ಇನ್‌ಸೈಡರ್ ಟ್ರೇಡಿಂಗ್ ಮಾಡೋರಿಗೆ ಇನ್ನಷ್ಟು ಸಂಕಷ್ಟ, ಸಂಬಂಧಿಕರ ಪಟ್ಟಿ ವಿಸ್ತರಿಸಿ ನಿಯಮ ಬಿಗಿಗೊಳಿಸಿದೆ ಸೆಬಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇನ್‌ಸೈಡರ್ ಟ್ರೇಡಿಂಗ್ ಮಾಡೋರಿಗೆ ಇನ್ನಷ್ಟು ಸಂಕಷ್ಟ, ಸಂಬಂಧಿಕರ ಪಟ್ಟಿ ವಿಸ್ತರಿಸಿ ನಿಯಮ ಬಿಗಿಗೊಳಿಸಿದೆ ಸೆಬಿ

ಇನ್‌ಸೈಡರ್ ಟ್ರೇಡಿಂಗ್ ಮಾಡೋರಿಗೆ ಇನ್ನಷ್ಟು ಸಂಕಷ್ಟ, ಸಂಬಂಧಿಕರ ಪಟ್ಟಿ ವಿಸ್ತರಿಸಿ ನಿಯಮ ಬಿಗಿಗೊಳಿಸಿದೆ ಸೆಬಿ

ಷೇರುಪೇಟೆಯಲ್ಲಿ ಇನ್‌ಸೈಡರ್ ಟ್ರೇಡಿಂಗ್ ಬಹುದೊಡ್ಡ ಸಮಸ್ಯೆ ಮತ್ತು ಸವಾಲು. ಇದಕ್ಕೆ ಕಡಿವಾಣ ಹಾಕಲು ಸೆಬಿ ಪ್ರಯತ್ನಿಸುತ್ತಿದ್ದು, ಕಾಲಕಾಲಕ್ಕೆ ನಿಯಮ ಪರಿಷ್ಕರಿಸುತ್ತಿದೆ. ಇತ್ತೀಚಿನ ಪರಿಷ್ಕರಣೆಯಲ್ಲಿ ಇನ್‌ಸೈಡರ್ ಟ್ರೇಡಿಂಗ್ ಮಾಡುವವರ ಸಂಬಂಧಿಕರ ಪಟ್ಟಿಯನ್ನು ವಿಸ್ತರಿಸಿದೆ. ಇದರ ವಿವರ ಇಲ್ಲಿದೆ.

ಇನ್‌ಸೈಡರ್ ಟ್ರೇಡಿಂಗ್ ಮಾಡುವವರ ಸಂಬಂಧಿಕರ ಪಟ್ಟಿ ವಿಸ್ತರಿಸಿ ನಿಯಮ ಬಿಗಿಗೊಳಿಸಿದೆ ಸೆಬಿ.
ಇನ್‌ಸೈಡರ್ ಟ್ರೇಡಿಂಗ್ ಮಾಡುವವರ ಸಂಬಂಧಿಕರ ಪಟ್ಟಿ ವಿಸ್ತರಿಸಿ ನಿಯಮ ಬಿಗಿಗೊಳಿಸಿದೆ ಸೆಬಿ. (LH)

ಮುಂಬಯಿ: ಇನ್‌ಸೈಡರ್ ಟ್ರೇಡಿಂಗ್ ಟ್ರೇಡಿಂಗ್ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಸೆಬಿ, ಈಗ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸತೊಡಗಿದೆ. ಇತ್ತೀಚಿನ ನಿಯಮ ಪರಿಷ್ಕರಣೆಯಲ್ಲಿ ಅದು, ಇನ್‌ಸೈಡರ್ ಟ್ರೇಡಿಂಗ್ ಮಾಡಬಹುದಾದವರ ಸಂಬಂಧಿಕರ ಪಟ್ಟಿಯನ್ನು ವಿಸ್ತರಿಸಿದೆ. ಹೀಗಾಗಿ, ಇನ್ನು ಟ್ರೇಡಿಂಗ್ ಒಳಸುಳಿ ತಿಳಿದರೂ ಇನ್‌ಸೈಡರ್‌ ಟ್ರೇಡಿಂಗ್ ಮಾಡುವವರಿಗಷ್ಟೇ ಅಲ್ಲ, ಅವರ ಸಂಬಂಧಿಕರಿಗೂ ಏನೂ ಮಾಡಲಾಗದು. ಸರಳವಾಗಿ ಹೇಳಬೇಕು ಎಂದರೆ, ಸೆಬಿಯು ಈಗ ಒಬ್ಬ ವ್ಯಕ್ತಿಯ ವಿರುದ್ಧ ಇನ್‌ಸೈಡರ್ ಟ್ರೇಡಿಂಗ್ ಸಂಬಂಧಿಸಿ ತನಿಖೆ ನಡೆಸುತ್ತಿದ್ದರೆ, ಅವನೊಂದಿಗೆ ಸಂಬಂಧಿಸಿದ ಇತರ ವ್ಯಕ್ತಿಗಳನ್ನು (‘ಸಂಪರ್ಕಿತ ವ್ಯಕ್ತಿಗಳು’ ಮತ್ತು ‘ಸಂಬಂಧಿಗಳು’) ತನಿಖೆಯ ಭಾಗವಾಗಿ ಮಾಡಬಹುದು. ಇದರಿಂದಾಗಿ ಪ್ರಕಟಿಸದ ಬೆಲೆ ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ಜನರನ್ನು ಗುರುತಿಸುವುದು ಸೆಬಿಗೆ ಸುಲಭವಾಗಲಿದೆ.

