Savings and Sleep; ಸಾಕಷ್ಟು ಹಣ ಉಳಿತಾಯ ಮಾಡಿದ್ದೀರಾ, ಹಾಗಾದ್ರೆ ಚೆಂದ ನಿದ್ರಿಸಬಹುದು ಎನ್ನುತ್ತಿದೆ ಹೊಸ ಅಧ್ಯಯನ ವರದಿ
Savings and Sleep; ಉಳಿತಾಯ ಮತ್ತು ನಿದ್ದೆಗೆ ನೇರ ಸಂಬಂಧ ಇದೆಯಾ ಎಂದು ಕೇಳಿದರೆ ಇದೆ ಎನ್ನುತ್ತಾರೆ ಪರಿಣತರು. ಅದೇ ರೀತಿ, ಸಾಕಷ್ಟು ಹಣ ಉಳಿತಾಯ ಮಾಡ್ಕೊಂಡಿದ್ದೀರಾ, ಹಾಗಾದ್ರೆ ಪ್ರಶಾಂತವಾಗಿ ನಿದ್ರಿಸಬಹುದು ಎನ್ನುತ್ತಿದೆ ಹೊಸ ಅಧ್ಯಯನ ವರದಿ. ಇದರ ವಿವರ ಇಲ್ಲಿದೆ.
ತಿಂಗಳು ತಿಂಗಳು ಸಾಕಷ್ಟು ಹಣ ಉಳಿಸುವ ಜನರು ಚೆಂದ ನಿದ್ರಿಸಬಲ್ಲರು ಎಂಬುದನ್ನು ಹೊಸ ಅಧ್ಯಯನ ವರದಿ ದೃಢೀಕರಿಸಿದೆ. ಪ್ರತಿ ದಿನ ಅಥವಾ ಪ್ರತಿ ವಾರ ಉಳಿಸುವ ಅಗತ್ಯವಿಲ್ಲ. ನಿಮ್ಮ ಮುಂದಿನ ತಿಂಗಳ ಸಂಬಳದಿಂದ ಸ್ವಲ್ಪ ಮೊತ್ತವನ್ನು ಉಳಿಸಿ. ಉಳಿತಾಯದ ಹಣ ಹೆಚ್ಚಾದಂತೆ ನಿಮ್ಮ ಮನಸ್ಸಿನಲ್ಲಿ ಭದ್ರತೆಯ ಬಾವ ಹೆಚ್ಚಾಗುತ್ತ ಹೋಗುತ್ತದೆ. ಬಹಳಷ್ಟು ಶಾಂತವಾಗಿರುತ್ತೀರಿ. ಚೆಂದ ನಿದ್ದೆ ಕೂಡ ಮಾಡುತ್ತೀರಿ. ಹಾಗಂತ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರು ನಡೆಸಿದ ಅಧ್ಯಯನ ವರದಿ ದೃಢೀಕರಿಸಿರುವಂಥದ್ದು.
ಇರಲಿ, ಹೊಸ ಅಧ್ಯಯನ ವರದಿ ಹೇಳುವುದೇನು ಅನ್ನೋದನ್ನು ಗಮನಿಸೋಣ ಅಲ್ವ.
ನಿದ್ದೆಗೂ ಉಳಿತಾಯಕ್ಕೂ ಇದೆ ಸಂಬಂಧ
ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರು ನಡೆಸಿದ ಅಧ್ಯಯನದಲ್ಲಿ, ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣ ಉಳಿಸುವವರು ಇತರರಿಗಿಂತ ಹೆಚ್ಚು ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಆದಾಯ ಕಡಿಮೆಯಾದರೂ ಪ್ರತಿ ತಿಂಗಳು ನಿಯತವಾಗಿ ಉಳಿತಾಯ ಮಾಡಿದರೆ ನೆಮ್ಮದಿಯಿಂದ ಬದುಕಲು ಸಾಧ್ಯ. ಹಾಗೆ, ನೆಮ್ಮದಿಯಿಂದ ನಿದ್ದೆ ಮಾಡಿ ಶ್ರೀಮಂತರಾಗುತ್ತಾರೆ ಎಂಬ ಅಂಶ ಈ ಅಧ್ಯಯನ ವರದಿ ಮೂಲಕ ಬಹಿರಂಗವಾಗಿದೆ.
ಮನೆಯ ಖರ್ಚು ವೆಚ್ಚ, ಮನೆಯ ಇಎಂಐ, ಊಟದ ಖರ್ಚು, ಶಾಲಾ ಶುಲ್ಕ... ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಇವೆಲ್ಲ ಕಳೆದು ಇನ್ನು ಒಂದು ತಿಂಗಳಿನಲ್ಲಿ ಅಲ್ಪ ಮೊತ್ತವೇ ಉಳಿದಿದೆ. ಪ್ರತಿ ತಿಂಗಳು ಆ ಸ್ವಲ್ಪ ಮೊತ್ತವನ್ನು ಉಳಿಸುವುದು ಕೂಡ ಭಾವನಾತ್ಮಕ ತೃಪ್ತಿಯ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ತುರ್ತು ಪರಿಸ್ಥಿತಿಯ ವೇಳೆ ನಿಮ್ಮ ಬಳಿ ಶಕ್ತಿ ತುಂಬಲು ಹಣ ಇದೆ ಎಂಬ ಭರವಸೆಯೇ ನೆಮ್ಮದಿಯ ಭಾವಕ್ಕೆ ಚೆಂದ ನಿದ್ದೆ ಮಾಡುವುದಕ್ಕೂ ನೆರವಾಗುತ್ತದೆ. ಹಾಗಾಗಿಯೇ ಅಂತಾರಾಷ್ಟ್ರೀಯ ವಿಜ್ಞಾನಿಗಳೂ ಕೂಡ ಉಳಿತಾಯದ ಅಭ್ಯಾಸವಾಗಬೇಕು ಎಂದು ಪ್ರತಿಪಾದಿಸುತ್ತಾರೆ.
