Credit Cards: ಕ್ರೆಡಿಟ್‌ ಕಾರ್ಡ್‌ ಬಳಸುವ ಬಗ್ಗೆ ಗೊಂದಲ ಇದ್ಯಾ, ಇಲ್ಲಿರುವ ಸಲಹೆಗಳು ನಿಮಗೆ ಹೆಲ್ಪ್‌ ಆಗಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  Credit Cards: ಕ್ರೆಡಿಟ್‌ ಕಾರ್ಡ್‌ ಬಳಸುವ ಬಗ್ಗೆ ಗೊಂದಲ ಇದ್ಯಾ, ಇಲ್ಲಿರುವ ಸಲಹೆಗಳು ನಿಮಗೆ ಹೆಲ್ಪ್‌ ಆಗಬಹುದು

Credit Cards: ಕ್ರೆಡಿಟ್‌ ಕಾರ್ಡ್‌ ಬಳಸುವ ಬಗ್ಗೆ ಗೊಂದಲ ಇದ್ಯಾ, ಇಲ್ಲಿರುವ ಸಲಹೆಗಳು ನಿಮಗೆ ಹೆಲ್ಪ್‌ ಆಗಬಹುದು

Personal Finance : ದಿನನಿತ್ಯದ ವ್ಯವಹಾರಗಳಿಗೆ ಹಣದ ಅವಶ್ಯಕತೆ ಇರುವುದು ಸಹಜ. ಎಲ್ಲಾ ಕಡೆ ನಗದು ಹಣ ನೀಡಲು ಸಾಧ್ಯವಾಗದೇ ಇರಬಹುದು ಅಥವಾ ಕೆಲವು ರಿಯಾಯಿತಿಗಳು ತಪ್ಪಿ ಹೋಗಬಹುದು. ಕ್ರೆಡಿಟ್‌ ಕಾರ್ಡ್‌ ಬಳಸಿ ವ್ಯವಹಾರಗಳನ್ನು ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಇಲ್ಲಿದೆ ಓದಿ.

ಕ್ರೆಡಿಟ್‌ ಕಾರ್ಡ್‌ ಬಳಸುವ ಬಗ್ಗೆ ಗೊಂದಲ ಇದ್ಯಾ, ಇಲ್ಲಿರುವ ಸಲಹೆಗಳು ನಿಮಗೆ ಹೆಲ್ಪ್‌ ಆಗಬಹುದು
ಕ್ರೆಡಿಟ್‌ ಕಾರ್ಡ್‌ ಬಳಸುವ ಬಗ್ಗೆ ಗೊಂದಲ ಇದ್ಯಾ, ಇಲ್ಲಿರುವ ಸಲಹೆಗಳು ನಿಮಗೆ ಹೆಲ್ಪ್‌ ಆಗಬಹುದು

ಇತ್ತೀಚಿನ ಅತಿಯಾದ ಖರ್ಚಿನ ಬದುಕಿನಲ್ಲಿ ಕ್ರೆಡಿಟ್‌ ಕಾರ್ಡ್‌ ಹೊಂದಿರುವುದು ಬಹಳ ಅವಶ್ಯ ಎನ್ನಿಸುತ್ತದೆ. ಹಣವಿಲ್ಲದೇ ಕೈ ಖಾಲಿಯಾದಾಗ ನಮ್ಮ ಸಹಾಯಕ್ಕೆ ಬರುವುದು ಕ್ರೆಡಿಟ್‌ ಕಾರ್ಡ್‌. ದಿನನಿತ್ಯದ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಇದು ಅಗತ್ಯ. ಕ್ರೆಡಿಟ್‌ ಕಾರ್ಡ್‌ ತನ್ನ ಬಳಕೆದಾರರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ನಿಯಮಿತವಾಗಿ ಕ್ರೆಡಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸುವುದನ್ನು ಅರಿತಿದ್ದರೆ ಕ್ರೆಡಿಟ್‌ ಕಾರ್ಡ್‌ನಿಂದ ನೀವು ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ, ಇದು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಕ್ರೆಡಿಟ್‌ ಕಾರ್ಡ್‌ ಎನ್ನುವುದು ಒಂದು ರೀತಿಯ ಪೇಮೆಂಟ್‌ ಕಾರ್ಡ್‌. ಸಾಮಾನ್ಯವಾಗಿ ಇದನ್ನು ಬ್ಯಾಂಕ್‌ಗಳು ನೀಡುತ್ತವೆ. ಇದು ಬಳಕೆದಾರರಿಗೆ ವಸ್ತುಗಳನ್ನು ಖರೀದಿಸಲು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಸಾಲದ ರೂಪದಲ್ಲಿ ಈ ಕಾರ್ಡ್‌ ಅನ್ನು ಬಳಸಲು ಬ್ಯಾಂಕ್‌ಗಳು ಅನುಮತಿ ನೀಡುತ್ತವೆ. ನಿರ್ದಿಷ್ಟ ಸಮಯದ ನಂತರ ಅದನ್ನು ಮರುಪಾವತಿಸಬೇಕಾಗುತ್ತದೆ. ಈಗ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿರುವ ಪೇಮೆಂಟ್‌ ವಿಧಾನಗಳಲ್ಲಿ ಒಂದಾಗಿದೆ. ಇದನ್ನು ಸರಿಯಾಗಿ ಬಳಸುವುದರಿಂದ ಅನೇಕ ಲಾಭಗಳನ್ನು ಪಡೆದದುಕೊಳ್ಳಬಹುದಾಗಿದೆ.

