Youtube Channel: ಷೇರು ಹೂಡಿಕೆ ಮಾಡಬೇಕೆಂದಿದ್ದೀರಾ, ಷೇರುಪೇಟೆ ಬಗ್ಗೆ ಕಲಿಯಲು ಈ 5 ಕನ್ನಡ ಯೂಟ್ಯೂಬ್‌ ಚಾನೆಲ್‌ಗಳಿಗೊಮ್ಮೆ ಭೇಟಿ ನೀಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Youtube Channel: ಷೇರು ಹೂಡಿಕೆ ಮಾಡಬೇಕೆಂದಿದ್ದೀರಾ, ಷೇರುಪೇಟೆ ಬಗ್ಗೆ ಕಲಿಯಲು ಈ 5 ಕನ್ನಡ ಯೂಟ್ಯೂಬ್‌ ಚಾನೆಲ್‌ಗಳಿಗೊಮ್ಮೆ ಭೇಟಿ ನೀಡಿ

Youtube Channel: ಷೇರು ಹೂಡಿಕೆ ಮಾಡಬೇಕೆಂದಿದ್ದೀರಾ, ಷೇರುಪೇಟೆ ಬಗ್ಗೆ ಕಲಿಯಲು ಈ 5 ಕನ್ನಡ ಯೂಟ್ಯೂಬ್‌ ಚಾನೆಲ್‌ಗಳಿಗೊಮ್ಮೆ ಭೇಟಿ ನೀಡಿ

Stock market learning Youtube Channel: ಷೇರುಪೇಟೆಯ ಕುರಿತು ಕನ್ನಡದಲ್ಲಿ ಯೂಟ್ಯೂಬ್‌ ಮೂಲಕ ಕಲಿಯಲು ಬಯಸುವವರು ಡಾ. ಭರತ್‌ ಚಂದ್ರ, ನಟರಾಜ್‌ ಮಾಲವಾಡೆ, ರಶ್ಮಿತ್‌ ಶೆಟ್ಟಿ ಮುಂತಾದವರು ನಡೆಸುವ ವಿವಿಧ ಯೂಟ್ಯೂಬ್‌ ಚಾನೆಲ್‌ಗಳಿಗೆ ಭೇಟಿ ನೀಡಬಹುದು.

ಷೇರುಪೇಟೆ ಬಗ್ಗೆ ಕಲಿಯಲು 5 ಕನ್ನಡ ಯೂಟ್ಯೂಬ್‌ ಚಾನೆಲ್‌ಗಳು
ಷೇರುಪೇಟೆ ಬಗ್ಗೆ ಕಲಿಯಲು 5 ಕನ್ನಡ ಯೂಟ್ಯೂಬ್‌ ಚಾನೆಲ್‌ಗಳು

ಷೇರುಪೇಟೆಯಲ್ಲಿ ಹಣ ಹಾಕಿ ಶ್ರೀಮಂತರಾಗುವ ಕನಸು ಎಲ್ಲರಿಗೂ ಇರುತ್ತದೆ. ಹೀಗಿದ್ದರೂ, ಷೇರುಪೇಟೆ ಎಂದರೇನು, ಅಲ್ಲಿ ಕರಡಿ ಕುಣಿತ, ಗೂಳಿ ನೆಗೆತ ಹೇಗಿರುತ್ತದೆ, ಅಲ್ಲಿನ ಹೂಡಿಕೆಯ ರೀತಿನೀತಿಗಳೇನು, ಮಾರ್ಕೆಟ್‌, ಲಾಂಗ್‌ಟರ್ಮ್‌, ಇಂಟ್ರಾಡೇ ಹೂಡಿಕೆ ಎಂದರೇನು, ಮಾರ್ಕೆಟ್‌ ಲಿಮಿಟ್‌, ಎಸ್‌ಎಲ್‌, ಎಲ್‌ಎಲ್‌ ಎಂ ಇತ್ಯಾದಿಗಳ ಅರ್ಥವೇನು, ಸೆಟ್‌ ಟಾರ್ಗೆಟ್‌, ಸ್ಟಾಪ್‌ಲಾಸ್‌ ಎಂದರೇನು, ಜಿಟಿಟಿ, ಐಪಿಒ, ಆಕ್ಷನ್‌ ಎಂದರೇನು ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಯಸುತ್ತಾರೆ. ಷೇರುಪೇಟೆಯಲ್ಲಿ ಹಣ ಗಳಿಸುವುದು ಸುಲಭವೇ, ನಷ್ಟ ಆಗುತ್ತ, ಇಂತಹ ಭಯಗಳಿಗೆ ಉತ್ತರ ಕಂಡುಕೊಳ್ಳಲು ಬಯಸುತ್ತಾರೆ.