ಹಣದ ಚಿಂತೆ, ಸಾಲದ ಭಯ ಎರಡೂ ನಿದ್ದೆಗೆಡಿಸುತ್ತವೆ
ಹಣದ ಚಿಂತೆ ಮತ್ತು ದುಡಿಮೆ ಎಲ್ಲವೂ ಸಾಲಕ್ಕೆ ಹೋಗುವ ಭಯ ಇದ್ದರೆ ಎರಡೂ ನಿಮ್ಮನ್ನು ಶಾಂತಿಯುತವಾಗಿ ಮಲಗಲು ಬಿಡುವುದಿಲ್ಲ. ಮಾನಸಿಕ ಸಮಸ್ಯೆಗೂ ಕಾರಣವಾಗಬಹುದು ಎಂದು ಈ ಅಧ್ಯಯನ ವರದಿ ಉಲ್ಲೇಖಿಸಿದೆ.
ಈ ಸಂಶೋಧನೆಯ ಭಾಗವಾಗಿ, ಸಂಶೋಧಕರು ಹತ್ತು ವರ್ಷಗಳಲ್ಲಿ ಕೆಲವು ರೀತಿಯ ಅಧ್ಯಯನಗಳನ್ನು ಮಾಡಿದ್ದಾರೆ. ಅದರಲ್ಲಿ ಭಾಗಿಯಾದವರ ವಿವರಣೆ, ದತ್ತಾಂಶಗಳನ್ನು ಪರಿಶೀಲಿಸಿದಾಗ ಉಳಿತಾಯ ಮಾಡಿದವರು ಶಾಂತಿಯುತವಾಗಿ ಮಲಗಿದ್ದನ್ನು ಗಮನಿಸಲಾಯಿತು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸ್ಥಿರವಾಗಿದ್ದರೆ, ನಿಮ್ಮ ಜೀವನದಲ್ಲಿ ತೃಪ್ತಿಯೂ ಇರುತ್ತದೆ. ಉಳಿತಾಯವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನ ವರದಿಯ ಮುಖ್ಯ ಸಾರ.
ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಉಳಿಸುವ ನಡವಳಿಕೆಯು ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ. ಹಾಗಾಗಿ, ನೀವು ಕೆಲವು ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಉಳಿಸಿ. ಸ್ಥಿರ ಠೇವಣಿಗಳೊಂದಿಗೆ ಸಹ ನೀವು ಹಠಾತ್ ಅಗತ್ಯವಿದ್ದಲ್ಲಿ ಅವುಗಳನ್ನು ಹಿಂಪಡೆಯಬಹುದು. ಹಾಗೆಯೇ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಮನೆಯಲ್ಲಿ ಉಳಿಸಲು ಪ್ರಯತ್ನಿಸಿ. ಇವೆಲ್ಲವೂ ನಿಮ್ಮಲ್ಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯವನ್ನು ನೀಡುತ್ತವೆ. ಶಾಂತಿಯುತವಾಗಿ ಮಲಗುವಂತೆ ಮಾಡುತ್ತದೆ.
ಆದ್ದರಿಂದ ನೀವು ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಬಯಸುವುದಾದರೆ, ಮುಂದಿನ 6 ತಿಂಗಳವರೆಗೆ ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡಲು ಪ್ರಯತ್ನಿಸಿ. ನೀವು ಎಷ್ಟು ಶಾಂತಿಯುತವಾಗಿ ಮಲಗುತ್ತೀರಿ ಎಂದು ನೀವು ಅರ್ಥಮಾಡಿಕೊಳ್ಳುವಿರಿ. ನೀವು ಇದ್ದಕ್ಕಿದ್ದಂತೆ ನಿಮ್ಮ ಕೆಲಸವನ್ನು ಕಳೆದುಕೊಂಡರೆ ಅಥವಾ ನಿಮ್ಮ ಹೆತ್ತವರ ಆರೋಗ್ಯಕ್ಕಾಗಿ ಹಣಕಾಸಿನ ಅಗತ್ಯವಿದ್ದರೆ ... ನೀವು ಆ ಕ್ಷಣ ಒತ್ತಡಕ್ಕೆ ಒಳಗಾಗುವುದಿಲ್ಲ. ಯವಾಗ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಿದ್ದು, ನಿಮಗೆ ಹಣದ ಅವಶ್ಯಕತೆ ಹೆಚ್ಚಾಗುವುದೋ ಆಗ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ. ಇದು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ನಿಮಗೇ ಮನವರಿಕೆಯಾದೀತು.