ಕ್ಯಾಶ್‌ಬ್ಯಾಕ್‌ ರಿವಾರ್ಡ್‌ಗಳು

ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ನೀಡುವ ಬ್ಯಾಂಕ್‌ಗಳು ಖರೀದಿ ಅಥವಾ ವೆಚ್ಚಗಳನ್ನು ಭರಿಸಿದಾಗ ಕ್ಯಾಶ್‌ಬ್ಯಾಕ್‌ ರಿವಾರ್ಡ್‌ಗಳನ್ನು ನೀಡುತ್ತವೆ. ಪ್ರತಿನಿತ್ಯದ ಖರೀದಿಗಳಿಗೆ ಇದು ಬಹಳ ಆಕರ್ಷಕವಾದ ವೈಶಿಷ್ಟ್ಯವಾಗಿದೆ. ಕ್ಯಾಶ್‌ಬ್ಯಾಕ್‌ ರಿವಾರ್ಡ್‌ಗಳನ್ನು ದಿನಸಿ, ಇಂಧನ, ವಿದ್ಯುತ್‌ ಮುಂತಾದ ಬಿಲ್‌ಗಳನ್ನು ಪಾವತಿಸಲು ಹೀಗೆ ದಿನನಿತ್ಯದ ವೆಚ್ಚಗಳಿಗೆ ಕ್ರೆಡಿಟ್‌ ಕಾರ್ಡ್‌ ಉತ್ತಮ ಆಯ್ಕೆಯಾಗಿದೆ. ಇದರಿಂದ ತಕ್ಷಣದ ಆರ್ಥಿಕ ನೆರೆವು ದೊರಕುತ್ತದೆ

ರಿವಾರ್ಡ್‌ ಪಾಯಿಂಟ್‌ಗಳು

ಪ್ರತಿ ವಹಿವಾಟು ನಡೆಸಿದಾಗಲೂ ಕ್ರೆಡಿಟ್‌ ಕಾರ್ಡ್‌ ತನ್ನ ಬಳಕೆದಾರರಿಗೆ ರಿವಾರ್ಡ್‌ ಪಾಯಂಟ್‌ಗಳನ್ನು ನೀಡುವಂತಹ ಸೌಲಭ್ಯವನ್ನು ಒದಗಿಸುತ್ತದೆ. ನಂತರ ಈ ಪಾಯಂಟ್‌ಗಳು ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಶಾಪಿಂಗ್‌ ಮಾಡಿದಾಗ ಡಿಸ್ಕೌಂಟ್‌ ಪಡೆದುಕೊಳ್ಳಲು, ಪ್ರವಾಸದ ಸಮಯದಲ್ಲಿ ಬಳಸಿಕೊಳ್ಳಲು ಮುಂತಾದ ಖರ್ಚುಗಳಿಗೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ವಿಶೇಷ ರಿಯಾಯಿತಿ ಮತ್ತು ಕೊಡುಗೆ

ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಬಹಳಷ್ಟು ಸಲ ಅವರು ಮಾಡುವ ಖರೀದಿಗಳಲ್ಲಿ ಸಿಗುವ ಆಕರ್ಷಕ ರಿಯಾಯಿಗಳನ್ನು ಪಡೆದು ಸಂತೋಷ ಪಡುತ್ತಾರೆ. ಅದು ಹೊಟೇಲ್‌ ಬಿಲ್‌, ಶಾಪಿಂಗ್‌ ಅಥವಾ ಮನರಂಜನೆ ಮುಂತಾದವುಗಳಲ್ಲಿ ಬಳಕೆದಾರರು ಬಿಲ್‌ ಪಾವತಿಸಿದಾಗ ರಿಯಾಯಿತಿ ಪಡೆದುಕೊಳ್ಳುಲು ಸಹಾಯ ಮಾಡುತ್ತದೆ. ಹಾಗಾಗಿ ಕ್ರೆಡಿಟ್‌ ಕಾರ್ಡ್‌ ಬಳಕೆಯು ಪ್ರತಿನಿತ್ಯದ ಖರ್ಚುಗಳಿಗೆ ಆರ್ಥಿಕ ಸವಲತ್ತುಗಳನ್ನು ನೀಡುತ್ತದೆ.

