vessels and cleaning tips: ಪಾತ್ರೆಯ ಜಿಡ್ಡು, ಎಣ್ಣೆಯಂಶ ಹೋಗಲಾಡಿಸಲು ಪರದಾಡುತ್ತಿದ್ದೀರಾ? ಈ ಉಪಾಯಗಳು ನಿಮಗೆ ಸಹಾಯ ಮಾಡಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Vessels And Cleaning Tips: ಪಾತ್ರೆಯ ಜಿಡ್ಡು, ಎಣ್ಣೆಯಂಶ ಹೋಗಲಾಡಿಸಲು ಪರದಾಡುತ್ತಿದ್ದೀರಾ? ಈ ಉಪಾಯಗಳು ನಿಮಗೆ ಸಹಾಯ ಮಾಡಬಹುದು ನೋಡಿ

vessels and cleaning tips: ಪಾತ್ರೆಯ ಜಿಡ್ಡು, ಎಣ್ಣೆಯಂಶ ಹೋಗಲಾಡಿಸಲು ಪರದಾಡುತ್ತಿದ್ದೀರಾ? ಈ ಉಪಾಯಗಳು ನಿಮಗೆ ಸಹಾಯ ಮಾಡಬಹುದು ನೋಡಿ

cast iron vessels and cleaning tips: ದೋಸೆ, ಪಲ್ಯ, ಕರಿದ ತಿಂಡಿಗಳು, ಗ್ರಿಲ್ಡ್‌ ಖಾದ್ಯಗಳನ್ನು ತಯಾರಿಸಲು ಎರಕ ಹೊಯ್ದ ಕಬ್ಬಿಣದ ಪಾತ್ರೆಗಳನ್ನು ಬಳಸುತ್ತೇವೆ. ಆದರೆ ಇದನ್ನು ಸ್ವಚ್ಛ ಮಾಡುವುದು ಕಷ್ಟದ ಕೆಲಸ. ಹಾಗಂತ ತಲೆ ಕೆಡಿಸಿಕೊಳ್ಳುವುದು ಬೇಡ. ಈ ಸರಳ, ಸುಲಭ ಉಪಾಯಗಳು ನಿಮಗೆ ಸಹಾಯ ಮಾಡಬಹುದು.

ಪ್ರಾತ್ರೆ ತೊಳೆಯುವುದು
ಪ್ರಾತ್ರೆ ತೊಳೆಯುವುದು

ಅಡುಗೆ ಮನೆಯಲ್ಲಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸುವುದೆಂದರೆ ಹಲವರಿಗೆ ಪ್ರೀತಿ. ಆದರೆ ಪಾತ್ರೆ ತೊಳೆಯಬೇಕಲ್ಲ ಎಂಬ ಚಿಂತೆಯಿಂದ ಅಡುಗೆ ಮಾಡಲು ಹಿಂದೇಟು ಹಾಕುತ್ತಾರೆ. ಅದರಲ್ಲೂ ಜಿಗುಟು, ಎಣ್ಣೆಯಂಶ, ಪಾತ್ರೆಯ ತಳಭಾಗ ಕಪ್ಪಾಗಿರುವುದು ಇಂತಹ ಪಾತ್ರೆಯನ್ನು ತೊಳೆಯುವುದು ನಿಜಕ್ಕೂ ಸವಾಲು. ಆದರೆ ತೊಳೆಯದೆ ಹಾಗೇ ಇಟ್ಟರೆ ಪಾತ್ರೆ ಸಂಪೂರ್ಣವಾಗಿ ಹಾಳಾಗುತ್ತದೆ. ಅದರಲ್ಲೂ ಎರಕ ಹೊಯ್ದ ಕಬ್ಬಿಣದ ಪಾತ್ರೆಗಳನ್ನು ತೊಳೆಯುವುದು ಕೊಂಚ ಕಷ್ಟವೇ. ಹಾಗಂತ ಅದನ್ನು ಬಳಸುವುದು ಕೆಟ್ಟದಲ್ಲ. ಇದರ ಬಾಳಿಕೆಯ ಅವಧಿ ಹೆಚ್ಚು, ಅಲ್ಲದೆ ಇದು ಇತರ ಕುಕ್‌ವೇರ್‌ಗಳಿಗಿಂತ ಉತ್ತಮ. ಎರೆಕ ಹೊಯ್ದ ಕಬ್ಬಿಣದ ಮಡಿಕೆಗಳು, ಕಾವಲಿ, ಬಾಣಲಿ ಮುಂತಾದವನ್ನು ನಾವು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ. ಆದರೆ ಅವುಗಳನ್ನು ಸ್ವಚ್ಛಮಾಡುವ ವಿಷಯ ಬಂದಾಗ ತಲೆ ಕೆಡಿಸಿಕೊಳ್ಳುತ್ತೇವೆ. ಆದರೆ ಈ ಕೆಲವು ಸುಲಭ ವಿಧಾನಗಳಿಂದ ಅವುಗಳನ್ನು ಕ್ಷಣದಲ್ಲೇ ಸ್ವಚ್ಛ ಮಾಡಬಹುದು.

ಡಿಶ್‌ವಾಶರ್‌ ಬಳಸಿ

ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತಂತ್ರ. ಆದರೆ ಎರಕ ಹೊಯ್ದ ಕಬ್ಬಿಣದ ಪಾತ್ರೆಗೆ ಡಿಶ್‌ವಾಶರ್‌ ಬಳಸಬಾರದು ಎನ್ನುತ್ತಾರೆ. ಇದು ತಪ್ಪು. ಕೆಲವು ಹನಿ ಡಿಶ್‌ವಾಶರ್‌ನಿಂದ ಈ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಆದರೆ ಇದನ್ನು ಪದೇ ಪದೇ ಅತಿಯಾಗಿ ಬಳಸುವುದರಿಂದ ಪಾತ್ರೆಯ ಮೇಲ್ಮೈ ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಸ್ವಲ್ಪವೇ ಬಳಸಿ, ಸ್ವಚ್ಛ ಮಾಡಿ.

ಬಿಸಿನೀರಿನಲ್ಲಿ ನೆನೆಸಿ

ಹಲವರು ಕಬ್ಬಿಣದ ಪಾತ್ರೆಯಲ್ಲಿ ಎಣ್ಣೆ ಕಾಯಿಸಿದ ಬಳಿಕ ಅಥವಾ ದೋಸೆ ಮಾಡಿದ ಬಳಿಕ ಪ್ರತಿದಿನ ತೊಳೆಯುವುದಿಲ್ಲ. ಆದರೆ ಪ್ರತಿ ಬಳಕೆಯ ನಂತರ ಪಾತ್ರೆಯನ್ನು ಸ್ವಚ್ಛವಾಗಿ ತೊಳೆದಿಡುವುದು ಮುಖ್ಯ. ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಿದ ಬಳಿಕ ಪಾತ್ರೆಯನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ ನಂತರ ತೊಳೆಯುವುದು ಉತ್ತಮ.

ಬಿಸಿ ಇದ್ದಾಗಲೇ ತೊಳೆಯಿರಿ

ಯಾವುದೇ ಖಾದ್ಯವನ್ನಾಗಲಿ ಪಾತ್ರೆಯಲ್ಲಿ ಬಿಸಿ ಬಿಸಿ ಇದ್ದಾಗಲೇ ತಿನ್ನಲು ನಾಲಿಗೆ ಹಪ ಹಪಿಸುತ್ತದೆ. ಆದರೆ ಜಿಡ್ಡು ಹಿಡಿದ ಪಾತ್ರೆಯನ್ನು ತೊಳೆಯುವುದು ಮಾತ್ರ ಸವಾಲೇ ಸರಿ. ಅದಕ್ಕೊಂದು ಸುಲಭ ಉಪಾಯ ಎಂದರೆ ಬಿಸಿ ಇದ್ದಾಗಲೇ ತೊಳೆಯುವುದು. ತೀರಾ ಬಿಸಿಯಿದ್ದಾಗ ಮುಟ್ಟಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಸ್ವಲ್ಪ ನೀರು ಚಿಮುಕಿಸಿ. ಆಗ ಸ್ವಲ್ಪ ಬಿಸಿ ಕಡಿಮೆಯಾಗಿ, ಕೈ ಸುಡುವುದಿಲ್ಲ. ಆ ಕೂಡಲೇ ತೊಳೆಯುವುದರಿಂದ ಬೇಗನೆ ಮಾತ್ರವಲ್ಲ ಸುಲಭವಾಗಿ ಸ್ವಚ್ಛಗೊಳ್ಳುತ್ತದೆ.

ಮರದ ಚಮಚ ಹಾಗೂ ಸಾಫ್ಟ್‌ ಬ್ರಷ್‌ ಬಳಸಿ

ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿದ ಮೇಲೆ ಜಿಡ್ಡು, ಎಣ್ಣೆಯಂಶ ಕೊಂಚ ಸಡಿಲಗೊಂಡಿರುತ್ತದೆ. ಆಗ ಮರದ ಚಮಚ ಅಥವಾ ಸಾಫ್ಟ್‌ ಬ್ರಷ್‌ ಬಳಸಿ ಸ್ವಚ್ಛ ಮಾಡಬೇಕು. ಇದು ಅಂಟಿಕೊಂಡಿರುವ ಜಿಡ್ಡನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಪಾತ್ರೆಗೆ ಹಾನಿ ಉಂಟು ಮಾಡುವುದಿಲ್ಲ. ಆದರೆ ಮೆಟಲ್‌ ಸ್ಕ್ರಬ್‌ ಬಳಸಬೇಡಿ, ಇದರಿಂದ ಎರಕ ಹೊಯ್ದ ಭಾಗಕ್ಕೆ ಹಾನಿಯಾಗಬಹುದು. ರಬ್ಬರ್‌ ಅಥವಾ ಪ್ಲಾಸ್ಟಿಕ್‌ ವಸ್ತುಗಳನ್ನ ಬಳಸದಿರಿ. ಯಾಕೆಂದರೆ ಇದು ಬಿಸಿಗೆ ಕರಗಬಹುದು.

ಉಪ್ಪು ಬಳಸಿ

ಜಿಡ್ಡು, ಅಂಟಿಕೊಂಡಿರುವ ಪದಾರ್ಥಗಳನ್ನು ಕೈಯಿಂದ ಸ್ವಚ್ಛ ಮಾಡಲು ಸಾಧ್ಯವಾಗದೇ ಇರಬಹುದು. ಬಿಸಿನೀರಿನಿಂದಲೂ ಸ್ವಚ್ಛವಾಗದೇ ಇದ್ದಾಗ ಕಲ್ಲುಪ್ಪು ಬಳಸಿ ಸ್ವಚ್ಛ ಮಾಡಬಹುದು. ಸ್ವಲ್ಪ ಕಲ್ಲುಪ್ಪು ನೀರು ಸೇರಿಸಿ ನಿಧಾನಕ್ಕೆ ಉಜ್ಜಿ. ಇದರಿಂದ ಬೇಗನೆ ಸ್ವಚ್ಛವಾಗುತ್ತದೆ.

ತೊಳೆದ ಮೇಲೆ ಒಣಗಿಸಿ

ಕಬ್ಬಿಣದ ಪಾತ್ರೆಗಳಿಗೆ ಬೇಗನೆ ತುಕ್ಕು ಹಿಡಿಯುತ್ತದೆ. ಹಾಗಾಗಿ ಇದನ್ನು ಜೋಪಾನ ಮಾಡುವುದು ಅಗತ್ಯ. ಕಬ್ಬಿಣ ಪಾತ್ರೆಗಳನ್ನು ತೊಳೆದ ಮೇಲೆ ಬಿಸಿಲಿನಲ್ಲಿ ಒಣಗಿಸಿ ನಂತರ ಒಳಗಿಡಬೇಕು. ಬಿಸಿಲು ಇಲ್ಲದಿದ್ದಾಗ ಗ್ಯಾಸ್‌ ಮೇಲೆ ಮೇಲಿಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಿ ಇಡಬಹುದು.

Whats_app_banner