ಲೈಟ್ ಫ್ರೇಮ್‌ವರ್ಕ್‌ನ ಮುಖ್ಯ ಉದ್ದೇಶ. ಸಾಂಪ್ರದಾಯಿಕವಾಗಿ, ಮ್ಯೂಚುಯಲ್ ಫಂಡ್ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸುವ ಕಂಪನಿಗಳು ನಿವ್ವಳ ಮೌಲ್ಯ, ಲಾಭದಾಯಕತೆ ಮತ್ತು ದಾಖಲೆಗೆ ಸಂಬಂಧಿಸಿದ ಕಟ್ಟುನಿಟ್ಟಾದ ಅವಶ್ಯಕತೆಗಳನ್ನು ಪೂರೈಸಬೇಕು. ಆದರೆ ಈ ನಿಯಮ ಇದರಲ್ಲಿ ಇಲ್ಲ.

ಪ್ಯಾಸಿವ್ ಫಂಡ್ ಮತ್ತು ಆಕ್ಟಿವ್ ಫಂಡ್‌ ವ್ಯತ್ಯಾಸವೇನು

ಒಂದು ನಿರ್ದಿಷ್ಟ ಮಾನದಂಡವನ್ನು ಅಥವಾ ಸೂಚ್ಯಂಕವನ್ನು ಸುಲಭವಾಗಿ ಅನುಸರಿಸುವ ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಪ್ಯಾಸಿವ್ ಮ್ಯೂಚುವಲ್ ಫಂಡ್‌ ಎನ್ನುತ್ತಾರೆ. ಇಂಥ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್‌ಗಳಿಗೆ ಹೆಚ್ಚು ಸ್ವಾತಂತ್ರ್ಯ ಇರುವುದಿಲ್ಲ. ಘೋಷಿತ ಉದ್ದೇಶವನ್ನು ಮುಟ್ಟುವುದು ಮಾತ್ರವೇ ಫಂಡ್ ಮ್ಯಾನೇಜರ್‌ಗಳ ಜವಾಬ್ದಾರಿ ಆಗಿರುತ್ತದೆ. ಎಕ್ಸ್‌ಚೇಂಜ್ ಟ್ರೇಡೆಟ್ ಫಂಡ್ (ಇಟಿಎಫ್‌) ಮತ್ತು ಇಂಡೆಕ್ಸ್ ಫಂಡ್ ಈ ವಿಭಾಗದ ಅಡಿಯಲ್ಲಿ ಬರುತ್ತವೆ. ಇವುಗಳ ಪೋರ್ಟ್‌ಫೋಲಿಯೊಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಇಂಥ ಫಂಡ್‌ಗಳ ಎಕ್ಸ್‌ಪೆನ್ಸ್ ರೇಶ್ಯೋ (ನಿರ್ವಹಣಾ ಶುಲ್ಕ) ಸಹ ಸಾಮಾನ್ಯವಾಗಿ ಕಡಿಮೆ ಇರುತ್ತದೆ.

ಆಕ್ಟಿವ್ ಮ್ಯೂಚುವಲ್ ಫಂಡ್‌ಗಳಲ್ಲಿಯೂ ಹೂಡಿಕೆಯ ಉದ್ದೇಶವನ್ನು ಸ್ಪಷ್ಟವಾಗಿ ಮೊದಲೇ ಘೋಷಿಸಿರಲಾಗುತ್ತದೆ. ಆದರೆ ಇಂಥ ಫಂಡ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಕಂಪನಿಗಳನ್ನು ಬದಲಿಸುವ ಸ್ವಾತಂತ್ರ್ಯ ಫಂಡ್‌ ಮ್ಯಾನೇಜರ್‌ಗೆ ಇರುತ್ತದೆ. ಫ್ಲೆಕ್ಸಿ ಕ್ಯಾಪ್ ಫಂಡ್, ಕಾಂಟ್ರಾ ಫಂಡ್, ಬ್ಯಾಲೆನ್ಸ್‌ಡ್ ಅಡ್ವಾಂಟೇಜ್ ಫಂಡ್‌ಗಳು ಈ ವಿಭಾಗದ ಅಡಿಗೆ ಬರುತ್ತವೆ. ಇಂಥ ಫಂಡ್‌ಗಳನ್ನು ನಿರ್ವಹಿಸಲು ಹೂಡಿಕೆಯ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ ಮತ್ತು ಸೆಕ್ಯುರಿಟೀಸ್‌ ಅಥವಾ ಷೇರುಗಳನ್ನು ಆಯ್ಕೆ ಮಾಡುವ ಪರಿಣತ ಫಂಡ್ ಮ್ಯಾನೇಜರ್‌ಗಳ ಅಗತ್ಯವಿರುತ್ತದೆ.

ಮ್ಯೂಚುವಲ್ ಫಂಡ್ ಲೈಟ್ ಬಂದ ಕಾರಣ ಆಗಿರುವ ಪ್ರಮುಖ ಬದಲಾವಣೆಗಳಿವು -

ಅರ್ಹತೆಯ ಮಾನದಂಡದಲ್ಲಿ ಸಡಿಲಿಕೆ - ಪ್ಯಾಸಿವ್ ಫಂಡ್‌ ಪ್ರಾಯೋಜಕತ್ವ ಸಂಸ್ಥೆಗಳ ಟ್ರ್ಯಾಕ್‌ ರೆಕಾರ್ಡ್‌, ನೆಟ್‌ವರ್ತ್‌, ಲಾಭದ ಮಾನದಂಡದಲ್ಲಿ ಸಡಿಲಿಕೆ

ಅನುಮೋದನೆ ಪ್ರಕ್ರಿಯೆ ಸರಳ: ಪ್ಯಾಸಿವ್ ಮ್ಯೂಚುವಲ್ ಫಂಡ್‌ ಲಾಂಚ್‌ ಮಾಡುವುದಕ್ಕೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆ ಸರಳವಾಗಲಿದೆ.

ಬಹಿರಂಗಪಡಿಸಬೇಕಾದ ಮಾಹಿತಿ ಕಡಿಮೆ: ಫಂಡ್‌ ಹೌಸ್‌ಗಳು ಬಹಿರಂಗ ಪಡಿಸಬೇಕಾದ ಮಾಹಿತಿ ಅಥವಾ ಅಫಿಡವಿಟ್‌ನಲ್ಲಿ ಸಲ್ಲಿಸಬೇಕಾದ ಮಾಹಿತಿ, ದಾಖಲೆಗಳು ಕಡಿಮೆಯಾಗುತ್ತವೆ.

ಮ್ಯೂಚುವಲ್ ಫಂಡ್ ಲೈಟ್‌ನ ಉದ್ದೇಶಗಳಿವು

ಎಂಎಫ್‌ ಲೈಟ್‌ ಜಾಲಕ್ಕೆ ಸೇರುವ ಮೂಲಕ ಮ್ಯೂಚುವಲ್ ಫಂಡ್‌ ಇಂಡಸ್ಟ್ರಿಗೆ ಬರುವ ಹೊಸ ಸಂಸ್ಥೆಗಳ ಪ್ರಕ್ರಿಯೆ ಸುಲಭಗೊಳಿಸುವುದು

ಮ್ಯೂಚುವಲ್ ಫಂಡ್ ಪ್ರಾಡಕ್ಟ್‌ಗಳ ಮೂಲಕ ಹೆಚ್ಚಿನ ಜನರನ್ನು, ಹೂಡಿಕೆದಾರರನ್ನು ತಲುಪುವ ವಿಶ್ವಾಸದಲ್ಲಿ ಸೆಬಿ

ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಮತ್ತು ಸ್ಪರ್ಧೆಗೆ ವೇದಿಕೆ ಒದಗಿಸಿದಂತಾಗುತ್ತದೆ. ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಇಲ್ಲಿ ಕೆಲಸ ಮಾಡುವುದನ್ನು ಸೆಬಿ ಎದುರು ನೋಡುತ್ತಿದೆ.

ಹೂಡಿಕೆಗಳಲ್ಲೂ ಪ್ಯಾಸಿವ್ ಮ್ಯೂಚುವಲ್‌ ಫಂಡ್‌ ಆಪ್ಶನ್‌ಗಳಲ್ಲಿ ವಿಸ್ತೃತ ರೇಂಜ್‌ ಇರಲಿದ್ದು, ವೈವಿಧ್ಯಮಯ ಅವಕಾಶಗಳನ್ನು ಹೂಡಿಕೆದಾರರಿಗೆ ಒದಗಿಸಲಿವೆ.

ಹೊಸ ಹೊಸ ಉತ್ಪನ್ನಗಳು, ನವೋನ್ವೇಷಣೆಯ ಅವಕಾಶಗಳು ಹೆಚ್ಚಾಗಲಿವೆ.

Whats_app_banner