ಕಾಲೇಜು ದಿನಗಳಿಂದಲೇ ಆರಂಭವಾಗಲಿ ಹಣ ಉಳಿತಾಯದ ಅಭ್ಯಾಸ: ವಿದ್ಯಾರ್ಥಿ ಜೀವನದಲ್ಲಿ ಹೀಗಿರಲಿ ನಿಮ್ಮ ಸೇವಿಂಗ್ಸ್ ಯೋಜನೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಲೇಜು ದಿನಗಳಿಂದಲೇ ಆರಂಭವಾಗಲಿ ಹಣ ಉಳಿತಾಯದ ಅಭ್ಯಾಸ: ವಿದ್ಯಾರ್ಥಿ ಜೀವನದಲ್ಲಿ ಹೀಗಿರಲಿ ನಿಮ್ಮ ಸೇವಿಂಗ್ಸ್ ಯೋಜನೆ

ಕಾಲೇಜು ದಿನಗಳಿಂದಲೇ ಆರಂಭವಾಗಲಿ ಹಣ ಉಳಿತಾಯದ ಅಭ್ಯಾಸ: ವಿದ್ಯಾರ್ಥಿ ಜೀವನದಲ್ಲಿ ಹೀಗಿರಲಿ ನಿಮ್ಮ ಸೇವಿಂಗ್ಸ್ ಯೋಜನೆ

ಕಾಲೇಜು ದಿನಗಳಲ್ಲಿ ಸಾಮಾನ್ಯವಾಗಿ ಬಹುತೇಕರು ಪೋಷಕರಿಗೆ ಅವಲಂಬಿತರಾಗಿರುತ್ತಾರೆ. ಆದರೆ ಮನೆಯಲ್ಲಿ ಆರ್ಥಿಕ ಸ್ಥಿತಿ ಸರಿಯಿಲ್ಲದೇ ಇದ್ದಾಗ,ಪೋಷಕರಿಗೆ ಬೇರೆ ಜವಾಬ್ದಾರಿಗಳು ಜಾಸ್ತಿಯಾದಾಗ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದರೆ ಹಣ ಉಳಿತಾಯಕ್ಕೆ ಏನು ಮಾಡಬೇಕು ಎಂಬುದಕ್ಕೆ ಮಾರ್ಗ ಇಲ್ಲಿದೆ ನೋಡಿ.

ಹಣ ಉಳಿತಾಯಕ್ಕೆ ನೀವು ಏನು ಮಾಡಬೇಕು ಎಂಬುದಕ್ಕೆ ಮಾರ್ಗ ಇಲ್ಲಿದೆ.
ಹಣ ಉಳಿತಾಯಕ್ಕೆ ನೀವು ಏನು ಮಾಡಬೇಕು ಎಂಬುದಕ್ಕೆ ಮಾರ್ಗ ಇಲ್ಲಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ತಂದೆ ತಾಯಿ ನೀಡುವ ಪಾಕೆಟ್ ಮನಿ ಹಣ ಬಿಟ್ಟರೆ ಸಾಮಾನ್ಯವಾಗಿ ಇನ್ಯಾವುದೇ ಆರ್ಥಿಕ ಮೂಲಗಳು ಇರುವುದಿಲ್ಲ. ಕೆಲವರು ಪಾರ್ಟ್ ಟೈಮ್ ಕೆಲಸಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ಕಾಲೇಜುಗಳಲ್ಲಿ ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಅದನ್ನು ಗೆದ್ದು ಬಹುಮಾನದ ರೂಪದಲ್ಲಿ ಬಂದ ಹಣದಿಂದ ತಮಗೆ ಬೇಕಾಗಿದ್ದನ್ನು ಖರೀದಿಸುತ್ತಾರೆ. ಮಾರ್ಗ ಯಾವುದೇ ಇರಲಿ ನಮ್ಮ ವಿದ್ಯಾರ್ಥಿ ಜೀವನದಿಂದಲೇ ನಾವು ಹಣಕಾಸನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ಎಂದು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ನೀವು ಯಾವ ರೀತಿಯಲ್ಲಿ ವಿದ್ಯಾರ್ಥಿ ಜೀವನದಿಂದಲೇ ಆರ್ಥಿಕವಾಗಿ ಯಾರಿಗೂ ಪರಾವಲಂಬಿಗಳಾಗದೇ ಸ್ವತಂತ್ರರಾಗಿ ಬದುಕುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಯಾವ ರೀತಿಯಲ್ಲಿ ನೀವು ನಿಮ್ಮ ಹಣವನ್ನು ಹೊಂದಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಪ್ರಮುಖ ಸಲಹೆಗಳು.