ಹೊಸ ವ್ಯಾಪ್ತಿಗೆ ಯಾರೆಲ್ಲ ಸೇರ್ಪಡೆಯಾಗುತ್ತಾರೆ

ಇಷ್ಟಕ್ಕೂ ಇನ್‌ಸೈಡರ್ ಟ್ರೇಡಿಂಗ್ ಎಂದರೆ, ಸಾರ್ವಜನಿಕವಲ್ಲದ ಮಾಹಿತಿಯ ಆಧಾರದ ಮೇಲೆ ಸೆಕ್ಯುರಿಟೀಸ್‌ಗಳನ್ನು (ಸ್ಟಾಕ್‌ಗಳು, ಷೇರುಗಳು, ಬಾಂಡ್‌ಗಳು ಇತ್ಯಾದಿ) ಖರೀದಿಸುವ ಅಥವಾ ಮಾರಾಟ ಮಾಡುವ ಕಾನೂನುಬಾಹಿರ ವಹಿವಾಟು. ಇದರರ್ಥ ಸಾರ್ವಜನಿಕವಾಗಿ ಲಭ್ಯವಿಲ್ಲದ ಮಾಹಿತಿ ಪಡೆಯಲು ಸಾಧ್ಯವಿರುವ ಯಾರಾದರೂ ಆ ಮಾಹಿತಿಯನ್ನು ಲಾಭ ಗಳಿಸಲು ಅಥವಾ ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ತಪ್ಪಿಸಲು ಬಳಸಬಹುದು. ಇದು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಪಾಲುದಾರರು, ನೌಕರರಿಗೆ ಸಂಬಂಧಿಸಿದ ವಿಚಾರವಾಗಿದೆ.

ಸಿಎನ್‌ಬಿಸಿ ಟಿವಿ 18 ವರದಿ ಪ್ರಕಾರ, ಇನ್‌ಸೈಡರ್ ಟ್ರೇಡಿಂಗ್‌ನಲ್ಲಿ ಇದುವರೆಗೆ ಕುಟುಂಬ ಸದಸ್ಯರು ಮಾತ್ರ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ. ಆದರೆ ಈಗ ಕುಟುಂಬ ಸದಸ್ಯರ ಜೊತೆಗೆ ವ್ಯಾಪಾರ ಪಾಲುದಾರರು, ಕಂಪನಿಯ ಉದ್ಯೋಗಿಗಳು ಅಥವಾ ಯಾರ ವಿರುದ್ಧ ತನಿಖೆ ನಡೆಯುತ್ತಿದೆಯೋ ಅವರ ಮನೆಯಲ್ಲಿ ವಾಸಿಸುವ ವ್ಯಕ್ತಿ ಕೂಡ ಇದರ ವ್ಯಾಪ್ತಿಗೆ ಬರುತ್ತಾರೆ.

ಪರಿಷ್ಕೃತ ನಿಯಮ ಪ್ರಕಾರ ಬಂಧುಗಳ ವ್ಯಾಖ್ಯೆ ಹೇಗಿದೆ

ಇನ್‌ಸೈಡರ್ ಟ್ರೇಡಿಂಗ್ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯ ಸಂಬಂಧಿಕರು ಎಂದರೆ ಈಗ ವ್ಯಕ್ತಿಯ ಸಂಗಾತಿ, ಪೋಷಕರು (ಅಳಿಯಂದಿರು ಸೇರಿದಂತೆ), ಒಡಹುಟ್ಟಿದವರು (ಮತ್ತು ಅವರ ಸಂಗಾತಿಗಳು) ಮತ್ತು ಮಕ್ಕಳು (ಮತ್ತು ಅವರ ಸಂಗಾತಿಗಳು) ಸೇರಿದ್ದಾರೆ. ಆದಾಗ್ಯೂ, ನಿಯಮಗಳನ್ನು ಅನುಸರಿಸುತ್ತಿರುವ ಹೂಡಿಕೆದಾರರು ಈ ಹೊಸ ನಿಯಮದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ.

ಹೊಸ ಬದಲಾವಣೆಗಳ ಬಗ್ಗೆ ತಜ್ಞರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹೊಸ ಕಾನೂನು ತನಿಖೆಯ ವ್ಯಾಪ್ತಿಯನ್ನು ಇನ್ನಷ್ಟು ಜನರಿಗೆ ವಿಸ್ತರಿಸುತ್ತದೆ ಎಂದು ಕೆಲವರು ಹೇಳುತ್ತಿದ್ದರೆ. ಇದು ಕೆಲವೊಮ್ಮೆ ಗೊಂದಲ ಸೃಷ್ಟಿಸಬಹುದು. ಮತ್ತು ತಪ್ಪಿತಸ್ಥ ವ್ಯಕ್ತಿಯು ತಪ್ಪಿಸಿಕೊಳ್ಳಬಹುದು. ಅದೇ ಸಮಯದಲ್ಲಿ, ಸರಿಯಾದ ಜನರನ್ನು ತಲುಪಲು ಇದು ಸಹಾಯ ಮಾಡುತ್ತದೆ ಎಂದು ಇನ್ನೂ ಹಲವರು ಹೇಳುತ್ತಿದ್ದಾರೆ. ಈ ವಿಚಾರಕ್ಕೆ ಸೆಬಿ ಹೇಗೆ ಸ್ಪಂದಿಸುತ್ತದೋ ಎಂದು ಅನೇಕರು ನಿರೀಕ್ಷೆಯಲ್ಲಿದ್ದಾರೆ.

Whats_app_banner