Success Story: ಬೆಂಗಳೂರು ಮೂಲದ ಶತಕೋಟ್ಯಧಿಪತಿ ಯುವ ಉದ್ಯಮಿ, 7300 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯ ಕೈವಲ್ಯನ ಯಶಸ್ಸಿನ ಕತೆ
ಕನ್ನಡ ಸುದ್ದಿ  /  ಜೀವನಶೈಲಿ  /  Success Story: ಬೆಂಗಳೂರು ಮೂಲದ ಶತಕೋಟ್ಯಧಿಪತಿ ಯುವ ಉದ್ಯಮಿ, 7300 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯ ಕೈವಲ್ಯನ ಯಶಸ್ಸಿನ ಕತೆ

Success Story: ಬೆಂಗಳೂರು ಮೂಲದ ಶತಕೋಟ್ಯಧಿಪತಿ ಯುವ ಉದ್ಯಮಿ, 7300 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯ ಕೈವಲ್ಯನ ಯಶಸ್ಸಿನ ಕತೆ

Success Story of Kaivalya Vohra: ಭಾರತದ ಯುವ ಶ್ರೀಮಂತ, ಝೆಪ್ಟೊ ಕಂಪನಿಯ ಸಹ ಸ್ಥಾಪಕ ಕೈವಲ್ಯ ವೊಹ್ರಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಈತ ಐಐಎಫ್‌ಎಲ್‌ನ ವೆಲ್ತ್‌ ಹೂರನ್‌ ಇಂಡಿಯಾ ರಿಚ್‌ ಲಿಸ್ಟ್‌ 2022ರಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಈತನ ಯಶಸ್ಸಿನ ಕುರಿತು ಸಣ್ಣ ಝಲಕ್‌ ಇಲ್ಲಿದೆ.

ತನ್ನ ಸ್ನೇಹಿತ ಆದಿತ್‌ ಪಾಲಿಚ ಜತೆಗೆ ಕೈವಲ್ಯ (ಮೈಕ್‌ನಲ್ಲಿ ಮಾತನಾಡುತ್ತಿರುವುದು ಕೈವಲ್ಯ)
ತನ್ನ ಸ್ನೇಹಿತ ಆದಿತ್‌ ಪಾಲಿಚ ಜತೆಗೆ ಕೈವಲ್ಯ (ಮೈಕ್‌ನಲ್ಲಿ ಮಾತನಾಡುತ್ತಿರುವುದು ಕೈವಲ್ಯ) (instagram)

ಭಾರತದ ಹಲವು ಯುವಕರು ಉದ್ಯಮ ಆರಂಭಿಸಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ. ಸಣ್ಣ ವಯಸ್ಸಿನಲ್ಲಿ ದೊಡ್ಡ ಕಂಪನಿಯ ಬಾಸ್‌ಗಳಾಗಿದ್ದಾರೆ. ಕಠಿಣ ಪರಿಶ್ರಮ, ಅತ್ಯುತ್ತಮ ದೂರ ದೃಷ್ಟಿ ಹೊಂದಿರುವ ಯುವ ಜನತೆ ಏನೂ ಬೇಕಾದರೂ ಸಾಧಿಸಬಲ್ಲರು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮ ನಿಮ್ಮ ನಡುವೆ ಇರುತ್ತಾರೆ. ಬೆಂಗಳೂರಿನಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್‌ ಈಗ ಪ್ರಮುಖ ಇ-ಕಾಮರ್ಸ್‌ ಕಂಪನಿ. ಇದೇ ರೀತಿ ಹಲವು ಸ್ಟಾರ್ಟಪ್‌ಗಳು ಈಗ ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಇದೇ ರೀತಿ ಝೆಪ್ಟೊ ಎಂಬ ಇ-ಗ್ರೋಸರಿ ಸ್ಥಾಪಿಸಿದ ಕೈವಲ್ಯ ಎಂಬ ಯುವಕನ ಕತೆ ತಿಳಿದುಕೊಳ್ಳೋಣ ಬನ್ನಿ.

ಭಾರತದ ಯುವ ಶ್ರೀಮಂತ, ಝೆಪ್ಟೊ ಕಂಪನಿಯ ಸಹ ಸ್ಥಾಪಕ ಕೈವಲ್ಯ ವೊಹ್ರಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಈತ ಐಐಎಫ್‌ಎಲ್‌ನ ವೆಲ್ತ್‌ ಹೂರನ್‌ ಇಂಡಿಯಾ ರಿಚ್‌ ಲಿಸ್ಟ್‌ 2022ರಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಝೆಪ್ಟೊ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿಯಾಗಿರುವ ಇವರು ತನ್ನ 19 ವಯಸ್ಸಿನಲ್ಲಿಯೇ ಜಗತ್ತಿನ ಯುವ ಶ್ರೀಮಂತ ವ್ಯಕ್ತಿಯಾಗಿ ಗಮನ ಸೆಳೆದಿದ್ದಾನೆ. ತನ್ನ ಸ್ನೇಹಿತ ಆದಿತ್‌ ಪಾಲಿಚ ಜತೆ ಸೇರಿ ಝೆಪ್ಟೊ ಎಂಬ ಕಂಪನಿಯನ್ನು ಆರಂಭಿಸಿದ್ದನು. ಇದು ಭಾರತದ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಇ-ಗ್ರೋಸರಿ ಕಂಪನಿ.

ಐಐಎಫ್‌ಎಲ್‌ ವೆಲ್ತ್‌ ಹುರಾನ್‌ ಇಂಡಿಯಾ ರಿಚ್‌ ಲಿಸ್ಟ್‌ 2022ರಲ್ಲಿ ಕೈವಲ್ಯ ವೊಹ್ರಾ ಅವರು 1,036 ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು 1 ಸಾವಿರ ಕೋಟಿ ರೂಪಾಯಿ. ಇವರ ಸ್ನೇಹಿತ ಆದಿತ್‌ ಪಾಲಿಚ ಇನ್ನೂ ಶ್ರೀಮಂತ. ಇವರ ನಿವ್ವಳ ಸಂಪತ್ತು 1200 ಕೋಟಿ ರೂಪಾಯಿಯಂತೆ. 2021ರಲ್ಲಿ ಮುಂಬೈನಲ್ಲಿ ಕೈವಲ್ಯ ವೋಹ್ರಾ ಮತ್ತು ಆದಿತ್‌ ಪಾಲಿಚ ಅವರು ಝೆಪ್ಟೊ ಕಂಪನಿಯನ್ನು ಆರಂಭಿಸಿದ್ದರು.

ವರದಿಗಳ ಪ್ರಕಾರ ಮೇ 2022ರ ಅಡಿಟ್‌ ಸಮಯದಲ್ಲಿ ಝೆಪ್ಟೊ ಕಂಪನಿಯ ಮೌಲ್ಯ 900 ದಶಲಕ್ಷ ಡಾಲರ್‌ ಆಗಿತ್ತು. ಈ ಕಂಪನಿಗೆ ವೈಸಿ ಕಂಟಿನ್ಯುಟಿ ಫಂಡ್‌ ಸುಮಾರು 200 ಲಕ್ಷ ಡಾಲರ್‌ ಹೂಡಿಕೆ ಮಾಡಿತ್ತು. 2021ರ ಡಿಸೆಂಬರ್‌ನಲ್ಲಿ ಝೆಪ್ಟೊ ಕಂಪನಿಯ ಮೌಲ್ಯ 570 ದಶಲಕ್ಷ ಡಾಲರ್‌ ಆಗಿತ್ತು.

ಈ ಕಂಪನಿಯ ಯಶಸ್ಸಿಗೆ ಕೈವಲ್ಯ ವೋಹ್ರಾ ಮತ್ತು ಆತನ ಸ್ನೇಹಿತ ಆದಿತ್‌ ಕಾರಣ. ಇವರಲ್ಲಿ ಕೈವಲ್ಯ ವೋಹ್ರ ಜನಿಸಿದ್ದು ಮತ್ತು ಆರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ ಅನ್ನೋದು ವಿಶೇಷ. 2003ರ ಮಾರ್ಚ್‌ 15ರಂದು ಈತ ಬೆಂಗಳೂರಿನಲ್ಲಿ ಜನಿಸಿದನು. ಝೆಪ್ಟೊ ಕಂಪನಿಯನ್ನು ಆರಂಭಿಸುವ ಮೊದಲು ಕೈವಲ್ಯ ಅವರು ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಗೆ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಓದಲು ಹೋಗಿದ್ದರು. ಅಡ್ಮಿಷನ್‌ಗೂ ಹೋಗಿದ್ದರು. ಈ ಕಾಲೇಜು, ಓದಿನ ಸಹವಾಸ ಬೇಡ ಎಂದು ವಾಪಸ್‌ ಬಂದು ಸ್ವಂತ ಕಂಪನಿ ಆರಂಭಿಸಿದ್ದರು.

ಸ್ಟಾನ್‌ಫೋರ್ಡ್‌ಗೆ ಸೇರಲೆಂದು ಬಂದಾಗ ಇವರಿಬ್ಬರು ದುಬೈನಲ್ಲಿದ್ದರು. ಆನ್‌ಲೈನ್‌ ಓರಿಯೆಂಟೇಷನ್‌ನಲ್ಲಿ ಪಾಲ್ಗೊಂಡು ಬಳಿಕ ಮುಂಬೈಗೆ ಬಂದರು. ಮೊದಲು ಕಿರಣ್‌ ಕಾರ್ಟ್‌ ಎಂಬ ಕಂಪನಿ ಸ್ಥಾಪಿಸಿದರು. ಮುಂಬೈನಲ್ಲಿ ಕೇವಲ 45 ನಿಮಿಷದಲ್ಲಿ ಡೆಲಿವರಿ ಮಾಡುವ ಭರವಸೆಯೊಂದಿಗೆ ಈ ಕಂಪನಿ ಆರಂಭಿಸಿದರು. ಬಳಿಕ ಇವರಿಬ್ಬರು ಜತೆಯಾಗಿ ಝೆಪ್ಟೊ ಕಂಪನಿಯನ್ನು ಆರಂಭಿಸಿದರು. ಈಗ ಝೆಪ್ಟೊ ಕಂಪನಿಯು ದೆಹಲಿ, ಚೆನ್ನೈ, ಗುರುಗ್ರಾಮ, ಬೆಂಗಳೂರು ಮತ್ತು ಮುಂಬೈಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.

ಅಂದಹಾಗೆ, ಇವರಿಬ್ಬರು ಶ್ರೀಮಂತ ಕುಟುಂಬದಿಂದ ಬಂದವರು. ಹಾಗಂತ, ತಾವು ಶ್ರೀಮಂತರೆಂದು ಹಣ ವ್ಯರ್ಥ ಮಾಡುತ್ತ ಸಮಯ ಕಳೆಯಲಿಲ್ಲ. ದೊಡ್ಡ ಕನಸು ಕಂಡರು, ಆ ಕನಸು ಈಡೇರಿಸಿಲು ಶ್ರಮಪಟ್ಟರು. ಈಗ ದೊಡ್ಡ ಕಂಪನಿಯ ಮಾಲೀಕರಾಗಿದ್ದಾರೆ.

Whats_app_banner