ನಿಮ್ಮ ಬಜೆಟ್‌ ಅನ್ನು ನೀವೇ ರಚಿಸಿಕೊಳ್ಳಿ: ಪಾರ್ಟ್ ಟೈಮ್ ಕೆಲಸ ಅಥವಾ ಅರೆಕಾಲಿಕ ಉದ್ಯೋಗ, ವಿದ್ಯಾರ್ಥಿ ವೇತನ ಈ ರೀತಿಯ ಆದಾಯ ಮೂಲಗಳನ್ನು ನೀವು ಹೊಂದಿದ್ದರೆ ಈ ಹಣಗಳನ್ನು ವ್ಯರ್ಥ ಖರ್ಚು ಮಾಡದಯೇ ಇವುಗಳಿಂದ ನಿಮ್ಮ ಕಾಲೇಜಿನ ಬೋಧನಾ ಶುಲ್ಕ, ವಸತಿ ವ್ಯವಸ್ಥೆ, ಆಹಾರ, ಸಾರಿಗೆಯಂತಹ ಅಗತ್ಯಗಳಿಗೆ ಹೇಗೆ ಹಣ ವಿನಿಯೋಗ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮೊದಲೇ ನೀವೊಂದು ಬಜೆಟ್ ರೂಪಿಸಿಕೊಳ್ಳಿ. ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚು ಮೀತಿಮೀರಬಾರದು ಎಂಬ ಚಿತ್ರಣ ನಿಮಗೆ ಬಜೆಟ್ ರೂಪಿಸುವಾಗಲೇ ತಿಳಿಯುತ್ತದೆ. ಈ ರೀತಿ ನಿಮ್ಮ ಖರ್ಚನ್ನು ನೀವೇ ನಿಭಾಯಿಸಿಕೊಳ್ಳಲು ಕಲಿತರೆ ಇದರಿಂದ ನಿಮ್ಮ ಪೋಷಕರಿಗೂ ಕೊಂಚ ಆರಾಮ ಎನಿಸುತ್ತದೆ.

ನೀವೆಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಇರಲಿ: ನೀವು ಎಲ್ಲೇ ಏನೇ ಖರ್ಚು ಮಾಡಿದರೂ ಅದಕ್ಕೊಂದು ದಾಖಲೆ ಪತ್ರ ಬರೆದಿಟ್ಟುಕೊಳ್ಳಲಿ. ಅದು ಒಂದು ಸಣ್ಣ ಚಾಕಲೇಟ್ ಖರೀದಿಯೇ ಆಗಿರಲಿ. ನಿಮ್ಮ ಹಣ ಎಲ್ಲೆಲ್ಲಿ ಖರ್ಚಾಗುತ್ತಿದೆ ಎಂಬುದರ ಸಣ್ಣ-ಸಣ್ಣ ದಾಖಲೆಗಳು ನಿಮ್ಮ ಬಳಿ ಇರಬೇಕು. ಇದಕ್ಕಾಗಿ ಸಾಕಷ್ಟು ಅಪ್ಲಿಕೇಶನ್ಗಳು ಕೂಡ ಮೊಬೈಲ್ಗಳಲ್ಲಿ ಲಭ್ಯವಿದೆ. ಪ್ರತಿ ತಿಂಗಳ ಕೊನೆಯಲ್ಲಿ ನೀವು ಯಾವುದಕ್ಕೆ ಮಿತಿ ಮೀರಿ ಖರ್ಚು ಮಾಡುತ್ತಿದ್ದೀರಿ ಎಂಬ ಚಿತ್ರಣ ನಿಮಗೆ ದೊರೆಯುತ್ತದೆ.

ತುರ್ತು ಪರಿಸ್ಥಿತಿಗೆ ಸಿದ್ಧರಾಗಿರಿ: ಯಾರ ಜೀವನದಲ್ಲಿ ಯಾವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಎಂಥಾ ಪರಿಸ್ಥಿತಿ ಬಂದುಬಿಡುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ವಾಹನ ರಿಪೇರಿ, ವೈದ್ಯಕೀಯ ವೆಚ್ಚ ಈ ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ ತಿಂಗಳು ತಿಂಗಳು ಸ್ವಲ್ಪೇ ಸ್ವಲ್ಪ ಹಣ ಕೂಡಿಡುವ ಅಭ್ಯಾಸ ರೂಢಿಸಿಕೊಳ್ಳಿ.

