ತಡವಾಗಿ ಕೂಡ ತೆರಿಗೆ ರೀಫಂಡ್‌ಗೆ ಅರ್ಜಿ ಸಲ್ಲಿಸಬಹುದು, ಆದರೆ ಷರತ್ತುಗಳಿವೆ; ಹಣಕಾಸು ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ತೆರಿಗೆ ರೀಫಂಡ್ ಅರ್ಜಿ ಸಲ್ಲಿಕೆಯ ನಿಯಮ ಪರಿಷ್ಕರಿಸಿರುವ ಕೇಂದ್ರ ಸರ್ಕಾರ, ತಡವಾಗಿ ಕೂಡ ತೆರಿಗೆ ರೀಫಂಡ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಇದಕ್ಕಾಗಿ ಕೆಲವು ಷರತ್ತುಗಳನ್ನೂ ವಿಧಿಸಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ.
ತೆರಿಗೆ ರೀಫಂಡ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ, ಹಣಕಾಸು ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ತೆರಿಗೆದಾರರ ಅನುಭವವನ್ನು ಹೆಚ್ಚಿಸುವ ಮತ್ತು ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದ ಕಾರಣಕ್ಕೆ ಇದು ಮಹತ್ವ ಪಡೆದುಕೊಂಡಿದೆ. ತಡವಾಗಿ ತೆರಿಗೆ ಮರುಪಾವತಿ ಅಥವಾ ರೀಫಂಡ್ ಕ್ಲೈಮ್ ಮತ್ತು ನಷ್ಟ ಮುಂದುವರಿಕೆ ಅರ್ಜಿ (ಲಾಸ್ ಕ್ಯಾರಿ ಫಾರ್ವರ್ಡ್ ಅಪ್ಲಿಕೇಶನ್)ಗಳಿಗೆ ಸಂಬಂಧಿಸಿದ ಮಾರ್ಗಸೂಚಿ ಇದಾಗಿದೆ. ಆಡಳಿತ ವ್ಯವಸ್ಥೆಯ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ತೆರಿಗೆ ಮರುಪಾವತಿ ಕ್ಲೈಮ್ ಮತ್ತು ನಷ್ಟ ಮುಂದುವರಿಕೆ ಅರ್ಜಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದ ಈ ಮಾರ್ಗಸೂಚಿಯು ಕೋಟ್ಯಂತರ ತೆರಿಗೆಪಾವತಿದಾರರಿಗೆ ಪ್ರಯೋಜನ ಉಂಟುಮಾಡಲಿದೆ. ಪರಿಷ್ಕೃತ ಮಾರ್ಗಸೂಚಿಯು ಸ್ಪಷ್ಟ ಪ್ರೋಟೋಕಾಲ್‌ಗಳು ಮತ್ತು ಸಮಯಮಿತಿಯ ಚೌಕಟ್ಟನ್ನು ರೂಪಿಸಿಕೊಟ್ಟಿದೆ. ಇದು ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ತೆರಿಗೆ ವ್ಯವಸ್ಥೆಯ ಕಾರ್ಯವಿಧಾನವನ್ನು ಅರ್ಥಮಾಡಿಕೊಂಡು ಮುಂದುವರಿಯಲು ನೆರವಾಗುತ್ತದೆ. ಹೊಸ ಮಾರ್ಗಸೂಚಿಗಳಲ್ಲಿ ವಿವರಿಸಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.
ತೆರಿಗೆ ಮರುಪಾವತಿ ಕ್ಲೈಮ್, ನಷ್ಟ ಮುಂದುವರಿಕೆ ಅರ್ಜಿಗೆ ಸಂಬಂಧಿಸಿದ ಮಾರ್ಗಸೂಚಿ ವಿವರ
1) ವಿಳಂಬಕ್ಕೆ ಸಕಾರಣವೆನಿಸುವ ಕ್ಲೈಮ್ ಮಿತಿ ಹೆಚ್ಚಳ: ತೆರಿಗೆ ಮರುಪಾವತಿ ಕ್ಲೈಮ್‌ಗಳಲ್ಲಿ ಮೊತ್ತದ ಹೆಚ್ಚಳವು ಆ ವಿಳಂಬ ಕ್ಲೈಮ್ ಮನ್ನಿಸುವುದಕ್ಕೆ ಸಕಾರಣವಾಗುತ್ತದೆ. ಇದು ಬಾಕಿ ಮರುಪಾವತಿಯ ಹೊರತಾಗಿಯೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದನ್ನು ತಪ್ಪಿಸಿಕೊಂಡ ತೆರಿಗೆದಾರರಿಗೆ ಪ್ರಯೋಜನ ಒದಗಿಸುತ್ತದೆ.
2) ಹಂತಗಳ ವರ್ಗೀಕರಣ: ತೆರಿಗೆ ಮರುಪಾವತಿ ಕ್ಲೈಮ್‌ಗಳ ಮೊತ್ತವನ್ನು ಆಧರಿಸಿ, ಅವುಗಳ ವಿಲೇವಾರಿಗೆ ಮೂರು ಹಂತಗಳ ವರ್ಗೀಕರಣವನ್ನು ಮಾಡಲಾಗಿದೆ.
1 ಕೋಟಿ ರೂಪಾಯಿ ತನಕದ ಮೊತ್ತ: ಆದಾಯ ತೆರಿಗೆಯ ಪ್ರಧಾನ ಆಯುಕ್ತರು/ಆದಾಯ ತೆರಿಗೆ ಆಯುಕ್ತರು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ.
1 ಕೋಟಿ ರೂ ನಿಂದ 3 ಕೋಟಿ ರೂ: ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರು ಈ ಅರ್ಜಿಗಳನ್ನು ನಿರ್ವಹಿಸುತ್ತಾರೆ.
3 ಕೋಟಿ ರೂ ಮೇಲ್ಪಟ್ಟ ಅರ್ಜಿಗಳು: ಆದಾಯ ತೆರಿಗೆಯ ಮುಖ್ಯ ಆಯುಕ್ತರು ಈ ಅರ್ಜಿಗಳನ್ನು ನಿರ್ವಹಿಸುತ್ತಾರೆ.
3) ಐದು ವರ್ಷಗಳ ಅವಧಿಯ ಮಿತಿ: ತೆರಿಗೆದಾರರು ಈಗ ವಿಳಂಬವಾಗಿರುವ ತೆರಿಗೆ ಮರುಪಾವತಿ ಅರ್ಜಿಗಳನ್ನು ಸಲ್ಲಿಸಲು ಮೌಲ್ಯಮಾಪನ ವರ್ಷದ ಅಂತ್ಯದಿಂದ ಹಿಂದಿನ ಐದು ವರ್ಷಗಳ ತನಕದ ತೆರಿಗೆ ಮರುಪಾವತಿ ಕೋರಬಹುದು. ಈ ನಿಯಮವು 2024ರ ಅಕ್ಟೋಬರ್ 1 ರ ನಂತರ ಸಲ್ಲಿಸಲಾದ ಎಲ್ಲ ಅರ್ಜಿಗಳಿಗೆ ಅನ್ವಯ.
4) ಸಮಯ ಮಿತಿಯಲ್ಲಿ ಪ್ರಕ್ರಿಯೆ: ತೆರಿಗೆದಾರರು ಸಲ್ಲಿಸುವ ತೆರಿಗೆ ಮರುಪಾವತಿ ಕ್ಲೈಮ್ ಅರ್ಜಿಗಳನ್ನು ವಿಲೇವಾರಿ ಮಾಡಲು ಸ್ವೀಕೃತಿ ಬಳಿಕ 6 ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದೆ. ಅದರೊಳಗೆ ಅಧಿಕಾರಿಗಳು ಈ ಪ್ರಕ್ರಿಯೆ ಮುಗಿಸಿರಬೇಕು.
5) ನ್ಯಾಯಾಲಯ ಸಂಬಂಧಿತ ಕ್ಲೈಮ್‌ಗಳಿಗೆ ಅನ್ವಯವಲ್ಲ: ನ್ಯಾಯಾಲಯದ ಆದೇಶ ಪ್ರಕಾರ ಸಲ್ಲಿಕೆಯಾಗುವ ಮರುಪಾವತಿ ಕ್ಲೈಮ್‌ಗಳಿಗೆ 5 ವರ್ಷದ ಮಿತಿ ಇರಲ್ಲ. ಹಾಗೆಯೇ, ನ್ಯಾಯಾಲಯದ ಆದೇಶದ ಆರು ತಿಂಗಳೊಳಗೆ ಅಥವಾ ಆರ್ಥಿಕ ವರ್ಷದ ಅಂತ್ಯದೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
6) ಪೂರಕ ಕ್ಲೈಮ್‌ಗಳಿಗೆ ಅವಕಾಶ: ಅಗತ್ಯ ಇತರೆ ಮಾನದಂಡಗಳನ್ನು ಪೂರೈಸಿದರೆ, ತೆರಿಗೆದಾರರು ಮರುಪಾವತಿಯ ಪೂರಕ ಕ್ಲೈಮ್‌ಗಳಿಗಾಗಿ ತಡವಾದ ಅರ್ಜಿಗಳನ್ನು ಸಲ್ಲಿಸಬಹುದು.
7) ವಿಳಂಬವಾಗಿ ಸಲ್ಲಿಸಿದ ಕ್ಲೈಮ್‌ಗಳಿಗೆ ಬಡ್ಡಿ ಇರಲ್ಲ: ವಿಳಂಬವಾಗಿ ಮರುಪಾವತಿ ಕ್ಲೈಮ್ ಮಾಡಿದರೆ ಆ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ. ಇದು ಸಕಾಲಿಕ ಫೈಲಿಂಗ್‌ನ ಪ್ರಾಮುಖ್ಯವನ್ನು ಒತ್ತಿಹೇಳುತ್ತದೆ.
8) ಪರಿಶೀಲನೆ ಪ್ರಕ್ರಿಯೆಯ ಉನ್ನತೀಕರಣ: ಬೆಂಗಳೂರು ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ಆದಾಯ ತೆರಿಗೆ ಕಮಿಷನರ್ ಈಗ ಐಟಿಆರ್ ಸಲ್ಲಿಕೆಗಳನ್ನು ಪರಿಶೀಲಿಸುವಲ್ಲಿ ವಿಳಂಬವನ್ನು ಕ್ಷಮಿಸಲು ಅರ್ಜಿಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ. ಅವರು ಈ ಪರಿಶೀಲನೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.