Chanakya Niti: ಯಶಸ್ಸಿನ ಮೂಲ ಮಂತ್ರ ಯಾವುದು; ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ತಪ್ಪದೇ ಮಾಡಿ –ಚಾಣಕ್ಯ ನೀತಿ
Chanakya Niti: ಆಚಾರ್ಯ ಚಾಣಕ್ಯರು ಜೀವನ ಪ್ರಗತಿಗಾಗಿ ಪ್ರತಿನಿತ್ಯ ಬೆಳಿಗ್ಗೆ ಏನು ಕೆಲಸ ಮಾಡಬೇಕು? ಅದರಿಂದ ಯಶಸ್ಸು ಹೇಗೆ ದೊರೆಯುತ್ತದೆ ಎಂದು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. (ಬರಹ: ಅರ್ಚನಾ ವಿ. ಭಟ್)

ಆಚಾರ್ಯ ಚಾಣಕ್ಯರು ಭಾರತದ ಶ್ರೇಷ್ಠ ತತ್ವಶಾಸ್ತ್ರಜ್ಞರು. ಮನುಷ್ಯನು ಜೀವಿತಾವಧಿಯಲ್ಲಿ ಅನುಸರಿಸಬೇಕಾದ ಅನೇಕ ವಿಷಯಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಸಮಾನತೆ, ಶಿಕ್ಷಣ, ಜವಾಬ್ದಾರಿ, ಸಂಬಂಧ, ಯಶಸ್ಸು ಮುಂತಾದ ವಿಷಯಗಳ ಬಗ್ಗೆ ಸಲಹೆಗಳನ್ನು ಸಹ ನೀಡಿದ್ದಾರೆ. ಅವರ ತತ್ವಗಳು ಇಂದಿಗೂ ಸಹ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಅನೇಕ ಜನರು ಅವುಗಳನ್ನು ಪಾಲಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ದೈನಂದಿನ ಜೀವನದಲ್ಲಿ ಕೆಲವು ವಿಧಾನಗಳನ್ನು ಅನುಸರಿಸಿದರೆ ಸಮಸ್ಯೆಗಳನ್ನು ತಪ್ಪಿಸಬಹುದು. ಅದರಿಂದ ತೃಪ್ತಿಕರ ಹಾಗೂ ಯಶಸ್ವಿ ಜೀವನವನ್ನು ಸಹ ನಡೆಸಬಹುದು. ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಪ್ರಥಮವಾಗಿ ಏನು ಮಾಡಬೇಕು. ಹಾಗೆ ಮಾಡುವುದರಿಂದ ಜೀವನದಲ್ಲಿ ಹೇಗೆ ಉನ್ನತ ಸ್ಥಾನವನ್ನು ತಲುಪಬಹುದು ಅವೆಲ್ಲದರ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಚಾಣಕ್ಯರ ಪ್ರಕಾರ ಪ್ರತಿದಿನ ಬೆಳಿಗ್ಗೆ ಏನು ಮಾಡಬೇಕು?
ಆಚಾರ್ಯ ಚಾಣಕ್ಯರ ಪ್ರಕಾರ, ಪ್ರಗತಿ ಸಾಧಿಸಲು ಬಯಸಿದರೆ, ನೀವು ಬೆಳಿಗ್ಗೆ ಬೇಗನೆ ಏಳಬೇಕು. ಬೆಳಿಗ್ಗೆ ಬೇಗನೆ ಎದ್ದು ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವವನು ಯಾವಾಗಲೂ ಪ್ರಗತಿ ಸಾಧಿಸುತ್ತಾನೆ. ಸೂರ್ಯ ಉದಯಿಸಿ ಮುಳುಗುವವರೆಗೂ ಮಲಗುವ ಸೋಮಾರಿಗಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.
ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿದಿನವೂ ಕಷ್ಟಪಟ್ಟು ಕೆಲಸಮಾಡಬೇಕು. ಕಷ್ಟಪಟ್ಟು ಕೆಲಸ ಮಾಡಲು ಹೆದರದ ವ್ಯಕ್ತಿಗೆ ಹಣದ ಕೊರತೆ ಎದುರಾಗುವುದಿಲ್ಲ. ಆದ್ದರಿಂದ, ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ತನ್ನ ಕೆಲಸದ ಮೇಲೆ ಗಮನಹರಿಸಬೇಕು. ಅಂದಿನ ಕೆಲಸಗಳನ್ನು ಅಂದೇ ಪೂರ್ಣಗೊಳಿಸುವ ಯೋಜನೆ ರೂಪಿಸಿಕೊಳ್ಳಬೇಕು. ಆ ಯೋಜನೆಯ ಪ್ರಕಾರ ಕೆಲಸಗಳನ್ನು ಪೂರೈಸಬೇಕು ಎಂದು ಚಾಣಕ್ಯರು ತಮ್ಮ ನೀತಿ ಹೇಳುತ್ತಾರೆ.
ಸೋಮಾರಿತನವು ಜೀವನದ ಅತಿ ದೊಡ್ಡ ಶತ್ರು. ಒಬ್ಬ ವ್ಯಕ್ತಿಗೆ ಕೌಶಲವಿದ್ದೂ, ಅವನೊಳಗೆ ಸೋಮಾರಿತನ ಅಡಗಿದ್ದರೆ, ಆ ಕೌಶಲವು ನಿಷ್ಪ್ರಯೋಕವಾಗುತ್ತದೆ. ಆದ್ದರಿಂದ ಆಚಾರ್ಯ ಚಾಣಕ್ಯರ ಪ್ರಕಾರ, ಜೀವನದಲ್ಲಿ ಸೋಮಾರಿತನವನ್ನು ತ್ಯಜಿಸಬೇಕು. ಆಗ ಮಾತ್ರ ಯಶಸ್ಸಿನ ಹಾದಿಗಳು ತೆರೆದುಕೊಳ್ಳುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಇಂದಿನ ಕೆಲಸವನ್ನು ನಾಳೆಗೆ ಮುಂದೂಡಬಾರದು. ಒಂದು ವೇಳೆ ನೀವು ಹಾಗೆ ಮಾಡಿದರೆ, ನಾಳೆಯ ಕೆಲಸಗಳು ಬಾಕಿ ಉಳಿಯುತ್ತವೆ. ಅದರಿಂದ ಸಮಯಕ್ಕೆ ಸರಿಯಾಗಿ ಗುರಿ ತಲುಪಲು ಸಾಧ್ಯವಾಗುವುದಿಲ್ಲ.
ಆಚಾರ್ಯ ಚಾಣಕ್ಯರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ನಮಸ್ಕರಿಸಬೇಕು. ಅದರಿಂದ ಜೀವನದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ. ಅಂತೆಯೇ, ಸೂರ್ಯ ದೇವರು ಸಂತೋಷಗೊಂಡು ಆಶೀರ್ವದಿಸುತ್ತಾನೆ. ಇದರ ನಂತರ, ನಿಮ್ಮ ಗುರಿಯನ್ನು ಸಾಧಿಸಲು ನೀವು ಪ್ರಯತ್ನಗಳನ್ನು ಮಾಡಬೇಕು. ಇದು ನಿಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಅಲ್ಲದೆ, ನಿಮ್ಮ ಗುರಿಯ ಬಗ್ಗೆ ನೀವು ಯಾರಿಗೂ ಹೇಳಬಾರದು. ನಿಮ್ಮ ಗುರಿ ಹಾಗೂ ಯೋಜನೆಯ ಬಗ್ಗೆ ಎಲ್ಲರಿಗೂ ಹೇಳುವುದರಿಂದ ಆ ವ್ಯಕ್ತಿಗೆ ಅಪೇಕ್ಷಿತ ಫಲಿತಾಂಶಗಳು ದೊರೆಯುವುದಿಲ್ಲ.
ಆಚಾರ್ಯ ಚಾಣಕ್ಯರ ಪ್ರಕಾರ, ಬೆಳಿಗ್ಗೆ ಎದ್ದು ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡಬೇಕು. ಏಕೆಂದರೆ ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನೀವು ನಿಮ್ಮ ಜೀವನದ ಬಗ್ಗೆ ಸಕಾರಾತ್ಮಕವಾಗಿರಲು ಸಾಧ್ಯ. ದೈಹಿಕವಾಗಿ ಆರೋಗ್ಯವಾಗಿದ್ದರೆ, ಮಾನಸಿಕವಾಗಿ ಸದೃಢರಾಗಿರುತ್ತೀರಿ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