ಒಂದು ಪ್ರತ್ಯೇಕ ಬ್ಯಾಂಕ್ ಖಾತೆ ಮಾಡಿಕೊಂಡು ನಿಮ್ಮ ಆದಾಯದಲ್ಲಿ ಸಣ್ಣ ಉಳಿತಾಯ ಮಾಡಿ ಅದನ್ನು ಈ ಖಾತೆಯಲ್ಲಿ ವರ್ಗಾಯಿಸಿ ಇಡಿ. ದಿನ ಕಳೆದಂತೆ ಈ ಹಣ ಬೆಳೆಯುತ್ತಾ ಹೋಗುತ್ತದೆ. ಹಾಗೂ ನಿಮಗೂ ಆರ್ಥಿಕ ಭದ್ರತೆ ಸಿಗುತ್ತಾ ಹೋಗುತ್ತದೆ.

ಅನಗತ್ಯ ಸಾಲ ಬೇಡ: ಹದಿಹರೆಯದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವನ್ನು ಖರೀದಿಸೋಣ ಎನಿಸುತ್ತದೆ. ಈ ವಯಸ್ಸಿನಲ್ಲಿಯೇ ಅನೇಕರಿಗೆ ಬ್ರ್ಯಾಂಡೆಡ್ ವಸ್ತುಗಳ ಖರೀದಿಯ ಆಸಕ್ತಿ ಕೂಡ ಇರುತ್ತದೆ. ಆದರೆ ಈ ನಿಮ್ಮ ಅಭ್ಯಾಸಗಳು ಚಿಕ್ಕ ವಯಸ್ಸಿನಲ್ಲೇ ನಿಮ್ಮನ್ನು ಸಾಲಗಾರರನ್ನಾಗಿ ಮಾಡುವಂತೆ ಇರಬಾರದು. ಶೈಕ್ಷಣಿಕ ಖರ್ಷನ್ನು ಹೊರತು ಪಡಿಸಿ ಮಿಕ್ಕ ಇನ್ಯಾವುದೇ ಖರ್ಚನ್ನು ಮಾಡುವ ಮುನ್ನ ಆ ವಸ್ತುವಿನ ಖರೀದಿ ಅಷ್ಟೊಂದು ಅನಿವಾರ್ಯವೇ ಎಂಬುದನ್ನು ನೂರು ಬಾರಿ ಯೋಚಿಸಿ ಬಳಿಕವೇ ನಿರ್ಧಾರ ಕೈಗೊಳ್ಳಿ. ಸಾಲ ಮನಸ್ಸಿನ ನೆಮ್ಮದಿ ಕೆಡಿಸುತ್ತದೆ, ಉಳಿತಾಯ ಮನಶಾಂತಿ ದೊರಕಿಸುತ್ತದೆ ಎಂಬುದು ತಿಳಿದಿರಲಿ.

ಭವಿಷ್ಯದ ಬಗ್ಗೆ ಯೋಚಿಸಿ: ನಿಮ್ಮ ವೃದ್ಧಾಪ್ಯ ಬಹಳವೇ ದೂರದಲ್ಲಿದೆ. ಹಾಗಂತ ನೀವು ಈಗಿನಿಂದಲೇ ಭವಿಷ್ಯದ ಬಗ್ಗೆ ಯೋಚಿಸುವುದು ಕೂಡ ತಪ್ಪಲ್ಲ. ಈಗಿನಿಂದಲೇ ನಿಮ್ಮ ಭವಿಷ್ಯಕ್ಕಾಗಿ ಹಣ ಕೂಡಿಡಲು ಆರಂಭಿಸಿ. ಮುಂದೆ ಇದೇ ನಿಮ್ಮ ಉಳಿತಾಯ ಹೆಮ್ಮರವಾಗಿ ಬೆಳೆಯುತ್ತದೆ ಎಂಬ ನಂಬಿಕೆ ನಿಮಗಿರಲಿ. ಕಾಲೇಜು ದಿನಗಳಲ್ಲಿ ಕಡಿಮೆ ಹಣ ಕೂಡಿಡಿ. ಮುಂದೆ ನೀವೇ ಉದ್ಯೋಗ ಆರಂಭಿಸಿದ ಮೇಲೆ ಹೆಚ್ಚೆಚ್ಚು ಹಣವನ್ನು ಕೂಡಿಡಲು ಆರಂಭಿಸಿ.

Whats_app_banner