ಈಗ ಬಹುತೇಕರಿಗೆ ಹೊಸ ವಿಷಯಗಳನ್ನು ಕಲಿಯಲು ಗೂಗಲ್‌ನ ಯೂಟ್ಯೂಬ್‌ ಗುರು. ಇಲ್ಲಿ ಕೆಲವು ಚಾನೆಲ್‌ಗಳು ಅತ್ಯುತ್ತಮವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತವೆ. ಇನ್ನು ಕೆಲವು ಚಾನೆಲ್‌ಗಳು ವ್ಯೂಸ್‌ ಮತ್ತು ಸಬ್‌ಸ್ಕ್ರೈಬರ್ಸ್‌ಗಗಳನ್ನು ಹೆಚ್ಚಿಸುವ ಸಲುವಾಗಿ ಸುಳ್ಳುಸುಳ್ಳು ಮಾಹಿತಿಗಳನ್ನು ನೀಡಿ ಜನರನ್ನು ದಾರಿತಪ್ಪಿಸುವ ಕೆಲಸವನ್ನೂ ಮಾಡುತ್ತಿರಬಹುದು. ಅಸಲಿಗೆ ಯಾವತ್ತೂ ಬೆಲೆ ಎಂಬಂತೆ ಅತ್ಯುತ್ತಮವಾಗಿ ಮಾಹಿತಿ ನೀಡಿ ಜನರ ನಂಬಿಕೆಗೆ ಪಾತ್ರವಾದ ಚಾನೆಲ್‌ಗಳು ಹೆಚ್ಚು ಫೇಮಸ್‌ ಆಗುತ್ತವೆ. ಸದ್ಯ ಷೇರುಪೇಟೆ ಕುರಿತು ಕಲಿಯಲು ಬಯಸುವವರಿಗೆ ಕನ್ನಡದಲ್ಲಿ ಕಡಿಮೆ ಯೂಟ್ಯೂಬ್‌ ಚಾನೆಲ್‌ಗಳಿವೆ ಎನ್ನುವುದು ಸುಳ್ಳಲ್ಲ. ಹಿಂದಿ ಅಥವಾ ಇತರೆ ಭಾಷೆಗಳಲ್ಲಿ ಷೇರುಪೇಟೆ ಕುರಿತು ಮಾಹಿತಿ ನೀಡುವ ನೂರಾರು ಚಾನೆಲ್‌ಗಳಿವೆ. ಕನ್ನಡದಲ್ಲಿರುವ ಕೆಲವು ಷೇರುಪೇಟೆ ಯೂಟ್ಯೂಬ್‌ ಚಾನೆಲ್‌ಗಳ ವಿವರ ಇಲ್ಲಿದೆ.

ಷೇರುಪೇಟೆಗೆ ಸಂಬಂಧಪಟ್ಟ ಕನ್ನಡದ ಕೆಲವು ಯೂಟ್ಯೂಬ್‌ ಚಾನೆಲ್‌ಗಳು

1. ಡಾ. ಭರತ್‌ ಚಂದ್ರ ಇನ್‌ಸ್ಟಿಟ್ಯೂಟ್‌ ಕನ್ನಡ

ಡಾ. ಭರತ್‌ ಚಂದ್ರ ಅವರು ಈಗಾಗಲೇ ಷೇರುಪೇಟೆಗೆ ಸಂಬಂಧಪಟ್ಟ ಬರಹಗಳಿಂದ ಜನಪ್ರಿಯರು. ಇವರ ಡಾ. ಭರತ್‌ ಚಂದ್ರ ಇನ್‌ಸ್ಟಿಟ್ಯೂಟ್‌ ಕನ್ನಡದ ಯೂಟ್ಯೂಬ್‌ ಚಾನೆಲ್‌ಗೆ ಹಲವು ಲಕ್ಷ ಚಂದಾದಾರರಿದ್ದು, 2900ಕ್ಕೂ ಹೆಚ್ಚು ವಿಡಿಯೋಗಳಿವೆ.