ಅನುಕೂಲಕರವಾದ ಆನ್‌ಲೈನ್‌ ವಹಿವಾಟು

ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಮತ್ತು ಡಿಜಿಟಲ್‌ ವಹಿವಾಟು ನಡೆಸುವಾಗ ಕ್ರೆಡಿಟ್‌ ಕಾರ್ಡ್‌ ಅನುಕೂಲಕರವಾಗಿರುತ್ತದೆ. ವಿಮಾನ ಟಿಕೆಟ್‌ ಕಾಯ್ದಿರಿಸಲು, ಫುಡ್‌ ಆರ್ಡರ್‌ ಮಾಡಲು, ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಿದಾಗ ಕ್ರೆಡಿಟ್‌ ಕಾರ್ಡ್‌ ಮುಖಾಂತರ ಹಣವನ್ನು ಸುಲಭವಾಗಿ ಪಾವತಿಸಬಹುದು. ಇದು ನಗದು ಹಣ ವಹಿವಾಟು ನಡೆಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಾಲಾವಕಾಶ ನೀಡುತ್ತದೆ

ಕ್ರೆಡಿಟ್‌ ಕಾರ್ಡ್‌ ಮುಖಾಂತರ ಖರೀದಿಸಿದ ನಂತರ ಆ ಮೊತ್ತವನ್ನು ಕ್ರೆಡಿಟ್‌ ಕಾರ್ಡ್‌ ಕಂಪನಿ ಅಥವಾ ಬ್ಯಾಂಕ್‌ಗೆ ಪಾವತಿಸಲು ಅದು ಒಂದಿಷ್ಟು ಕಾಲಾವಕಾಶವನ್ನು ನೀಡುತ್ತದೆ. ಆ ಸಮಯದಲ್ಲಿ ಅದಕ್ಕೆ ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ. ಸುಮಾರು 20 ದಿನದಿಂದ 50 ದಿನಗಳವರೆಗಿನ ಕಾಲಾವಕಾಶ ನೀಡುತ್ತದೆ. ಹಾಗಾಗಿ ಈ ಸೌಲಭ್ಯವು ಬಳಕೆದಾರರಿಗೆ ಬಹಳ ಅನುಕೂಲಕರವಾಗಿರುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ನೆರವಾಗುತ್ತದೆ

ಕ್ರೆಡಿಟ್‌ ಕಾರ್ಡ್‌ಗಳು ಅನಿರೀಕ್ಷಿತ ತುರ್ತು ಪರಿಸ್ಥಿತಿಯಲ್ಲಿ ಬಹಳ ನೆರವಿಗೆ ಬರುತ್ತದೆ. ನಿಮಗೆ ತುರ್ತಾಗಿ ಹಣದ ಅವಶ್ಯಕತೆಯಿದ್ದಾಗ ನೀವು ಇದರ ಮುಖಾಂತರ ಹಣ ಪಾವತಿಸಬಹುದಾಗಿದೆ. ಇದರಿಂದ ವಹಿವಾಟಿನಲ್ಲಿ ವಿಳಂಬವಾಗುವುದಿಲ್ಲ.

ಬಜೆಟ್‌ ರೂಪಿಸಿಕೊಳ್ಳಬಹುದು

ಕ್ರೆಡಿಟ್‌ ಕಾರ್ಡ್‌ ಬಳಸಿ ನಡೆಸಿದ ವ್ಯವಹಾರಗಳ ಸಮಗ್ರ ದಾಖಲೆಯನ್ನು ನೀಡುತ್ತದೆ. ಇದರಿಂದಾಗಿ ಬಳಕೆದಾರರು ಅವರ ಬಜೆಟ್‌ ಅನ್ನು ಇನ್ನಷ್ಟು ವ್ಯವಸ್ಥಿತವಾಗಿ ಯೋಜಿಸಿಕೊಳ್ಳಬಹುದು. ಇದರ ನಿರ್ವಹಣೆಯೂ ಸುಲಭ. ಇದರಿಂದ ಹಣಕಾಸಿನ ವಿಷಯದಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಆಗ ಎಲ್ಲಿ ಉಳಿತಾಯ ಮಾಡಬಹುದು ಎಂಬುದನ್ನು ಸಹ ಗುರುತಿಸಬಹುದಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner