ಹಣ ಉಳಿಸೋದು ಹೇಗೆ; 21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದ್ರೆ ಮಾಡಬೇಕಾದ್ದಿಷ್ಟೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹಣ ಉಳಿಸೋದು ಹೇಗೆ; 21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದ್ರೆ ಮಾಡಬೇಕಾದ್ದಿಷ್ಟೆ

ಹಣ ಉಳಿಸೋದು ಹೇಗೆ; 21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದ್ರೆ ಮಾಡಬೇಕಾದ್ದಿಷ್ಟೆ

ಹಣ ಉಳಿಸೋದು ಹೇಗೆ?: ಉಳಿತಾಯ ಮತ್ತು ಹೂಡಿಕೆ ವಿಚಾರ ಬಂದಾಗ ಸಹಜವಾಗಿ, ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ. 21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದರೆ ಏನು ಮಾಡಬೇಕು? ಅನುಸರಿಸಬಹುದಾದ ಹಣಕಾಸು ತಂತ್ರದ ಕುರಿತು ಪ್ರಾಥಮಿಕ ಮಾಹಿತಿ ಇಲ್ಲಿದೆ.

ಉಳಿತಾಯ ಮಾಡುವುದು ಹೇಗೆ?  21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದರೆ ಮಾಡಬೇಕಾದ್ದು ಇಷ್ಟೆ. (ಸಾಂಕೇತಿಕ ಚಿತ್ರ)
ಉಳಿತಾಯ ಮಾಡುವುದು ಹೇಗೆ? 21 ವರ್ಷದಲ್ಲಿ 1.5 ಕೋಟಿ ರೂಪಾಯಿ ಸಂಪತ್ತು ಒಟ್ಟುಗೂಡಿಸಬೇಕಾದರೆ ಮಾಡಬೇಕಾದ್ದು ಇಷ್ಟೆ. (ಸಾಂಕೇತಿಕ ಚಿತ್ರ) (canva)

ಹನಿಗೂಡಿದರೆ ಹಳ್ಳ. ಉಳಿತಾಯ, ಹೂಡಿಕೆ ವಿಚಾರಕ್ಕೆ ಬಂದಾಗ ಪದೇಪದೆ ಕೇಳುವ ವಾಡಿಕೆಯ ಮಾತು ಇದು. ಇನ್ನು 21 ವರ್ಷಕ್ಕೆ ಕೈಯಲ್ಲಿ 2.5 ಕೋಟಿ ರೂಪಾಯಿ ಬೇಕು ಎಂದಾದರೆ ಈಗ ಇರುವ ದುಡಿಮೆ ಸಾಕಾ? ಎಷ್ಟು ಉಳಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಸಹಜ. ಈಗ ಇರುವ ಸಂಬಳದಲ್ಲಿ ಇದು ಸಾಧ್ಯವೇ ಇಲ್ಲ ಎಂಬ ಭಾವನೆಯೂ ಅನೇಕರನ್ನು ಕಾಡಬಹುದು. ಸರಿಯಾಗಿ ಉಳಿತಾಯ ಮಾಡಿ, ಸರಿಯಾದ ಹಣಕಾಸು ಉತ್ಪನ್ನದಲ್ಲಿ ಹೂಡಿಕೆ ಮಾಡಿದರೆ ಸಾಧ್ಯವಿದೆ. ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಬ್ಯಾಂಕ್ ಎಫ್‌ಡಿ ಮಾಡಿ ಈ ಮೊತ್ತ ತಲುಪಬೇಕು ಎಂದರೆ ಸ್ವಲ್ಪ ಹೆಚ್ಚೇ ಉಳಿತಾಯಮಾಡಬೇಕಾಗುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್‌ ಕಡೆಗೆ ಗಮನಹರಿಸುವುದು ಒಳಿತು. ಬಹುತೇಕರು ಹೆಚ್ಚು ರಿಸ್ಕ್ ತಗೊಳ್ಳದೇ ಅಂದರೆ ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡದೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದೇ ದಾರಿಯನ್ನು ಅನುಸರಿಸುವುದಾದರೆ ಇಲ್ಲಿ ಮಲ್ಟಿ ಕ್ಯಾಪ್‌ ಮ್ಯೂಚುವಲ್ ಫಂಡ್ ಒಂದನ್ನು ಉದಾಹರಣೆಯಾಗಿ ತಗೊಂಡು 15 ಕೋಟಿ ರೂಪಾಯಿ ಸಂಪತ್ತು ಸೃಷ್ಟಿಸುವುದು ಹೇಗೆ ಎಂಬುದನ್ನು ವಿವರಿಸುತ್ತೇನೆ.

21 ವರ್ಷ ಆದ ನಂತರ 2.5 ಕೋಟಿ ರೂಪಾಯಿ ಕೈಯಲ್ಲಿರಬೇಕಾದ್ರೆ…

ಬರೋಡಾ ಬಿಎನ್‌ಪಿ ಪಾರಿಬಸ್ ಮಲ್ಟಿಕ್ಯಾಪ್ ಫಂಡ್ ಅನ್ನು ಉದಾಹರಣೆಯಾಗಿ ತಗೊಳ್ಳುತ್ತಿದ್ದೇನೆ. ಇದರಲ್ಲೇ ಹೂಡಿಕೆ ಮಾಡಿ ಎಂದು ಶಿಫಾರಸು ಮಾಡುತ್ತಿಲ್ಲ. ತಿಳಿವಳಿಕೆಗಾಗಿ ಮತ್ತು ಮಾಹಿತಿಯನ್ನು ಅರ್ಥಮಾಡಿಸುವ ಸಲುವಾಗಿ ಈ ಮಲ್ಟಿ ಕ್ಯಾಪ್ ಫಂಡ್‌ನ ಉದಾಹರಣೆ ನೀಡುತ್ತಿದ್ದೇನಷ್ಟೆ. ಈ ಫಂಡ್‌ ಅನ್ನು 2003ರಲ್ಲಿ ಪರಿಚಯಿಸಲಾಗಿದೆ. ಅದಕ್ಕೆ ಈಗ 21 ವರ್ಷ. 2,500 ಕೋಟಿ ರೂಪಾಯಿ ಸಂಪತ್ತನ್ನು ಅದು ಜುಲೈನಲ್ಲಿ ನಿರ್ವಹಿಸಿದೆ. ಇದು ಓಪನ್ ಎಂಡೆಡ್‌ ಈಕ್ವಿಟಿ ಸ್ಕೀಮ್ ಆಗಿದ್ದು, ಲಾರ್ಜ್‌ ಕ್ಯಾಪ್‌, ಮಿಡ್ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳಲ್ಲಿ ತನ್ನ ಸಂಪತ್ತನ್ನು ಅಂದರೆ ಹೂಡಿಕೆದಾರರು ಹೂಡಿಕೆ ಮಾಡಿದ ಹಣವನ್ನು ತೊಡಗಿಸಿಕೊಂಡಿದೆ. ಈ ಫಂಡ್‌ ಕಳೆದ ವರ್ಷ ಶೇಕಡ 47.22 ರಿಟರ್ನ್ಸ್ ಕೊಟ್ಟಿದೆ. ಇದೇ ಅವಧಿಯಲ್ಲಿ ಈ ವಿಭಾಗದ ಬೆಂಚ್‌ ಮಾರ್ಕ್‌ ಫಂಡ್‌ ಆಗಿರುವ ನಿಫ್ಟಿ 500 ಮಲ್ಟಿಕ್ಯಾಪ್‌ 50:25:25-ಟಿಆರ್‌ಐ ಫಂಡ್‌ಗೆ ಹೋಲಿಸಿದರೆ (ಶೇಕಡ 41.01) ಹೆಚ್ಚು ರಿಟರ್ನ್ಸ್ ಕೊಟ್ಟಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಇದು ಶೇಕಡ 20.99 ರಿಟರ್ನ್ಸ್ ಕೊಟ್ಟಿದೆ. ಇದು ಬೆಂಚ್‌ ಮಾರ್ಕ್‌ ಫಂಡ್‌ಗೆ ಹೋಲಿಸಿದರೆ (ಶೇಕಡ 21.04) ಸ್ವಲ್ಪ ಕಡಿಮೆ. ಇದೊಂದು ರೀತಿಯಲ್ಲಿ ಉತ್ತಮ ರಿಟರ್ನ್ಸ್ ಎಂದೇ ಹೇಳಬಹುದು.

ಬರೋಡಾ ಬಿಎನ್‌ಪಿ ಪರಿಬಾಸ್ ಮಲ್ಟಿಕ್ಯಾಪ್ ಫಂಡ್ ಸ್ಥಾಪನೆಯಾದಾಗಿನಿಂದ ದೊಡ್ಡ ಮೊತ್ತದ ಸಂಪತ್ತು ನಿರೀಕ್ಷಿಸುತ್ತಿರುವ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ ಎಂದು ಸಾಬೀತಾಗಿದೆ. ಉದಾಹರಣೆಗೆ, ನಿಧಿಯ ಪ್ರಾರಂಭದಿಂದ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ತಿಂಗಳಿಗೆ 10,000 ರೂಪಾಯಿಗಳನ್ನು ಸತತವಾಗಿ ಹೂಡಿಕೆ ಮಾಡಿದ ಹೂಡಿಕೆದಾರರು ಈಗ ಅವರ ಹೂಡಿಕೆಯು 1.58 ಕೋಟಿ ರೂಪಾಯಿ ದಾಟಿರುವುದನ್ನು ಗಮನಿಸಬಹುದು. ಈ ಫಂಡ್‌ ಹೆಚ್ಚಿನ ಅಪಾಯ- ಹೊಂದಾಣಿಕೆಯ ಆದಾಯ ಒದಗಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತ ಬಂದಿದೆ.

ಉದಾಹರಣೆಗೆ ಒಬ್ಬ ಹೂಡಿಕೆದಾರ ಈ ಫಂಡ್‌ನಲ್ಲಿ (Baroda BNP Paribas Multi Cap Fund Regular Growth) ಅದು ಶುರುವಾದ ದಿನ ಅಂದರೆ 2003ರ ಸೆಪ್ಟೆಂಬರ್ 12ರಂದು 10,000 ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅಂದರೆ 2024ರ ಸೆಪ್ಟೆಂಬರ್‌ 12 ರಂದು ಅದರ ಮೌಲ್ಯ 2.85 ಲಕ್ಷ ರೂಪಾಯಿ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದಿ ಲೈವ್‌ ಮಿಂಟ್‌ನ ರಿಟರ್ನ್ಸ್‌ ಕ್ಯಾಲ್ಕುಲೇಟರ್ ಬಳಸಿ ಗಮನಿಸಿದ್ದು ಅದನ್ನು ನೀವು ಕೂಡ ಗಮನಿಸಬಹುದು.

ಹೇಗೆ ಎಂಬುದನ್ನು ವಿವರಿಸುತ್ತೇನೆ. ಮೊದಲು https://www.livemint.com/tools-calculators/returns-calculator ಓಪನ್ ಮಾಡಿಕೊಂಡೆ. ಅದಾಗಿ ಸ್ಕೀಮ್ ಎಂಬ ಜಾಗದಲ್ಲಿ Baroda BNP Paribas Multi Cap Fund Regular Growth ಎಂಬ ಮ್ಯೂಚುವಲ್ ಫಂಡ್‌ ಸೆಲೆಕ್ಟ್‌ ಮಾಡಿದೆ. ನಂತರ ಫ್ರಂ ಡೇಟ್‌ನಲ್ಲಿ 2003 ರ ಸೆಪ್ಟೆಂಬರ್ 12 ಸೆಲೆಕ್ಟ್ ಮಾಡಿದೆ. ಟು ಡೇಟ್‌ ಇರುವಲ್ಲಿ 2024ರ ಸೆಪ್ಟೆಂಬರ್ 12 ಸೆಲೆಕ್ಟ್‌ ಮಾಡಿ ಕ್ಯಾಲ್ಕುಲೇಟ್ ಬಟನ್ ಕ್ಲಿಕ್ ಮಾಡಿದೆ. ಅದು 10,000 ರೂಪಾಯಿ ಹೂಡಿಕೆಗೆ ಲೆಕ್ಕ ಹಾಕಿ 2.85 ಲಕ್ಷ ರೂಪಾಯಿ ರಿಟರ್ನ್ಸ್ ಅನ್ನು ತೋರಿಸಿದೆ. ಇದೇ ರೀತಿ ನೀವು ಬೇರೆ ಫಂಡ್‌ಗಳನ್ನೂ ಗಮನಿಸಬಹುದು.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಇದಿಷ್ಟು ಗಮನದಲ್ಲಿರಲಿ

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಫಂಡ್‌ಗಳನ್ನು ನಿರ್ವಹಿಸುವುದಕ್ಕೆ ಮ್ಯಾನೇಜರ್‌ಗಳಿರುತ್ತಾರೆ. ಆದರೆ ಫಂಡ್ ಆಯ್ಕೆ ಮಾಡುವ ಹೊಣೆಗಾರಿಕೆ ಹೂಡಿಕೆದಾರರದ್ದೇ ಆಗಿರುತ್ತದೆ. ಹೂಡಿಕೆ ಮಾಡುವ ಫಂಡ್‌ನಲ್ಲಿ ಹೂಡಿಕೆ ನಿರ್ವಹಣೆ ವೆಚ್ಚ (ಎಕ್ಸ್‌ಪೆನ್ಸ್ ರೇಷ್ಯೋ ) ಎಷ್ಟಿದೆ ಎಂಬುದನ್ನು ಗಮನಿಸಬೇಕು. ಲಾಕ್‌ ಇನ್ ಪಿರಿಯಡ್ ಅಂದ್ರೆ ಹೂಡಿಕೆ ಮಾಡಿದ ಹಣವನ್ನು ಎಷ್ಟು ಅವಧಿಗೆ ಅಲ್ಲಿಯೇ ಬಿಡಬೇಕು ಎಂಬ ಸೂಚನೆ ಇದೆ ಎಂಬುದನ್ನು ಗಮನಿಸಬೇಕು. ಅದೇ ರೀತಿ ಒಂದು ವರ್ಷದೊಳಗೆ ಹಣ ಹಿಂಪಡೆದರೆ ಅಥವಾ ಯೂನಿಟ್ ಮಾರಾಟ ಮಾಡಿದರೆ ಎಷ್ಟು ಪರ್ಸೆಂಟ್ ಹಣ ಕಡಿತ ಮಾಡಿಕೊಳ್ತಾರೆ ಎಂಬುದನ್ನು ನೋಡಬೇಕು. ಮೂರು, ಐದು, ಏಳು ವರ್ಷಗಳ ರಿಟರ್ನ್ಸ್‌ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ನೋಡಬೇಕು. ಹೂಡಿಕೆ ಮಾಡಬೇಕಾದರೆ ಇಷ್ಟೆಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಆರಂಭದಲ್ಲಿ ಪರಿಣತರ ಮಾರ್ಗದರ್ಶನ ಪಡೆದುಕೊಳ್ಳುವುದು ಒಳಿತು.

Whats_app_banner