ಷೇರುಮಾರುಕಟ್ಟೆಯ ಬಗ್ಗೆ ಹೊಸಬರು ಏನು ತಿಳಿದುಕೊಳ್ಳಬೇಕು, ಹಣ ಹೂಡಿಕೆ ಮಾಡಲು ಅತೀ ಕಡಿಮೆ ರಿಸ್ಕ್‌ ಇರುವ ಷೇರುಗಳು, ಪ್ರತಿದಿನ ಷೇರುಪೇಟೆಯಲ್ಲಿ 5000 ರೂಪಾಯಿ ಲಾಭ ಮಾಡಬಹುದೇ, ಪಿಪಿಎಫ್‌ನಿಂದ ಒಂದು ಕೋಟಿ ಸಂಪಾದನೆ ಹೇಗೆ, ಷೇರುಪೇಟೆಯಲ್ಲಿ ಸಿಪ್‌ ಹೂಡಿಕೆ ಮಾಡಿ ಲಾಭಗಳಿಸುವುದು ಹೇಗೆ ಹೀಗೆ ಷೇರುಪೇಟೆಗೆ ಸಂಬಂಧಪಟ್ಟಂತೆ ನೂರಾರು ವಿಡಿಯೋಗಳು ಇವೆ. ಇದರ ಜತೆಗೆ, ಪ್ರತಿನಿತ್ಯ ಷೇರು ಹೂಡಿಕೆ ಮಾಡುವವರಿಗೆ ಉಪಯುಕ್ತ ಮಾಹಿತಿಗಳು ಇವೆ.

2. ನಟರಾಜ್‌ ಮಾಲವಾಡೆ

ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ , ಹಣ ನಿರ್ವಹಣೆ ಅಥವಾ ಮನಿ ಮ್ಯಾನೇಜ್ಮೆಂಟ್, ಬಿಸಿನೆಸ್ ಕೇಸ್ ಸ್ಟಡೀಸ್ , ಇತ್ತೀಚಿನ ಬಿಸಿನೆಸ್ ಅಪ್ಡೇಟ್ಸ್ , ಪುಸ್ತಕಗಳ ಕಲಿಕೆಗಳು, ಹಣ ಕಾಸಿನ ವಿಚಾರಗಳು, ಇನ್ನಿತರೆ ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಯ ದಾರಿಗಳನ್ನು ತಿಳಿಸಲು ಈ ಚಾನೆಲ್‌ ರಚಿಸಿರುವುದಾಗಿ ನಟರಾಜ್‌ ಮಾಲವಾಡೆ ಹೇಳಿದ್ದಾರೆ. ಇವರ ಚಾನೆಲ್‌ನಲ್ಲಿ 71 ಸಾವಿರ ಚಂದಾದಾರರಿದ್ದರು, 128 ವಿಡಿಯೋಗಳಿವೆ. ಇವರ ಚಾನೆಲ್‌ನ ಕೆಲವೊಂದು ವಿಡಿಯೋಗಳು ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಉಪಯುಕ್ತವಾಗಬಲ್ಲದು.

3. ರಶ್ಮಿತ್‌ ಶೆಟ್ಟಿ

ಸುಮಾರು 55 ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ರಶ್ಮಿತ್‌ ಶೆಟ್ಟಿ ಚಾನೆಲ್‌ನಲ್ಲಿ 200ಕ್ಕೂ ಹೆಚ್ಚು ವಿಡಿಯೋಗಳಿವೆ. ಸಿಮೆಂಟ್ರಿಕ್‌ ಟ್ರಯಂಗಲ್‌ ಪ್ಯಾಟರ್ನ್‌ ಸೇರಿದಂತೆ ಷೇರುಪೇಟೆಗೆ ಸಂಬಂಧಪಟ್ಟ ವಿವಿಧ ಪ್ಯಾಟರ್ನ್‌ಗಳ ಪರಿಚಯದ ವಿಡಿಯೋಗಳು ಸಾಕಷ್ಟು ಇವೆ. ವಿವಿಧ ಟ್ರೇಡಿಂಗ್‌ ಕಾರ್ಯತಂತ್ರಗಳ ಕುರಿತೂ ಈ ಚಾನೆಲ್‌ನಲ್ಲಿ ಮಾಹಿತಿ ಪಡೆಯಬಹುದು.

4. ಸ್ಟಾಕ್‌ ಮಾರ್ಕೆಟ್‌ ಕನ್ನಡ

ಷೇರುಪೇಟೆಯ ಹೆಸರಿನಲ್ಲಿಯೇ ಕನ್ನಡ ಚಾನೆಲ್‌ ಇದೆ. ಸುಮಾರು ಒಂದು ಸಾವಿರ ವಿಡಿಯೋಸ್‌ ಇದರಲ್ಲಿದೆ. ಷೇರುಪೇಟೆಯ ಬೇಸಿಕ್ಸ್‌ ತಿಳಿಯಲು ಈ ಚಾನೆಲ್‌ಗೆ ಭೇಟಿ ನೀಡಬಹುದು.

5. ಟ್ರೇಡರ್ಸ್‌ ದುನಿಯಾ

ಕನ್ನಡದಲ್ಲಿ ಟ್ರೇಡರ್ಸ್‌ ದುನಿಯಾ ಎಂಬ ಇನ್ನೊಂದು ಚಾನೆಲ್‌ ಕೂಡ ಇದೆ. ಇಲ್ಲಿ ಷೇರುಮಾರುಕಟ್ಟೆ ಕುರಿತು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾಹಿತಿ ನೀಡುವ ಪ್ರಯತ್ನವನ್ನು ಮಾಡಿರುವುದನ್ನು ಕಾಣಬಹುದು. ಎಲ್ಲಿ ಹೇಗರ ಟ್ರೇಡ್‌ ಮಾಡುವುದು, ನಾಳೆಯ ಮುನ್ನೋಟ, ವಾರದ ಅನಾಲಿಸಿಸ್‌ ಇತ್ಯಾದಿ ವಿಡಿಯೋಗಳನ್ನು ಇಲ್ಲಿ ನೋಡಬಹುದು.

ಹೀಗೆ ಯೂಟ್ಯೂಬ್‌ನಲ್ಲಿ ಕನ್ನಡದಲ್ಲಿ ಷೇರುಪೇಟೆಗೆ ಸಂಬಂಧಪಟ್ಟಂತೆ ಈ ರೀತಿ ಕೆಲವು ಚಾನೆಲ್‌ಗಳು ದೊರಕುತ್ತವೆ. ಇಂಗ್ಲಿಷ್‌ನಲ್ಲಿ ನೋಡುವುದಾದರೆ ಸಿಎ ರಚನಾ ರಾನಡೆ ಸೇರಿದಂತೆ ಹಲವು ಚಾನೆಲ್‌ಗಳು ಜನಪ್ರಿಯತೆ ಪಡೆದಿವೆ. ಇಂತಹ ಚಾನೆಲ್‌ಗಳನ್ನು ಷೇರುಪೇಟೆಗೆ ಸಂಬಂಧಪಟ್ಟಂತೆ ನಿಮ್ಮ ಜ್ಞಾನ ಹೆಚ್ಚಿಸಲು ಬಳಸಿಕೊಳ್ಳಬಹುದು. ಆದರೆ, ಷೇರು ಖರೀದಿ ಮತ್ತು ಮಾರಾಟ ಇತ್ಯಾದಿ ವಿಷಯಗಳಲ್ಲಿ ನೀವು ನಿಮ್ಮ ಸ್ವಂತ ಜ್ಞಾನ, ರಿಸರ್ಚ್‌ ಬಳಸಿ. ಷೇರುಪೇಟೆಯ ಕುರಿತು ಟೆಕ್ನಿಕಲ್‌ ಮತ್ತು ಫಂಡಮೆಂಟಲ್‌ ರಿಸರ್ಚ್‌ ಮಾಡಿ ಮುಂದುವರೆಯೆರಿ. ಷೇರು ಪೇಟೆಯಲ್ಲಿ ಹೂಡಿಕೆ ಮಾಡಿದ ಶೇಕಡ 95 ಜನರು ನಷ್ಟ ಅನುಭವಿಸುತ್ತಾರೆ ಎಂಬ ಎಚ್ಚರಿಕೆಯನ್ನು ಮರೆಯದಿರಿ. ಉಳಿದ ಶೇಕಡ 5ರಷ್ಟು ಜನರು ಸಾಕಷ್ಟು ಹಣ ಸಂಪಾದಿಸುತ್ತಾರೆ ಎನ್ನುವುದನ್ನು ಮರೆಯಬೇಡಿ.

ಗಮನಿಸಿ: ಇಲ್ಲಿ ಷೇರುಪೇಟೆಗೆ ಸಂಬಂಧಪಟ್ಟಂತೆ ಕೆಲವು ಯೂಟ್ಯೂಬ್‌ ಚಾನೆಲ್‌ಗಳನ್ನು ನಿಮ್ಮ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಈ ಚಾನೆಲ್‌ ನೀಡುವ ಮಾಹಿತಿಗಳು ಶೇಕಡ 100ರಷ್ಟು ಸತ್ಯ ಎಂದು ಎಚ್‌ಟಿ ಕನ್ನಡ ಪ್ರಮಾಣೀಕರಿಸುವುದಿಲ್ಲ. ಮಾರುಕಟ್ಟೆಯ ಅಪಾಯಗಳನ್ನು ಅರಿತು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.

Whats_app_banner